ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲವೆಂಬ ಗೂಡಿನಲ್ಲಿ ಮಕ್ಕಳ ಮೇಲಿರಲಿ ನಿಗಾ

Last Updated 17 ಏಪ್ರಿಲ್ 2021, 9:10 IST
ಅಕ್ಷರ ಗಾತ್ರ

‘ನನ್ನ ಮಗ ಅಥರ್ವ ಇತ್ತೀಚೆಗೆ ತುಂಬಾ ಬದಲಾಗಿದ್ದಾನೆ. ಹಟಮಾರಿಯಾಗಿದ್ದಾನೆ. ನನ್ನ ಮಾತೇ ಕೇಳುತ್ತಿಲ್ಲ. ಯಾವಾಗಲೂ ಮೊಬೈಲ್ ಹಿಡಿದೇ ಕುಳಿತುಕೊಳ್ಳುತ್ತಾನೆ. ಊಟ–ತಿಂಡಿಯ ಮೇಲೂ ಅವನಿಗೆ ಗಮನವಿಲ್ಲ. ಜಾಸ್ತಿ ಏನಾದ್ರೂ ಮಾತನಾಡಿದ್ರೆ ಕೊಠಡಿ ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ. ಬ್ರೆಡ್‌, ಬಿಸ್ಕತ್ತು ತಿನ್ನುತ್ತಾನೆ. ಯಾವಾಗ್ಲೂ ಆನ್‌ಲೈನ್‌ನಲ್ಲಿ ಏನಾದ್ರೂ ನೋಡುತ್ತಿರುತ್ತಾನೆ. ‘‘ಕೇಳಿದ್ರೆ ಆನ್‌ಲೈನ್ ಕ್ಲಾಸ್, ನೋಟ್ಸ್ ಬರಿಯೋದು ಇದೆ, ಕ್ಲಾಸ್‌ದು ವಿಡಿಯೊ ಕಳ್ಸಿದಾರೆ, ನೋಡ್ತಾ ಇದೀನಿ’’ ಅಂತಾನೆ. ಒಟ್ಟಾರೆ ಅವನ ವರ್ತನೆ ಸಂಪೂರ್ಣವಾಗಿ ಬದಲಾಗಿದೆ’ ಎಂದು ತನ್ನ ಸ್ನೇಹಿತೆಯ ಬಳಿ ಗೋಳು ತೋಡಿಕೊಳ್ಳುತ್ತಿದ್ದರು ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಶಿಲ್ಪಾ.

ಇತ್ತೀಚೆಗೆ ಮಕ್ಕಳ ಆನ್‌ಲೈನ್‌ ತರಗತಿಗಳ ನಡುವೆ ಮೊಬೈಲ್ ಹಾಗೂ ಅಂತರ್ಜಾಲದ ಬಳಕೆ ಹೆಚ್ಚಿದೆ. ಅಂತರ್ಜಾಲದಿಂದ ಉಪಯೋಗವೂ ಇದೆ, ಅಪಾಯವೂ ಇದೆ. ಅಂತರ್ಜಾಲದೊಂದಿಗೆ ಬೆಳೆಯುತ್ತಿರುವ ಮಕ್ಕಳು ನೇರ ಸಂವಹನಕ್ಕಿಂತ
ಇ–ಮೇಲ್ ಹಾಗೂ ಟೆಕ್ಟ್ಸ್ ಮೆಸೇಜ್‌ಗಳ ಮೂಲಕವೇ ಸಂವಹನ ನಡೆಸಲು ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೇ ಅತಿಯಾದ ಅಂತರ್ಜಾಲ ಬಳಕೆಯು ಮಕ್ಕಳಲ್ಲಿ ನಿದ್ರಾಹೀನತೆ, ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗದೇ ಇರುವುದು, ಓದಿನಲ್ಲಿ ಹಿಂದುಳಿಯುವುದು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.

‘ಆದರೆ ಮಕ್ಕಳ ಮೊಬೈಲ್ ಹಾಗೂ ಅಂತರ್ಜಾಲ ಬಳಕೆಯಲ್ಲಿ ಪೋಷಕರ ಪಾತ್ರವೂ ದೊಡ್ಡದು. ಮಕ್ಕಳು ಮೊಬೈಲ್ ಫೋನ್‌ಗಳನ್ನು ಹೆಚ್ಚಾಗಿ ಬಳಸದಂತೆ ತಡೆಯಲು ಕೆಲವೊಂದು ಮಾರ್ಗಗಳನ್ನು ಅನುಸರಿಸಬೇಕು’ ಎನ್ನುತ್ತಾರೆ ಆಪ್ತ ಸಮಾಲೋಚಕ ಮಹ್ಮದ್ ಇಕ್ಬಾಲ್‌.

* ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಗೆ ಮನೆಯ ಸದಸ್ಯರಿಗೂ ನಿರ್ಬಂಧವಿರಲಿ. ಯಾಕೆಂದರೆ ಮಕ್ಕಳು ಎಲ್ಲವನ್ನೂ ಗಮನಿಸುತ್ತಾರೆ, ಅಲ್ಲದೇ ವಿಷಯಗಳನ್ನು ಗ್ರಹಿಸುತ್ತಾರೆ. ಮನೆಯ ಹಿರಿಯರು ಮಾಡುವ ಪ್ರತಿ ಕೆಲಸವನ್ನು ಅವರು ಗಮನಿಸುತ್ತಿರುತ್ತಾರೆ.

* ಮಕ್ಕಳೊಂದಿಗೆ ಸಮಯ ಕಳೆಯಿರಿ. ನಿಮಗೆ ಮುಖ್ಯವಾದ
ಇ–ಮೇಲ್‌ಗಳು ಹಾಗೂ ಸಂದೇಶಗಳು ಬಂದರೆ ಅದನ್ನು ನೋಡಲು ಹಾಗೂ ಪ್ರತಿಕ್ರಿಯೆ ನೀಡಲು ಒಂದು ಸಮಯ ನಿಗದಿಪಡಿಸಿಕೊಳ್ಳಿ. ಬೇರೆ ಸಮಯದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ. ಕಚೇರಿಯಲ್ಲಿ ಅಥವಾ ಕಚೇರಿ ಅವಧಿಯಲ್ಲಷ್ಟೇ ಕಚೇರಿ ಕೆಲಸ ಮಾಡಿ. ಉಳಿದ ಸಮಯದಲ್ಲಿ ಮಕ್ಕಳೊಂದಿಗೆ ಇರಿ.

* ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪದೇ ಪದೇ ಕಿರಿಕಿರಿಯಾಗುತ್ತಿದ್ದರೆ ಅದನ್ನು ಮ್ಯೂಟ್‌ ಮಾಡಿ ನಿಮ್ಮ ದೃಷ್ಟಿಯಿಂದ ದೂರ ಇರಿಸಿ. ರಾತ್ರಿ ಮಲಗುವ 2 ಗಂಟೆ ಮೊದಲು ಫೋನ್‌ ಅನ್ನು ಸ್ವಿಚ್ ಆಫ್ ಮಾಡಿ. ಇದರಿಂದ ಮಕ್ಕಳೂ ರಾತ್ರಿ ವೇಳೆ ಫೋನ್ ಬಳಸುವುದನ್ನು ತಪ್ಪಿಸಬಹುದು. ನಿಮಗೂ ಬೇರೆ ಬೇರೆ ವಿಷಯಗಳನ್ನು ಯೋಚಿಸಲು ಸಮಯ ಸಿಗುತ್ತದೆ.

* ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ಇಂಟರ್‌ನೆಟ್ ಬಳಕೆಗೆ ಸಂಬಂಧಿಸಿ ನಿಮ್ಮ ಮಕ್ಕಳಿಗೆ ನಿರ್ಬಂಧ ಹೇರಿ. ತಂದೆ–ತಾಯಿ ಮೊಬೈಲ್‌ನಲ್ಲಿ ನೋಡಿದ ಕೆಲವೊಂದು ವಿಷಯಗಳನ್ನು ಮಕ್ಕಳು ಪುನಃ ತೆರೆದು ನೋಡಬಹುದು. ಅಂತಹ ವೆಬ್‌ಸೈಟ್‌ಗಳನ್ನು ತಂದೆ–ತಾಯಿಗಳೂ ನೋಡದಿರುವುದು ಉತ್ತಮ. ಮಕ್ಕಳಿಗೆ ಅದರ ನಕಾರಾತ್ಮಕ ಪರಿಣಾಮಗಳ ಬಗ್ಗೆ ತಿಳಿಸಿ ಹೇಳಬೇಕು; ಅದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆಯೂ ತಿಳಿಸಿ ಹೇಳಬೇಕು.

* ಮಕ್ಕಳು ನಿಮ್ಮ ಮೊಬೈಲ್‌ನಲ್ಲಿ ಯಾವ ಕಾರಣಕ್ಕಾಗಿ ಇಂಟರ್‌ನೆಟ್ ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ಮಕ್ಕಳು ಮೊಬೈಲ್‌ ಮೂಲಕ ಸಂಪರ್ಕದಲ್ಲಿರುವ ಜನರು, ವೆಬ್‌ಸೈಟ್ ಹಾಗೂ ಆ್ಯಪ್‌ಗಳ ಬಗ್ಗೆ ತಿಳಿಯಿರಿ.

* ಮೊಬೈಲ್ ಮೂಲಕ ಮಕ್ಕಳು ಒಳ್ಳೆಯ ವಿಷಯಗಳನ್ನು ಕಲಿಯುತ್ತಿದ್ದರೆ ಅದಕ್ಕೆ ನಿರ್ಬಂಧ ಹೇರಬೇಡಿ. ಯಾಕೆಂದರೆ ಅಂತರ್ಜಾಲ ಎಂಬ ಗೂಡಿನಲ್ಲಿ ಎಲ್ಲವೂ ಲಭ್ಯವಿದೆ. ಆ ಕಾರಣಕ್ಕೆ ಕಲಿಕೆಯ ವಿಷಯದಲ್ಲಿ ಮಕ್ಕಳು ಯಾವುದನ್ನು ಕಲಿಯುತ್ತಿದ್ದಾರೆ ಗಮನಿಸಿ.

* ಮಕ್ಕಳಿಗೆ ಹೊಸ ಹವ್ಯಾಸವನ್ನು ರೂಢಿಸಿ. ಮಗುವಿಗೆ ಯಾವುದು ಇಷ್ಟವಾಗುತ್ತದೆ ಹಾಗೂ ಯಾವುದರಲ್ಲಿ ಮುಂದುವರಿಯಲು ಬಯಸುತ್ತಾರೆ ಎಂದು ಗಮನಿಸಿ. ಅವರ ಆಸಕ್ತಿಯ ಮೇಲೆ ಮುಂದುವರಿಯಲು ಬಿಡಿ. ಹೊಸ ಹವ್ಯಾಸಗಳು ಮುಂದಿನ ಬದುಕಿಗೆ ದಾರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT