ಖಾದಿ ಗ್ರಾಮೋದ್ಯೋಗ ವಿದ್ಯಾಲಯ ಟೆಕ್ಸ್‌ಟೈಲ್ ಕೆಮಿಸ್ಟ್ರಿ ಕುರಿತು ಹದಿನೈದು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ.
ಹತ್ತಿ ನೂಲಾಗಿ, ಬಟ್ಟೆಯಾಗಿ, ಬಣ್ಣದಲ್ಲಿ ಮಿಂದೆದ್ದು, ದರ್ಜಿ ಕೈಯಲ್ಲಿ ರೂಪ ಪಡೆದು, ತೊಡುವವರ ಅಂದ ಹೆಚ್ಚಿಸುವ ಆ ಪಯಣವೇ ಕುತೂಹಲಕಾರಿಯಾದದ್ದು. ಇಂಥ ಜವಳಿ ತಯಾರಾಗುವ ಉದ್ಯಮದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಆದರೆ, ಮಾಹಿತಿಯ ಕೊರತೆಯಿಂದ ಪ್ರವೇಶಿಸುವವರ ಸಂಖ್ಯೆ ಕಡಿಮೆ ಇದೆ.
ಜವಳಿ ಕ್ಷೇತ್ರಕ್ಕೆ ತಾಂತ್ರಿಕ ಪರಿಣತರ ಅಗತ್ಯವಿದ್ದು, ಈ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜಂಟಿಯಾಗಿ ಖಾದಿ ಗ್ರಾಮೋದ್ಯೋಗ ವಿದ್ಯಾಲಯವನ್ನು ನಡೆಸುತ್ತಿದೆ.
ರಾಷ್ಟ್ರಧ್ವಜ ಹಾಗೂ ಖಾದಿ ಬಟ್ಟೆ ತಯಾರಿಕೆಗೆ ಜನಪ್ರಿಯತೆ ಹೊಂದಿದ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಆವರಣದಲ್ಲಿರುವ ಖಾದಿ ಗ್ರಾಮೋದ್ಯೋಗ ವಿದ್ಯಾಲಯ ಟೆಕ್ಸ್‌ಟೈಲ್ ಕೆಮಿಸ್ಟ್ರಿ ಕುರಿತು ಹದಿನೈದು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ. ಜವಳಿ ಉದ್ಯಮಕ್ಕೆ ಯುವ ಜನತೆ ಹೆಚ್ಚಿನ ಮಟ್ಟದಲ್ಲಿ ಸೇರ್ಪಡೆಯಾಗಲು ಪ್ರೋತ್ಸಾಹ ನೀಡುತ್ತಿದೆ.
ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗದಲ್ಲಿ ವಿದ್ಯಾಲಯದಲ್ಲಿ ಪ್ರಾಯೋಗಿಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು
ಅರ್ಹತೆ ಏನು?
* ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿವೇತನವನ್ನೂ ನೀಡಿ, ಉಚಿತವಾಗಿ ತರಬೇತಿ ನೀಡಲಾಗುತ್ತದೆ.
* ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ₹1,500 ವಿದ್ಯಾರ್ಥಿ ವೇತನ ನೀಡಿದರೆ, ಹೊರರಾಜ್ಯದ ವಿದ್ಯಾರ್ಥಿಗಳಿಗೆ ₹3,000 ನೀಡಲಾಗುತ್ತದೆ. ಯುವಕರಿಗೆ ಆವರಣದಲ್ಲೇ ಹಾಸ್ಟೆಲ್ ವ್ಯವಸ್ಥೆಯೂ ಇದೆ. ಯುವತಿಯರಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾರಣ, ಅವರಿಗೆ ₹3,000 ವಿದ್ಯಾರ್ಥಿವೇತನ ನೀಡಲಾಗುತ್ತದೆ.
* ಕಲಿಕೆಗೆ ಪೂರಕವಾದ ಸುಸಜ್ಜಿತ ಪ್ರಯೋಗಾಲವೂ ಇದೆ. ಒಟ್ಟು 15 ತಿಂಗಳ ಈ ಕೋರ್ಸ್‌ನಲ್ಲಿ 12 ತಿಂಗಳು ತರಬೇತಿ ನೀಡಲಾಗುತ್ತದೆ. 3 ತಿಂಗಳ ಅವಧಿಗೆ ವಿವಿಧ ಕೈಗಾರಿಕೆಗಳಿಗೆ ವಿದ್ಯಾರ್ಥಿಗಳನ್ನು ಇಂಟರ್ನ್‌ಶಿಪ್‌ಗೆ ಕಳುಹಿಸಿಕೊಡಲಾಗುತ್ತದೆ. 18ರಿಂದ 30 ವಯೋಮಿತಿಯಲ್ಲಿರುವವರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.
* ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇದೆ.
* ಇಲ್ಲಿಂದ ಪಡೆಯುವ ಸರ್ಟಿಫಿಕೇಟ್‌ಗೆ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್, ಕರ್ನಾಟಕ ಸಿಲ್ಕ್ ಇಂಡಸ್ಟ್ರಿ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಮಾನ್ಯತೆ ಸಿಕ್ಕಿದೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಪಡೆಯಲು ಸಹಕಾರಿಯಾಗಿದೆ. ಅಲ್ಲದೇ ಇಲ್ಲಿ ತರಬೇತಿ ಪಡೆದವರು ಸ್ವ ಉದ್ಯೋಗ ನಡೆಸಲು ಇಚ್ಛಿಸಿದರೆ ಸರ್ಕಾರ ಸಬ್ಸಿಡಿಯನ್ನೂ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.