ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾಶೀಲ ಗ್ರಾಫಿಕ್ ವಿನ್ಯಾಸಕಾರರಿಗೆ ಇದು ಸುಗ್ಗಿಯ ಕಾಲ

Published 28 ಮೇ 2023, 23:33 IST
Last Updated 28 ಮೇ 2023, 23:33 IST
ಅಕ್ಷರ ಗಾತ್ರ

ಒಳ್ಳೆಯ ಪ್ಯಾಕೇಜಿಂಗ್ ಇಲ್ಲದೆ ಹೋದರೆ ಎಷ್ಟೇ ಉತ್ತಮ ಉತ್ಪನ್ನವಾದರೂ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಆಕರ್ಷಕ ಪೋಸ್ಟರ್‌ಗಳಿಲ್ಲದೆ ಎಷ್ಟೇ ಒಳ್ಳೆಯ ಸಿನಿಮಾ ಆದರೂ ಪ್ರೇಕ್ಷಕರನ್ನು ಸೆಳೆಯುವುದಿಲ್ಲ. ಜಾಹೀರಾತುಗಳಿಲ್ಲದೆ ಎಷ್ಟೇ ಒಳ್ಳೆಯ ವಸ್ತುವಾದರೂ ಜನರನ್ನು ತಲುಪುವುದಿಲ್ಲ.

ಯಾವ ವಿಚಾರವನ್ನಾದರೂ ವೈಶಿಷ್ಟ್ಯಪೂರ್ಣವಾಗಿ ಮರುಮಂಡಿಸುವ ವಿಧಾನ ಇಂದು ಎಲ್ಲ ಕ್ಷೇತ್ರಗಳಿಗೂ ಬೇಕು. ಈ ಪ್ರಕ್ರಿಯೆಯಲ್ಲಿ ಗ್ರಾಫಿಕ್ ಕಲೆಯ ಪಾತ್ರ ತುಂಬ ದೊಡ್ಡದು. ಪ್ಯಾಕೇಜಿಂಗ್, ಪೋಸ್ಟರ್, ಜಾಹೀರಾತು, ಮಾಧ್ಯಮ- ಎಲ್ಲರ ಆದ್ಯತೆಯ ಈ ವಿಷಯಗಳಿಗೆ ಗ್ರಾಫಿಕ್ ವಿನ್ಯಾಸವೇ ಆಧಾರ. ಬಣ್ಣ-ಚಿತ್ರ-ಪದಗಳನ್ನು ಹೊಸಹೊಸ ರೀತಿಯಲ್ಲಿ ಪ್ರಸ್ತುತಪಡಿಸುವುದೇ ಗ್ರಾಫಿಕ್ ಕಲೆಯ ಜೀವಾಳ.
ಹೀಗಾಗಿ ಗ್ರಾಫಿಕ್ ಡಿಸೈನಿಂಗ್ ಇಂದು ಎಲ್ಲಿಲ್ಲದ ಬೇಡಿಕೆಯನ್ನು ಪಡೆದುಕೊಂಡಿದೆ. ಆಧುನಿಕ ವ್ಯವಹಾರ ಪ್ರಪಂಚದಲ್ಲಿ ಮಾರ್ಕೆಟಿಂಗ್ ಅನಿವಾರ್ಯವಾಗಿರುವುದೇ ಈ ಬೇಡಿಕೆ ಇಷ್ಟೊಂದು ತೀವ್ರವಾಗಿರಲು ಕಾರಣ. ಕ್ರಿಯಾಶೀಲ ಗ್ರಾಫಿಕ್ ವಿನ್ಯಾಸಕಾರರಿಗೆ ಇದು ಸುಗ್ಗಿಯ ಕಾಲ. ಈ ಕೌಶಲದಲ್ಲಿ ಪಳಗಿದವರಿಗೆ ಇಂದು ಎಲ್ಲೆಲ್ಲೂ ಅವಕಾಶ, ಕೈತುಂಬ ಆದಾಯ. ಪರಿಣಾಮವಾಗಿ ಇದನ್ನು ಕಲಿಸಿಕೊಡುವ ಸಂಸ್ಥೆಗಳು, ಕೋರ್ಸ್‌ಗಳು ಹುಟ್ಟಿಕೊಂಡಿವೆ.

ಏನಿದು ಕೋರ್ಸ್?

ವಿನ್ಯಾಸದ ಮೂಲ ತತ್ವಗಳನ್ನು ಪರಿಚಯಿಸುವುದರ ಜೊತೆಗೆ ಇದಕ್ಕೆ ಅಗತ್ಯವಿರುವ ಕಂಪ್ಯೂಟರ್ ತಂತ್ರಾಂಶಗಳನ್ನು ನಿರ್ವಹಿಸುವ ಕೌಶಲಗಳನ್ನು ಕಲಿಸಿಕೊಡುವುದೇ ಗ್ರಾಫಿಕ್ ಡಿಸೈನಿಂಗ್ ಕೋರ್ಸ್‌ಗಳ ಉದ್ದೇಶ. ವಿನ್ಯಾಸಕಾರರಿಗೆ ನೆರವಾಗುವ ಫೋಟೊಶಾಪ್, ಇನ್‌ಡಿಸೈನ್, ಇಲಸ್ಟ್ರೇಟರ್‌, ಕೋರೆಲ್‌ಡ್ರಾ ಮೊದಲಾದ ಪುಟ ವಿನ್ಯಾಸದ ಪರಿಕರಗಳನ್ನು ಅಭ್ಯಾಸಮಾಡುವುದು ಇದರ ಪ್ರಮುಖ ಭಾಗ. ಸ್ಕೈಬಸ್‌, ಕ್ರಿಟಾ, ಇಂಕ್‌ಸ್ಕೇಪ್, ಜಿಂಪ್ ಇತ್ಯಾದಿ ಉಚಿತ ವಿನ್ಯಾಸ ತಂತ್ರಾಂಶಗಳೂ ಇಂದು ಲಭ್ಯವಿವೆ. ಆದರೆ ಇವುಗಳನ್ನು ಬಳಸುವುದನ್ನು ಕಲಿಯಲೇಬೇಕು.
ಪದವಿ ಹಂತದಲ್ಲಿ ಡಿಸೈನಿಂಗ್ ಕೋರ್ಸ್‌ಗಳು ಜನಪ್ರಿಯವಾಗಿವೆ. ಆದರೆ ಸಾಂಪ್ರದಾಯಿಕ ಪದವಿಗಳನ್ನು ಓದುತ್ತಲೇ ಬಿಡುವಿನ ವೇಳೆಯಲ್ಲಿ ಗ್ರಾಫಿಕ್ ವಿನ್ಯಾಸ ಅಭ್ಯಾಸ ಮಾಡಿಕೊಂಡರೆ ಅದೇ ಮುಂದೆ ಬದುಕಿನ ದಾರಿಯಾದೀತು. ಇದಕ್ಕಾಗಿ ಲಭ್ಯವಿರುವ ಆನ್‌ಲೈನ್‌ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬಹುದು.

ಯಾರು ಮಾಡಬಹುದು?

ಪಿಯುಸಿ ಅಥವಾ ಅದರ ನಂತರದ ಹಂತದಲ್ಲಿ ವ್ಯಾಸಂಗ ಮಾಡುತ್ತಿರು ವವರು ಗ್ರಾಫಿಕ್ ಡಿಸೈನಿಂಗ್ ಕಡೆ ಗಮನ ಹರಿಸಬಹುದು. ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನ ಅಗತ್ಯ. ಡ್ರಾಯಿಂಗ್, ಪೇಂಟಿಂಗ್, ಬರವಣಿಗೆ ಇತ್ಯಾದಿಗಳಲ್ಲಿ ನಿಮಗೆ ಆಸಕ್ತಿಯಿದ್ದರೆ, ಯಾವುದೇ ವಿಷಯವನ್ನೂ ಹೊಸ ರೀತಿಯಲ್ಲಿ ಯೋಚಿಸುವ ಮನಸ್ಥಿತಿ ಇದ್ದರೆ, ಸೃಜನಶೀಲ ಮನಸ್ಸು ನಿಮ್ಮದಾಗಿದ್ದರೆ ಗ್ರಾಫಿಕ್ ಡಿಸೈನಿಂಗ್ ನಿಮಗೆ ಹೇಳಿಮಾಡಿಸಿದ ಕ್ಷೇತ್ರ.

ಕಂಪನಿಗಳಲ್ಲಿ ಉದ್ಯೋಗಿಯಾಗಿಯಲ್ಲದೆ ಸ್ವತಂತ್ರವಾಗಿ ದುಡಿಯುವವರಿಗೂ ಈ ಕ್ಷೇತ್ರದಲ್ಲಿ ಅಪಾರ ಅವಕಾಶವಿದೆ. ಒಂದು ಕಂಪ್ಯೂಟರ್, ಅಗತ್ಯ ಸಾಫ್ಟ್‌ವೇರ್‌, ಅವುಗಳನ್ನು ಬಳಸುವ ಕೌಶಲ- ಇವಿಷ್ಟು ಇರುವವರಿಗೆ ಇಂದು ಮಾಡಿದಷ್ಟೂ ಮುಗಿಯದ ಗ್ರಾಫಿಕ್ ಡಿಸೈನಿಂಗ್ ಕೆಲಸ ಇದೆ.

(ಮುಂದಿನ ವಾರ: ಈವೆಂಟ್ ಮ್ಯಾನೇಜ್ಮೆಂಟ್)

(ಲೇಖಕರು: ಸಹಾಯಕ ಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT