ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Exam Guide: ಇತಿಹಾಸ– ಅಧ್ಯಾಯ:1 ಭಾರತಕ್ಕೆ ಯುರೋಪಿಯನ್ನರ ಆಗಮನ

Published 2 ಅಕ್ಟೋಬರ್ 2023, 16:41 IST
Last Updated 2 ಅಕ್ಟೋಬರ್ 2023, 16:41 IST
ಅಕ್ಷರ ಗಾತ್ರ

42) ಡೂಪ್ಲೆ ಬಗ್ಗೆ ಬರೆಯಿರಿ
ಉತ್ತರ:- ಡೂಪ್ಲೆ ಭಾರತದಲ್ಲಿನ ಫ್ರೆಂಚ್ ಅಧಿಪತ್ಯಗಳ ಮೇಲಿನ ಗವರ್ನರ್ ಜನರಲ್ ಆಗಿ 1742ರಲ್ಲಿ ನೇಮಕಗೊಂಡನು. ಭಾರತದ ಮೇಲೆ ರಾಜಕೀಯ ಅಧಿಪತ್ಯ ಸ್ಥಾಪನೆಯ ಕನಸನ್ನು ಕಾಣುತ್ತಿದ್ದ ಡೂಪ್ಲೆ ಇಲ್ಲಿನ ದೇಶೀಯ ರಾಜರುಗಳ ಜೊತೆ ಒಪ್ಪಂದಗಳನ್ನು ಮಾಡಿಕೊಂಡಿದ್ದನು. ಡೂಪ್ಲೆ ಕಟ್ಟಿದ ದೇಶಿ ಸೇನೆಯಿಂದಲೇ ಹೈದರಾಲಿಯು ಸಹ ತರಬೇತಿ ಪಡೆದಿದ್ದನು. ಬ್ರಿಟಿಷರಿಗೆ ಡೂಪ್ಲೆಯು ತಮ್ಮ ಅಧಿಪತ್ಯ ಸ್ಥಾಪನೆಗೆ ಸವಾಲಾಗಿ ಪರಿಣಮಿಸಿದ. ಡೂಪ್ಲೆಯು 1746ರ ಮದ್ರಾಸ್ ಕದನದಲ್ಲಿ ಬಹುಮುಖ್ಯ ಪಾತ್ರವಹಿಸಿ ಯಶಸ್ವಿಯಾಗಿದ್ದನು. ಫ್ರೆಂಚರು ಮತ್ತು ಬ್ರಿಟಿಷರ ನಡುವಿನ ಸಂಘರ್ಷವು 1754ರವರೆಗೆ ನಡೆಯಿತು. ತದನಂತರದಲ್ಲಿ ಫ್ರಾನ್ಸಿನ ಸರ್ಕಾರವೇ ಶಾಂತಿಯನ್ನು ಬಯಸಿ ಡೂಪ್ಲೆಯನ್ನು ಹಿಂದಕ್ಕೆ ಕರೆಸಿಕೊಂಡಿತು.

43) ದಸ್ತಕ್ ಎಂದರೆನು?
ಉತ್ತರ: ಯಾವುದೇ ತೆರಿಗೆ ಇಲ್ಲದೇ ಸರಕುಗಳ ಆಮದು ಮತ್ತು ರಫ್ತು ಮಾಡಲು ಹಾಗೂ ಸರಕುಗಳ ಸಾಗಾಣೆ ಮಾಡಲು ಬೇಕಾದ ಪರವಾನಗಿ ಪತ್ರ
44) 1717ರಲ್ಲಿ ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಪರವಾನಗಿ(ದಸ್ತಕ) ನೀಡಿದವರು ಯಾರು?
ಉತ್ತರ:- ಮೊಗಲ್ ಫಾರೂಕ್ ಷಿಯಾರ

45) ದಸ್ತಕ್ ಅನ್ನು ಯಾರು ದುರುಪಯೋಗಪಡಿಸಿಕೊಳ್ಳತೊಡಗಿದರು?
ಉತ್ತರ:- ದಸ್ತಕ್‌ಗಳನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ನೌಕರರು ತಮ್ಮ ಖಾಸಗಿ ವ್ಯಾಪಾರ-ವ್ಯವಹಾರಕ್ಕಾಗಿ ದುರುಪಯೋಗ ಪಡಿಸಿಕೊಳ್ಳ ತೊಡಗಿದರು.
46) ದಸ್ತಕ್ ಅನ್ನು ದುರುಪಯೋಗಪಡಿಸಿಕೊಂಡ ಪರಿಣಾಮ ಯಾವ ಯುದ್ಧಗಳು ನಡೆದವು?
ಉತ್ತರ:- ಪ್ಲಾಸಿ ಮತ್ತು ಬಕ್ಸಾರ್ ಕದನಗಳು

47) ಪ್ಲಾಸಿ ಕದನಕ್ಕೆ ಕಾರಣಗಳೇನು?
ಉತ್ತರ:- ಪ್ಲಾಸಿ ಕದನಕ್ಕೆ ಕಾರಣಗಳು
1) ದಸ್ತಕ್‌ಗಳ ದುರುಪಯೋಗ : ಕಂಪನಿಯ ವ್ಯಾಪಾರಕ್ಕಾಗಿ ನೀಡಿದ ‘ದಸ್ತಕ್’ಗಳನ್ನು ಬ್ರಿಟಿಷ್ ನೌಕರರು ದುರುಪಯೋಗ ಪಡಿಸಿಕೊಳ್ಳುವ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದದ್ದು ಸಿರಾಜನನ್ನು ಕೆರಳಿಸಿತು.
2. ಅನುಮತಿ ಇಲ್ಲದೇ ಕೋಟೆಯ ದುರಸ್ತಿ : ಬ್ರಿಟಿಷರು ಫ್ರೆಂಚರ ಭಯದಿಂದ ಕಲ್ಕತ್ತಾದ ಕೋಟೆಯನ್ನು ಬಲಪಡಿಸಿ, ಫಿರಂಗಿಗಳನ್ನು ಇಟ್ಟರು. ಅನುಮತಿ ಪಡೆಯದೇ ಕೋಟೆಯನ್ನು ದುರಸ್ತಿ ಮಾಡಿಸಿದ್ದರಿಂದ ಫಿರಂಗಿಗಳನ್ನು ತೆಗೆದು ಹಾಕಲು ಸಿರಾಜ್ ಸೂಚಿಸಿದನಾದರೂ ಅವರು ಪಾಲಿಸಲಿಲ್ಲ. ಇದರಿಂದ ಸಿರಾಜನು ಆಕ್ರೋಶಗೊಂಡನು.
3. ಕಪ್ಪುಕೋಣೆ ದುರಂತ : ಆಗ ಸಿರಾಜನು ಫೋರ್ಟ್‌ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು ಕೆಲವರನ್ನು ಸೆರೆಹಿಡಿದನು. ಸಿರಾಜನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು. ಅವರಲ್ಲಿ 123 ಮಂದಿ ಅಸುನೀಗಿದರು ಎಂಬುದಾಗಿತ್ತು. ಇದನ್ನು ಕಪ್ಪುಕೋಣೆಯ ದುರಂತ ಎಂದು ಕರೆಯಲಾಗಿದೆ. ಈ ಸುದ್ದಿ ಕೇಳಿ ರಾಬರ್ಟ್ ಕ್ಲೈವ್‌ ಉಗ್ರ ಕೋಪದಲ್ಲಿ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನು.

48) ಪ್ಲಾಸಿ ಕದನದ ಪರಿಣಾಮಗಳೇನು?ಉತ್ತರ:- ಪ್ಲಾಸಿ ಕದನದ ಪರಿಣಾಮಗಳು
1. ಈ ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
2. ಮೀರ್ ಜಾಫರ್ ಬಂಗಾಳದ ನವಾಬನಾದನು.
3. ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
4. ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಯುದ್ಧ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ ಹದಿನೇಳು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.

ಒಟ್ಟಾರೆ, ಮೀರ್ ಜಾಫರನು ಕಂಪನಿ ಮತ್ತು ನೌಕರರ ಕೈಗೊಂಬೆಯಾಗುವ ಮೂಲಕ ನಿರಂತರ ಶೋಷಣೆಗೆ ಒಳಗಾದನು. ಇದರಿಂದ ನವಾಬನ ಬೊಕ್ಕಸ ಬರಿದಾಯಿತೇ ವಿನಃ ಧನ ಪಿಶಾಚಿಗಳಾದ ಕಂಪನಿಯ ಅಧಿಕಾರಿಗಳ ತೃಷೆ ಮಾತ್ರ ತೀರಲಿಲ್ಲ. ಪರಿಣಾಮವಾಗಿ ಬ್ರಿಟಿಷರು ಮೀರ್ ಜಾಫರ್ ಅಸಮರ್ಥನೆಂದು ಬಿಂಬಿಸಿ ಅವನನ್ನು ನವಾಬ ಸ್ಥಾನದಿಂದ ಪದಚ್ಯುತಗೊಳಿಸಿ ಅವನ ಅಳಿಯನಾದ ಮೀರ್ ಖಾಸಿಂನನ್ನು ಬಂಗಾಳದ ನವಾಬನೆಂದು ನೇಮಿಸಿದರು.

49) ಪ್ಲಾಸಿ ಕದನದ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ
ಉತ್ತರ:- ಬಂಗಾಳದ ನವಾಬನಾದ ಅಲಿವರ್ದಿ ಖಾನನು 1756ರಲ್ಲಿ ನಿಧನನಾದನು. ನಂತರ ಅವನ ಮೊಮ್ಮಗನಾದ ಸಿರಾಜ್-ಉದ್-ದೌಲನು ಅಧಿಕಾರಕ್ಕೆ ಬಂದನು.

ಯುವ ನವಾಬನಾದ ಸಿರಾಜ್-ಉದ್-ದೌಲನಿಗೂ ಮತ್ತು ಬ್ರಿಟಿಷರಿಗೂ 1757ರಲ್ಲಿ ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ನಡೆಯಿತು. ಮೊದಲು ನವಾಬನ ವಿರೋಧಿಗಳಾದ ಮಾಣಿಕ್‌ಚಂದ್, ನೇಮಿಚಂದ್, ಜಗತ್‌ಸೇಠ್ (ಬಂಗಾಳದ ಲೇವಾದೇವಿಗಾರ) ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು. ನಂತರ ಸಿರಾಜನ ಸೇನಾಧಿಪತಿಯಾದ ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿ ಯುದ್ಧದಲ್ಲಿ ತಟಸ್ಥವಾಗಿರಲು ರಾಜ್ಯವನ್ನು ಒಪ್ಪಿಸಿದನು.
ಇದರಿಂದ ಧೈರ್ಯಗೊಂಡ ರಾಬರ್ಟ್‌ ಕ್ಲೈವನು 1757 ಜೂನ್ 23ರಂದು ಸಿರಾಜ್-ಉದ್-ದೌಲನ ಮೇಲೆ ಕದನ ಸಾರಿದನು. ಪ್ಲಾಸಿ ಎಂಬಲ್ಲಿ ನಡೆದ ಕದನದಲ್ಲಿ ಕ್ಲೈವನು ಯೋಜಿಸಿದಂತೆಯೇ ಎಲ್ಲವೂ ನಡೆಯಿತು. ಯುದ್ಧ ಭೂಮಿಯಿಂದ ತಪ್ಪಿಸಿಕೊಂಡ ಸಿರಾಜ್-ಉದ್-ದೌಲನನ್ನು ಸೆರೆಹಿಡಿದು ಕೊಲ್ಲಲಾಯಿತು.

50) ಬಕ್ಸಾರ್ ಯುದ್ದದ ಪರಿಣಾಮಗಳು ಯಾವುವು?
ಉತ್ತರ:- ಬಕ್ಸಾರ್ ಯುದ್ಧದ ಪರಿಣಾಮಗಳು:-
1. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
2. ಷಾ ಆಲಂ ವಾರ್ಷಿಕ ₹ 26 ಲಕ್ಷ ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
3. ಔದ್‌ನ ನವಾಬನಾದ ಷುಜಾ-ಉದ್-ದೌಲನು ಕಂಪನಿಗೆ ಯುದ್ಧ ನಷ್ಟದ ಪರಿಹಾರವಾಗಿ ₹ 50 ಲಕ್ಷ ಕೊಡಬೇಕಾಯಿತು.
4. ಮೀರ್‌ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.
ಅಂತಿಮವಾಗಿ ಬಕ್ಸಾರ್ ಕದನವು ಬ್ರಿಟಿಷರು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ನಿಜವಾದ ಒಡೆಯರೆಂದು ದೃಢೀಕರಿಸಿತು ಹಾಗೂ ಔದ್ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು.

1765ರಲ್ಲಿ ರಾಬರ್ಟ್ ಕ್ಲೈವನು ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ಜಾರಿಗೆ ತಂದನು.

51) ‘ದ್ವಿ ಪ್ರಭುತ್ವ’ ಪದ್ಧತಿ ಎಂದರೇನು?
ಉತ್ತರ:- ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದರು ಹಾಗೂ ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಇದನ್ನೇ ‘ದ್ವಿ ಪ್ರಭುತ್ವ’ ಎನ್ನುವರು.

(ಮುಂದುವರಿಯುವುದು……)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT