ಶನಿವಾರ, ನವೆಂಬರ್ 28, 2020
18 °C

PV Web Exclusive | ಲೇಡಿ ಡಿಟೆಕ್ಟಿವ್‌ಗಳಿಗೆ ಸವಾಲುಗಳಿಗಿಂತ ಅನುಕೂಲಗಳೇ ಜಾಸ್ತಿ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

‘ಕನ್ನಡಿ ಎದುರಿಗೆ ನಿಂತಾಗ ನನ್ನ ಕಂಗಳು ಕುತೂಹಲ ಮಡುಗಟ್ಟಿದ ಕೊಳದಂತೆ ಭಾಸವಾಗುತ್ತವೆ’ ಎನ್ನುವ ಆಕೃತಿ ಖತ್ರಿ ತಾನು ಗರ್ಭದಲ್ಲಿದ್ದಾಗಲೇ ಕೌತುಕವೆಂಬ ಅಸ್ತ್ರವನ್ನು ಮೈತುಂಬಿಕೊಂಡು ಅಮ್ಮನ ಮಡಿಲು ಸೇರಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಎಲ್ಲರ ಬಗ್ಗೆಯೂ ತಿಳಿದುಕೊಳ್ಳಬೇಕು, ಒಬ್ಬರ ಮೇಲೆ ಗುರಿ ನೆಟ್ಟರೆ ಅವರ ಬಗೆಗಿನ ಇಂಚಿಂಚು ಮಾಹಿತಿಯನ್ನೂ ಕಲೆಹಾಕಬೇಕು ಎಂಬ ಆಕೃತಿ ಅವರೊಳಗಿನ ಅಗೋಚರ ಶಕ್ತಿಯೇ ಆಕೆಯನ್ನು ಯಶಸ್ವಿ ಫೀಮೇಲ್‌ ಡಿಟೆಕ್ಟಿವ್‌ ಆಗಿ ರೂಪಿಸಿದೆಯಂತೆ!

---

ಪಂಜಾಬಿ ಕುಟುಂಬದಲ್ಲಿ ಜನಿಸಿದ ಆಕೃತಿ ಖತ್ರಿ ಹುಟ್ಟಿ ಬೆಳೆದಿದ್ದೆಲ್ಲಾ ದೆಹಲಿಯಲ್ಲಿ. ವಿಜ್ಞಾನ ಪದವೀಧರೆಯಾದ ಇವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿದ್ದಾರೆ. ಓದಿದ್ದಕ್ಕೂ ಮಾಡುತ್ತಿರುವ ವೃತ್ತಿಗೂ ಸಂಬಂಧವಿಲ್ಲ. ಚಿಕ್ಕಂದಿನಿಂದಲೂ ಅವರ ಮನದೊಳಗೆ ತುಡಿಯುತ್ತಿದ್ದ ‘ಪತ್ತೇದಾರಿ’ ಬುದ್ಧಿ ಕೊನೆಗೂ ಅವರನ್ನು ಅದೇ ವೃತ್ತಿಗೆ ತಂದು ನಿಲ್ಲಿಸಿತು. ಈಗ ‘ವೀನಸ್‌ ಡಿಟೆಕ್ಟಿವ್‌’ ಏಜೆನ್ಸಿ ನಡೆಸುತ್ತಿರುವ ಆಕೃತಿ ದೇಶದ ಅತ್ಯುತ್ತಮ ಮಹಿಳಾ ಡಿಟೆಕ್ಟಿವ್‌ಗಳಲ್ಲಿ ಒಬ್ಬರು ಎಂಬ ಅಗ್ಗಳಿಕೆ ಹೊಂದಿದ್ದಾರೆ. ಪತ್ತೆದಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು ಮತ್ತು ಎದುರಾಗುವ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ್ದಾರೆ.

* ನಮಸ್ತೆ ಆಕೃತಿ. ನೀವು ನಿರ್ದಿಷ್ಟವಾಗಿ ಡಿಟೆಕ್ಟಿವ್‌ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ?

ನಮಸ್ಕಾರ. ಚಿಕ್ಕಂದಿನಿಂದಲೂ ನನಗೆ ಪ್ರತಿ ವಿಷಯದ ಬಗ್ಗೆಯೂ ಕುತೂಹಲ ಜಾಸ್ತಿ. ಸುತ್ತಲಿನ ಜನರು, ನನ್ನ ಶಿಕ್ಷಕರು, ಸಿಬ್ಬಂದಿ ವರ್ಗ ಎಲ್ಲರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೆ. ಕಾಲೇಜು ಮೆಟ್ಟಿಲು ಹತ್ತಿದ ನಂತರ ಇಂತಹ ಕುತೂಹಲಗಳು ಜಾಸ್ತಿ ಆದವು. ನನ್ನ ಸ್ನೇಹಿತ, ಸ್ನೇಹಿತೆಯರು ಯಾರೊಟ್ಟಿಗೆ ಇರುತ್ತಾರೆ. ಎಲ್ಲೆಲ್ಲಿ ಅಡ್ಡಾಡುತ್ತಾರೆ. ಯಾರು ಯಾರ ಜತೆಗೆ ಡೇಟಿಂಗ್‌ ಮಾಡುತ್ತಾರೆ ಎಂಬುದರ ಬಗ್ಗೆ ಕರಾರುವಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಇಂತಹ ಪತ್ತೆದಾರಿ ಬುದ್ಧಿಯೇ ನನ್ನನ್ನು ಡಿಟೆಕ್ಟಿವ್‌ ಆಗುವಂತೆ ಪ್ರಚೋದಿಸಿತು.

* ಕುತೂಹಲದ ಬುದ್ಧಿ ಇತ್ತು ಸರಿ. ಡಿಟೆಕ್ಟಿವ್‌ ಆಗಲೇ ಬೇಕು ಅಂತ ನಿರ್ಧಾರ ಮಾಡಿದ್ದರ ಹಿಂದೆ ಯಾರದ್ದಾದರೂ ಸ್ಫೂರ್ತಿ ಇದೆಯೇ?

ಇಲ್ಲ. ನಿಜ ಹೇಳಬೇಕೆಂದರೆ ನಾನು ಲಕ್‌ ಬೈ ಚಾನ್ಸ್‌ನಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ. ಒಮ್ಮೆ ಪತ್ರಿಕೆ ಓದುತ್ತಿದ್ದ ಸಂದರ್ಭದಲ್ಲಿ, ‘ಡಿಟೆಕ್ಟಿವ್‌ ಆಗುವ ಆಸೆ ಇದ್ದರೆ ನಮ್ಮನ್ನು ಸಂಪರ್ಕಿಸಿ’ ಎಂಬ ಒಂದು ಸಣ್ಣ ಜಾಹೀರಾತು ನನ್ನ ಗಮನ ಸೆಳೆಯಿತು. ಮೊದಲೇ ಕುತೂಹಲದ ಮೊಟ್ಟೆಯಂತಿದ್ದ ನಾನು ತಕ್ಷಣವೇ ಅವರನ್ನು ಸಂಪರ್ಕಿಸಿ, ನಾನು ಕೂಡ ಡಿಟೆಕ್ಟಿವ್‌ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದೆ. ನನ್ನ ಉತ್ಸಾಹ ಮತ್ತು ಆತ್ಮವಿಶ್ವಾಸ ಆ ಕಂಪನಿಯ ಬಾಸ್‌ನ ಮನಗೆದ್ದಿತು. ಒಬ್ಬ ಡಿಟೆಕ್ಟಿವ್‌ಗೆ ಬುದ್ಧಿಶಕ್ತಿ ಜತೆಗೆ ಮುಖ್ಯವಾಗಿ ಆತ್ಮವಿಶ್ವಾಸ ಇರಬೇಕು. ಒಂದರ್ಥದಲ್ಲಿ ನಾನು ಪತ್ತೆದಾರಿ ವೃತ್ತಿಗೆ ಇಳಿಯಲು ನನ್ನೊಳಗಿನ ಆತ್ಮವಿಶ್ವಾಸವೇ ಸ್ಫೂರ್ತಿ ಎನ್ನಬಹುದು.

* ಡಿಟೆಕ್ಟಿವ್‌ ಆಗಿ ಕೆಲಸ ಆರಂಭಿಸುವ ಮುನ್ನ ಪಡೆದುಕೊಂಡ ತರಬೇತಿಗಳ ಬಗ್ಗೆ ತಿಳಿಸಿ...

ಡಿಟೆಕ್ಟಿವ್‌ ಏಜೆನ್ಸಿ ಒಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿದಾಗ ಸಂದರ್ಶನಕ್ಕೆ ಕರೆಬಂತು. ಸಂದರ್ಶನ ಎದುರಿಸಿದೆ, ಆಯ್ಕೆಯೂ ಆದೆ. ತಕ್ಷಣದಿಂದಲೇ ಕೆಲಸ ಶುರು ಮಾಡುವುದಾಗಿ ಹೇಳಿದೆ. ಆದರೆ, ಆ ಕಂಪನಿಯ ಬಾಸ್‌ ನನ್ನ ಉತ್ಸಾಹದ ಮಾತುಗಳಿಗೆ ತಣ್ಣಗೆ ಪ್ರತಿಕ್ರಿಯೆ ನೀಡಿದರು. ಶುಭಾಶಯ ತಿಳಿಸಿ ಮರುದಿನದಿಂದ ಕೆಲಸಕ್ಕೆ ಬರುವಂತೆ ಸೂಚಿಸಿದರು.

ಮರುದಿನ ಬೆಳಿಗ್ಗೆ 10ಕ್ಕೆ ತುಂಬ ಖುಷಿಯಿಂದ ಕಚೇರಿಗೆ ಹೋದೆ. ಆದರೆ, ಸಂಜೆ 6ರ ವೇಳೆಗೆ ನನ್ನ ಉತ್ಸಾಹವೆಲ್ಲವೂ ಜರ್ರನೆ ಇಳಿದು ಹೋಗಿತ್ತು. ಏಕೆಂದರೆ, ಆವತ್ತು ಇಡೀ ದಿನ ಒಬ್ಬಳೆ ಸುಮ್ಮನೆ ಕುಳಿತಿದ್ದೆ. ಏಜೆನ್ಸಿಯವರು ನನಗೆ ಒಂದು ಕಂಪ್ಯೂಟರ್‌ ಹೋಗಲಿ, ಕನಿಷ್ಠ ಪಕ್ಷ ಮೊಬೈಲ್‌ ಕೂಡ ಕೊಡಲಿಲ್ಲ. ಒಂದು ವಾರ ಇದೇ ದಿನಚರಿ ಮುಂದುವರಿಯಿತು. ಎಂಟನೇ ದಿನದಿಂದ 30ನೇ ದಿನದವರೆಗೂ ಮತ್ತೇ ಕಚೇರಿಯಲ್ಲಿ ಕುಳಿತು ಮೇಲೆದ್ದು ಬರುವುದೇ ಆಯಿತು.

ಒಂದು ದಿನ ನನಗೆ ರೇಗಿ ಹೋಯಿತು. ಸೀದಾ ಬಾಸ್‌ ಚೇಂಬರ್‌ ನುಗ್ಗಿದೆ. ಇನ್ನು ಮುಂದೆ ಸುಮ್ಮನೆ ಕೂತು ಎದ್ದು ಹೋಗಲು ಸಾಧ್ಯವಿಲ್ಲ. ಏನಾದರೂ ಒಂದು ಕೆಲಸ ಹೇಳಿ ಎಂದು ಗಟ್ಟಿ ಧ್ವನಿಯಲ್ಲಿ ಕೂಗಿದೆ. ಆಗ ನನ್ನ ಬಾಸ್‌ ನಗುತ್ತಾ, ಡಿಟೆಕ್ಟಿವ್‌ ಆಗಬೇಕೆಂದಿರುವ ವ್ಯಕ್ತಿಗಳಿಗೆ ತಾಳ್ಮೆ ತುಂಬ ಮುಖ್ಯ. ಈ ಒಂದು ತಿಂಗಳು ನಿನ್ನನ್ನು ಸುಮ್ಮನೆ ಕೂರಿಸಿದ್ದು, ನಿನ್ನ ತಾಳ್ಮೆ ಪರೀಕ್ಷಿಸಲೆಂದೇ. ಇದು ಕೂಡ ತರಬೇತಿಯ ಒಂದು ಭಾಗ ಎಂದು ಹೇಳಿದರು.

ಅವರು ಆ ರೀತಿ ಹೇಳಿದಾಗ ಒಂದು ಕ್ಷಣ ಏನೂ ತೋಚಲಿಲ್ಲ. ಅರ್ಥವಾದ ನಂತರ ‘ಓ ಮೈ ಗಾಡ್‌’ ಎಂಬ ಉದ್ಗಾರದೊಂದಿಗೆ ಮುಖದಲ್ಲಿ ನಗು ಮೂಡಿತು. ಆ ನಂತರ, ಅವರು ನನ್ನ ತಾಳ್ಮೆ ಪರೀಕ್ಷೆಯನ್ನು ನಿಲ್ಲಿಸಿ ಯಾವುದೇ ಒಂದು ಪ್ರಕರಣವನ್ನು ಅಧ್ಯಯನ ಮಾಡುವ ವಿಧಾನ, ಟೆಲಿಫೋನಿಕ್‌ ಎನ್‌ಕ್ವೈರಿ ಮೊದಲಾದುವುಗಳ ಬಗ್ಗೆ ತರಬೇತಿ ನೀಡಿದರು.

* ಯಾವೆಲ್ಲಾ ಕೇಸ್‌ಗಳನ್ನು ತೆಗೆದುಕೊಳ್ಳುತ್ತೀರಿ? ನಿಮ್ಮ ಬಳಿಗೆ ಬರುವಂತಹ ಅತಿ ಹೆಚ್ಚು ಕೇಸ್‌ಗಳು ಯಾವ ಬಗೆಯವು?

ಮ್ಯಾಟ್ರಿಮೋನಿಯಲ್‌, ಕಾರ್ಪೊರೇಟ್‌ ಇನ್ವೆಸ್ಟಿಗೇಷನ್‌, ಕಾನ್ಫೆಡೆನ್ಶಿಯಲ್‌ ಇನ್ವೆಸ್ಟಿಗೇಷನ್‌, ಪತಿ– ಪತ್ನಿಯರ ಅಫೇರ್‌ಗಳು ಹೀಗೆ ನಾನಾ ವಿಧದ ಕೇಸುಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ಪ್ರೀ ಮ್ಯಾಟ್ರಿಮೋನಿಯಲ್‌ ಹಾಗೂ ಲವ್‌ ಅಫೇರ್‌ ಕುರಿತಾಗಿ ಅತಿ ಹೆಚ್ಚು ಕೇಸ್‌ಗಳು ನಮ್ಮ ಬಳಿಗೆ ಬರುತ್ತವೆ.

* ನೀವು ಡಿಟೆಕ್ಟಿವ್‌ ಆಗಿ ಸಾಕ್ಷ್ಯ ಸಂಗ್ರಹಿಸಲು ಅನುಸರಿಸುವ ತಂತ್ರಗಳ ಬಗ್ಗೆ ಹೇಳುವಿರಾ?

ಸಾಕ್ಷ್ಯ ಸಂಗ್ರಹದಲ್ಲಿ ಮುಖ್ಯವಾದವು ಫೋಟೊಗ್ರಾಫ್ಸ್‌ ಮತ್ತು ಆಡಿಯೊ ಸಂಭಾಷಣೆ. ಯಾವುದೇ ಪ್ರಕರಣದಲ್ಲಿ ವಿಡಿಯೊ ತುಣುಕುಗಳು ಮತ್ತು ಛಾಯಾಚಿತ್ರಗಳು ಮುಖ್ಯ ಸಾಕ್ಷ್ಯ ಎನಿಸಿಕೊಳ್ಳುತ್ತವೆ. ಆಡಿಯೊ ಸಾಕ್ಷ್ಯ ಎರಡನೇ ಸ್ಥಾನದಲ್ಲಿರುತ್ತದೆ. ನಾವು ಕೂಡ ಇದೇ ಅಂಶಗಳ ಬಗ್ಗೆ ಮಹತ್ವ ನೀಡುತ್ತೇವೆ. ಪ್ರಕರಣ ಕೈಗೆತ್ತಿಕೊಂಡ ಬಳಿಕ ಒಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲು ಆತ ಯಾರನ್ನು ಭೇಟಿ ಮಾಡುತ್ತಾನೆ. ಎಲ್ಲೆಲ್ಲಿ ಹೋಗುತ್ತಾನೆ ಎಂಬುದರ ಬಗ್ಗೆ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ರಹಸ್ಯವಾಗಿ ತೆಗೆದುಕೊಳ್ಳುತ್ತೇವೆ.

ಅಫೇರ್‌ ಕೇಸ್‌ಗಳಲ್ಲಿ ಫೋಟೋಗಳೇ ಮುಖ್ಯ. ಇಬ್ಬರೂ ಭೇಟಿ ಆಗುವುದು. ಡೇಟಿಂಗ್‌ ಮಾಡುತ್ತಿರುವುದು. ಕೈ ಕೈಹಿಡಿದು ಅಡ್ಡಾಡುವುದು. ಅವರ ಏಕಾಂತ ಇವೆಲ್ಲವನ್ನೂ ರಹಸ್ಯವಾಗಿ ಕ್ಲಿಕ್ಕಿಸುತ್ತೇವೆ.

* ಮಹಿಳಾ ಡಿಟೆಕ್ಟಿವ್‌ಗಳು ಎದುರಿಸುವ ವೃತ್ತಿ ಸಂಬಂಧಿತ ಸವಾಲುಗಳು ಯಾವುವು?

ಮಹಿಳಾ ಡಿಟೆಕ್ಟಿವ್‌ಗಳಿಗೆ ಸವಾಲುಗಳಿಗಿಂತ ಅಡ್ವಂಟೇಜ್‌ಗಳೇ ಜಾಸ್ತಿ. ಒಬ್ಬ ಪುರುಷ ಹೋಗಲು ತುಂಬ ಕಷ್ಟಪಡಬೇಕಿರುವಂತಹ ಸ್ಥಳಗಳಿಗೆ ಲೇಡಿ ಡಿಟೆಕ್ಟಿವ್‌ಗಳಿಗೆ ತುಂಬ ಸುಲಭವಾಗಿ ಅವಕಾಶ ಸಿಗುತ್ತದೆ. ಯಾರಿಂದಲಾದರೂ ಮಾಹಿತಿ ಕಲೆ ಹಾಕಬೇಕಾದರೂ ಅಷ್ಟೇ, ನಮಗೆ ಸಲೀಸು.

ಇನ್ನು ಟೈಮಿಂಗ್‌, ಸ್ಪೀಡ್‌ ಇಂತಹ ಸಣ್ಣಪುಟ್ಟ ವಿಚಾರಗಳು ಲೇಡಿ ಡಿಟೆಕ್ಟಿವ್‌ಗಳಿಗೆ ತುಸು ಸವಾಲೊಡ್ಡುತ್ತವೆ. ಇವೆಲ್ಲ ಏನೇ ಇದ್ದರೂ ಲೇಡಿ ಡಿಟೆಕ್ಟಿವ್‌ಗಳಿಗೆ ಅನುಕೂಲಗಳೇ ಜಾಸ್ತಿ!

* ಡಿಟೆಕ್ಟಿವ್‌ ಆಗಲು ಬಯಸುವ ಯುವತಿಯರಿಗೆ ನಿಮ್ಮ ಸಲಹೆ ಏನು?

ನಾನು ಡಿಟೆಕ್ಟಿವ್‌ ಆಗಬೇಕು. ಅದಕ್ಕೆ ಏನು ಮಾಡಬೇಕು ಹೇಳಿ ಎಂದು ಸಾಕಷ್ಟು ಯುವತಿಯರು ನನ್ನನ್ನು ಪ್ರಶ್ನಿಸುತ್ತಾರೆ. ಅವರಿಗೆ ಹೇಳುವುದಿಷ್ಟೇ; ಸೆಲ್ಫ್‌ ಕಾನ್ಫಿಡೆನ್ಸ್‌ ಬೆಳೆಸಿಕೊಳ್ಳಬೇಕು. ಸನ್ನಿವೇಶಕ್ಕೆ ತಕ್ಕಂತೆ ವೇಗವಾಗಿ ಪ್ರತಿಕ್ರಿಯಿಸುವ ಗುಣ, ತಾಳ್ಮೆ,  ಸಮಯಪಾಲನೆ ಇಷ್ಟು ಗುಣಗಳು ಅತ್ಯವಶ್ಯಕ. ಈ ಎಲ್ಲ ಗುಣಗಳು ನಿಮ್ಮಲ್ಲಿ ಇದ್ದರೆ ಕೌಶಲಗಳ ಸಹಾಯದಿಂದ ಒಬ್ಬ ಯಶಸ್ವಿ ಪತ್ತೆದಾರಿ ಆಗಬಹುದು.

* ನಿಜ ಜೀವನದಲ್ಲಿ ಡಿಟೆಕ್ಟಿವ್‌ ಆಗಿರುವ ನಿಮಗೆ ಸಿನಿಮಾಗಳಲ್ಲಿ ತೋರಿಸುವ ಸೂಪರ್‌ ಪವರ್‌ ವುಮೆನ್‌ ಡಿಟೆಕ್ಟಿವ್‌ಗಳು, ಜೇಮ್ಸ್‌ ಬಾಂಡ್‌ ಜತೆ ಕಾಣಿಸಿಕೊಳ್ಳುವ ಗೂಢಚಾರಿಣಿಗಳ ಬಗ್ಗೆ ಏನನ್ನಿಸುತ್ತದೆ?

(ನಗು) ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಪ್ರತಿಯೊಂದು ಕ್ಷೇತ್ರಕ್ಕೆ ಕಾಲಿಟ್ಟಿರುವುದಷ್ಟೇ ಅಲ್ಲ; ಆ ಎಲ್ಲ ಕ್ಷೇತ್ರದಲ್ಲೂ ಜಯದ ನಗು ತುಳುಕಿಸುತ್ತಿದ್ದಾಳೆ. ಎಲ್ಲ ಮಹಿಳೆಯರಲ್ಲೂ ಅಂತಃಶಕ್ತಿ ಎಂಬುದು ಇರುತ್ತದೆ. ಕೈಗೆತ್ತಿಕೊಂಡ ಕೆಲಸವನ್ನು ಮಾಡಿ ಮುಗಿಸುವ ಛಲ ಇರುತ್ತದೆ. ಈ ನೆಲೆಗಟ್ಟಿನಲ್ಲಿ ನೋಡುವುದಾದರೆ ಜೇಮ್ಸ್‌ ಬಾಂಡ್‌ನ ಪ್ರೇಯಸಿಯರಷ್ಟೇ ಚುರುಕುತನ ಹೊಂದಿದ್ದಾರೆ ನಿಜ ಜೀವನದ ಲೇಡಿ ಡಿಟೆಕ್ಟಿವ್‌ಗಳು. ತೆರೆ ಮೇಲೆ ಅವರು ಮಾಡಿದಷ್ಟೇ ಚಾಕಚಕ್ಯತೆಯಿಂದ ಕೆಲಸ ನಿರ್ವಹಿಸುವ ಹತ್ತಾರು ಪತ್ತೆದಾರಿಣಿಯರು ನನ್ನ ಜತೆಗಿದ್ದಾರೆ. ಆತ್ಮವಿಶ್ವಾಸವೇ ಲೇಡಿ ಡಿಟೆಕ್ಟಿವ್‌ಗಳ ಗೆಲುವಿನ ಬಲಿಷ್ಠ ಅಸ್ತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು