ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸ್ವಾಭಿಮಾನಿ ‘ಅಭಿಮಾನ ಸಂಗಮ’

ಮಲೆನಾಡಿನ ಉತ್ಪನ್ನಗಳಿಗೆ ಮಹಾನಗರದಲ್ಲಿ ಮಾರುಕಟ್ಟೆ
Last Updated 2 ನವೆಂಬರ್ 2020, 10:31 IST
ಅಕ್ಷರ ಗಾತ್ರ
ADVERTISEMENT
""
""

ಉದ್ಯೋಗಕ್ಕಾಗಿ ಮಹಾನಗರದೆಡೆಗೆ ಮುಖ ಮಾಡುವ ಬದಲಾಗಿ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿರುವ ಕೃಷಿಕರ ಕಾಯಕವನ್ನು ಕಾಂಕ್ರೀಟ್ ಕಾಡಿನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಈ ಯುವ ಬಳಗ. ಹಳ್ಳಿಗರು–ಪಟ್ಟಣವಾಸಿಗರ ನಡುವೆ ನಂಟು ಬೆಸೆದಿರುವ ‘ಅಭಿಮಾನ ಸಂಗಮ’ ಬಳಗದ ಕಾರ್ಯ ಅಭಿಮಾನ ಮೂಡಿಸುವಂತಿದೆ.

‘ಅಭಿಮಾನ ಸಂಗಮ’ ಇದು ಸುಮಾರು 30 ಯುವ ಜನರು ಸೇರಿ ಕಟ್ಟಿಕೊಂಡಿರುವ ಬಳಗ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸುತ್ತಮುತ್ತಲಿನ ಕೃಷಿಕರು, ಗೃಹಿಣಿಯರು, ಯುವತಿಯರು ಈ ಬಳಗದಲ್ಲಿದ್ದಾರೆ. ಮಲೆನಾಡಿನ ವೈವಿಧ್ಯ, ಪರಿಶುದ್ಧ ಉತ್ಪನ್ನಗಳನ್ನು ನಗರವಾಸಿಗಳಿಗೆ ಪರಿಚಯಿಸುವುದು ಸಂಘಟನೆಯ ಮುಖ್ಯ ಆಶಯ. ಎರಡು ವರ್ಷಗಳಿಂದ ಸಕ್ರಿಯವಾಗಿರುವ ಬಳಗ, ಈ ಎರಡು ವರ್ಷಗಳಲ್ಲಿ ತನ್ನ ವಹಿವಾಟು ₹ 2 ಲಕ್ಷ ದಾಟಿತೆಂಬ ಸಂಗತಿಯನ್ನು ಈಚೆಗೆ ಹೆಮ್ಮೆಯಿಂದ ಹಂಚಿಕೊಂಡಿದೆ.

ಹುಟ್ಟೂರಿನಲ್ಲೇ ಇದ್ದು ಕೃಷಿಯೊಂದಿಗೆ ಉಪ‍ ಉದ್ಯೋಗ ಮಾಡಬೇಕೆಂಬ ಯುವಕನೊಬ್ಬನ ತುಡಿತದ ಕನಸು ಈ ‘ಅಭಿಮಾನ ಸಂಗಮ’. ಹಾರೇಹುಲೇಕಲ್‌ನ ಹರೀಶ ಹೆಗಡೆ ಹಾಗೂ ಅವರ ಇನ್ನಿಬ್ಬರು ಸ್ನೇಹಿತರು ಕಾಲೇಜು ದಿನಗಳಲ್ಲೇ ಸ್ವ ಉದ್ಯೋಗದ ಕನಸು ಕಂಡು, ಆದಾಯದ ನಿರೀಕ್ಷೆಯಿಲ್ಲದೇ ಸಣ್ಣ ಉದ್ಯಮವನ್ನು ಪ್ರಾರಂಭಿಸಿದ್ದರು. ಅಷ್ಟರಲ್ಲಿ ಸ್ನೇಹಿತರಿಬ್ಬರಿಗೆ ಬೇರೆ ಉದ್ಯೋಗ ಸಿಕ್ಕಿತು, ಅಲ್ಲಿಗೆ ಸ್ವ ಉದ್ಯೋಗದ ಕನಸೂ ಮುದುಡಿತು.

ಇದಾಗಿ ಆರೆಂಟು ವರ್ಷಗಳು ಕಳೆದ ಮೇಲೆ ಹರೀಶ ಅವರಿಗೆ ಹೊಸತೊಂದು ಯೋಚನೆ ಬಂತು. ಜೇನು ಸಾಕಣೆ ಪ್ರಾರಂಭಿಸಿದರು. ಮೂರು ಜೇನು ಪೆಟ್ಟಿಗೆ ಇಟ್ಟು, ಜೇನುತುಪ್ಪ ತೆಗೆಯಲಾರಂಭಿಸಿದರು. ತಂತ್ರಜ್ಞಾನವನ್ನು ಬಳಸಿಕೊಂಡ ಅವರು, ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಜೇನು ಸಾಕಣೆಯ ವಿಚಾರವನ್ನು ಹಂಚಿಕೊಂಡರು. ಜೇನುತುಪ್ಪಕ್ಕೆ ಬೇಡಿಕೆ ಬಂತು. ಅಲ್ಲಿಂದ ಉತ್ಸಾಹಿಯಾದ ಅವರು, ಜೇನಿನಿಂದ ಜಾನುವಾರು ಕಡೆ ಹೊರಳಿದರು. ಜೇನುತುಪ್ಪದ ಜತೆಗೆ ಹೈನುಗಾರರು ಉತ್ಪಾದಿಸುವ ದೇಸಿ ಆಕಳ ತುಪ್ಪಕ್ಕೆ ಮಾರುಕಟ್ಟೆ ಅರಸಿದರು.

ಬಾಯಲ್ಲಿ ನೀರೂರುವ ರಟ್ಟಿನೊಳಗಣ ಶುದ್ಧ ಜೇನುತುಪ್ಪ

‘ದೇಸಿ ಸೊಗಡಿನ ಶುದ್ಧ ಹಾಗೂ ಗುಣಮಟ್ಟದ ಉತ್ಪನ್ನಗಳು ನಗರದ ಜನರನ್ನು ಸೆಳೆದವು. ಬೇಡಿಕೆ ಹೆಚ್ಚಿದಂತೆ ಉತ್ಪನ್ನಗಳ ಸಂಖ್ಯೆಯೂ ಹೆಚ್ಚುತ್ತ ಹೋಯಿತು. ಮಲೆನಾಡಿನ ವಿಶೇಷವಾಗಿರುವ ತೊಡೆದೆವು, ಚಿಪ್ಸ್, ಹಪ್ಪಳ, ಉಪ್ಪಿನಕಾಯಿ ಹೀಗೆ ತರಹೇವಾರಿ ತಿನಿಸುಗಳ ಬಗ್ಗೆ ವಿಚಾರಿಸುವವರು ಹೆಚ್ಚಾದರು. ಗ್ರಾಹಕರ ಬೇಡಿಕೆ ಪೂರೈಸುವುದೇ ನಮ್ಮ ಕೆಲಸ. ತಿನಿಸುಗಳ ಜತೆಗೆ ಯುವತಿಯರು ತಯಾರಿಸುವ ಝೂಲಾ, ಮ್ಯಾಟ್, ಬ್ಯಾಗ್, ಆರತಿ ಬಟ್ಟಲು ಇಂತಹ ಆಕರ್ಷಕ ಕಸೂತಿಯನ್ನೂ ಪರಿಚಯಿಸಿದ್ದೇವೆ. 30ಕ್ಕೂ ಹೆಚ್ಚು ಉತ್ಪನ್ನಗಳು ಈಗ ನಗರದ ಗ್ರಾಹಕರ ಕೈ ಸೇರುತ್ತಿವೆ’ ಎನ್ನುವಾಗ ಹರೀಶ ಅವರಿಗೆ ಹೆಮ್ಮೆ.

‘ಉತ್ತಿಷ್ಠ ಭಾರತ’ ಸಂಘಟನೆ ಜೊತೆ ಸಂಪರ್ಕ ಬೆಳೆಸಿರುವ ಹರೀಶ, ಇದರ ಉತ್ಪನ್ನಗಳನ್ನು ಸ್ಥಳೀಯರಿಗೆ ಪರಿಚಯಿಸುತ್ತಿದ್ದಾರೆ. ಇತ್ತೀಚೆಗೆ ಡಿಜಿಟಲ್, ಪ್ರಿಂಟಿಂಗ್ ಕ್ಷೇತ್ರಗಳ ಸ್ನೇಹಿತರೂ ಇವರೊಂದಿಗೆ ಕೈ ಜೋಡಿಸಿ ಬಳಗವನ್ನು ಬಲಪಡಿಸಿದ್ದಾರೆ.

‘ಉದ್ಯೋಗಿಯಾಗಿ ದುಡಿಯುವುದಕ್ಕಿಂತ ಉದ್ಯೋಗದಾತನಾಗಬೇಕು, ಅದಾಗದಿದ್ದರೆ ಸ್ವ ಉದ್ಯೋಗವನ್ನಾದರೂ ಮಾಡಬೇಕು ಎಂಬ ಆಸೆಯಿತ್ತು. ಮೂರು ಜೇನು ಪೆಟ್ಟಿಗೆಯಿಂದ ಪ್ರಾರಂಭವಾದ ಕನಸು ಈಗ ಕವಲಾಗಿ ಟಿಸಿಲೊಡೆದಿದೆ. 20ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳು ಇವೆ. ಒಮ್ಮೆ ಉತ್ಪನ್ನ ಖರೀದಿಸಿದವರು ಮತ್ತೊಮ್ಮೆ ಕರೆ ಮಾಡುತ್ತಾರೆ. ಕೋವಿಡ್–19 ಪೂರ್ವದಲ್ಲಿ ತಿಂಗಳಿಗೆ ಸುಮಾರು ₹ 20 ಸಾವಿರ ವಹಿವಾಟು ನಡೆಯುತ್ತಿತ್ತು. ಲಾಕ್‌ಡೌನ್ ವೇಳೆ 20 ದಿನ ವಹಿವಾಟು ಸ್ಥಗಿತಗೊಂಡಿತ್ತು. ಈಗ ಮತ್ತೆ ಚಿಗಿತುಕೊಂಡಿದೆ’ ಎಂದು ಅಭಿಮಾನದಿಂದ ಹೇಳಿಕೊಂಡ ಹರೀಶ್, ಇಡೀ ತಂಡದ ಶ್ರಮದಿಂದ ಇಷ್ಟೆಲ್ಲ ಸಾಧ್ಯವಾಯಿತು ಎನ್ನುತ್ತಾರೆ.

ಯುವತಿಯರು ತಯಾರಿಸಿರುವ ಆಕರ್ಷಕ ಕಸೂತಿ

‘ಗೃಹಿಣಿಯರು ಮನೆಗೆಲಸ, ಮಕ್ಕಳ ಲೋಕವನ್ನು ದಾಟಿ ಜಗತ್ತಿನೆದುರು ಬರಲು, ಮನೆಯಲ್ಲೇ ಇದ್ದು ಅಷ್ಟಿಷ್ಟು ಗಳಿಸಲು ಅಭಿಮಾನ ಸಂಗಮ ಉತ್ತಮ ವೇದಿಕೆಯಾಗಿದೆ. ಯುವತಿಯರು, ಗೃಹಿಣಿಯರ ಸ್ವಾಭಿಮಾನ ಹೆಚ್ಚಿಸಲು ಅವಕಾಶ ಕಲ್ಪಿಸಿದ ಬಳಗದ ಸದಸ್ಯೆಯರೆಂದು ಹೇಳಿಕೊಳ್ಳಲು ಖುಷಿ’ ಎನ್ನುತ್ತಾರೆ ಪ್ರಜ್ಞಾ ಮತ್ತು ನಿಧಿ.

‘ಬಿಡುವಿನ ವೇಳೆ ಕಸೂತಿ, ಕೈಗಾರಿಕೆ ಮಾಡಿ ಕ್ರಿಯಾಶೀಲತೆ ಉಳಿಸಿಕೊಳ್ಳಲು, ಇನ್ನಷ್ಟು ಜನರಿಗೆ ಪ್ರೇರಣೆಯಾಗಲು ಅಭಿಮಾನ ಸಂಗಮದ ಅಂಗಳ ಅವಕಾಶ ನೀಡಿದೆ’ ಎನ್ನುತ್ತಾರೆ ಶ್ರುತಿ ಭಟ್ಟ. ಹರೀಶ ಹೆಗಡೆ ಸಂಪರ್ಕ ಸಂಖ್ಯೆ: ಮೊ63614 31708.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT