ಬುಧವಾರ, ಫೆಬ್ರವರಿ 24, 2021
23 °C

‘ಸ್ಮಾರ್ಟ್’ ಆಯ್ತು, ಕ್ಯಾಂಪ್ ಶಾಲೆ

ಶಿವಕುಮಾರ್ ಕೆ ಗಂಗಾವತಿ Updated:

ಅಕ್ಷರ ಗಾತ್ರ : | |

Prajavani

ಮೇ ತಿಂಗಳ ಅಂತ್ಯದವರೆಗೂ ‘ಮಾಸಲು ಬಣ್ಣದ ಅಂಗಿ ತೊಟ್ಟ ಯುವಕನಂತೆ’ ಕಾಣುತ್ತಿದ್ದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಲಕ್ಷ್ಮಿ ಕ್ಯಾಂಪ್ ಸರ್ಕಾರಿ ಶಾಲೆಯ ಕಟ್ಟಡ ಈಗ ಬಣ್ಣ ಹೊದ್ದುಕೊಂಡು ‘ಸ್ಮಾರ್ಟ್’ ಆಗಿಬಿಟ್ಟಿದೆ. ಗೋಡೆಯ ಮೇಲೆ ಬಣ್ಣ ಬಣ್ಣದ ಕಾರ್ಟೂನ್ ಗಳು ರಂಜಿಸುತ್ತಿವೆ. ಶಾಲೆಯ ಎದುರು ಕಾರಂಜಿ ಬಂದಿದೆ. ಅಂಗಳದಲ್ಲಿ ತರಕಾರಿಗಳು ಮೇಳೈಸಿವೆ. ಬೇಸಿಗೆ ರಜೆಗೆ ಹೋಗಿ ವಾಪಸ್ ಬಂದ ಮಕ್ಕಳಿಗೆ ಹೀಗೆ ರಂಗು ರಂಗಾಗಿರುವ ಶಾಲೆ ನೋಡಿ, ದಂಗಾಗಿ ನಿಂತು ‘ಇದೂ ನಮ್ ಶಾಲೆಯಾ’ ಎಂದು ಅಚ್ಚರಿಪಡುತ್ತಿದ್ದಾರೆ!

ಎರಡು ದಿನಗಳ ಚಿಂತನೆ

ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲ ಮಕ್ಕಳು ‘ಸರ್ ಈಕಿ ಮುಂದಿನ ವರ್ಸ ನಮ್ಮ ಸಾಲಿಗೆ ಬರಲ್ಲಂತ್ರಿ, ವ್ಯಾನ್‌ಗೆ ಹೋಕಾಳಂತ್ರಿ’ ಎಂದು ಹೇಳುತ್ತಿದ್ದಾಗಲೇ, ಶಿಕ್ಷಕ ಸೋಮು ಕುದುರಿಹಾಳ, ಶಾಲೆ ಉಳಿಸಿಕೊಳ್ಳಲು ಏನು ಮಾಡಬೇಕೆಂದು ಯೋಚಿಸಲು ಶುರು ಮಾಡಿದರು. ಆ ಚಿಂತನೆ ಈ ವರ್ಷದ ಮೇ ತಿಂಗಳ ಶಾಲೆ ಆರಂಭದಲ್ಲಿ ಕಾರ್ಯರೂಪಕ್ಕೆ ಬರಲು ಶುರುವಾಯಿತು.

ಮೇ 28ರಂದು ಆರಂಭವಾದ ಶಾಲೆಗೆ, ಬಿಸಿಲಿನ ಕಾರಣಕ್ಕೆ ಐದು ದಿನ ರಜೆ ಕೊಟ್ಟರು. ರಜೆ ದಿನಗಳಲ್ಲಿ ಶಾಲೆಗೆ ಹೊಸ ರೂಪ ಕೊಡಲು ಮೇಷ್ಟ್ರು ಚಿಂತಿಸಿದರು. ಅಂದು ಸಂಜೆ ಶಾಲೆ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರನ್ನು ಕರೆದು, ತನ್ನ ಚಿಂತನೆಯನ್ನು ಅವರ ತಲೆಯೊಳಗೆ ಇಳಿಬಿಟ್ಟರು. ಅವರೆಲ್ಲ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು. ನಾಲ್ವರ ಕಿವಿಗೆ ಬಿದ್ದ ಶಾಲೆ ಸುಧಾರಣೆಯ ವಿಷಯ, ಹನ್ನೆರಡು ಹುಡುಗರಿಗೆ ತಲುಪಿತು. ಅವರೆಲ್ಲ, ತಾವು ಓದಿದ ಶಾಲೆಗೆ ಹೊಸ ರೂಪ ಕೊಡಲು ಸಿದ್ಧರಾದರು. ಶನಿವಾರ ಚರ್ಚಿಸಿದ ವಿಷಯ, ಭಾನುವಾರವೇ ಕೃತಿಗಿಳಿಯಿತು !

ಶಿಕ್ಷಕ ಸೋಮು ‘ಲಕ್ಷ್ಮಿ ಕ್ಯಾಂಪ್ ವಾಟ್ಸ್ಯಾಪ್‌ ಗ್ರೂಪ್’ ಮಾಡಿ, ಅದರಲ್ಲಿ ಶಾಲೆಯ ಪ್ರಗತಿ ಬಗ್ಗೆ ಪೋಸ್ಟ್ ಮಾಡುತ್ತಾ ಹೊರಟರು. ಶಿಕ್ಷಕರ ಉತ್ಸಾಹ ಮೆಚ್ಚಿಕೊಂಡ ಗ್ರಾಮದವರಾದ ರಾಮಕೃಷ್ಣ, ಶ್ರೀಹರಿ, ಲಕ್ಷ್ಮಿನಾರಾಯಣ, ಭಾಸ್ಕರ್ ರಾವ್, ಶ್ರೀನಿವಾಸ್, ವೆಂಕಟೇಶ್ ಹಾಗೂ ಒಂದಷ್ಟು ಗ್ರಾಮಸ್ಥರು, ಶಾಲಾ ನವೀಕರಣಕ್ಕೆ ಅಗತ್ಯ ನೆರವು ನೀಡಲು ಮುಂದಾದರು. ಭಾನುವಾರ ಬೆಳಿಗ್ಗೆ ಕೆಲಸ ಶುರುವಾಯಿತು. ಶಾಲೆ ಹಿರಿಯ ವಿದ್ಯಾರ್ಥಿಗಳಾದ ರಾಮಕೃಷ್ಣ, ಪಂಪಾಪತಿ, ಅನಿಲ್, ಉಪೇಂದ್ರ, ರಾಮಾಂಜಿ, ಗಣೇಶ್, ಶ್ರೀನಿವಾಸ್, ಶಿವಕುಮಾರ್, ಆಂಜನೇ ಯಲು, ರಾಮು, ದೊರೆಬಾಬು, ಪ್ರಕಾಶ, ತಿಮ್ಮೇಶ ಮತ್ತಿತರರು ಸೇರಿ ಶಾಲೆ ಕಟ್ಟಡ, ಕಾಂಪೌಂಡ್‌ಗೆ ಬಣ್ಣ ಬಳಿದರು. ಶಾಲೆ ಹೊಳಪು ಕಂಡಿತು.

ಫೇಸ್‌ಬುಕ್ ‘ಕೊಡುಗೆ’

ಶಾಲೆಯ ಅಭಿವೃದ್ಧಿಯ ಕೆಲಸಗಳನ್ನು ಚಿತ್ರ ಸಹಿತ ಫೇಸ್‌ಬುಕ್‌ಗ್‌ ಪೋಸ್ಟ್ ಮಾಡುತ್ತಿದ್ದರು ಶಿಕ್ಷಕ ಸೋಮು. ಈ ಪೋಸ್ಟ್‌ಗಳು ಅನೇಕ ಗೆಳೆಯರನ್ನು ಸೆಳೆಯಿತು. ಅ ಗುಂಪಿನಲ್ಲಿದ್ದ ಕೆಲವರು ಹವ್ಯಾಸಿ ಚಿತ್ರ ಕಲಾವಿದ ಶಿಕ್ಷಕರು, ಸ್ವ ಇಚ್ಛೆಯಿಂದ ‘ನಾವು ನಿಮ್ಮ ಶಾಲೆ ಗೋಡೆ ಮೇಲೆ ಚಿತ್ರಗಳನ್ನು ಬಿಡಿಸಿಕೊಡುತ್ತೇವೆ’ ಎಂದು ಮುಂದೆ ಬಂದರು. ಒಂದೆರಡು ಭಾನುವಾರ ಬಿಡುವು ಮಾಡಿಕೊಂಡು ಶಾಲೆಗೆ ಬಂದ ಶಿಕ್ಷಕರಾದ ಮಸ್ಟೂರು ಅಂಜೂರಿ ಕ್ಯಾಂಪ್‌ನ ತಿಪ್ಪೇರುದ್ರಾಚಾರ್, ಚಿಕ್ಕಬೆಣಕಲ್ ರಂಗನಾಥ್, ಯರಡೋಣಾ ಶಾಲೆಯ ಮಧುಕುಮಾರ್, ಮುದಗಲ್ ಕನ್ನಾಳ ಶಾಲೆಯ ಸೂಗೂರೇಶ್ ಹಿರೇಮಠ, ಹಣವಾಳ ಕ್ಯಾಂಪ್ ಶಾಲೆಯ ಯೋಗೀಶ್, ಗುಂಡೂರು ಶಾಲೆಯ ಶಿಕ್ಷಕಿ ರೇಖಾ ಜೆ. ಎಸ್., ಕೊಪ್ಪಳದ ಚಿತ್ರ ಕಲಾವಿದ ಕೃಷ್ಣಚಿತ್ರಗಾರವರು, ಶಾಲೆಯ ಗೋಡೆಗಳ ಮೆಲೆ ಸುಂದರವಾದ ಚಿತ್ರಗಳನ್ನು ಬಿಡಿಸಿದರು. ಆಗಷ್ಟೇ ಬಣ್ಣದ ಅಂಗಿ ತೊಟ್ಟುಕೊಂಡಿದ್ದ ಶಾಲಾ ಗೋಡೆಗಳೀಗ ಎಂಬ್ರಾಯಿಡರಿಯಂತಹ ಚಿತ್ತಾರಗಳನ್ನು ಪೋಣಿಸಿಕೊಂಡಿವೆ. ಕಾರ್ಟೂನ್‌ ಗಳು, ದಸರಾ ಮಹೋತ್ಸವ, ಡೊಳ್ಳು ಕುಣಿತ, ಕಿನ್ನಾಳ ಕಲೆಯ ಗೊಂಬೆಗಳು, ಪ್ರಾಣಿ ಪಕ್ಷಿಗಳು, ಜಲಚರಗಳು ಇತ್ಯಾದಿ, ಸಾಂಪ್ರದಾಯಿಕ ಶೈಲಿಯ ಹಸೆ ಚಿತ್ರಗಳು, ವರ್ಲಿ (ಬುಡಕಟ್ಟು ಜನಾಂಗದ) ಕಲೆ ಕ್ಯಾಂಪ್ ಶಾಲೆಯ ಸೌಂದರ್ಯ ಹೆಚ್ಚಿಸಿವೆ.

ಶಾಲೆಗೆ ಹೊಸ ರೂಪ ಬಂದ ಮೇಲೆ, ಹನ್ನೊಂದು ಇದ್ದ ಮಕ್ಕಳ ಸಂಖ್ಯೆ, ಈಗ 19ಕ್ಕೆ ಏರಿದೆ. ಖಾಸಗಿ ಶಾಲೆಗೆ ಸೇರಿಸಿದ್ದ ಮಗುವನ್ನು ಪೋಷಕರೊಬ್ಬರು ಈ ಶಾಲೆಗೆ ಸೇರಿಸಿದ್ದಾರೆ. ಪಕ್ಕದ ಹಳ್ಳಿಯ ಮಕ್ಕಳೂ ಈ ಶಾಲೆಗೆ ಬರಲು ಆರಂಭಿಸಿದ್ದಾರೆ.

ಶಾಲಾ ಆವರಣದಲ್ಲಿ ಸಸಿ ನೆಟ್ಟು ಹಸಿರೀಕರಣ ಮಾಡಿದ್ದಾರೆ. ಪುಟ್ಟ ಉದ್ಯಾನವನ್ನು ನಿರ್ಮಿಸಿ–ದ್ದಾರೆ. ಶಾಲಾ ಅಂಗಳದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ತರಕಾರಿ ಬೆಳೆಸುತ್ತಿದ್ದಾರೆ. ಅದೇ ತರಕಾರಿಯನ್ನೇ ಮಧ್ಯಾಹ್ನದ ಬಿಸಿಯೂಟಕ್ಕೆ ಉಪಯೋಗಿಸಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಊಟದ ಜತೆಗೆ ಕೃಷಿ ಪಾಠವೂ ಲಭ್ಯವಾಗುತ್ತಿದೆ.

‘ಶಾಲೆಯ ಇಷ್ಟೆಲ್ಲ ಬದಲಾವಣೆಗೆ, ದಾನಿಗಳು, ಶಿಕ್ಷಕರು, ಮಕ್ಕಳು, ಗೆಳೆಯರು ಕೈಜೋಡಿಸಿರುವುದೇ ಕಾರಣ. ಇದರಿಂದ ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚಿಸಿದೆ. ಮುಂದೆ ಇದು ಮಾದರಿ ಶಾಲೆಯಾಗುತ್ತದೆ’ ಎಂದು ಶಿಕ್ಷಕ ಸೋಮು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಗಂಗಾವತಿ ಪ್ರಾಣೇಶ್, ‘ಶಿಕ್ಷಣ ಆಂದೋಲನದ ಐಕಾನ್’

ಒಂದು ಕಡೆ ಲಕ್ಷ್ಮಿಕ್ಯಾಂಪ್‌ನಂತಹ ಪುಟ್ಟ ಗ್ರಾಮದ ಶಾಲೆಗಳು ಹೀಗೆ ಪುನಶ್ಚೇತನಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ಶಿಕ್ಷಣ ಇಲಾಖೆ ಗಂಗಾವತಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರಲು ‘ಶೈಕ್ಷಣಿಕ ದಾಖಲಾತಿ ಆಂದೋಲನ’ ನಡೆಸಿದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲೇ ಓದಿ, ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಹಾಸ್ಯ ದಿಗ್ಗಜ ಪ್ರಾಣೇಶ್ ಅವರನ್ನು ಈ ಬಾರಿಯ ತಾಲ್ಲೂಕು ಶಿಕ್ಷಣ ದಾಖಲಾತಿ ಆಂದೋಲನದ ‘ಬ್ರಾಂಡ್ ಐಕಾನ್’ ಆಗಿ ಆಯ್ಕೆ ಮಾಡಿತ್ತು. ಜೂ.14ರಂದು ಗಂಗಾವತಿಯಲ್ಲಿ ಆಯೋಜಿಸಿದ್ದ ‘ಸರ್ಕಾರಿ ಉಳಿಸಿ ಬೆಳೆಸಿ ಅಭಿಯಾನ ಹಾಗೂ ದಾಖಲಾತಿ ಆಂದೋಲನ’ಕ್ಕೆ ಪ್ರಾಣೇಶ್ ಚಾಲನೆ ನೀಡಿದ್ದರು. ‘ಈ ವಿಶಿಷ್ಟ ಅಭಿಯಾನ ನಮ್ಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಸಹಾಯವಾಗುತ್ತದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ.

(ಸ್ಮಾರ್ಟ್ ಸರ್ಕಾರಿ ಶಾಲೆ ಸರಣಿ ಮುಕ್ತಾಯವಾಯಿತು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು