ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಎಸ್ಎಲ್‌ಸಿ ಪರೀಕ್ಷೆ ದಿಕ್ಸೂಚಿ: ರಾಸಾಯನಿಕ ಕ್ರಿಯೆಯ ವಿಧಗಳು

Last Updated 24 ಮೇ 2020, 19:30 IST
ಅಕ್ಷರ ಗಾತ್ರ

ವಿವಿಧ ರೀತಿಯ ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳ ಬಗ್ಗೆ ಅರ್ಥ ಮಾಡಿಕೊಂಡರೆ ಪರೀಕ್ಷೆಯಲ್ಲಿ ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚು ಸಮಯ ವ್ಯಯ ಮಾಡುವ ಅಗತ್ಯವಿರುವುದಿಲ್ಲ.

ನಮ್ಮ ಸುತ್ತಮುತ್ತ ಪ್ರತಿಕ್ಷಣವೂ ಹಲವಾರು ರಾಸಾಯನಿಕ ಕ್ರಿಯೆಗಳು ಸಂಭವಿಸುತ್ತಲೇ ಇರುತ್ತವೆ. ಅವುಗಳ ವಿಧಗಳನ್ನು ಈಗ ತಿಳಿಯೋಣ.

1ಸಂಯೋಗ ಕ್ರಿಯೆ: ಎರಡು ಅಥವಾ ಹೆಚ್ಚು ವಸ್ತುಗಳ ಸಂಯೋಗದಿಂದ ಒಂದೇ ಹೊಸ ಉತ್ಪನ್ನ ಉಂಟಾಗುತ್ತದೆ. ಇವು ಸಾಮಾನ್ಯವಾಗಿ ಬಹಿರುಷ್ಣಕ ಕ್ರಿಯೆಗಳಾಗಿರುತ್ತವೆ.

A+B → C

2 ವಿಭಜನ ಕ್ರಿಯೆ: ಒಂದು ವಸ್ತು ವಿಭಜನೆ ಹೊಂದಿ ಎರಡು ಅಥವಾ ಹೆಚ್ಚು ವಸ್ತುಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಇವು ಅಂತರುಷ್ಣಕಗಳು.

A→ B+C

3ಸ್ಥಾನಪಲ್ಲಟ ಕ್ರಿಯೆ: ಒಂದು ಪ್ರಬಲ ಧಾತುವು ಸಂಯುಕ್ತದಲ್ಲಿನ ಇನ್ನೊಂದು ಧಾತುವನ್ನು ಅದರ ದ್ರಾವಣದಿಂದ ಪಲ್ಲಟಗೊಳಿಸುತ್ತದೆ.

A+BC→AC+B : A>B

Fe(s) + CuSO4 (aq) → FeSO4 (aq) + Cu(s) .

4ದ್ವಿ ಸ್ಥಾನಪಲ್ಲಟ ಕ್ರಿಯೆ: ಪ್ರತಿವರ್ತಿತಗಳ ನಡುವೆ ಅಯಾನುಗಳ ವಿನಿಮಯವಾಗುತ್ತದೆ.

AB+CD→AD+CB
ಆಮ್ಲಜನಕ (ಆಕ್ಸಿಜನ್‌) ತೆಗೆದುಕೊಳ್ಳುವುದು ಅಥವಾ ಜಲಜನಕ (ಹೈಡ್ರೊಜನ್‌) ಬಿಡುವುದು ಉತ್ಕರ್ಷಣ ಕ್ರಿಯೆಯಾದರೆ ಜಲಜನಕ ತೆಗೆದುಕೊಳ್ಳುವುದು ಅಥವಾ ಆಮ್ಲಜನಕ ಬಿಡುವುದು ಅಪಕರ್ಷಣ ಕ್ರಿಯೆಯಾಗುತ್ತದೆ. ಎರಡು ಕ್ರಿಯೆಗಳೂ ಒಂದಕ್ಕೊಂದು ಪೂರಕವಾಗಿರುತ್ತವೆ.

ಉತ್ಕರ್ಷಣದಿಂದಾಗಿ ಕೆಲವು ಲೋಹಗಳು ಸಂಕ್ಷಾರಣೆ ಹೊಂದುತ್ತವೆ. ಉದಾಹರಣೆಗೆ ಕಬ್ಬಿಣ ತುಕ್ಕು ಹಿಡಿಯುವುದು. ಇದರಿಂದಾಗಿ ಬಹಳ ನಷ್ಟ ಉಂಟಾಗುತ್ತದೆ. ಆಹಾರಗಳು ಕಮಟಿ ಅವುಗಳನ್ನು ತಿನ್ನಲು ಸಾಧ್ಯವಿಲ್ಲ.

ಆಮ್ಲಗಳು, ಪ್ರತ್ಯಾಮ್ಲಗಳು, ಲವಣಗಳು:

ಆಮ್ಲ ಮತ್ತು ಪ್ರತ್ಯಾಮ್ಲಗಳ ಸಂಯೋಜನೆಯಿಂದ ಲವಣ ಉತ್ಪತ್ತಿಯಾಗುತ್ತದೆ. ಆಮ್ಲಗಳಲ್ಲಿ H+ ಅಯಾನ್ಸ್ ಇದ್ದರೆ ಪ್ರತ್ಯಾಮ್ಲಗಳಲ್ಲಿ OH–ಅಯಾನ್ಸ್ ಇರುತ್ತವೆ. ಆಮ್ಲೀಯ ಗುಣ ಪ್ರದರ್ಶಿತವಾಗಬೇಕಾದರೆ H+ ಅಯಾನ್ಸ್ ಬೇಕೇಬೇಕು. ಆದ್ದರಿಂದ ಶುಷ್ಕ HCl ಆಮ್ಲೀಯ ಗುಣ ತೋರುವುದಿಲ್ಲ. ದ್ರಾವಣದಲ್ಲಿನ H+ ಅಯಾನುಗಳ ಸಾರತೆಯನ್ನು ಅಳೆಯುವ ಮಾನ pH. pH ಪೇಪರ್ ನಮಗೆ ದ್ರಾವಣದ pH ಅಳೆಯಲು ಸಹಾಯಮಾಡುತ್ತದೆ. ಇದರಲ್ಲಿ 0ದಿಂದ 14ರವರೆಗೆ ಮೌಲ್ಯಗಳಿದ್ದು, ಪ್ರಬಲ ಆಮ್ಲದ pH 0ಗೆ ಸಮೀಪವಾಗಿಯೂ, ಪ್ರಬಲ ಪ್ರತ್ಯಾಮ್ಲದ pH 14ಕ್ಕೆ ಸಮೀಪವಾಗಿಯೂ ಇರುತ್ತದೆ. ಅತಿ ದುರ್ಬಲ ಆಮ್ಲದ pH 7ರ ಸಮೀಪ 7ಕ್ಕಿಂತ ಕಡಿಮೆ ಇದ್ದರೆ, ಅತಿ ದುರ್ಬಲ ಪ್ರತ್ಯಾಮ್ಲದ pH 7ರ ಸಮೀಪ ಹಾಗೂ 7ಕ್ಕಿಂತ ಹೆಚ್ಚಿರುತ್ತದೆ. ನೀರು ಎರಡೂ ಅಲ್ಲದ ಕಾರಣ ಅದರ pH 7 ಇರುತ್ತದೆ.

ಇದನ್ನು ಕಾಮನಬಿಲ್ಲಿನ ಬಣ್ಣಗಳಿಗೆ ಹೋಲಿಸಿಕೊಂಡರೆ ಅರಿಯುವುದು ಬಹಳ ಸುಲಭ. ಪ್ರಬಲ ಆಮ್ಲ pH ಪೇಪರ್ ಅನ್ನು ಕೆಂಪು ಮಾಡಿದರೆ, ಪ್ರಬಲ ಪ್ರತ್ಯಾಮ್ಲ ನೇರಳೆ ಮಾಡುತ್ತದೆ. ಪ್ರಬಲ ಆಮ್ಲಕ್ಕೆ ನೀರನ್ನು ಸೇರಿಸಿದರೆ ಅದರ ಬಣ್ಣ ಕೇಸರಿ ಅಥವಾ ಹಳದಿಯಾಗುತ್ತದೆ. ಅಂದರೆ pH ಹೆಚ್ಚುತ್ತದೆ. ಅದೇ ಪ್ರಬಲ ಪ್ರತ್ಯಾಮ್ಲಕ್ಕೆ ನೀರನ್ನು ಸೇರಿಸಿದರೆ ಅದು ಇಂಡಿಗೋ, ಅಥವಾ ನೀಲಿಗೆ ತಿರುಗತ್ತದೆ. ಎಂದರೆ pH ಕಡಿಮೆಯಾಗುತ್ತದೆ. ದೈನಂದಿನ ಜೀವನದಲ್ಲಿ pH ಬಹು ಪ್ರಮುಖ ಪಾತ್ರ ವಹಿಸುತ್ತದೆ.

(ಲೇಖಕಿ ನಿವೃತ್ತ ವಿಜ್ಞಾನ ಉಪನ್ಯಾಸಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT