ಮಂಗಳವಾರ, ಮೇ 18, 2021
23 °C
ಸಾಹಿತಿಗಳು, ಬುದ್ಧಿಜೀವಿಗಳ ಒಕ್ಕೊರಲ ಒತ್ತಾಯ

ಇಂಗ್ಲಿಷ್ ಮಾಧ್ಯಮ ಗೀಳಿನಿಂದ ಹೊರಬನ್ನಿ: ಸಾಹಿತಿಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಗ್ಲಿಷ್‌ ಮಾಧ್ಯಮ ವಿಷಯದಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ ನೀಡಿದ ತೀರ್ಪು ಇಡೀ ದೇಶಕ್ಕೆ ಮಾದರಿಯಾಗಿದ್ದು, ರಾಜ್ಯ ಸರ್ಕಾರ ಇನ್ನಾದರೂ ಇಂಗ್ಲಿಷ್‌ ಮಾಧ್ಯಮದ ಮೋಹದಿಂದ ಹೊರಬರಬೇಕು ಎಂದು ಹತ್ತಾರು ಹಿರಿಯ ಸಾಹಿತಿಗಳು, ಬುದ್ಧಿಜೀವಿಗಳು ಒತ್ತಾಯಿಸಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಹಿರಿಯ ಸಾಹಿತಿಗಳಾದ ಎಸ್‌.ಎಲ್‌.ಭೈರಪ್ಪ, ‌ ಚನ್ನವೀರ ಕಣವಿ, ಚಂದ್ರಶೇಖರ ಕಂಬಾರ, ವಿವೇಕ ರೈ, ದೇವನೂರ ಮಹಾದೇವ, ರಾಜೇಶ್ವರಿ ತೇಜಸ್ವಿ, ಎ.ಜೆ. ಸದಾಶಿವ, ನಾ.ಡಿಸೋಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಡಿ.ಎಸ್‌.ನಾಗಭೂಷಣ ಸಹಿತ ಹಲವರು ಈ ಸಂಬಂಧ ಮಂಗಳವಾರ ಜಂಟಿ ಹೇಳಿಕೆ ಹೊರಡಿಸಿದ್ದಾರೆ.

‘ಆಂಧ್ರಪ್ರದೇಶದ ಸರ್ಕಾರದ ನಿರ್ಧಾರ ಅಸಾಂವಿಧಾನಿಕ ಎಂದು ನ್ಯಾಯಾಲಯ ತಿಳಿಸಿದೆ. ಅದು ತನ್ನ ತೀರ್ಪಿನಲ್ಲಿ ಎತ್ತಿರುವ ಪ್ರಶ್ನೆಗಳು ಮತ್ತು ಅವಕ್ಕೆ ಅದು ಕಂಡುಕೊಂಡಿರುವ ಉತ್ತರಗಳು ಬಹಳ ಅರ್ಥಗರ್ಭಿತವಾಗಿವೆ. ನಮ್ಮಲ್ಲಿ ಶಿಕ್ಷಣವು ಒಂದು ಉದ್ಯಮವಾದಾಗಿನಿಂದ ಅದರ ಮೂಲ ಉದ್ದೇಶವೇ ಪಲ್ಲಟವಾಗಿದೆ. ರಾಷ್ಟ್ರ ಜೀವನದಲ್ಲಿ ಸದ್ಯದ ಕರೋನಾ ಹಾವಳಿಯೂ ಸೇರಿದಂತೆ ಆಗುತ್ತಿರುವ ಎಲ್ಲ ರೀತಿಯ ಅನಾಹುತಗಳ ಬುಡಕ್ಕೇ ಕೈಹಾಕಲು ಯತ್ನಿಸಿರುವುದು ಗೋಚರವಾಗುತ್ತದೆ’ ಎಂದು ಹೇಳಿದ್ದಾರೆ.

‘ಈ ತೀರ್ಪು ಕೊರೊನಾ ನಂತರದ ರಾಷ್ಟ್ರದಲ್ಲಾದರೂ ಶಿಕ್ಷಣ ಕುರಿತ ನಮ್ಮ ನೀತಿ-ನಿಲುವುಗಳನ್ನು ಒಮ್ಮೆ ಮರುಪರಿಶೀಲಿಸಲು ನಮ್ಮನ್ನೆಲ್ಲ ಪ್ರೇರೇಪಿಸುವಂತಿದೆ. ರಾಜ್ಯದಲ್ಲಿ ಕನ್ನಡದ ಮಕ್ಕಳಿಗಾದರೂ ಶಾಲಾ ಶಿಕ್ಷಣವನ್ನು ಕನ್ನಡದಲ್ಲಿಯೇ ಒದಗಿಸುವ ನಮ್ಮ ಸರ್ಕಾರದ ನೀತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಕನ್ನಡ ಶಿಕ್ಷಣ ಪರವಾದ ಎಲ್ಲ ಪ್ರಯತ್ನಗಳ ಬಾಗಿಲು ಮುಚ್ಚಿದೆ ಎಂದು ನಿರಾಶೆಯ ಕತ್ತಲಲ್ಲಿ ಕೂತವರಿಗೆ ಒಂದು ಬೆಳಕಿನ ಕಿಂಡಿ ತೆಗೆದಂತಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.

ಸಲಹೆಗಳು: ‘ಸರ್ಕಾರ ಮೊದಲು ಈ ತೀರ್ಪಿನಲ್ಲಿ ಅಂತರ್ಗತವಾಗಿರುವ ಮಾತೃಭಾಷಾ ಶಿಕ್ಷಣ ಮಾಧ್ಯಮದ ಸಾಂವಿಧಾನಿಕತೆಯ ಸಹಜತೆ ಮತ್ತು ಅದರ ತಾತ್ವಿಕ ಸಮರ್ಥನೆಯ ಅಂಶಗಳನ್ನು ಗುರುತಿಸಲು ಕನ್ನಡದ ಏಳಿಗೆಗೆ ಕಟ್ಟಿಬದ್ಧರಾಗಿರುವ ಕಾನೂನು ಪರಿಣತರ ಒಂದು ಕ್ಷಿಪ್ರ ಕಾರ್ಯತಂಡವನ್ನು ರಚಿಸಬೇಕು. ಅದರ ಸಲಹೆಗಳ ಆಧಾರದಲ್ಲಿ ಮೊದಲ ಹಂತದಲ್ಲಿ ರಾಜ್ಯದಲ್ಲಿ ಸಾವಿರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಮತ್ತು ತಾಲ್ಲೂಕಿಗೊಂದರಂತೆ ಪಬ್ಲಿಕ್ ಶಾಲೆಗಳನ್ನು ತರೆದ ಈ ಹಿಂದಿನ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಮುಂದಿನ ಶೈಕ್ಷಣಿಕ ವರ್ಷದಿಂದ 400 ಉರ್ದು ಮಾಧ್ಯಮ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವ ಸದ್ಯದ ಸರ್ಕಾರದ ಪ್ರಸ್ತಾವವನ್ನು ಹಿಂತೆಗೆದುಕೊಳ್ಳಬೇಕು. ಕನ್ನಡ ಶಿಕ್ಷಣಕ್ಕೆ ಮಾರಕವಾಗಿ ಪರಿಣಮಿಸಿರುವ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದಾದ ಸಾಧ್ಯತೆಗಳು ಮತ್ತು ವಿಧಾನಗಳ ಬಗ್ಗೆ ಆಲೋಚಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು