ಬುಧವಾರ, ಡಿಸೆಂಬರ್ 8, 2021
28 °C

PV Web Exclusive: ಮೊದಲು ವಂದಿಪೆ ನಿನಗೆ ಗುರುದೇವ...

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಚಹರೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಕಪ್ಪು ಫ್ರೇಮಿನ ದಪ್ಪ ಕನ್ನಡಕ. ಹಣೆಯ ಮೇಲೆ ಈಬತ್ತಿ ಪಟ್ಟ (ವಿಭೂತಿ ನಾಮ). ನೀಲಿ ಹಾಕಿದ್ದ ಪರಿಶುಭ್ರ ವಲ್ಲಿ, ನೆಹರೂ ಶರ್ಟು. ಘನಗಾಂಭೀರ್ಯವಾಗಿ ನಮ್ಮ ‘ಸಾಲಿಗುಡಿ’ಗೆ ಬರುತ್ತಿದ್ದ ಇಂತಹ ವಾಮನಮೂರ್ತಿ ಪಾಠ ಮಾಡಲು ನಿಂತರೆಂದರೆ ಅಕ್ಷರಶಃ ತ್ರಿವಿಕ್ರಮನೇ ಆಗಿ ಬಿಡುತ್ತಿದ್ದರು.

ಕೊಪ್ಪಳ ಜಿಲ್ಲೆಯ ಅಳವಂಡಿಯ ಸರ್ಕಾರಿ ಶಾಲೆಯಲ್ಲಿ ನಮಗೆ ಒಂದನೇ ಇಯತ್ತೆ ಪಾಠ ಮಾಡಿದ ಶಿವಪ್ಪ ಮೇಷ್ಟ್ರ ವ್ಯಕ್ತಿತ್ವದ ಪುಟ್ಟ ಝಲಕ್‌ ಇದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕಿಂತ ಒಂದನೇ ಇಯತ್ತಿನ ಮಕ್ಕಳಿಗೆ ಪಾಠ ಮಾಡುವುದೇ ಹೆಚ್ಚು ತ್ರಾಸದಾಯಕ ಕೆಲಸ ಎನಿಸುತ್ತದೆ. ಏನೇನೂ ಗೊತ್ತಿಲ್ಲದ ಹಸುಳೆಗಳ ಎದೆಯಲ್ಲಿ ಅಕ್ಷರದ ಬೀಜ ಬಿತ್ತುವುದೇನು ಸಲೀಸಾದ ಕೆಲಸವೇ ಮತ್ತೆ? ಶಿವಪ್ಪ ಮೇಷ್ಟ್ರು, ನಮಗೆ ‘ಅ’ ‘ಅಗಸ’, ‘ಆ’ ‘ಆನೆ’, ‘ಇ’ ‘ಇಲಿ’ ಎಂದೆಲ್ಲ ಹೇಳಿಕೊಟ್ಟರು. ಅಕ್ಷರ ಲೋಕದ ಆರಂಭಿಕ ದಾರಿಯಲ್ಲಿ ಸಹಪಥಿಕನಾಗಿ ನಮ್ಮನ್ನು ಮುನ್ನಡೆಸಿದರು.

ಶಾಲಾ ಕೋಣೆಗಳ ಅಭಾವದಿಂದ ನಮ್ಮ ತರಗತಿ ಒಮ್ಮೆ ಮರದ ಕೆಳಗೆ, ಇನ್ನೊಮ್ಮೆ ಹನುಮಂತ ದೇವರ ಗುಡಿಗೆ ಶಿಫ್ಟ್‌ ಆಗುತ್ತಿತ್ತು. ದೇವರ ದರ್ಶನಕ್ಕೆ ಬರುತ್ತಿದ್ದವರು ಮೊಳಗಿಸುತ್ತಿದ್ದ ಗಂಟೆಯ ನಾದದ ನಡುವೆಯೇ ತರಗತಿ ನಡೆಯುತ್ತಿತ್ತು. ಗಂಟೆಯ ಸದ್ದನ್ನೂ ಮೀರಿಸುವಂತೆ ಶಿವಪ್ಪ ಮೇಷ್ಟ್ರು ನಮ್ಮಿಂದ ‘ಎರಡ ಒಂದ್ಲೆ ಎರಡು, ಎರಡ ಎರಡ್ಲೆ ನಾಲ್ಕು, ಎರಡ ಮೂರ‍್ಲೆ ಆರು’ ಎಂದು ಸುಶ್ರಾವ್ಯವಾಗಿ ಹೇಳಿಸುತ್ತಿದ್ದರು.

ಶಿವಮೂರ್ತಯ್ಯ ಎಂಬ ಇನ್ನೊಬ್ಬ ಶಿಕ್ಷಕರು ನಮ್ಮ ಶಾಲೆಯಲ್ಲಿ ಇದ್ದರು. ಸಿಕ್ಕಾಪಟ್ಟೆ ಕಥೆಗಳನ್ನು ಅವರು ನಮಗೆ ಹೇಳುತ್ತಿದ್ದರು. ಅದಕ್ಕಿಂತಲೂ ಹೆಚ್ಚಾಗಿ ನಿತ್ಯ ಮಕ್ಕಳಿಗೆ ಪೌಷ್ಟಿಕ ಉಂಡಿಯನ್ನು ಬಟವಾಡೆ ಮಾಡುವ ಜವಾಬ್ದಾರಿ ಅವರ ಮೇಲಿತ್ತು. ದೊಡ್ಡ ಕ್ಲಾಸಿನ ಹುಡುಗರನ್ನು ಉಂಡಿ ಕಟ್ಟಲು ಕರೆದೊಯ್ಯುತ್ತಿದ್ದರು. ಬಳಿಕ ಟ್ರೇಗಳಲ್ಲಿ ಪ್ರತಿ ತಗರತಿಗೆ ಹೊರಿಸಿಕೊಂಡು ಬರುತ್ತಿದ್ದರು. ಯಾವೊಬ್ಬ ವಿದ್ಯಾರ್ಥಿಯೂ ಮಿಸ್‌ ಆಗದಂತೆ ಎಲ್ಲರಿಗೂ ಹಂಚಿಕೆ ಮಾಡಿಸುತ್ತಿದ್ದರು. ಹೀಗಾಗಿ ಕಥೆಗಳ ಕಣಜವಾಗಿ, ಉಂಡಿ ಮೇಷ್ಟ್ರಾಗಿ ಅವರು ಎಲ್ಲರಿಗೂ ಅಚ್ಚುಮೆಚ್ಚು.

ಸಾಹಿತ್ಯದ ಬೆರಗಿನ ಲೋಕದ ಬೆಳಕಿಂಡಿಯನ್ನು ತೆರೆದು ತೋರಿದವರು ಕನ್ನಡದ ಪಾಠ ಮಾಡುತ್ತಿದ್ದ ರುದ್ರಪ್ಪ ಮಾಗಳದ ಮೇಷ್ಟ್ರು. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಿಂದ ಆಯ್ದ ‘ಲೋಹಿತಾಶ್ವನ ಸಾವು’ ಪದ್ಯವನ್ನು ಪಾಠ ಮಾಡುವಾಗ ಎಲ್ಲರನ್ನೂ ಅಳಿಸಿಬಿಟ್ಟಿದ್ದರು ರುದ್ರಪ್ಪ ಮೇಷ್ಟ್ರು. ‘ತನಯನೆಂದುಂ ಬಪ್ಪ ಹೊತ್ತಿಂಗೆ ಬಾರದಿದೆ…’ ಸಾಲುಗಳು ಅವರ ಕಂಚಿನ ಕಂಠದಲ್ಲಿ ಮೊಳಗಿದಾಗ ಆ ಘಟನೆಗಳೆಲ್ಲ ನಮ್ಮ ಮುಂದೆಯೇ ನಡೆಯುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಕಾವ್ಯದ ಓಘಕ್ಕೆ ತಕ್ಕಂತೆ ಅವರು ಮಾಡುತ್ತಿದ್ದ ಶಬ್ದದ ಏರಿಳಿತಗಳು ಮೈನವಿರೇಳಿಸುತ್ತಿದ್ದವು. ಅವರ ಒಂದೊಂದು ಪಾಠದ ವಿವರಗಳೂ ತರಗತಿಯಲ್ಲಿ ಜೀವ ತಳೆದು ಸುತ್ತ ಸುಳಿದಾಡುತ್ತಿದ್ದವು.

ಕಲ್ಯಾಣ ಕರ್ನಾಟಕದ ಹಲವು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದ್ದ ರುದ್ರಪ್ಪ ಮೇಷ್ಟ್ರ ಖಾದಿ ಧಿರಿಸುಗಳು ಅವರ ಮೇಲಿನ ಗೌರವ ಭಾವವನ್ನು ಇನ್ನಷ್ಟು ಹೆಚ್ಚಿಸಿದ್ದವು. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವ ಪರಿಪಾಟವನ್ನೂ ಅವರು ನಮಗೆಲ್ಲ ಹೇಳಿಕೊಟ್ಟರು. ಆ ಮೂಲಕ ಸಾಹಿತ್ಯದ ದೀಕ್ಷೆಯನ್ನು ಕೊಟ್ಟರು. ಅವರ ಮೇಲಿನ ಬಟ್ಟೆಯಂತೆಯೇ ಅವರ ವ್ಯಕ್ತಿತ್ವ ಶುಭ್ರವಾಗಿತ್ತು.

ಶಾಲಾ ಆವರಣದಿಂದ ಹೊರಹೋಗಿ ಗಣೇಶ ಬೀಡಿ ಸೇದಿ ಬರುತ್ತಿದ್ದ ದೊಗಳೆ ಪೈಜಾಮು, ನೆಹರೂ ಶರ್ಟಿನ ಮುದಕಪ್ಪ ಮಾಸ್ತರು, ಚರಿತ್ರೆಯ ಪಾಠಕ್ಕೆ ನಿಂತರೆಂದರೆ ಕಾಲ ಸರ‍್ರನೆ ಶತಮಾನಗಳಷ್ಟು ಹಿಂದೆ ಸರಿಯುತ್ತಿತ್ತು. ತುಂಟ ಹುಡುಗರನ್ನು ಅವರು ‘ಡೊಂಕು ಬಾಲದ ನಾಯಕರೇ’ ಎಂದು ಗೇಲಿ ಮಾಡುತ್ತಿದ್ದರು.

ಹೈಸ್ಕೂಲಿನಲ್ಲಿ ಹೆಚ್ಚು ಪ್ರಭಾವಿಸಿದವರಲ್ಲಿ ಎ.ಟಿ. ಕಲ್ಮಠ ಸರ್‌ ಪ್ರಮುಖರು. ಭಾರತ ನಕಾಶೆಯನ್ನು ಬೋರ್ಡ್‌ ಮೇಲೆ ಬಿಡಿಸುವಾಗ ದಕ್ಷಿಣ ಭಾಗವನ್ನು ಅತ್ಯಂತ ಸಲೀಸಾಗಿ ಚಿತ್ರಿಸುತ್ತಿದ್ದ ಅವರು, ಅದರ ಮೇಲೆ ಉತ್ತರ ಭಾರತವನ್ನು ಟೋಪಿ ತೊಡಿಸಿದಂತೆ ಬರೆಯುತ್ತಿದ್ದರು. ಅಮೀಬಾದಂತೆ, ನಕ್ಷೆ ತುಸು ಅಸ್ತವ್ಯಸ್ತವಾಗಿಯೇ ಹರಡಿರುತ್ತಿತ್ತು. ದಿಕ್ಕು ಸರಿಯಾಗಿ ಗುರುತಿಸಲು ಬರದವರನ್ನು ‘ದಿಕ್ಕೇಡಿ’ ಎಂದು ಕರೆಯುತ್ತಿದ್ದರು. ನೀರಸ ಎನಿಸಬಹುದಿದ್ದ ರಾಜ್ಯಶಾಸ್ತ್ರದ ಪಾಠಗಳು ಅವರಲ್ಲದೆ ಬೇರೆ ಯಾರು ಪಾಠ ಮಾಡಿದ್ದರೂ ನಮ್ಮ ಎದೆಯೊಳಗೆ ಅಷ್ಟು ಸಲೀಸಾಗಿ ಇಳಿಯುತ್ತಿರಲಿಲ್ಲವೇನೋ.

ಪೌರಪ್ರಜ್ಞೆಯ ಅರಿವನ್ನು ಮೂಡಿಸಿದ ಕಲ್ಮಠ ಸರ್‌, ವಿದ್ಯಾರ್ಥಿಗಳಲ್ಲಿ ಮಾನವೀಯ ಅಂತಃಕರಣದ ಸೆಲೆಯೂ ಉಕ್ಕುವಂತೆ ಮಾಡಿದವರು. ವಿದ್ಯಾರ್ಥಿಗಳ ಪಾಲಿಗೆ ‘ಆದರ್ಶ ಪುರುಷ’ನಾಗಿ ಕಂಡವರು. ಚರಿತ್ರೆಯನ್ನು ಕಥೆಯಂತೆ ಹೇಳುತ್ತಿದ್ದ ಎಲ್‌.ಎಸ್‌. ಪಾಟೀಲ ಸರ್‌, ನಮ್ಮೂರು ಕಂಡ ಹೆಮ್ಮೆಯ ಸಾಹಿತಿಯೂ ಆಗಿದ್ದರು. ತರಾಸು ಅವರ ಚಿತ್ರದುರ್ಗ ಚರಿತ್ರೆ ಕುರಿತ ನಾಲ್ಕೂ ಕೃತಿಗಳನ್ನು ಓದುವಂತೆ ಮಾಡಿದವರು. ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಲೇಖನಗಳನ್ನು ಚಪ್ಪರಿಸಿ ಸವಿಯುವ ಅವಕಾಶ ಅವರ ಶಿಷ್ಯಂದಿರಿಗೆ. ಅವರೊಂದಿಗೆ ಅರ್ಧಗಂಟೆ ಚರ್ಚೆಗೆ ನಿಂತರೆ ಜಗತ್ತಿನ ಇತಿಹಾಸದ ಝಲಕುಗಳು ಕಣ್ಮುಂದೆ ಹಾದುಹೋಗುತ್ತಿದ್ದವು. ರಸಗವಳ ಪ್ರಿಯರಾಗಿದ್ದ ಅವರು, ಪೈಜಾಬಿನ ಜೇಬಿನಲ್ಲಿ ಎಲಿ–ಅಡ್ಕಿ ಜತೆಗೆ ತಂಬಾಕು, ಕಾಚು, ಅರ್ಕು, ಲವಂಗ, ಏಲಕ್ಕಿಯನ್ನೂ ಇಟ್ಟಿರುತ್ತಿದ್ದರು.

ಅದೇ ಇಂಗ್ಲಿಷ್‌ ಬೋಧಿಸುತ್ತಿದ್ದ ಎಸ್‌.ಟಿ. ಸಜ್ಜನರ ಮೇಷ್ಟ್ರಲ್ಲಿ ವಿದ್ಯಾರ್ಥಿಗಳನ್ನೂ ಮೀರಿಸುವಂತಹ ತುಂಟತನವಿತ್ತು. ಇಂಗ್ಲಿಷ್‌ ಪಾಂಡಿತ್ಯದಿಂದ ಸಂಪನ್ನರಾಗಿದ್ದ ಅವರ ಪಾಠಗಳು ಮನದಂಗಳದಲ್ಲಿ ಇನ್ನೂ ಹಸಿರು. ಅವರು ‘ಹಸಿ ಬರ್ಲು ತರ‍್ಲೇ’ ಎಂದರೆ ಅದರಿಂದ ‘ನಮಗೂ ಪೆಟ್ಟು ಬೀಳುತ್ತವೆ’ ಎನ್ನುವ ಪರಿವೇ ಇಲ್ಲದೆ, ‘ನಾಮುಂದು, ತಾಮುಂದು’ ಎಂದು ಶಾಲೆಯ ಹಿಂದಿನ ಹೊಲಕ್ಕೆ ಓಡಿ ಹೋಗಿ ತರುತ್ತಿದ್ದೆವು. ಗಣಿತದ ಮೇಷ್ಟ್ರಾಗಿದ್ದ ಜಿ.ಕೆ. ಇನಾಮದಾರ್‌ ಸರ್‌ ಸಹ ಪಾಂಡಿತ್ಯದ ಗಣಿ. ಬದುಕಿನ ಗುರಿಯನ್ನು ಸ್ಪಷ್ಟವಾಗಿ ತೋರಿದವರು. ಲವಲೇಶದಷ್ಟೂ ಅಶಿಸ್ತನ್ನು ಸಹಿಸದವರು. ಹಾಗೆಯೇ ತಮ್ಮ ನಡೆ–ನುಡಿಯಿಂದ ವಿದ್ಯಾರ್ಥಿಗಳಲ್ಲಿ ಆದರ್ಶಗಳನ್ನು ಬಿತ್ತಿದವರು.

ಕಾಲೇಜಿನಲ್ಲಿ ನಮ್ಮ ಪ್ರಾಚಾರ್ಯರಾಗಿದ್ದ ಎಸ್‌. ಅಬ್ದುಲ್‌ ಕರೀಂ ಅವರು ಇಂಗ್ಲಿಷ್‌ ಸಾಹಿತ್ಯವನ್ನು ಅರೆದು ಕುಡಿದಿದ್ದರು. ಯಾವುದೇ ವಿಶ್ವವಿದ್ಯಾಲಯದ ಕುಲಪತಿಯಾಗುವ ಎಲ್ಲ ಅರ್ಹತೆಗಳು ಅವರಿಗಿದ್ದವು. ಮನೆಯಿಂದ ಬಸ್ಸಿನಲ್ಲಿ ಸಿಟಿ ಬಸ್‌ ನಿಲ್ದಾಣದವರೆಗೆ ಬಂದು, ಅಲ್ಲಿಂದ ಸುಮಾರು ಒಂದು ಕಿಲೋಮೀಟರ್‌ನಷ್ಟು ದೂರದಲ್ಲಿದ್ದ ಕಾಲೇಜಿಗೆ ಅವರು ನಡೆದುಕೊಂಡೇ ಬರುತ್ತಿದ್ದರು. ಹಾಗೆ ಬರುವಾಗ ಒಂದು ಕೊಡೆ ಹಾಗೂ ಚರ್ಮದ ಪುಟ್ಟದೊಂದು ಬ್ಯಾಗ್‌ ಸದಾ ಅವರ ಕೈಯಲ್ಲಿ ಇರುತ್ತಿದ್ದವು. ಕಾಲೇಜಿನ ಆವರಣದಲ್ಲಿ ಅವರಿದ್ದಾರೆಂದರೆ ವಿದ್ಯಾರ್ಥಿಗಳು ಬಿಡಿ, ಉಪನ್ಯಾಸಕರೇ ಭಯಭೀತರಾಗುತ್ತಿದ್ದರು. ಕಾರಿಡಾರ್‌ನಲ್ಲಿ ಯಾರಾದರೂ ಕಂಡರೆ ‘ವಾಟ್‌ ಆರ್‌ ಯು ಡುಯಿಂಗ್‌ ಹೀಯರ್‌?’ ಎಂದು ಗದರುತ್ತಿದ್ದರು. ಪುಂಡರಿಗೆ ಟಿ.ಸಿ ಕಿತ್ತುಕೊಡಲು ಒಂದಿನಿತೂ ಹಿಂದೆ ಮುಂದೆ ನೋಡುತ್ತಿರಲಿಲ್ಲ.

ನಮಗೆ ಶಿಕ್ಷಣ ಕೊಟ್ಟ ಗುರುಗಳ ಋಣವನ್ನು ತೀರಿಸುವುದು ಅಸಾಧ್ಯವಾದುದು. ಅದರಲ್ಲೂ ವಿಠಲ ಸರ್‌ ಅವರ ಗುರುಕಾರಣ್ಯವಂತೂ ಬಲು ದೊಡ್ಡದು. ಕಬ್ಬಿಣದ ಕಡಲೆಯಾಗಿದ್ದ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ವಿಷಯಗಳನ್ನು ಸುಲಿದ ಬಾಳೆಹಣ್ಣನ್ನಾಗಿ ಮಾಡಿದವರು ಅವರು. ಪರೀಕ್ಷೆಯ ಸಮಯದಲ್ಲಿ ತಮ್ಮ ಮನೆಯಲ್ಲಿಯೇ ರಾತ್ರಿ ತಂಗುವಂತೆ ಮಾಡಿ, ನಸುಕಿನಲ್ಲಿ ಎಬ್ಬಿಸಿ ಓದಲು ಕೂರಿಸಿದವರು. ಎದ್ದು ಕುಳಿತು ತೂಕಡಿಸುವವರನ್ನು ‘ನಿಮ ಹೆಂಡ್ತಿ, ನಿದ್ದಿ ಹೊಡೆಯಲು ಬರ್ತಿರೇನು’ ಎಂದು ತರಾಟೆಗೆ ತೆಗೆದುಕೊಂಡು, ನಿಚ್ಚಳ ಕಣ್ಣುಗಳಲ್ಲಿ ಓದುವಂತೆ ಮಾಡಿದವರು.

ದಶಕಗಳ ಕಾಲ ಸುಶಿಕ್ಷಿತ ಪೀಳಿಗೆಗಳನ್ನು ಸೃಷ್ಟಿಸಿದವರು ಅವರು. ದೇಶಗಳ ಎಲ್ಲೆಯನ್ನು ಮೀರಿ ಅವರ ಶಿಷ್ಯವರ್ಗ ಎಲ್ಲೆಡೆ ವ್ಯಾಪಿಸಿದೆ. ಇಂದು ಬಹುದೊಡ್ಡ ಹುದ್ದೆಗಳಲ್ಲಿರುವ ಎಷ್ಟೋ ಸಾಧಕರ ಮನದಲ್ಲಿ ವಿಠಲ್‌ ಸರ್‌ ಮಾಡಿದ ಸಹಾಯ ಬೆಚ್ಚಗೆ ಕುಳಿತಿದೆ. ವಿದ್ಯಾರ್ಥಿಗಳು ತರಗತಿಯ ಪರೀಕ್ಷೆಗಳಲ್ಲಷ್ಟೇ ಪಾಸಾದರೆ ಮುಗಿಯಲಿಲ್ಲ. ಬದುಕಿನಲ್ಲಿಯೂ ಯಶಸ್ಸು ಸಾಧಿಸಬೇಕು ಎಂದು ಹಂಬಲಿಸುವ ಅವರು, ಅದಕ್ಕಾಗಿ ತಮ್ಮಿಂದಾದ ಸಹಾಯವನ್ನು ಮಾಡುವವರು. ವೃತ್ತಿಯನ್ನು ಹಿಡಿದು, ಬದುಕಿನಲ್ಲಿ ಯಶಸ್ಸಿನ ಮೆಟ್ಟಿಲು ಏರಿದವರಿಗೆ ‘ಮದುವೆ ಯಾವಾಗಪ ತಮ್ಮಾ’ ಎಂದು ನೂರಾರು ಶಿಷ್ಯಂದಿರಿಗೆ ಬಾಳ ಸಂಗಾತಿಗಳನ್ನೂ ಜೋಡು ಮಾಡಿದವರು. ಅವರ ಅಕ್ಷರದ ಕೆಲಸಕ್ಕೆ ನಿವೃತ್ತಿ ಎನ್ನುವುದೇ ಇಲ್ಲ. ಅವರ ಮನೆಯಲ್ಲಿ ಈಗಲೂ ನೂರಾರು ಮಕ್ಕಳು ಪಾಠ ಕಲಿಯುತ್ತಾರೆ.

ಬೆತ್ತದ ರುಚಿ ತೋರಿಸುತ್ತಲೇ ಹಿಂದಿ ಎಂಬ ಅನ್ಯಲೋಕದಲ್ಲಿ ಹೆಜ್ಜೆಹಾಕಲು ಸೇತುವೆಯಾದ ಲೀಲಾ ಟೀಚರ್‌ ಕೂಡ ಜ್ಞಾನವನ್ನು ಧಾರೆ ಎರೆದವರು. ಗೋಡೆಯ ಮೇಲಿನ ಗಡಿಯಾರ ಎಷ್ಟು ಸಮಯ ತೋರಿಸುತ್ತದೆ ಎಂಬುದು ಗೊತ್ತಾಗದೆ ಗಲಿಬಿಲಿಗೊಂಡ ನಮಗೆ ಅದರಲ್ಲಿರುವ ಮುಳ್ಳುಗಳ ಮೌಲ್ಯವನ್ನು ಹೇಳಿಕೊಟ್ಟವರು. ಖಡಕ್‌ ಎಚ್ಚರಿಕೆಗಳ ಮೂಲಕ ಪಾಠದ ಸೂತ್ರಗಳನ್ನು ನೆನಪಿಡಲು ಕಲಿಸಿಕೊಟ್ಟವರು.

ವೃತ್ತಿ ಬದುಕಿನಲ್ಲಿ ಗುರುರಾಜ ಜೋಶಿ, ಜಿ.ಎಚ್‌. ರಾಘವೇಂದ್ರ, ಬಿ.ಅರುಣನಾರಾಯಣ ಅವರಂತಹ ಗುರುಗಳು ಹಾಕಿದ ಬುನಾದಿಯೂ ದೊಡ್ಡದು.

ನಮ್ಮ ಗುರುವೃಂದದಲ್ಲಿ ಕೆಲವರು ಈಗಿಲ್ಲ. ಉಳಿದವರು ಆಗೀಗ ಎಲ್ಲಿಯಾದರೂ ದಿಢೀರ್‌ ಎಂದು ಸಿಕ್ಕು ಪ್ರೀತಿ–ಕರುಣೆಯ ಮಳೆ ಸುರಿಸುವುದಿದೆ. ಬದುಕಿನ ದಾರಿ ತೋರಿದ ಆ ಎಲ್ಲ ಗುರುದೇವರಿಗೆ ಒಂದು ಹೃದಯ ತುಂಬಿದ ನಮಸ್ಕಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು