ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು

Last Updated 6 ಜುಲೈ 2018, 13:35 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಕರ್ನಾಟಕ ಚಿತ್ರಕಲಾ ಪರಿಷತ್ತು (ಸಿಕೆಪಿ) ಈ ವರ್ಷದಿಂದ ಸಂಜೆ ಕಾಲೇಜು ಆರಂಭಿಸಿದ್ದು, ಸದ್ಯದಲ್ಲಿಯೇ ಕೃತಕ ಬೆಳಕಿನಡಿ ದೃಶ್ಯಕಲಾ ತರಗತಿಗಳಿಗೆ ಅಲ್ಲಿ ಚಾಲನೆ ದೊರೆಯಲಿದೆ. ಈ ಮೂಲಕ ವಿಷುಯಲ್‌ ಆರ್ಟ್ಸ್‌ ಕುರಿತ ಕೋರ್ಸ್‌ಗಳನ್ನು ನಡೆಸುವ ದೇಶದ ಮೊದಲ ಸಂಜೆ ಕಾಲೇಜು ಎಂಬ ಕೀರ್ತಿಗೆ ಸಿಕೆಪಿ ಪಾತ್ರವಾಗಲಿದೆ.

1960ರಲ್ಲಿ ಪ್ರಾರಂಭವಾದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬ್ಯಾಚುಲರ್‌ ಆಫ್‌ ವಿಷುಯಲ್‌ ಆರ್ಟ್ಸ್‌ (ಬಿವಿಎಫ್‌) ಪದವಿ ಕೋರ್ಸ್‌ ಆರಂಭವಾಗಿದ್ದು 1982ರಲ್ಲಿ. ಮಾಸ್ಟರ್‌ ಆಫ್‌ ವಿಷ್ಯುಯಲ್‌ ಆರ್ಟ್ಸ್‌ (ಎಂವಿಎಫ್‌) ಆರಂಭವಾಗಿದ್ದು 1990ರಲ್ಲಿ. ಇಲ್ಲಿಯ ತನಕ ನೈಸರ್ಗಿಕ ಬೆಳಕಿನಲ್ಲಿ ನಡೆಯತ್ತಿದ್ದ ಕೋರ್ಸ್‌ನ ತರಗತಿಗಳು ಈ ವರ್ಷದಿಂದ ಕೃತಕ ಬೆಳಕಿನಲ್ಲೂ ನಡೆಯಲಿವೆ.

ಚಿತ್ರಕಲೆ (Painting), ಅನ್ವಯಿಕ ಕಲೆ (Applied art), ಶಿಲ್ಪಕಲೆ (Sculpture), ಗ್ರಾಫಿಕ್‌ (Graphic art), ಕಲಾ ಇತಿಹಾಸವನ್ನು (Art history) ಒಳಗೊಂಡಂತೆ ನಾಲ್ಕು ವರ್ಷದ ಬಿವಿಎಫ್‌ ಪದವಿ ಕೊರ್ಸ್ ಮತ್ತು ಎರಡು ವರ್ಷದ ಎಂವಿಎಫ್‌ ಸ್ನಾತಕೋತ್ತರ ಕೋರ್ಸ್‌ಗಳು ಸಂಜೆ ಕಾಲೇಜಿನಲ್ಲಿ ನಡೆಯಲಿವೆ.

ಸಂಜೆ ಕಾಲೇಜು ಏಕೆ

ವಿವಿಧ ವೃತ್ತಿಯಲ್ಲಿ ಇರುವ ಹಲವರಿಗೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್‌ ಡಿಸೈನ್‌ಗಳ ಕಲಿಕೆಗೆ ಆಸಕ್ತಿ ಇದ್ದರೂ, ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದು ಕನಸಾಗಿಯೇ ಉಳಿದಿತ್ತು. ಅಂಥವರು ಚಿತ್ರಕಲಾ ಪರಿಷತ್ತು ನಡೆಸುವ ವಿವಿಧ ತರಬೇತಿ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದರು. ಅದರೆ ಬಿವಿಎಫ್‌, ಎಂವಿಎಫ್‌ ಕೋರ್ಸ್‌ಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಇದರಿಂದ ವೃತ್ತಿಯ ಜತೆಗೆ ಪ್ರವೃತ್ತಿಯ ಕಲಾ ಕೌಶಲವನ್ನು ಹೆಚ್ಚಿಸಿಕೊಳ್ಳಲು ಅವರಿಗೆ ಕಷ್ಟವಾಗುತ್ತಿತ್ತು. ಅದನ್ನು ನೀಗಿಸಲು ಸಂಜೆ ಕಾಲೇಜು ಆರಂಭಿಸಲಾಯಿತು.

ಹಗಲು ಹೊತ್ತಿನಲ್ಲಿ ನಡೆಯುವ ಕಾಲೇಜು ಪೂರ್ಣ ಸ್ವಾಯತ್ತತೆ ಹೊಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಯೋಜನೆ ಪಡೆದಿದೆ. ಆದರೆ ಸಂಜೆ ಕಾಲೇಜು ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿದ್ದು, ಸ್ವಾಯತ್ತಾಧಿಕಾರ ಹೊಂದಿಲ್ಲ ಎಂದು ಸಿಕೆಪಿ ಸಂಜೆ ಕಾಲೇಜಿನ ‍ಪ್ರಾಂಶುಪಾಲ ಡಾ. ನಾಗಪ್ಪ ಬಿ. ಬಡಿಗೇರ್‌ ಮಾಹಿತಿ ನೀಡಿದರು.

ಸಂಜೆ ಕಾಲೇಜಿನಲ್ಲಿ ಮೊದಲ ವರ್ಷದ ಬಿವಿಎಫ್‌ ಮತ್ತು ಎಂವಿಎಫ್‌ ಕೋರ್ಸ್‌ಳ ಬೋಧನೆಯು ಬೆಂ.ವಿ.ವಿ ಪಠ್ಯಕ್ರಮವನ್ನು ಆಧರಿಸಿರುತ್ತದೆ. ಎರಡನೇ ವರ್ಷದಿಂದ ಬೆಂಗಳೂರು ಕೇಂದ್ರೀಯ ವಿ.ವಿ ಪಠ್ಯಕ್ರಮವನ್ನು ಅನುಸರಿಸಲಾಗುತ್ತದೆ.

ಪ್ರವೇಶ ಮಿತಿ

ನಾಲ್ಕು ವರ್ಷದ ಬಿವಿಎಫ್‌ ಪದವಿಗೆ 30 ಹಾಗೂ ಎರಡು ವರ್ಷದ ಎಂವಿಎಫ್‌ ಸ್ನಾತಕೋತ್ತರ ಪದವಿಗೆ 30 ಅಭ್ಯರ್ಥಿಗಳ ಪ್ರವೇಶ ಮಿತಿ ನಿಗದಿ ಮಾಡಲಾಗಿದೆ. ಸ್ನಾತಕೋತ್ತರ ಪದವಿಯು ವಿ.ವಿ ನಡೆಸುವ ಪ್ರವೇಶದ ಸಂದರ್ಭದಲ್ಲಿ ನಡೆಯುತ್ತದೆ. ಅದರ 30 ಸೀಟುಗಳ ಪೈಕಿ 15 ಅನ್ನು ವಿ.ವಿಗೆ ಬಿಟ್ಟುಕೊಡಲಾಗಿದ್ದು, ಉಳಿದ 15 ಸೀಟುಗಳನ್ನು ಸಿಕೆಪಿ ಭರ್ತಿ ಮಾಡಿಕೊಳ್ಳುತ್ತದೆ. ಅದೂ ಕೂಡ ವಿ.ವಿಯ ಪ್ರವೇಶಾತಿ ನಿಯಮದ ಅನ್ವಯವೇ ನಡೆಯುತ್ತದೆ ಎಂದು ವಿವರಿಸುತ್ತಾರೆ.

ಪ್ರವೇಶ ಪ್ರಕ್ರಿಯೆ

ವಿಜ್ಞಾನ, ಕಲೆ, ವಾಣಿಜ್ಯ ಕೋರ್ಸ್‌ಗಳಲ್ಲಿ ದ್ವಿತೀಯ ಪಿಯ ಪಾಸಾದವರು ಬಿವಿಎಫ್‌ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಈಗಾಗಲೇ ಸಿಕೆಪಿಯ ಸಂಜೆ ಕಾಲೇಜಿನ ಪ್ರವೇಶ ಪತ್ರಿಕೆಯೆಗೆ ಚಾಲನೆಯೂ ದೊರೆತಿದ್ದು, ಅರ್ಜಿ ಹಾಕಿದ್ದ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಸಂದರ್ಶನವೂ ಮುಗಿದಿದೆ.

ಬಿವಿಎಫ್‌ ಕೋರ್ಸ್‌ಗೆ ಸದ್ಯಕ್ಕೆ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅವರಲ್ಲಿ ಗೃಹಿಣಿಯರು, ಸರ್ಕಾರಿ ಸಿಬ್ಬಂದಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು, ಎಂಜಿನಿಯರಿಂಗ್‌ ಪದವೀಧರರು, ಎಂ.ಎ ಪದವೀಧರರು ಪ್ರವೇಶ ಪಡೆದಿದ್ದಾರೆ. ಇನ್ನೂ 15 ಸೀಟುಗಳು ಖಾಲಿಯಿದ್ದು, ಆಸಕ್ತ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.

ಮೂಲ ಸೌಕರ್ಯ

ಹಗಲು ಕಾಲೇಜು ಮುಗಿದ ನಂತರ ಅದೇ ಕೊಠಡಿಗಳು, ಸ್ಟುಡಿಯೊ, ಮ್ಯೂಸಿಯಂ, ಗ್ಯಾಲರಿ, ಗ್ರಂಥಾಲಯಗಳು ಸಂಜೆ ಕಾಲೇಜಿಗೂ ಬಳಸಿಕೊಳ್ಳಲಾಗುತ್ತದೆ. ಆದರೆ ಬೋಧನಾ ಸಿಬ್ಬಂದಿ ಮಾತ್ರ ಬೇರೆ ಬೇರೆ ಇರುತ್ತಾರೆ. ಸಂಜೆ ಕಾಲೇಜಿನ ಬೋಧನಾ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅಂತಿಮವಾಗಲಿದೆ ಎಂದು ಅವರು ವಿವರಿಸುತ್ತಾರೆ.

ಮುಂದಿನ ವರ್ಷ ಹಗಲು ಕಾಲೇಜು ಸ್ಥಳಾಂತರ

ಸಿಕೆಪಿಯಲ್ಲಿ ನಡೆಯುತ್ತಿರುವ ಹಗಲು ಕಾಲೇಜು ಮುಂದಿನ ಶೈಕ್ಷಣಿಕ ವರ್ಷ ಸ್ಥಳಾಂತರವಾಗಲಿದೆ. ರಾಜರಾಜೇಶ್ವರಿನಗರದ ಗಾಣಕಲ್‌ ಬಳಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಈ ಕಾಲೇಜು ಪೂರ್ಣ ಪ್ರಮಾಣದಲ್ಲಿ ಹೊಸ ಆವರಣದಲ್ಲಿ ಕಾರ್ಯ ನಿರ್ವಹಿಸಲಿದೆ ಎನ್ನುತ್ತಾರೆ ಸಿಕೆಪಿ ಸಂಜೆ ಕಾಲೇಜಿನ ಸಂಯೋಜನಾಧಿಕಾರಿ ಕೆ.ಎಸ್‌.ಅಪ್ಪಾಜಯ್ಯ

*ಲಂಡನ್‌, ಪ್ಯಾರಿಸ್‌ನಲ್ಲಿ ದೃಶ್ಯಕಲೆ ಬೋಧಿಸುವ ಸಂಜೆ ಕಾಲೇಜುಗಳಿವೆ. ಆದರೆ ಭಾರತದಲ್ಲಿ ಇರಲಿಲ್ಲ. ಈ ಕೊರತೆಯನ್ನು ಸಿಕೆಪಿ ನೀಗಿಸಿದೆಪ್ರೊ. ಕೆ.ಎಸ್‌.ಅಪ್ಪಾಜಯ್ಯ, ಸಂಯೋಜನಾಧಿಕಾರಿ, ಸಿಕೆಪಿ ಸಂಜೆ ಕಾಲೇಜಿನ ಸಂಯೋಜನಾಧಿಕಾರಿ.

ಸಂಜೆ ಕಾಲೇಜಿನ ಅವಧಿ: ಸಂಜೆ 4.30ರಿಂದ ರಾತ್ರಿ 9 ಗಂಟೆ. ಸಂಪರ್ಕಕ್ಕೆ: 080–22261816/ 22263424

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT