ಗುರುವಾರ , ಏಪ್ರಿಲ್ 2, 2020
19 °C

ಫ್ಯಾಷನ್‌ ಫೋಟೊಗ್ರಫಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಅತಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದು ಫ್ಯಾಷನ್ ಜಗತ್ತು. ಕ್ಷಣಕ್ಷಣಕ್ಕೂ ಬದಲಾಗುವ ಈ ಫ್ಯಾಷನ್‌ ಜಗತ್ತಿನಲ್ಲಿ ನೀವು ಫ್ಯಾಷನ್ ಫೋಟೊಗ್ರಾಫರ್ ವೃತ್ತಿಯನ್ನು ಆಯ್ದುಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬಹುದು. ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ಫ್ಯಾಷನ್ ಫೋಟೊಗ್ರಫಿ ವೃತ್ತಿಗೆ ಬೇಡಿಕೆಯೂ ಇದೆ. ಫೋಟೊಗ್ರಫಿಯಲ್ಲಿ ಹೆಚ್ಚು ಬೇಡಿಕೆ ಇರುವ ಪ್ರಕಾರವೂ ಇದೇ ಆಗಿದೆ.‌ ಕೇವಲ ಪದವಿ ಶಿಕ್ಷಣ ಅಥವಾ ಡಿಪ್ಲೊಮಾ ಕೋರ್ಸ್‌ ಮಾಡಿಕೊಂಡು, ಪ್ರಾಯೋಗಿಕ ಜ್ಞಾನ ಹೆಚ್ಚಿಸಿಕೊಂಡರೆ ಬಹುಬೇಡಿಕೆಯ ಫ್ಯಾಷನ್ ಫೋಟೊಗ್ರಾಫರ್ ಆಗಬಹುದು. 

ಈ ವೃತ್ತಿಗೆ ಸೇರ ಬಯಸುವವರು ಸಮಕಾಲೀನ ಫ್ಯಾಷನ್‌ ಕ್ಷೇತ್ರದ ಆಳ–ಅಗಲವನ್ನು ಅರಿತವರಾಗಿರಬೇಕು. ಫೋಟೊಗ್ರಫಿ ತಂತ್ರಜ್ಞಾನದ ಜೊತೆಗೆ ಫ್ಯಾಷನ್‌ಗೆ ಸಂಬಂಧಿಸಿದ ವಿಭಿನ್ನ ಛಾಯಾಚಿತ್ರಗಳ ಮೂಲಕ ಗ್ರಾಹಕರನ್ನು ಸೆಳೆಯುವ ಜಾಣ್ಮೆಯನ್ನು ಹೊಂದಿರಬೇಕು.

ಬಟ್ಟೆ, ಆಭರಣ, ಚಪ್ಪಲಿಗಳು, ಸೌಂದರ್ಯವರ್ಧಕಗಳು.. ಹೀಗೆ ಫ್ಯಾಷನ್‌ ಜಗತ್ತಿಗೆ ಸಂಬಂಧಿಸಿದ ವಸ್ತುಗಳ ಮೇಲೆ ಫೋಟೊಗ್ರಫಿ ಮಾಡುವುದು ಇದರ ವಿಶೇಷ. 

ಇದರಲ್ಲಿ ಕ್ಯಾಟಲಾಗ್‌, ಹೈ ಪ್ರೊಫೆಷನ್‌, ಸ್ಟ್ರೀಟ್ ಹಾಗೂ ಸಂಪಾದಕೀಯ (ಎಡಿಟೋರಿಯಲ್‌) ಎಂಬ ನಾಲ್ಕು ವಿಭಾಗಗಳಿವೆ. ಈ ನಾಲ್ಕು ವಿಭಾಗಗಳಲ್ಲಿ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಂಡರೂ ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳ ಪಡೆಯುವುದರಲ್ಲಿ ಸಂಶಯವಿಲ್ಲ.

ಕ್ಯಾಟಲಾಗ್ ಫೋಟೊಗ್ರಫಿ: ಇದು ತುಂಬಾ ಸರಳ ವಿಧಾನದ ಫೋಟೊಗ್ರಫಿ. ಅಂಗಡಿಗಳಲ್ಲಿ ತಮ್ಮಲ್ಲಿರುವ ಉತ್ಪನ್ನಗಳನ್ನು ಪರಿಚಯಿಸುವ ಸಲುವಾಗಿ ಕ್ಯಾಟಲಾಗ್‌ಗಳನ್ನು ಇರಿಸಿರುತ್ತಾರೆ. ಅದಕ್ಕೆ ಛಾಯಾಚಿತ್ರಗಳನ್ನು ತೆಗೆಯುವವರೇ ಕ್ಯಾಟಲಾಗ್ ಫೋಟೊಗ್ರಾಫರ್. ಇದನ್ನು ಉತ್ಪನ್ನಗಳ ಫೋಟೊಗ್ರಫಿ ಎಂದೂ ಕರೆಯಬಹುದು.

ಹೈ ಫ್ಯಾಷನ್ ಫೋಟೊಗ್ರಫಿ: ನಿಯತಕಾಲಿಕಗಳ ಮುಖಪುಟದಲ್ಲಿ ಕಾಣುವ ರೂಪದರ್ಶಿಗಳ ಫೋಟೊಶೂಟ್ ಮಾಡುವವರು ಹೈ ಫ್ಯಾಷನ್ ಫೋಟೊಗ್ರಾಫರ್. ಇದು ಬರೀ ಬಟ್ಟೆ ಮಾತ್ರವಲ್ಲದೇ ಕೇಶವಿನ್ಯಾಸ, ಮೇಕಪ್ ಎಲ್ಲವನ್ನೂ ಒಳಗೊಂಡಿರುತ್ತದೆ.

ಸ್ಟ್ರೀಟ್ ಫ್ಯಾಷನ್: ‘ಅರ್ಬನ್ ಫ್ಯಾಷನ್’ ಎಂದೂ ಕರೆಯಲಾಗುವ ಈ ಪ್ರಕಾರದಲ್ಲಿ ಸುಮ್ಮನೆ ಬೀದಿಯಲ್ಲಿ ನಡೆದಾಡುವ ಜನರ ಮೇಲೆ ಲೆನ್ಸ್ ಪೋಕಸ್ ಮಾಡುವುದು ವಿಶೇಷ. ಇದರಲ್ಲಿ ಫೋಟೊ ತೆಗೆಸಿಕೊಳ್ಳುವವರ ನೋಟ, ಅವರ ದೇಹದ ಚರ್ಯೆಯ ಜೊತೆಗೆ ಧರಿಸಿರುವ ಬಟ್ಟೆ ಅವರ ದೇಹಭಂಗಿಗೆ ಹೊಂದಿಕೆಯಾಗುತ್ತದೆಯೇ ಎಂದು ನೋಡಿ ಫೋಟೊ ಕ್ಲಿಕ್ಕಿಸಬೇಕು. 

ಸಂಪಾದಕೀಯ ಫ್ಯಾಷನ್ ಫೋಟೊಗ್ರಫಿ: ಸಂಪಾದಕೀಯ (ಎಡಿಟೋರಿಯಲ್) ಫ್ಯಾಷನ್ ಫೋಟೊಗ್ರಫಿ ಎಂದರೆ ಛಾಯಾಚಿತ್ರವೇ ಕಥೆಯನ್ನು ಹೇಳುವಂತಿರಬೇಕು. ಇದನ್ನು ನಾವು ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ನೋಡುತ್ತೇವೆ. ಸಂಪಾದಕೀಯ ಫ್ಯಾಷನ್ ಫೋಟೊಗ್ರಫಿಯಲ್ಲಿ ವಿಷಯ ಹಾಗೂ ಪರಿಕಲ್ಪನೆಗಳಿರುತ್ತವೆ ಅಥವಾ ಅದು ನಿರ್ದಿಷ್ಟ ಮಾಡೆಲ್ ಅಥವಾ ವಸ್ತ್ರವಿನ್ಯಾಸಕರಿಗೆ ಸಂಬಂಧಿಸಿದ್ದಾಗಿರುತ್ತದೆ.

ಫ್ಯಾಷನ್ ಫೋಟೊಗ್ರಫಿಯಲ್ಲಿ ಭವಿಷ್ಯ

ಫೋಟೊಗ್ರಫಿಯಲ್ಲೇ ಹೆಚ್ಚು ಅಪೇಕ್ಷಣೀಯ ಎನ್ನಿಸಿಕೊಂಡಿರುವುದು ಫ್ಯಾಷನ್ ಫೋಟೊಗ್ರಫಿ. ಸದಾ ನಿರಂತರವಾಗಿರುವ ಫ್ಯಾಷನ್ ಜಗತ್ತಿನ ಹೊಸ ಹೊಸ ಉತ್ಪನ್ನಗಳು ಜನರಿಗೆ ಪರಿಚಯವಾಗಬೇಕು ಎಂದರೆ ಫ್ಯಾಷನ್ ಫೋಟೊಗ್ರಾಫರ್‌ಗಳು ಬೇಕು. ಕ್ಯಾಮೆರಾ ಲೆನ್ಸ್, ಅಪಾರ್ಚರ್, ಬೆಳಕಿನ ಬಿಂಬಗಳ ಜೊತೆಗೆ ಫ್ಯಾಷನ್ ಕ್ಷೇತ್ರದಲ್ಲಿರುವವರ ಜೊತೆಗೆ ಸೇರಿ ಕೆಲಸ ಮಾಡುವುದು ತುಂಬಾ ಮುಖ್ಯ.

ಕೋರ್ಸ್‌ಗಳು

ಫ್ಯಾಷನ್ ಫೋಟೊಗ್ರಫಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಕೋರ್ಸ್‌ಗಳಿವೆ. ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಗ್ಲಾಮ್‌ಫ್ಲೇಮ್ ಫೋಟೊಗ್ರಫಿ ಮತ್ತು ಬ್ರ್ಯಾಂಡ್ ಕಮ್ಯೂನಿಕೇಷನ್‌, ಬೆಂಗಳೂರು ಫ್ಯಾಷನ್ ಟೆಕ್ನಾಲಜಿ ಸೇರಿದಂತೆ ಇನ್ನೂ ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಫ್ಯಾಷನ್ ಫೋಟೊಗ್ರಫಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಕೋರ್ಸ್‌ಗಳಿವೆ.

ಗಂಟೆಗಳ ಲೆಕ್ಕದಲ್ಲಿ ವೇತನ ಪಡೆಯುವ ವೃತ್ತಿಯಲ್ಲಿ ನೀವು ನುರಿತರಾದರೆ ತಿಂಗಳಿಗೆ ₹10 ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡಬಹುದು.

ಫ್ಯಾಷನ್ ಫೋಟೊಗ್ರಾಫರ್ ಆಗುವ ಮುನ್ನ..

* ಫೋಟೊಗ್ರಫಿಯ ಮೂಲಗಳನ್ನು ಅರಿತುಕೊಳ್ಳಿ. ಫೋಟೊಗ್ರಫಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡಿಕೊಳ್ಳಿ. ಆಗ ನಿಮಗೆ ಕ್ಯಾಮೆರಾದ ಕಾರ್ಯವೈಖರಿಯ ಬಗ್ಗೆ ತಿಳಿಯುತ್ತದೆ.

* ರೂಪದರ್ಶಿಗಳೊಂದಿಗೆ ಫೋಟೊಶೂಟ್ ನಡೆಸಿ.   

* ಫ್ಯಾಷನ್ ನಿಯತಕಾಲಿಕಗಳನ್ನು ಓದಿ, ನೋಡಿ ತಿಳಿದುಕೊಳ್ಳಿ. 

* ರೂಪದರ್ಶಿಗಳೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳಿ. ನಿಮ್ಮ ಫೋಟೊಗ್ರಫಿ ಶೈಲಿಯನ್ನು ವಿನ್ಯಾಸಕರು ಹಾಗೂ ರೂಪದರ್ಶಿಗಳು ಗುರುತಿಸುವಂತೆ ಮಾಡಿ.

* ನಿಮ್ಮ ಸ್ವಂತ ಶೈಲಿಯನ್ನು ರೂಢಿಸಿಕೊಳ್ಳಿ. ಇದರಲ್ಲಿ ನಿಪುಣರಾದಂತೆ ಹೊಸ ಹೊಸ ಶೈಲಿಯನ್ನು ಕಲಿಯಿರಿ.

* ಪ್ರತಿ ದಿನ ಒಂದಲ್ಲ ಒಂದು ವಿಧದ ಫೋಟೊಶೂಟ್ ನಡೆಸುತ್ತಲೇ ಇರಿ.

* ಒಬ್ಬ ಏಜೆಂಟ್ ಅನ್ನು ಸಂಪರ್ಕದಲ್ಲಿರಿಸಿಕೊಳ್ಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು