ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌: ನಿಮ್ಮ ಮಗು ಎಷ್ಟು ಸುರಕ್ಷಿತ?

Last Updated 5 ಜನವರಿ 2021, 6:21 IST
ಅಕ್ಷರ ಗಾತ್ರ

‘ನನ್ನ ಕೆಲಸದ ಒತ್ತಡದ ಮಧ್ಯೆ ಮಗಳ ಆನ್‌ಲೈನ್‌ ಚಟುವಟಿಕೆಯ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಒಮ್ಮೆ ಅವಳು ಸ್ಕ್ರೀನ್ ಆಫ್ ಮಾಡಿ ಆಟವಾಡಲು ಹೋದಾಗ ಕಂಪ್ಯೂಟರ್ ತೆರೆದು ನೋಡಿದರೆ ಆಶ್ಲೀಲ ಚಿತ್ರಗಳ ಪಾಪ್‌ಅಪ್‌ ಇಣುಕಿ ಹಾಕುತ್ತಿತ್ತು, ಇದನ್ನು ನೋಡಿ ನನಗೆ ಶಾಕ್ ಆಯಿತು. ಮಕ್ಕಳಿಗೆ ಇಂತಹ ವಿಷಯದಲ್ಲಿ ತಿಳಿವಳಿಕೆ ಇರುವುದಿಲ್ಲ, ನಾವು ಪೋಷಕರು ಮಕ್ಕಳ ಮೇಲೆ ಗಮನ ವಹಿಸುವುದಿಲ್ಲ. ಇದು ಆನ್‌ಲೈನ್‌ ವಂಚಕರಿಗೆ ಮಕ್ಕಳ ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳಲು ನಾವೇ ದಾರಿ ಮಾಡಿಕೊಟ್ಟಂತಲ್ಲವೇ’ ಎಂದು ಗೆಳತಿ ವಿನಯಾಳ ಬಳಿ ತಮ್ಮ ಆತಂಕ ಹೊರ ಹಾಕಿದ್ದರು ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಪ್ರಿಯಾ.

ಈ ರೀತಿಯ ಆತಂಕ ಈಗ ‍ಪೋಷಕರಲ್ಲಿ ಹೆಚ್ಚುತ್ತಿರುವುದು ಸಹಜ. ಆನ್‌ಲೈನ್‌ ತರಗತಿ, ಆನ್‌ಲೈನ್ ಗೇಮ್‌ ಹೀಗೆ ಮಕ್ಕಳು ಸದಾ ಕಂಪ್ಯೂಟರ್, ಮೊಬೈಲ್‌ನ ಅಂತರ್ಜಾಲದಲ್ಲಿ ತಡಕಾಡುವುದು ಸಾಮಾನ್ಯ ಎಂಬಂತಾಗಿದೆ. ಅದರೊಂದಿಗೆ ಪೋಷಕರು ಕೂಡ ಮಕ್ಕಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ಖಾತೆ ತೆರೆಯುವುದು, ಯೂಟ್ಯೂಬ್ ಚಾನೆಲ್ ತೆರೆಯುವುದು, ಮಕ್ಕಳ ಫೋಟೊ, ಸ್ಟೋರಿಯನ್ನು ಹಂಚಿಕೊಳ್ಳುವುದು ಮಾಡುತ್ತಾರೆ. ಆದರೆ ಡಿಜಿಟಲ್ ವೇದಿಕೆಯಲ್ಲಿ ಮಕ್ಕಳು ಎಷ್ಟು ಸುರಕ್ಷಿತರಾಗಿದ್ದಾರೆ ಎಂಬ ಬಗ್ಗೆ ಪೋಷಕರು ಹೆಚ್ಚು ಗಮನ ವಹಿಸಬೇಕು. ಅಂತರ್ಜಾಲದಲ್ಲಿ ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಕಾಪಾಡುವ ಸುರಕ್ಷತಾ ಮಾರ್ಗಗಳನ್ನು ಅನುಸರಿಸಬೇಕು. ಜೊತೆಗೆ ಮಕ್ಕಳಿಗೆ ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆಯ ಹವ್ಯಾಸವನ್ನು ರೂಢಿಸುವುದು ಅಗತ್ಯ.

ಮುನ್ನೆಚ್ಚರಿಕೆ ವಹಿಸಿ

ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳುವ ಅಗತ್ಯದ ಬಗ್ಗೆ ಮಗುವಿನಲ್ಲಿ ಅರಿವು ಮೂಡಿಸಿ. ಮಗುವಿನ ವಿವರ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದರೆ ಅಥವಾ ಅನುಚಿತ ವಿಷಯಗಳು ಕಂಡುಬಂದರೆ ತಮಗೆ ತಿಳಿಸಿಬೇಕು ಎಂಬುದನ್ನು ವಿವರಿಸಿ.

ಮಕ್ಕಳನ್ನು ಆನ್‌ಲೈನ್‌ ವಂಚನೆಯಿಂದ ದೂರ ಇರಿಸಲು ಇಲ್ಲಿವೆ ಕೆಲವು ಮಾರ್ಗೋಪಾಯಗಳು

ಸುರಕ್ಷತೆಯ ಮೇಲೆ ಗಮನ ಹರಿಸಿ: ಯಾವಾಗಲೂ ಉತ್ತಮ ಬ್ರ್ಯಾಂಡ್‌ನೇಮ್ ಹೊಂದಿರುವ ಕಂಪನಿಗಳಿಂದಲೇ ಸ್ಮಾರ್ಟ್ ಉಪಕರಣಗಳನ್ನು ಖರೀದಿಸಿ. ಅವರು ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅನೇಕ ಉಚಿತ ಸಾಫ್ಟ್‌ವೇರ್‌ಗಳಿವೆ, ಅವುಗಳನ್ನು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಅಳವಡಿಸಿಕೊಳ್ಳಿ. ಆಗಾಗ ಸಾಪ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡುತ್ತಿರಿ.

ಸುರಕ್ಷಿತ ಸಂಪರ್ಕ: ನಿಮ್ಮ ಮಗು ಬಳಸುವ ಡಿವೈಸ್‌ಗೆ ಸೆಟ್‌ ಆಗಿರುವ ಪಾಸ್‌ವರ್ಡ್‌ ಅನ್ನು ಆಗಾಗ ಬದಲಿಸುತ್ತಿರಿ. ಒಂದೇ ಪಾಸವರ್ಡ್‌ ಅನ್ನು ಹಲವು ದಿನಗಳವರೆಗೂ ಬಳಕೆ ಮಾಡುತ್ತಿದ್ದರೆ ಹ್ಯಾಕರ್‌ಗಳು ಸುಲಭವಾಗಿ ಮಾಹಿತಿ ಸೋರಿಕೆ ಮಾಡಬಹುದು.

ನಿಮ್ಮ ಮಕ್ಕಳು ಬಳಸುವ ಆ್ಯಪ್‌ಗಳು ಹಾಗೂ ಆನ್‌ಲೈನ್ ಮಾಧ್ಯಮಗಳ ರೇಟಿಂಗ್‌ ಪರಿಶೀಲಿಸಿ. ಇದು ಯಾವ ವಯಸ್ಸಿಗೆ ಸೂಕ್ತ ಎಂಬುದರ ಬಗ್ಗೆ ಒಳನೋಟವನ್ನು ನೀಡುತ್ತದೆ.

ಪ್ರೈವೆಸಿ ಸೆಟಿಂಗ್‌ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು ಅಗತ್ಯ. ಅನಗತ್ಯ ಪಾಪ್‌ಅಪ್‌ಗಳು ತೆರೆದುಕೊಳ್ಳದಂತೆ ಪ್ರೈವೆಸಿ ಸೆಟಿಂಗ್‌ನಲ್ಲಿ ಸೆಟ್ ಮಾಡಿ. ಮಕ್ಕಳ ಡಿವೈಸ್‌ನಲ್ಲಿ ಅವರಿಗೆ ಬೇಕಾಗುವ ಅಂಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ವೆಬ್‌ಸೈಟ್‌, ಆ್ಯಪ್‌ಗಳಿಗೆ ಪಾಸ್‌ವರ್ಡ್ ಸೆಟ್ ಮಾಡಿ.

ತಮಗೆ ಸಂಬಂಧವಿಲ್ಲದ ಯಾವುದೇ ಸಾಮಾಜಿಕ ಜಾಲತಾಣ, ವೆಬ್‌ಸೈಟ್‌ಗಳ ಪಾಪ್‌ಅಪ್‌ ಅನ್ನು ತೆರೆದು ನೋಡಬಾರದು ಎಂದು ಮಕ್ಕಳಿಗೆ ತಾಕೀತು ಮಾಡಿ. ಅದರಿಂದಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಿ. ಪಾಸ್‌ವರ್ಡ್‌ ಸೆಟ್‌ ಮಾಡುವಾಗಲೂ 1234, 0000 ಹೀಗೆ ಸುಲಭದ ಪಾಸ್‌ವರ್ಡ್ ಅನ್ನು ಸೆಟ್‌ ಮಾಡಬೇಡಿ. ಕ್ಲಿಷ್ಟಕರ ಪಾಸ್‌ವರ್ಡ್‌ ಸೆಟ್‌ ಮಾಡಿ.

ಪೋಷಕರು ಅನುಸರಿಸಬೇಕಾದ ನಿಯಮಗಳು

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೊ ಅಥವಾ ಸ್ಟೋರಿ ಹಂಚಿಕೊಳ್ಳುವ ಮುನ್ನ ಅವರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಳ್ಳಿ. ಜೊತೆಗೆ ಯಾವ ವಿವರ ಹಾಕಲಾಗಿದೆ ಎಂಬುದನ್ನು ಮಕ್ಕಳಿಗೆ ತಿಳಿಸಿ.

ಸ್ನೇಹಿತರು ಹಾಗೂ ಕುಟುಂಬದವರು ನಿಮ್ಮ ಮಗುವಿನ ಫೋಟೊ ಹಾಗೂ ಮಾಹಿತಿಗಳನ್ನು ಪೋಸ್ಟ್ ಮಾಡುವುದಕ್ಕೆ ಮಿತಿ ಹೇರಿ. ಸಾರ್ವಜನಿಕ ಪ್ರೊಫೈಲ್ ಹೊಂದಿರುವವರು ಫೋಟೊ ಅಥವಾ ನಿಮ್ಮ ಮಗುವಿಗೆ ಸಂಬಂಧಿಸಿದ ಮಾಹಿತಿಯನ್ನು ಟ್ಯಾಗ್ ಮಾಡಿದ್ದರೆ ಅದರ ಬಗ್ಗೆ ಗಮನ ಹರಿಸಿ.

ಕೆಲವೊಂದು ಕಂಪನಿಗಳು ತಮ್ಮ ಪ್ರಚಾರಕ್ಕಾಗಿ ನಿಮ್ಮ ಮಗುವಿನ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅದರ ಮೇಲೆ ಗಮನವಿರಲಿ.

ಹೆಚ್ಚಿನ ಸಲಹೆಗಳಿಗಾಗಿ ಕೌಟುಂಬಿಕ ಆನ್‌ಲೈನ್ ಸುರಕ್ಷತಾ ಸಂಸ್ಥೆಯ ಡಿಜಿಟಲ್ ಪೇರೆಂಟಿಂಗ್ ಗೈಡ್ ಅನ್ನು ಪರಿಶೀಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT