ಭಾನುವಾರ, ಜುಲೈ 3, 2022
24 °C

ಆನ್‌ಲೈನ್‌ನಿಂದ ಆಫ್‌ಲೈನ್‌ಗೆ... ಬೋರ್ಡ್ ಪರೀಕ್ಷೆಗೆ ಸಜ್ಜಾಗುವುದು ಹೇಗೆ?

ಶ್ರೀಲತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಕಾರಣದಿಂದಾಗಿ ಈ ಸಾಲಿನ ಶಿಕ್ಷಣ ಪ್ರತಿಬಾರಿಯಂತೆ ನಡೆಯದೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ, ಗೊಂದಲ ಮೂಡಿಸಿದ್ದು ಗೊತ್ತೇ ಇದೆ. ಅದರಲ್ಲೂ ಬೋರ್ಡ್ ವಿದ್ಯಾರ್ಥಿಗಳಿಗೆ ಅಂದರೆ ಹತ್ತು ಮತ್ತು ಹನ್ನೆರಡನೇ ತರಗತಿ (ದ್ವಿತೀಯ ಪಿಯುಸಿ)ಯ ವಿದ್ಯಾರ್ಥಿಗಳಿಗೆ ಒಂದು ರೀತಿ ಹಿನ್ನಡೆಯ ಅನುಭವವಾಗುತ್ತಿದೆ. ಶಿಕ್ಷಣ ಸಮರ್ಪಕವಾಗಿರಲು ಆನ್‌ಲೈನ್ ತರಗತಿಗಳನ್ನು ಆಯೋಜಿಸಲಾಗಿದೆ. ಹಾಗೆಯೇ ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿವೆ. ಪತ್ರಿಕೆಯಲ್ಲೂ ಪಾಠಗಳು ಪ್ರಕಟವಾಗುತ್ತಿವೆ. ಆದರೆ ಪಾಠದ ಅಂತರಾಳ (ಕಾನ್ಸೆಪ್ಟ್) ಸ್ಪಷ್ಟವಾಗಿಲ್ಲ. ತರಗತಿಯಲ್ಲಿ ಕುಳಿತುಕೊಂಡು ಶಿಕ್ಷಕರ ಸಂವೇದನೆ, ಸಂವಹನ, ಸಹಪಾಠಿಗಳ ಒಡನಾಟದಲ್ಲಿ ಸುಲಭವಾಗಿ ಅರ್ಥವಾಗುತ್ತಿದ್ದ ಪಾಠಗಳು ಈಗ ಕ್ಲಿಷ್ಟವೆನಿಸುತ್ತಿವೆ.

ಇತ್ತೀಚೆಗೆ ಶಾಲೆ– ಕಾಲೇಜು ತರಗತಿ (ಆಫ್‌ಲೈನ್)ಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕಲಿಕೆಯನ್ನು ಅರ್ಥಪೂರ್ಣವಾಗಿಸಲು ಹಾಗೂ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈ ಕೆಳಕಂಡ ಕೆಲವು ಸೂತ್ರಗಳು ಸಹಕಾರಿಯಾಗಬಹುದು.

* ಈಗ ಕಲಿತಿರುವ ಪಾಠಗಳ ಪುನರಾವರ್ತನೆಯನ್ನು ಮೊದಲು ಕೈಗೆತ್ತಿಕೊಂಡು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಂವಹನ ನಡೆಸುವ ಮೂಲಕ ಇರುವ ಸಂದೇಹಗಳಿಗೆ ಪರಿಹಾರ ದೊರಕಿಸಿಕೊಳ್ಳಬೇಕು. ಒಬ್ಬ ವಿದ್ಯಾರ್ಥಿಯ ಸಂದೇಹದ ಪರಿಹಾರ ಉಳಿದೆಲ್ಲಾ ವಿದ್ಯಾರ್ಥಿಗಳ ಸಂದೇಹವನ್ನು ಪರಿಹಾರ ಮಾಡುವುದರೊಂದಿಗೆ ಮುಂದಿನ ಕಲಿಕೆಗೆ ಪೂರಕವಾಗಿರುತ್ತದೆ. ಶಿಕ್ಷಕರು ಕಲಿಸುವ ರೀತಿಗೆ ಪರ್ಯಾಯವೇ ಇಲ್ಲ. ಸಮಯದ ಅಭಾವ ಇರುವುದು ವಾಸ್ತವವಾದರೂ ಇರುವ ಸಮಯವನ್ನೇ ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಕಲಿಕೆಯ ಸ್ತರಕ್ಕೆ ಅನುಗುಣವಾಗಿ, ಬೋಧಿಸುವುದು ಅತ್ಯವಶ್ಯಕ.

* ಸಾಧರಣವಾಗಿ ಪಠ್ಯದಲ್ಲಿರುವ ವಿಷಯಗಳಿಗೆ ಪೂರಕವಾಗಿ ಪ್ರಾಯೋಗಿಕ ತರಗತಿಗಳಿರುತ್ತವೆ. ಮುಖ್ಯವಾಗಿ ವಿಜ್ಞಾನದ ವಿಷಯದಲ್ಲಿ ಉದಾಹರಣೆಗೆ ನಿಮ್ನ ಹಾಗೂ ಪೀನ ದರ್ಪಣ ಮತ್ತು ಮಸೂರಗಳಲ್ಲಿ ವಸ್ತುವನ್ನು ಎಲ್ಲಿ ಇರಿಸಿದಾಗ ಪ್ರತಿಬಿಂಬ ಎಲ್ಲಿ, ಯಾವ ರೀತಿಯಲ್ಲಿ ಮೂಡುತ್ತದೆ ಎಂಬುದನ್ನು ಕೇವಲ ವಿಡಿಯೊ ತೋರಿಸಿ ಕಲಿಸುವುದಕ್ಕಿಂತ ವಿದ್ಯಾರ್ಥಿಗಳನ್ನು ಪ್ರಯೋಗಶಾಲೆಗೆ ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆ ಮಾಡಿ ಮತ್ತು ಅವರಿಗೆ ಸ್ವತಃ ಮಾಡಲು ಬಿಟ್ಟರೆ ಕಲಿತಿದ್ದರ ಪ್ರತಿಬಿಂಬ ಮೆದುಳಿನಲ್ಲಿ ನಿಚ್ಚಳವಾಗಿ ಮೂಡುತ್ತದೆ. ಪ್ರಯೋಗ ಪರೀಕ್ಷೆ 10ನೇ ತರಗತಿಗೆ ಇಲ್ಲದಿರುವುದರಿಂದ ಪ್ರಾಯೋಗಿಕ ತರಗತಿಗಳನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ.

* ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದುವುದನ್ನು ನಿಲ್ಲಿಸಿ ಪಠ್ಯ ಅಥವಾ ಪೂರಕ ಪಠ್ಯ ಪುಸ್ತಕಗಳಲ್ಲಿ ಓದುವುದು ಅವಶ್ಯಕ. ಏಕೆಂದರೆ ಯಾವ ಪುಟದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎನ್ನುವುದು ಮೆದುಳಿನಲ್ಲಿ ಸೆರೆಯಾಗಿರುತ್ತದೆ. ಅದರಿಂದ ನೆನಪಿಸಿಕೊಳ್ಳಲು ಸುಲಭವಾಗುತ್ತದೆ.

* ಓದುವಾಗ ನಿಧಾನವಾಗಿ, ಕ್ರಮಶಃ ಓದಿ. ಪ್ರತಿ ಪರಿಚ್ಛೇದ ಓದಿದಾಗಲೂ ಇದು ಏಕೆ, ಹೇಗೆ ಎನ್ನುವುದನ್ನು ಪ್ರತಿ ಹಂತದಲ್ಲೂ ಮನನ ಮಾಡಿಕೊಳ್ಳಬೇಕು. ನಾಲ್ಕು ಸಲ ಉತ್ತರಗಳನ್ನು ಗೈಡ್‌ಗಳಿಂದ ಓದಿದರೆ ನೆನಪಾದರೂ, ಈ ಉತ್ತರ ಬರಲು ಕಾರಣವೇನು ಎಂಬ ತಿಳಿವಳಿಕೆ ಇದ್ದರೆ, ಅದೇ ತರಹದ ಹತ್ತಾರು ಪ್ರಶ್ನೆಗಳನ್ನು ಉತ್ತರಿಸಲು ಸಹಕಾರಿಯಾಗುತ್ತದೆ. ಪಠ್ಯವನ್ನು ಕೇವಲ ಗೈಡ್ ಲೈನ್‌ನಂತೆ ಪರಿಗಣಿಸಿ ಅದರ ಒಳಗು ಹೊರಗನ್ನು ಜಾಲಾಡಿದಾಗಲಷ್ಟೇ ಕಲಿಕೆ ಪೂರ್ಣವಾಗುವುದು. ಉದಾಹರಣೆಗೆ ಕಬ್ಬಿಣ ತುಕ್ಕು ಹಿಡಿಯದಿರಲು ಅದಕ್ಕೆ ಜಿಡ್ಡು ಸವರಬೇಕು, ಅಥವಾ ಪೇಂಟ್ ಹಚ್ಚಬೇಕು ಎಂಬುದು ಪಠ್ಯದಲ್ಲಿರುತ್ತದೆ. ಆದರೆ ಅದು ವಾತಾವರಣದಲ್ಲಿರುವ ತೇವಾಂಶವನ್ನು ತಡೆಯಲು ಎಂಬುದು ವಿದ್ಯಾರ್ಥಿಗಳಿಗೆ ಮನನವಾದಾಗ (ಎಂಸಿಕ್ಯು) ಪ್ರಶ್ನೆಗಳನ್ನು ತಪ್ಪಿಲ್ಲದೆ ಉತ್ತರಿಸಲು ಸಹಾಯವಾಗುತ್ತದೆ.

* ದ್ವಿತೀಯ ಪಿಯುಸಿ ಪಠ್ಯಗಳನ್ನು ಪರೀಕ್ಷಾ ದೃಷ್ಟಿ ಇಂದ ಕಡಿತಗೊಳಿಸಿದರೂ ಸಮಗ್ರತೆಯನ್ನು ಅರಿಯಲು ಪಠ್ಯವನ್ನು ಪೂರಾ ಓದುವುದು ಮುಂದೆ ತೆಗೆದುಕೊಳ್ಳುವ ಕೋರ್ಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ.

* ಶೈಕ್ಷಣಿಕ ಆ್ಯಪ್‌ಗಳು ವಿದ್ಯಾರ್ಥಿಗಳ ಸಂದೇಹವನ್ನು ಕ್ಷಣ ಮಾತ್ರದಲ್ಲಿ ವಿಡಿಯೊ ಪಾಠಗಳ ಮೂಲಕ ದೂರ ಮಾಡುತ್ತವೆ. ಅದೇ ರೀತಿ ಚಿಕ್ಕ ಚಿಕ್ಕ ಸ್ಟಡಿ ಸರ್ಕಲ್ ಮಾಡಿಕೊಂಡು ಕಾಲೇಜಿನಲ್ಲಿ ಕಲಿಸುವ ಶಿಕ್ಷಕರೇ ತಮ್ಮ ವಿದ್ಯಾರ್ಥಿಗಳ ಸಂದೇಹ ಪರಿಹಾರಕ್ಕೆ ಒಂದು ಪರ್ಯಾಯ ಆ್ಯಪ್‌ ಪ್ರಾರಂಭ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಬಹುದು. ಏಕೆಂದರೆ ವಿದ್ಯಾರ್ಥಿಗಳ ಕಲಿಕೆ ಶಿಕ್ಷಕರ ಪಾಠಮಾಡುವ ವೈಖರಿಗೆ ಅನುಗುಣವಾಗಿ ರೂಪುಗೊಂಡಿರುತ್ತದೆ.

* ಎನ್‌ಟಿಎ ಅಭ್ಯಾಸ್‌ ಆ್ಯಪ್‌ ಎನ್ನುವುದು ಎನ್‌ಇಇಟಿ, ಜೆಇಇ ಪರೀಕ್ಷೆಗಳಿಗೆ ಪೂರಕ ಪ್ರಶ್ನೆ ಪತ್ರಿಕೆಯನ್ನು ನೀಡುತ್ತಿದೆ. ಅದೇ ಮಾದರಿಯಲ್ಲಿ ಸಿಇಟಿ ಪರೀಕ್ಷೆಗೂ ಅಭ್ಯಾಸ ಪ್ರಶ್ನೆ ಪತ್ರಿಕೆಗಳು ಈಗಿನಿಂದಲೇ ದೊರೆಯುವಂತಾದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

* ಪಠ್ಯಾಂಶ ಕಡಿತಗೊಂದಿರುವ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆಗಳ ರೂಪುರೇಷೆಗಳೂ ಸಹ ಬದಲಾಗಿವೆ. ಅಂಕಗಳ ಅನುಸಾರ ಪ್ರಶ್ನೆಗಳು ಹಾಗೂ ಪ್ರಶ್ನೆಗಳ ರೀತಿಗಳೂ ಸಹ ಬದಲಾಗಿವೆ. ಶಾಲೆಗಳಲ್ಲಿ ಈ ಮಾಹಿತಿ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು