ಶನಿವಾರ, ಜೂನ್ 19, 2021
23 °C

ಕಾಳಜಿ | ಶಾಲೆ ಇನ್ನು ಜಂಕ್‌ಫುಡ್‌ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಮಕ್ಕಳ ಪೋಷಕರವರೆಗೂ ಜಂಕ್‌ಫುಡ್‌ ಕುರಿತು ತಲೆ ಕೆಡಿಸಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮನೆಯಲ್ಲಿ ಅಮ್ಮ ತಯಾರಿಸುವ ತಿಂಡಿ– ತಿನಿಸಿಗಿಂತ ಅಂಗಡಿಯಲ್ಲಿ ದೊರೆಯುವ ಚಿಪ್ಸ್‌, ಕುರ್‌ಕುರೆ, ಚಾಟ್ಸ್‌ಗಳಲ್ಲದೇ, ಹೋಟೆಲ್‌ಗಳಲ್ಲಿ ಲಭ್ಯವಿರುವ ನೂಡಲ್ಸ್‌, ಮಂಚೂರಿ, ಬರ್ಗರ್‌ ಮೊದಲಾದ ಜಂಕ್‌ಫುಡ್‌ನ ರುಚಿಗೆ ಮೊರೆ ಹೋಗಿದ್ದಾರೆ ಚಿಣ್ಣರು. ಈ ತಿನಿಸುಗಳೂ ಅಷ್ಟೇ, ಮಕ್ಕಳಿಗೆ ಅದೇನು ಮೋಡಿ ಮಾಡುತ್ತವೋ, ರುಚಿ ಹತ್ತಿಸಿ ಮನೆಯ ಆಹಾರದತ್ತ ತಿರುಗಿ ನೋಡದಂತೆ ಮಾಡಿಬಿಡುತ್ತವೆ.

ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರವೂ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದೆ. ಮಕ್ಕಳಿಗೆ ಸುರಕ್ಷಿತ ಹಾಗೂ ಸಂಪೂರ್ಣ ಪೌಷ್ಟಿಕ ಆಹಾರ ದೊರೆಯುವಂತೆ ಮಾಡಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಶಾಲೆ ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳ ಕ್ಯಾಂಟೀನ್‌ ಅಲ್ಲದೇ 50 ಮೀಟರ್‌ ಆಸುಪಾಸಿನಲ್ಲಿ ಅನಾರೋಗ್ಯಕರ ಜಂಕ್‌ ಫುಡ್‌ ಮಾರಾಟವನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಶಾಲೆಗೆ 50 ಮೀಟರ್‌ ದೂರದೊಳಗೆ ಇಂತಹ ಆಹಾರದ ಜಾಹೀರಾತನ್ನೂ ಹಾಕುವಂತಿಲ್ಲ. ಇಂತಹ ಕ್ರಮಕ್ಕೆ ಕಾರಣ ಶಾಲಾ ಮಕ್ಕಳಿಗೆ ಸುರಕ್ಷಿತ, ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು.

ಶಾಲಾ ಮಕ್ಕಳು ಆಯಾ ಕಾಲದಲ್ಲಿ ಲಭ್ಯವಿರುವಂತಹ ತರಕಾರಿ ಮತ್ತು ಹಣ್ಣು, ಮೀನು, ಮೊಟ್ಟೆಯಲ್ಲದೇ, ಪ್ರಾದೇಶಿಕವಾಗಿ ಹೊಂದುವಂತಹ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಸಮತೋಲಿತ ಆಹಾರದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಕೂಡ ಸದ್ಯದ ಕೋವಿಡ್‌–19 ಪರಿಸ್ಥಿತಿಯಲ್ಲಿ ಆಗಬೇಕಾದಂತಹ ಅತ್ಯಂತ ಜರೂರು ಕೆಲಸ ಎನ್ನಬಹುದು. ಮಧ್ಯಾಹ್ನದ ಬಿಸಿಯೂಟ ಪೂರೈಸುವ ಹಿಂದಿನ ಉದ್ದೇಶವೂ ಇದೇ ತಾನೆ.

ಮಕ್ಕಳು ಜಂಕ್‌ ಫುಡ್‌ ತಿನ್ನದಂತೆ ಪೋಷಕರೂ ಹೆಚ್ಚಿನ ನಿಗಾ ಇಡಬೇಕಾಗುತ್ತದೆ.

‘ಜಂಕ್‌ಫುಡ್‌ಗಳನ್ನು ದೀರ್ಘಕಾಲ ಕಾಪಿಡಲು ರಾಸಾಯನಿಕ ಅಂಶ, ರುಚಿ ಹೆಚ್ಚಿಸಲು ಟೇಸ್ಟಿಂಗ್‌ ಪೌಡರ್‌, ಉಪ್ಪು, ಮಸಾಲೆ ಎಲ್ಲವನ್ನೂ ಸ್ವಲ್ಪ ಹೆಚ್ಚಾಗಿಯೇ ಬಳಸಿರುತ್ತಾರೆ. ಇಂತಹ ಪದಾರ್ಥಗಳನ್ನು ಮಕ್ಕಳು ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ’ ಎನ್ನುತ್ತಾರೆ ಮಕ್ಕಳ ಪೌಷ್ಟಿಕ ಆಹಾರ ತಜ್ಞ, ಟಿಮಿಯೋಸ್‌ ಮಕ್ಕಳ ಆಹಾರ ಸಂಸ್ಥೆಯ ಸಹಸ್ಥಾಪಕ ಅಶ್ವನಿ ಚೈತನ್ಯ.

ಪೋಷಕರಿಗೆ ಕಿವಿಮಾತು

ಮನೆಯಲ್ಲಿ ಮಾಡಿದ ಆಹಾರ, ಹಣ್ಣು, ತರಕಾರಿ ಜಾಸ್ತಿ ಕೊಡಿ.

 ಮನೆಯಲ್ಲೇ ಪಿಜ್ಜಾ, ಬರ್ಗರ್‌ನಂತಹ ತಿಂಡಿಗಳನ್ನು ಮಾಡಿಕೊಡಿ. ಅಂಗಡಿಯಲ್ಲಿ ಅದಕ್ಕೆ ಹೆಚ್ಚು ಉಪ್ಪು, ಮಸಾಲೆ ಬಳಸಿರುತ್ತಾರೆ.

ಶೇಂಗಾ, ಎಳ್ಳು, ರವೆ ಮುಂತಾದ ಪದಾರ್ಥಗಳಿಂದ ಮಾಡಿದ ಉಂಡೆ, ಲಡ್ಡುಗಳನ್ನು, ಸಾಂಪ್ರದಾಯಿಕ ತಿಂಡಿಗಳನ್ನು ಮಕ್ಕಳಿಗೆ ಮಾಡಿ ಕೊಡಿ.

ಮಕ್ಕಳು ಹೊಟ್ಟೆ ತುಂಬಿದೆ, ಊಟ ಮಾಡಲ್ಲ ಎಂದಾಗ ಅವರ ಮಾತಿಗೆ ಬೆಲೆ ಕೊಡಿ. ಅತಿಯಾಗಿ ತಿನ್ನಿಸಬೇಡಿ.

ಮಕ್ಕಳು ಟಿವಿ ನೋಡುವಾಗ, ಓದುವ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದು, ಅವುಗಳ ಜ್ಯೂಸ್‌ ಕುಡಿಯುವುದನ್ನು ಅಭ್ಯಾಸ ಮಾಡಿಸಿ.

 ಹೊರಗೆ ಹೋಗುವಾಗ ಕಡಲೆ ಬೀಜ, ಬಾದಾಮಿ, ಗೋಡಂಬಿ, ದ್ರಾಕ್ಷಿಯಂತಹ ಒಣಹಣ್ಣುಗಳನ್ನು ಜೊತೆಗೆ ಒಯ್ಯಿರಿ. ಮಕ್ಕಳಿಗೆ ಹಸಿವಾದರೆ ಅದನ್ನೇ ಕೊಡಿ.

ಮಕ್ಕಳು ದಿನಕ್ಕೆ ಕನಿಷ್ಠ 6 ಲೋಟ ನೀರು ಕುಡಿಯುವಂತೆ ನೋಡಿಕೊಳ್ಳಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು