ಮಂಗಳವಾರ, ಜೂಲೈ 7, 2020
27 °C

ವಿಜ್ಞಾನದ ಪರೀಕ್ಷೆಗೆ ಜ್ಞಾನದ ಸಮೀಕ್ಷೆ

ನಾರಾಯಣ ಬಾಬಾನಗರ Updated:

ಅಕ್ಷರ ಗಾತ್ರ : | |

Prajavani

ಪರೀಕ್ಷೆ ಎಂದೊಡನೆ ಹೆದರಿಕೊಳ್ಳುವವರೇ ಅಧಿಕ. ಸರಿಯಾದ ಸಿದ್ಧತೆಯಿದ್ದರೆ ಯಾವುದೇ ವಿಷಯವಿರಲಿ, ಎಂಥದೆ ಪರೀಕ್ಷೆಯಿರಲಿ ನಿರಾಯಾಸವಾಗಿ ಎದುರಿಸಬಹುದು.

ಈ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಮೊದಲ ಬಾರಿಗೆ ಎನ್.ಸಿ.ಇ.ಆರ್.ಟಿ. ಪಠ್ಯಕ್ರಮದ ವಿಜ್ಞಾನ ವಿಷಯವನ್ನು ಅಭ್ಯಸಿಸಿ ಅದಕ್ಕೆ ಪರೀಕ್ಷೆ ಬರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಅದಕ್ಕಾಗಿಯೂ ಆತಂಕಗೊಂಡಿರಬಹುದು. ಅವುಗಳನ್ನು ನಿವಾರಿಸಿಕೊಳ್ಳಲು ವಿಜ್ಞಾನ ವಿಷಯದ ಪರೀಕ್ಷೆಗಾಗಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಕುರಿತು ದೃಷ್ಟಿ ಹರಿಸೋಣ.

ಯೋಜನೆ ರೂಪಿಸಿ

ವಿಜ್ಞಾನ ವಿಷಯದ ಪಠ್ಯಪುಸ್ತಕ ಒಟ್ಟು ಹದಿನಾರು ಅಧ್ಯಾಯಗಳಿಂದ ಕೂಡಿದೆ. ಪ್ರತಿ ಅಧ್ಯಾಯಕ್ಕೆ ಎಷ್ಟೆಷ್ಟು ಅಂಕಗಳ ಪ್ರಶ್ನೆಗಳು ವಾರ್ಷಿಕ ಪರೀಕ್ಷೆಗೆ ಬರುತ್ತವೆ ಎಂಬುದನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಈಗಾಗಲೇ ನಿಗದಿಪಡಿಸಿ ತಿಳಿಸಿಯಾಗಿದೆ. ಅದನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ.

ಪ್ರತಿ ಅಧ್ಯಾಯವನ್ನು ಒಂದು ಸಲ ಶಾಂತ ಮನಸ್ಸಿನಿಂದ ಓದಿಕೊಳ್ಳಿ. ಅದಾದ ನಂತರ ಅಧ್ಯಾಯದ ಪ್ರತಿ ಪ್ಯಾರಾಗ್ರಾಫ್ ಅನ್ನು ಓದುತ್ತಾ ಅದರಲ್ಲಿ ಪರೀಕ್ಷೆಗೆ ಬರಬಹುದಾದ ಮುಖ್ಯ ಸಂಗತಿಗಳನ್ನು ಗುರುತು ಹಾಕಿಕೊಳ್ಳಿ. ಈಗ ಅಧ್ಯಾಯದ ಕೊನೆಗೆ ನೀಡಿದ ಪ್ರಶ್ನೆಗಳಿಗೆ ಉತ್ತರವನ್ನು ಬರೆದು ರೂಢಿ ಮಾಡಿಕೊಳ್ಳಿ. ಇಡೀ ಪಾಠದ ಸಾರವನ್ನು ಕೊನೆಗೆ ಗುರುತಿಸಿಕೊಳ್ಳಿ. ಈ ಅಧ್ಯಾಯ ಏನನ್ನು ಹೇಳಲು ಹೊರಟಿದೆ ಎಂಬುದರ ಚಿತ್ರಣ ಪಾಠ ಓದಿಯಾದ ಮೇಲೆ ನಿಮಗೆ ಸಿಗಬೇಕು. ಆ ರೀತಿಯ ಸಿದ್ಧತೆ ಮಾಡಿಕೊಂಡಿರಿ.

ಪ್ರಶ್ನೆಪತ್ರಿಕೆಯ ಸ್ವರೂಪ

ಪ್ರಶ್ನೆಪತ್ರಿಕೆಯ ವಿನ್ಯಾಸ ಹೇಗಿರುತ್ತದೆ ಎಂಬುದು ನೀವು ತಿಳಿದಿರುವುದು ಬಹು ಮುಖ್ಯ. ಒಟ್ಟು ಆರು ಬಗೆಯ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆ ಒಳಗೊಂಡಿರುತ್ತದೆ. ಹತ್ತು ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಅದಕ್ಕೆ ನೀವು ಉತ್ತರಿಸುವ ಸರಿಯಾದ ವಿಧಾನವೆಂದರೆ ಸರಿ ಉತ್ತರವನ್ನು ಆಯ್ಕೆ ಮಾಡಿ ಅದನ್ನು ಕ್ರಮಾಕ್ಷರದೊಂದಿಗೆ ಬರೆಯಬೇಕು. ಕ್ರಮಾಕ್ಷರವನ್ನು ಕಡ್ಡಾಯವಾಗಿ ಬರೆದಿರಬೇಕೆಂದು ನಿಮ್ಮ ಗಮನದಲ್ಲಿರಲಿ. ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಒಂದು ಎಚ್ಚರಿಕೆಯಿರಲಿ. ಒಂದು ಸಲ ಉತ್ತರ ಬರೆದರೆ ಆಯಿತು. ಇಲ್ಲಿ ತಿದ್ದಿ ಮತ್ತೆ ಉತ್ತರ ಬರೆಯಲು ಅವಕಾಶವಿಲ್ಲ. ಹೀಗಾಗಿ ಜಾಗರೂಕತೆಯನ್ನು ವಹಿಸಿ.

ಹೊಂದಿಸಿ ಬರೆಯಿರಿ ನಾಲ್ಕು ಅಂಕಕ್ಕಿರುವ ಇನ್ನೊಂದು ಬಗೆಯ ಪ್ರಶ್ನೆ. ಇದಕ್ಕೂ ಉತ್ತರಿಸುವಾಗ ಕ್ರಮಾಕ್ಷರವನ್ನು ಕಡ್ಡಾಯವಾಗಿ ಬರೆಯಲೇಬೇಕು ಎಂಬುದು ಗಮನಕ್ಕಿರಲಿ. ಯಾವ ಅಧ್ಯಾಯಕ್ಕೆ ನಾಲ್ಕು ಮತ್ತು ನಾಲ್ಕಕ್ಕಿಂತಲೂ ಹೆಚ್ಚು ಅಂಕಗಳು ನಿಗದಿಯಾಗಿದೆಯೊ ಆ ಅಧ್ಯಾಯದ ಮೇಲೆ ಹೊಂದಿಸಿ ಬರೆಯಿರಿ ಪ್ರಶ್ನೆ ಬರುತ್ತದೆ. ಈ ಬಗೆಯ ಪ್ರಶ್ನೆಯಲ್ಲಿ ಎರಡು ಗುಂಪು ನೀಡಲಾಗಿರುತ್ತದೆ. ಎ ಮತ್ತು ಬಿ ಪಟ್ಟಿಗಳು.

ಎ ಪಟ್ಟಿಯಲ್ಲಿ ನಾಲ್ಕು ಪ್ರಶ್ನೆಗಳಿರುತ್ತವೆ. ಇದಕ್ಕೆ ಸರಿಯಾದ ಉತ್ತರವನ್ನು ನೀವು ಬಿ ಪಟ್ಟಿಯಿಂದ ಹುಡುಕಿ ಬರೆಯಬೇಕು. ಬಿ ಪಟ್ಟಿಯಲ್ಲಿ ಏಳು ಆಯ್ಕೆಗಳಿರುತ್ತವೆ. ಸ್ನೇಹಿತರು ಸೇರಿಕೊಂಡು ನಾಲ್ಕಕ್ಕಿಂತ ಹೆಚ್ಚು ಅಂಕಗಳು ನಿಗದಿಪಡಿಸಿದ ಅಧ್ಯಾಯಗಳಿಂದ ಹೊಂದಿಸಿ ಬರೆಯಿರಿ ಪ್ರಶ್ನೆಗಳನ್ನು ರೂಪಿಸಿಕೊಳ್ಳಿ. ಎಲ್ಲ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಹಂಚಿಕೊಳ್ಳಿ. ಇದರಿಂದಾಗಿ ರೂಢಿ ಮಾಡಿಕೊಳ್ಳಲು ನಿಮಗೆ ಹೆಚ್ಚು ಪ್ರಶ್ನೆಗಳು ಸಿಕ್ಕಂತಾಗುತ್ತವೆ.

ಒಂದು ವಾಕ್ಯದಲ್ಲಿ ಉತ್ತರ ಬರೆಯುವಂತಹ ಏಳು ಪ್ರಶ್ನೆಗಳಿರುತ್ತವೆ. ನೀವು ಅಧ್ಯಾಯ ಓದಿಯಾದ ಮೇಲೆ ಮಾಡಿಕೊಂಡ ಮುಖ್ಯಾಂಶಗಳು ಈ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಹಾಯಕವಾಗಬಲ್ಲವು.

ಇನ್ನು ಎರಡು ಅಂಕದ ಹದಿನಾರು ಪ್ರಶ್ನೆಗಳಿರುತ್ತವೆ. ಈ ಬಗೆಯ ಪ್ರಶ್ನೆಗಳಲ್ಲಿ ಕೆಲವು ಪ್ರಶ್ನೆಗಳಿಗೆ ಆಯ್ಕೆಗಳಿರುತ್ತವೆ. ಉದಾಹರಣೆಗೆ ಫ್ಲೆಮಿಂಗ್‌ನ ಎಡಗೈ ನಿಯಮ ಬರೆಯಿರಿ ಅಥವಾ ಫ್ಲೆಮಿಂಗ್‌ನ ಬಲಗೈ ನಿಯಮ ಬರೆಯಿರಿ. ಇಲ್ಲಿ ಎರಡು ಪ್ರಶ್ನೆಗಳಲ್ಲಿ ನೀವು ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿದರೆ ಸಾಕು. ಇದೇ ರೀತಿಯ ಆಯ್ಕೆಗಳು ಮೂರು ಅಂಕದ ಮತ್ತು ನಾಲ್ಕು ಅಂಕದ ಪ್ರಶ್ನೆಗಳಿಗೂ ಇರುತ್ತವೆ. ಎರಡು, ಮೂರು ಮತ್ತು ನಾಲ್ಕು ಅಂಕದ ಪ್ರಶ್ನೆಗಳಲ್ಲಿ ಸುಮಾರು ಹದಿನಾರು ಅಂಕಗಳಿಗೆ ಚಿತ್ರಗಳನ್ನು ಬಿಡಿಸಿ ಎಂದು ಕೇಳಲಾಗುತ್ತದೆ. ಮುಖ್ಯವಾದ ಚಿತ್ರಗಳನ್ನು ರೂಢಿ ಮಾಡಿಕೊಳ್ಳಿ.

ಎರಡು, ಮೂರು ಮತ್ತು ನಾಲ್ಕು ಅಂಕದ ಪ್ರಶ್ನೆಗಳು ಹೇಗಿರುತ್ತವೆ - ಎಂಬುದನ್ನು ತಿಳಿಯಲು ಎಸ್ಎ.ಸ್.ಎಲ್.ಸಿ. ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಯೊಂದನ್ನು ನೋಡಿ. ವ್ಯತ್ಯಾಸಗಳನ್ನು ಬರೆಯಿರಿ, ರಚನೆಯನ್ನು ವಿವರಿಸಿ, ಲೆಕ್ಕಾಚಾರ ಹಾಕಿ, ಸಾಮ್ಯತೆಗಳನ್ನು ಪಟ್ಟಿ ಮಾಡಿ, ಸಮರ್ಥಿಸಿರಿ, ಯಾವ ತೀರ್ಮಾನಕ್ಕೆ ಬರುತ್ತೀರಿ, ವೈಜ್ಞಾನಿಕ ಕಾರಣ ಕೊಡಿ, ಸಮೀಕರಣಗಳನ್ನು ಬರೆಯಿರಿ – ಈ ರೀತಿಯ ಪ್ರಶ್ನೆಗಳು ಸಿಗುತ್ತವೆ. ಈ ತೆರನಾದ ಪ್ರಶ್ನೆಗಳು ಪ್ರಸ್ತುತ ವಿಜ್ಞಾನವಿಷಯದ ಅಧ್ಯಾಯಗಳಲ್ಲಿ ಎಲ್ಲೆಲ್ಲಿ ಬರುತ್ತವೆ ಎಂಬುದನ್ನು ಓದಿ ಅನಂತರ ಬರೆದು ರೂಢಿ ಮಾಡಿಕೊಳ್ಳಿ.

ಇನ್ನು ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಾದ ಮೇಲೆ 80 ಅಂಕದ ಪ್ರಶ್ನೆಪತ್ರಿಕೆಯೊಂದು ಸಿದ್ಧಮಾಡಿಕೊಡಿ ಎಂದು ನಿಮ್ಮ ಶಿಕ್ಷಕರಲ್ಲಿ ವಿನಂತಿಸಿ ಪಡೆದುಕೊಳ್ಳಿ. ಮನೆಯಲ್ಲಿ 3 ಗಂಟೆಯನ್ನು ನಿಗದಿಪಡಿಸಿಕೊಂಡು ಉತ್ತರ ಬರೆಯಿರಿ. ಯಾವ ಬಗೆಯ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ತಡಬಡಾಯಿಸಿದಿರಿ ಅವುಗಳಿಗೆ ಉತ್ತರ ಬರೆಯುವ ಕ್ರಮವೇನು – ಇವುಗಳನ್ನೆಲ್ಲಾ ನಿಮ್ಮ ಶಿಕ್ಷರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯಿರಿ.

ಸರಿಯಾದ ಸಿದ್ಧತೆ, ನಿರಂತರ ಅಭ್ಯಾಸ, ಮನದಲ್ಲಿ ಗುರಿ ಮುಟ್ಟುವ ಛಲ ಇವಿದ್ದರೆ ಎಂಥದೆ ಪರೀಕ್ಷೆಯನ್ನು ಎದುರಿಸುವ ಸ್ಥೈರ್ಯವನ್ನು ತಂದುಕೊಡಬಲ್ಲವು. ಪರೀಕ್ಷೆ ಬರೆಯುವುದನ್ನು ಆನಂದಿಸಿ, ಎದೆಗುಂದಬೇಡಿ, ಎದುರು ನೋಡಿ.

ಹಾ... ನೆನಪಿಟ್ಟುಕೊಳ್ಳುವುದು ಹೇಗೆ? ಅನ್ವಯದ ಪ್ರಶ್ನೆಗಳಿಗೆ ಸಿದ್ಧತೆ ಹೇಗೆ ಮಾಡಬೇಕು? ಚಿತ್ರಗಳ ಭಾಗಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಇಂತಹ ಪ್ರಶ್ನೆಗಳು ನಿಮ್ಮಲ್ಲಿವೆ ಎಂಬುದು ನನಗೆ ಗೊತ್ತು. ಅವುಗಳ ಬಗ್ಗೆ ಮುಂದೆ ತಿಳಿಸಲಾಗುವುದು. 

**

ವೇಳಾಪಟ್ಟಿ ಇರಲಿ

ಪರೀಕ್ಷೆಗೆ ಎಷ್ಟು ದಿನಗಳು ಉಳಿದವು ? ದಿನಕ್ಕೆ ಎಷ್ಟು ಅಧ್ಯಾಯಗಳನ್ನು ಓದಿದರೆ ಗುರಿ ಮುಟ್ಟಬಹುದು ಎಂಬುದರ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಿ. ಓದುವಾಗ ಬರುವ ಸಂದೇಹಗಳನ್ನು ನಿಮ್ಮ ಶಿಕ್ಷಕರ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳಿ. ವೇಳೆ ಸಿಕ್ಕಾಗಲೆಲ್ಲ ನಿಮ್ಮ ಸ್ನೇಹಿತರ ಜೊತೆ ಓದಿದ್ದರ ಕುರಿತು ಹಂಚಿಕೊಳ್ಳಿ. ಪರಸ್ಪರ ಚರ್ಚೆ ಕಲಿಕೆಯನ್ನು ಗಟ್ಟಿಗೊಳಿಸಬಲ್ಲದು.

ನಿಮ್ಮ ಶಾಲೆಯಲ್ಲಿ ವರ್ಷದುದ್ದಕ್ಕೂ ನಡೆದ ಕಿರು ಪರೀಕ್ಷೆಗಳ, ಘಟಕ ಪರೀಕ್ಷೆಗಳ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರಿಸಿದ್ದಿರಿ, ಎಲ್ಲೆಲ್ಲಿ ತಪ್ಪುಗಳಾಗಿದ್ದವು ಎಂಬುದರ ಅವಲೋಕನ ಮಾಡಿಕೊಳ್ಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು