ಶುಕ್ರವಾರ, ಸೆಪ್ಟೆಂಬರ್ 24, 2021
24 °C

ವಿಶೇಷ ಮಕ್ಕಳಿಗೆ ಕಲಿಕಾ ಪಾಠ

ಬಾಲಾಜಿ ಟಿ.ಆರ್. Updated:

ಅಕ್ಷರ ಗಾತ್ರ : | |

Prajavani

ನ ಮ್ಮ ಮಕ್ಕಳು ಎಲ್ಲರಂತೇ ಕ್ರಿಕೆಟ್, ಟೆನಿಸ್, ಫುಟ್ಬಾಲ್, ಹಾಕಿ ಇತ್ಯಾದಿ ಆಟ ಆಡಬೇಕೆಂಬ ಆಸೆ ಯಾವ ತಂದೆ– ತಾಯಿಗಿರಲ್ಲ ಹೇಳಿ. ಹಾಗೆಯೇ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಜವಾಬ್ದಾರಿ ಅವರ ಹೆಗಲಿಗಿರುತ್ತದೆ. ಆದರೆ ಆ ಮಕ್ಕಳು ವಿಶೇಷ ಮಕ್ಕಳಾಗಿದ್ದರೆ... ಉತ್ತಮ ಪಾಠ ಕಲಿಸಲು ಅವರ ಬುದ್ಧಿಮಾಂದ್ಯತೆ ಅಡ್ಡಿಯಾಗಬಹುದು. ಅವರ ಬೌದ್ಧಿಕ ಜ್ಞಾನದ ಮಟ್ಟ ಕಡಿಮೆಯಿದ್ದು, ಕೌಶಲ್ಯ ಇತರ ಮಕ್ಕಳ ಮಟ್ಟಕ್ಕೆ ಸರಿಯಿರದು.

ಇಂತಹ ಮಗು ಹುಟ್ಟಿತಲ್ಲ ಎಂದು ಅಳುತ್ತ ಕೂರಬೇಡಿ; ನೀವೂ ಕುಸಿದು ಕುಳಿತರೆ ಆ ಮಗುವಿನ ಹೊಣೆ ಹೊರವವರು ಯಾರು? ಮೊದಲು ಬೇರೆಯವರ ಮುಂದೆ ಮಗುವನ್ನು ಹೀಯಾಳಿಸುವುದು ಬಿಡಬೇಕು. ಇಂತಹ ಮಕ್ಕಳು ತೊದಲು ನುಡಿ ಆಡಿದರೂ ಸಾಕು, ಅದು ಸಾವಿರ ಡಿಗ್ರಿ ಪಡೆದಷ್ಟೇ ಸಂತಸದ ವಿಚಾರ. ಅವರ ಬುದ್ಧಿಮತ್ತೆ (ಐಕ್ಯು) ಇತರ ಮಕ್ಕಳ ಹಾಗೆ ಇರುವುದಿಲ್ಲ. ಹೀಗಾಗಿ ಅವರಿಗೆ ವಿದ್ಯೆ ತಲೆಗೆ ಹತ್ತುವುದು ಬಹಳ ಕಷ್ಟವಾದ ವಿಚಾರ ಕೂಡ ಹೌದು. ಈ ಮಕ್ಕಳಿಗೆ ಕಲಿಸಲು ಅಪಾರ ಶ್ರಮ, ತಾಳ್ಮೆ ಅಗತ್ಯ. ಇಂತಹ ಮಕ್ಕಳಿಗೆ ಕಲಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಮಕ್ಕಳು ಕಲಿಕೆಯಲ್ಲಿ ಮುಂದುವರೆಯುವುದು ಕನಸಾದರೂ ಅಲ್ಪ ಮಟ್ಟಿನ ವಿದ್ಯೆ ಅವರಿಗೆ ಕಲಿಸಬಹುದು.

ಇಂತಹ ಮಕ್ಕಳಿಗೆ ಅಕ್ಷರ ಕಲಿಸಲು, ಓದಲು ನಾವು ಮಾಡಬೇಕಾದ ಪ್ರಾಮಾಣಿಕ ಪ್ರಯತ್ನಗಳತ್ತ ಗಮನಹರಿಸಬೇಕಾಗುತ್ತದೆ. ಕೆಲವು ಮಾದರಿಗಳನ್ನು ಅನುಸರಿಸಿದರೆ ಮಕ್ಕಳು ತಡವಾದರೂ ಮಾತು ಕಲಿಯುತ್ತವೆ. ಸ್ಪಷ್ಟವಾಗಿ ಮಾತನಾಡದಿದ್ದರೂ ಅರ್ಥವಾಗುವಷ್ಟು ಮಾತನಾಡಲು ಕಲಿಸಬಹುದು. ಮಗುವಿಗೆ ಕಲಿಸುವಾಗ ನಾವು ವಿಪರೀತ ಶ್ರಮ ಹಾಕಬೇಕು.

ತುಟಿ ಚಲನೆ ಮುಖ್ಯ

ಆ ಮಗುವಿನ ತುಟಿ ಚಲನೆ ಮುಖ್ಯ. ಮುಖಭಾವನೆ ಅತೀ ಮುಖ್ಯ. ನಾವು ಉಚ್ಚರಿಸುವ ಪದಗಳು ಆ ಮಗುವಿಗೆ ತಲುಪಿದಾಗ ನಗುವಿನ ಮೂಲಕ ಪ್ರತಿಕ್ರಿಯೆ ನೀಡಬಹುದು. ಕೈಗಳನ್ನು ಚಲಿಸುವ, ಆಡಿಸುವ ಮೂಲಕ ನಮಗೆ ಉತ್ತರಿಸಬಹುದು.

ಒಂದು ಕನ್ನಡಿ ಇರುವ ಬೀರು ಆಥವಾ ವಾರ್ಡ್‌ರೋಬ್‌ನ ಮುಂದೆ ಕುರ್ಚಿ ಹಾಕಿ ಮಗುವನ್ನು ಕನ್ನಡಿಗೆ ಮುಖ ಮಾಡಿ ಕೂರಿಸಿ. ಮಾತನಾಡುವಾಗ ಮಗುವಿಗೆ ನಾವು ಮಾತಾಡುವುದನ್ನು ಗಮನಿಸಲು ತಿಳಿಸಬೇಕು. ಮಾತೃಭಾಷೆಯಲ್ಲಿ ಅದರಲ್ಲೂ ಕನ್ನಡದ ಅಕ್ಷರಗಳಲ್ಲಿ ಇರುವ ಸ್ವರ, ವ್ಯಂಜನ, ಒತ್ತಕ್ಷರಗಳ ಉಚ್ಚಾರಣೆ ಜಗತ್ತಿನ ಯಾವುದೇ ಭಾಷೆಯಲ್ಲಿ ಸಿಗದು. 
ಅಮ್ + ಮಾ = ಅಮ್ಮಾ , ಅಪ್ಪಾ = ಅಪ್ + ಪಾ ಎಂದು ನಮ್ಮ ಮೇಲ್ತುಟಿ ಕೆಳತುಟಿ ಸೇರುವ ರೀತಿ ತೋರಿಸಿ. ದೀರ್ಘವಾಗಿ ರಾಗ ಎಳೆದು ನಮ್ಮ ಗಂಟಲಿಗೆ ಮಗುವಿನ ಕೈಯಿಂದ ಮುಟ್ಟಿಸಿ. ನಮ್ಮ ತುಟಿ ಚಲನೆ ಗಮನಿಸಲು ಹೇಳಿದಾಗ ಮಗು ತನ್ನ ತುಟಿಯನ್ನು ನಮ್ಮಂತೆಯೆ ಮಾಡಲು ಯತ್ನಿಸಲು ಪ್ರಯತ್ನ ಮಾಡಿದಾಗ ಅದು ಸಫಲವಾಗಿ ಪದ, ಅಕ್ಷರದ ಉಚ್ಚಾರಣೆ ಸುಲಭವಾಗುತ್ತದೆ. ಮಗುವಿನ ಬಾಯಿಯ ಒಳಗೆ ವಸಡನ್ನು ನಮ್ಮ ತೋರು ಬೆರಳಿನಿಂದ ಒಮ್ಮೆ ನವಿರಾಗಿ ಸವರಿ ಮಗುವಿಗೆ ನೋವಾಗದ ರೀತಿ ಹಲ್ಲುಜ್ಜುವ ರೀತಿ ಮಾಡಿದಾಗ ಮಗುವಿನ ನಾಲಗೆ ಸಡಿಲವಾದ ಸ್ವರಗಳಿಗೆ ಹೊಂದಿಕೊಂಡು ಸ್ವರದ ಏರಿಳಿತ ಸಾಧ್ಯವಾಗುತ್ತದೆ.

ಮಗುವಿನ ಕೆನ್ನೆಯನ್ನು ನಮ್ಮ ಎರಡು ಕೈಗಳಿಂದ ಮಸಾಜ್ ಮಾಡುವ ರೀತಿ ನಿಧಾನವಾಗಿ ಸವರಿದಾಗ ಕೆನ್ನೆಯ ಮತ್ತು ಬಾಯಿಯ ನರತಂತುಗಳು ಸ್ಪರ್ಶಕ್ಕೆ ಚೇತನಗೊಳ್ಳುತ್ತದೆ. ಪದಗಳ ಉಚ್ಚಾರ ಸುಲಭ ಮಾರ್ಗವಾಗಿ ಮಗು ತನ್ನ ಭಯಬಿಟ್ಟು ಮಾತಾಡಲು ಆರಂಭ ಮಾಡಿ ತೊದಲನುಡಿಯಾದರೂ ನಿಧಾನವಾಗಿ ಸ್ಪಷ್ಟವಾಗಿ ನುಡಿಯತ್ತ ಸಾಗುತ್ತದೆ. ಇದಕ್ಕೆ ಅಪಾರ ತಾಳ್ಮೆ ಅಗತ್ಯ. ಮೊದಲನೇ ದಿನವೇ ಮಗು ಹಾಡು ಹೇಳಬೇಕಿಲ್ಲ; ಮೊದಲು ಮಾತಾಡಲು ಕಲಿಯಲಿ ಬಿಡಿ. ನಂತರ ಅಪ್ಪಾ, ಅಮ್ಮ ಅಣ್ಣ, ತಂಗಿ, ಗಿಡ, ಮರ.. ಹೀಗೆ ಒಂದೊಂದೇ ಪದಗಳ ಅರ್ಥ, ಉಚ್ಚಾರಣೆ, ವ್ಯತ್ಯಾಸದ ಅರಿವು ಮಗುವಿಗೆ ಆದಾಗ ತನ್ನ ಪದದ ಪ್ರಪಂಚದಲ್ಲಿ ಲೀನವಾಗಿ ಸಂತಸಪಡುತ್ತದೆ.

ಮಗು ಸರಿಯಾಗಿ ಮಾತಾಡದಿದ್ದರೇ ಬೈಯುವುದು, ಹೊಡೆಯುವುದು ಬೇಡ. ಅದು ಅಸ್ಪಷ್ಟವಾದ ಉಚ್ಚಾರಣೆ ಇದ್ದರೂ ಪ್ರತಿ ಬಾರಿ ಮಾತನಾಡಿದಾಗ ಮಗುವಿಗೆ ನಗುನಗುತ್ತಾ ಶಹಭಾಷ್ ಎಂದೋ ವೆರಿಗುಡ್ ಎಂದೋ ಹೇಳಿ ಬೆನ್ನುತಟ್ಟಿ. ಆಗ ಮಗುವಿಗೆ ತನ್ನ ಮಾತು ಸರಿಯಾಗಿದೆ, ತಾನು ಎಲ್ಲರಂತಿರುವೆ ಎಂಬ ಭಾವನೆ ಬಂದು ಸ್ವಪ್ರಯತ್ನದಿಂದ ಮುಂದುವರೆಸುತ್ತದೆ.

ಈ ಮಕ್ಕಳಿಗೆ ಕಲಿಸುವ ಕೆಲವು ವಿಧಾನಗಳು

* ಚಿತ್ರಗಳನ್ನು ತೋರಿಸಿ ಕಲಿಸುವುದು

* ಮರಗಿಡಗಳ ಎಲೆ ತಂದು ಎಲೆ, ಚಿಗುರು ಎಂದು ಅದರ ಕೈಯಲ್ಲಿ ಮುಟ್ಟಿಸುವುದು

* ಟಿವಿ, ರೇಡಿಯೊಗಳ ವ್ಯತ್ಯಾಸ ತಿಳಿಸುವುದು. ರೇಡಿಯೊದಿಂದ ಬರುವ ಹಾಡು, ವಾರ್ತೆಗಳನ್ನು ಕಿವಿಯಿಂದ ಆಲಿಸುವ ಕ್ರಮ ವಿವರಿಸುವುದು. ಟಿವಿಯಲ್ಲಿ ಬರುವ ದೃಶ್ಯ ತೋರಿಸಿ ವಿವರಿಸಿದಾಗ ಬರುವ ನಟರು, ರಾಜಕೀಯ ವ್ಯಕ್ತಿಗಳ ಪರಿಚಯ ಮಾಡಿಕೊಡುವುದು. ಗುರುತು ಹಿಡಿದ ನಂತರ ಮಗುವೇ ಸ್ವತಃ ಕಂಡು ತೊದಲು ನುಡಿಯಿಂದ ವ್ಯಕ್ತಿಯ ಹೆಸರನ್ನು ನುಡಿದಾಗ ಚಪ್ಪಾಳೆ ತಟ್ಟಿ ಈ ಸಂತಸವನ್ನು ಸಂಭ್ರಮಿಸುವಂತೆ ಮಾಡುವುದು.

* ಮನೆಗೆ ಬರುವ, ಹೋಗುವ ನೆಂಟರಿಷ್ಟರ ಹೆಸರನ್ನು ಪಟ್ಟಿ ಮಾಡಿ. ಅವರ ಹೆಸರು ಹೇಳಿ, ಅವರ ಪೋಟೊ ತೋರಿಸಿ ಗುರುತು ಹಿಡಿಯಲು ಕಲಿಸಿ. ಆ ವ್ಯಕ್ತಿ ಎದುರು ಬಂದಾಗ ಮಗು ತಾನೇ ಅವರ ಹೆಸರು ಹೇಳಿದಾಗ ಮಗುವಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿ. ಬಂದ ನೆಂಟರಿಗೂ ಹೆಮ್ಮೆಯಿಂದ ಮಗುವಿನ ಮಾತಿನ ಬಗ್ಗೆ ತಿಳಿಸಿ. ಅವರೂ ಈ ಉತ್ಸಾಹದಲ್ಲಿ ಭಾಗಿಯಾಗುವಂತೆ ಕೋರಿ.

* ಬಿಡುವಿನ ವೇಳೆಯಲ್ಲಿ ತಂದೆ ಆಥವಾ ತಾಯಿ ಮಗುವಿನ ಹತ್ತಿರ ಮಾತನಾಡಬೇಕು ಮತ್ತು ಅದರ ಬಾಯಿ ಸ್ವಲ್ಪ ಅಗಲಿಸಿ, ಮಾತಾಡಲು ಕಷ್ಟಪಟ್ಟಾಗ ಸ್ವಲ್ಪ ನಿಲ್ಲಿಸಿ. ನಂತರ ಮತ್ತೆ ಮಾತನಾಡಲು ಹೇಳಿದಾಗ ಮಗು ತನ್ನ ಮಾತು ಆಡಲು ಆರಂಭಿಸುತ್ತದೆ. ಇದಕ್ಕೆ ನಮ್ಮ ತಾಳ್ಮೆ ಅಗತ್ಯ.

* ಆಗಾಗ ವೈದ್ಯರನ್ನು ಕಂಡು ಮಗುವಿನ ಮಾತಿನ ಬಗ್ಗೆ ಸಲಹೆ ಪಡೆದರೆ ಉತ್ತಮವಾಗಿ ಮಗು ಮಾತನಾಡುತ್ತದೆ.

* ಸ್ಪೀಚ್ ಥೆರೆಪಿ ಇರುವ ಬುದ್ಧಿಮಾಂದ್ಯ ಶಾಲೆಗೆ ಮೊದಲು ಸೇರಿಸಿದರೆ ಅಲ್ಲಿ ಇರುವ ಪರಿಣಿತ ಉಪಾಧ್ಯಾಯರು ಮಗುವಿನ ಮಾತನ್ನು ಉತ್ತಮಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು