ಭಾನುವಾರ, ಆಗಸ್ಟ್ 14, 2022
19 °C

ಮನೆಯಲ್ಲೇ ಇದೆ ಲೆಕ್ಕದ ನಂಟು

ಮಂಜುಳಾ ರಾಜ್‌ Updated:

ಅಕ್ಷರ ಗಾತ್ರ : | |

Prajavani

ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷವಾದ ತಕ್ಷಣ ತಾಯಂದಿರು ಯಾವುದಾದರೂ ನರ್ಸರಿ, ಪ್ರೀ ಸ್ಕೂಲನ್ನು ಹುಡುಕುತ್ತಿರುತ್ತಾರೆ. ಅದಕ್ಕೆ ಸರಿಯಾಗಿ ರಸ್ತೆಗೊಂದು ಕ್ರಷ್, ನರ್ಸರಿಗಳು ಪ್ರಾರಂಭವಾಗಿವೆ. ಹೀಗಾಗಿ ಅಮ್ಮಂದಿರಿಗೆ ಮಗುವನ್ನು ಅಲ್ಲಿಗೆ ಬಿಟ್ಟು ಬಂದರೆ ನಿರಾಳ. ಅಲ್ಲದೆ ಮಕ್ಕಳು ಅಲ್ಲಿಗೆ ಹೋದರೆ ಸ್ವಲ್ಪ ಶಿಸ್ತು ಕಲಿಯುತ್ತಾರೆ, ಆಟದ ಜೊತೆಗೆ ಪಾಠವನ್ನೂ ಕಲಿಯುತ್ತಾರೆ. ಆದರೆ ಕೊರೊನಾದ ದೆಸೆಯಿಂದ ಈಗ ಮಕ್ಕಳನ್ನು ಎಲ್ಲಿಗೂ ಕಳುಹಿಸುವಂತಿಲ್ಲ. ಆಟ– ಪಾಠ ಎಲ್ಲವೂ ಮನೆಯಲ್ಲೇ ಆಗಬೇಕು.

ಮಕ್ಕಳಿಗೆ ಗಣಿತ ಬಹಳ ಮುಖ್ಯ. ಜ್ಞಾಪಕ ಶಕ್ತಿ, ಮನಸ್ಸನ್ನು ಒಂದೆಡೆ ಕೆಂದ್ರೀಕರಿಸುವುದು, ಸರಿ– ತಪ್ಪುಗಳ ಅರಿವು.... ಈ ಎಲ್ಲದಕ್ಕೂ ಗಣಿತ ಸಹಾಯ ಮಾಡುವುದಲ್ಲದೆ, ಅವರ ಭವಿಷ್ಯವನ್ನು ನಿರ್ಧರಿಸಲು ಸಹಕಾರಿ ಎನ್ನುತ್ತವೆ ಕೆಲವು ಅಧ್ಯಯನಗಳು. ಮೂರು ವರ್ಷಗಳಲ್ಲಿ ಕಲಿತ ವಿದ್ಯೆ ನೂರು ವರ್ಷಗಳ ತನಕ ನೆನಪಿನಲ್ಲಿರುತ್ತದೆ ಎನ್ನುತ್ತಾರೆ ಹಿರಿಯರು. ಆದ್ದರಿಂದ ಅವರಿಗೆ ಮನೆಯಲ್ಲಿಯೇ ಕೆಲವು ಚಟುವಟಿಕೆಗಳ ಮೂಲಕ ಗಣಿತ ಕಲಿಸಬಹುದು..

ಮಮತಾಳಿಗೆ ಒಬ್ಬಳೇ ಮಗಳು, ಅವಳಿಗೆ ಎರಡೂವರೆ ವರ್ಷ. ಮಗುವಿಗೆ ಒಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೆಲವು ನಿಂಬೆ ಹಣ್ಣುಗಳನ್ನು ಹಾಕಿ ಪಕ್ಕದಲ್ಲಿ ಮತ್ತೊಂದು ಬುಟ್ಟಿಯನ್ನು ಇಟ್ಟು ಅದಕ್ಕೆ ಹಾಕಲು ಹೇಳುತ್ತಿದ್ದಳು. ಅದರ ಜೊತೆಗೆ ಒಂದೊಂದನ್ನೂ ಹಾಕುವಾಗ ಒಂದು, ಎರಡು ಎಂದು ಎಣಿಸಿ ಹಾಕಲು ಹೇಳುತ್ತಿದ್ದಳು. ಆ ಮಗು ಹಾಗೆಯೇ ಮಾಡುತ್ತಿತ್ತು. ಅದಕ್ಕೆ ಹಣ್ಣುಗಳನ್ನು ಒಂದರಿಂದ ಮತ್ತೊಂದು ಬುಟ್ಟಿಗೆ ಹಾಕುವುದು ಒಂದು ಆಟ, ಜೊತೆಗೆ ಎಣಿಸುವುದನ್ನೂ ಕಲಿಯುತ್ತಿತ್ತು. ಎಷ್ಟು ಚಂದ ಅಲ್ಲವೇ? ಇದೇ ರೀತಿ ತಾಯಂದಿರು ಮಕ್ಕಳಿಗೆ ಮನೆಯಲ್ಲಿಯೇ ಸಾಕಷ್ಟು ಚಟುವಟಿಕೆಗಳನ್ನು ಮಾಡಿಸಬಹುದು. ಮೊದಲು ಅವರು ಹತ್ತರ ಒಳಗಿನ ಸಂಖ್ಯೆಗಳನ್ನು ಎಣಿಸಲು ಕಲಿಯಲಿ.

* ನಿಮ್ಮ ಮಗುವಿಗೆ 5 ಬಾರಿ ಜಿಗಿಯಲು ಹೇಳಿ

* ಗೋಡೆಯನ್ನು ಎಂಟು ಬಾರಿ ಮುಟ್ಟಲು ಹೇಳಿ.

* ಮೂರು ಎಲೆಗಳನ್ನು ತರಲು ಹೇಳಿ.

* ಐದು ಚಮಚಗಳನ್ನು ಊಟದ ಮೇಜಿನ ಮೇಲೆ ಇಡಲು ಹೇಳಿ.

* ನಿಮ್ಮ ಮಗುವಿನ ಶರ್ಟಿನ ಗುಂಡಿಗಳನ್ನು  ಎಣಿಸಲು ಹೇಳಿ,

* ಹತ್ತುವಾಗ, ಇಳಿಯುವಾಗ ಮೆಟ್ಟಲುಗಳನ್ನು ಎಣಿಸಲು ಹೇಳಿ.

* ಒಂದೇ ಗಾತ್ರದ ಮೂರು ಪಾತ್ರೆಗಳನ್ನು ತಂದು ಅದರಲ್ಲಿ ಬೇರೆ ಬೇರೆ ತರಕಾರಿ, ಉದಾ: ಕ್ಯಾರೆಟ್, ಆಲೂಗೆಡ್ಡೆ, ಈರುಳ್ಳಿಗಳನ್ನು ಎಣಿಸಿ ಅದರೊಳಗೆ ತುಂಬಲು ಹೇಳಿ. ಐದು ಪದಾರ್ಥಗಳನ್ನು  ಹಾಕಿ ನಿಲ್ಲಿಸಲು ಹೇಳಿ, ಮತ್ತೆ ಪಾತ್ರೆಯಲ್ಲಿರುವುದನ್ನು ಎಣಿಸಲು ಹೇಳಿ.

* ಭಾನುವಾರದಿಂದ ಶನಿವಾರದವರೆಗೆ ದಿನಗಳನ್ನು ಕೈ ಬೆರಳುಗಳಲ್ಲಿ ಎಣಿಸಲು ಹೇಳಿ ರೇಖಾ ಗಣಿತ ಕಲಿಸಲು..

* ನಿಮ್ಮ ಮಕ್ಕಳಿಗೆ ರೇಖಾ ಗಣಿತ ಅರ್ಥಾತ್ ಜಾಮಿಟ್ರಿ ಕಲಿಸಬೇಕೆಂದರೆ, ಆಕಾರಗಳ ಅರಿವು ಅವರಿಗೆ ಆಗಬೇಕೆಂದರೆ ಮನೆಯಲ್ಲಿರುವ ವಸ್ತುಗಳ ಆಕಾರ ತಿಳಿಸಿ. ತಟ್ಟೆ, ಗೋಡೆಯ ಮೇಲಿರುವ ದುಂಡನೆಯ ಗಡಿಯಾರ, ಗೋಡೆಯ ಮೇಲೆ ನೇತು ಹಾಕಿದ ಚೌಕಾಕಾರದ ಚಿತ್ರ, ಸೋಫಾದ ಮೇಲಿರುವ ತ್ರಿಕೋನಾಕಾರದ ದಿಂಬು ಈ ರೀತಿ ಮನೆಯಲ್ಲಿರುವ ವಸ್ತುಗಳ ಆಕಾರ ಅವರಿಗೆ ಅರ್ಥವಾಗುತ್ತದೆ.

* ಮಕ್ಕಳಿಗೆ ಚಿತ್ರ ತೋರಿಸಿ ಕಥೆ ಹೇಳುವಾಗ ಮೇಲೆ, ಕೆಳಗೆ, ಚಿಕ್ಕ , ದೊಡ್ಡ ಎನ್ನುವುದನ್ನು ಅರ್ಥ ಮಾಡಿಸಬಹುದು. ಉದಾ ಚಂದಿರ ಎಲ್ಲಿದ್ದಾನೆ, ಮರದ ಮೇಲೋ ಅಥವಾ ಮರದ ಕೆಳಗೋ? ಆನೆ ದೊಡ್ಡದೋ? ಮೊಲ ದೊಡ್ಡದೋ? ನಿಮ್ಮ ಪಾದ ಮತ್ತು ಮಗುವಿನ ಪಾದ ಪಕ್ಕಪಕ್ಕದಲ್ಲಿ ಇಟ್ಟಾಗ ಯಾವುದು ದೊಡ್ಡದು ಅಥವಾ ಚಿಕ್ಕದು ಎಂದು ಕೇಳಿ. ಈ ರೀತಿ ಉದಾಹರಣೆ ಕೊಟ್ಟು ಹೇಳಿದಾಗ ಅವರಿಗೆ ಸುಲಭವಾಗಿ, ಮನದಟ್ಟಾಗುತ್ತದೆ.

ಎಲ್ಲ ಕಲಿತ ನಂತರ ಊಟದ ಸಮಯದಲ್ಲಿ ‘ಒಂದು ಎರಡು ಬಾಳೆಲೆ ಹರಡು’ ಪದ್ಯವನ್ನು ರಾಗವಾಗಿ ಹೇಳಿ ಕೊಡಿ. ಮಗು ಸುಲಭವಾಗಿ ಕಲಿತು ಬಿಡುತ್ತದೆ. ಊಟ ಮಾಡಲು ತಕರಾರು ಮಾಡುವುದಿಲ್ಲ. ಒಟ್ಟಾರೆ ಕೊರೊನಾದಿಂದ ಮಗುವಿನ ಜೊತೆ ಹೆಚ್ಚು ಹೊತ್ತು ಕಳೆಯಲು ಅವಕಾಶ, ಅವರಿಗೆ ಕಲಿಸುವ ಆನಂದ ನಿಮ್ಮದಾಗುತ್ತದೆ. ಪ್ರಯತ್ನಿಸಿ ನೋಡಿ.

* ನಿಮ್ಮ ಮಗುವಿಗೆ ಕೆಲವು ನಾಣ್ಯಗಳನ್ನು ಕೊಟ್ಟು ಎಣಿಸಲು ಹೇಳಿ . ಮಗು ಸರಿಯಾಗಿ ಎಣಿಸಿದ ನಂತರ ಅದನ್ನು ಒಂದು ವೃತ್ತಾಕಾರದಲ್ಲಿ ಅಥವಾ ಸಾಲಾಗಿ ಜೋಡಿಸಿ. ಮತ್ತೆ ಎಣಿಸಲು ಹೇಳಿ. ಮಗು ಎಣಿಸದೆಯೇ ಎಷ್ಟು ಇದೆಯೆಂದು ಹೇಳಿದರೆ ಆಗ ಯಾವ ಆಕಾರದಲ್ಲಿ ಇಟ್ಟರೂ ಮಗು ತಿಳಿದುಕೊಳ್ಳಬಲ್ಲದೆಂದು ಅರ್ಥ ಮಾಡಿಕೊಳ್ಳಿ.

* ಈಗ ಒಂದಕ್ಕೊಂದು ಜೋಡಿಯಾಗುವ ಪದಾರ್ಥಗಳನ್ನು ತೆಗೆದುಕೊಳ್ಳಿ. ಉದಾ ಚಮಚ ಮತ್ತು ಫೋರ್ಕ್, ಕಪ್‌ ಮತ್ತು ಸಾಸರ್, ತಟ್ಟೆ, ಲೋಟ. ಅದನ್ನು ಎಣಿಸಿ, ಜೋಡಿಸಲು ಹೇಳಿ. ಆಗ ಪ್ರತಿಯೊಂದು ಜೋಡಿಯಲ್ಲೂ ಸಮನಾದ ಅಂಕಿಗಳಿವೆ ಎಂದು ಅವರಿಗೆ ಅರ್ಥವಾಗುತ್ತದೆ.

* ಅವರ ಜೊತೆ ಸರಳವಾದ ಕೆಲವು ಆಟಗಳನ್ನು ಆಡಿ, ಹಾವು– ಏಣಿ, ಚೌಕಾಭಾರ , ಗಚ್ಚಿ, ಅಳಗುಳಿ ಮಣೆ.. ಆಗ ಅವರಿಗೆ ಎಣಿಸುವುದರ ಜೊತೆ ಕೈಗಳ ಚಲನೆಯೂ ಚುರುಕುಗೊಳ್ಳುತ್ತದೆ.

(ಲೇಖಕಿ: ಬೆಂಗಳೂರಿನಲ್ಲಿ ಶೈಕ್ಷಣಿಕ
ಆಪ್ತಸಮಾಲೋಚಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು