ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಬೆಳವಣಿಗೆಗೆ ಕಾವ್ಯ ಕಲಿಕೆ

Last Updated 8 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಪ್ರಸ್ತುತ ನಮ್ಮ ಶಾಲೆಗಳಲ್ಲಿ ಭಾಷಾ ಕಲಿಕೆಯನ್ನು ಗದ್ಯ ಮತ್ತು ಪದ್ಯಗಳನ್ನು ಬಳಸುತ್ತಾ ವ್ಯಾಕರಣದ ಜೊತೆ ಜೊತೆಯಾಗಿ ಕಲಿಸಲಾಗುತ್ತಿದೆ. ಮುಖ್ಯವಾಗಿ ಮಕ್ಕಳ ಕಲಿಕೆಯಲ್ಲಿ ಪದ್ಯ ಅತ್ಯಂತ ಮಹತ್ವದ್ದು. ಪದ್ಯವನ್ನು ಓದಿ ಅಥವಾ ಹಾಡಿ ಅದರ ಅರ್ಥ ಹೇಳಿದರೆ ಸಾಕಾಗದು. ಏಕೆಂದರೆ ಪದ್ಯದ ಕಲಿಕೆ ಅಥವಾ ಬೋಧನಾ ಪ್ರಕ್ರಿಯೆ ಮಕ್ಕಳ ಭಾಷಾ ಬೆಳವಣಿಗೆಯಲ್ಲಿ ಮೈಲಿಗಲ್ಲು ಎನ್ನಬಹುದು.

ಕಾವ್ಯ ಎಂದರೆ..

ಕವಿಯಾದವನು ತನ್ನ ಕಾಲಕ್ಕೆ ಅಥವಾ ಸಮಾಜಕ್ಕೆ ಸ್ಪಂದಿಸಿ ಕಾವ್ಯವನ್ನು ರಚಿಸಿರುತ್ತಾನೆ. ಕವಿತೆಯನ್ನು ಓದುವವರು ತಮ್ಮದೇ ಆದ ನೆಲೆಗಟ್ಟಿನಲ್ಲಿ ನಿಂತು ಅರ್ಥ ಮಾಡಿಕೊಳ್ಳುತ್ತಾರೆ. ಎರಡು ಮೂರು ಬಾರಿ ಒಂದು ಕವಿತೆಯನ್ನು ಓದಿದಾಗ ಬೇರೆ ಬೇರೆಯಾದ ಅಂದರೆ ವಿಭಿನ್ನ ರೀತಿಯ ಅರ್ಥವನ್ನು ನಾವು ಕಟ್ಟಿಕೊಳ್ಳಬಹುದಾಗಿದೆ.

ಪಠ್ಯ ಪುಸ್ತಕದಲ್ಲಿ ಪದ್ಯ ಯಾಕೆ?

ಶಿಕ್ಷಣದಲ್ಲಿ ಪದ್ಯ ಸಾಹಿತ್ಯ ಎಂದಾಕ್ಷಣ ಅದು ಕೇವಲ ತರಗತಿಯ ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂವಹನ ಮಾತ್ರವಲ್ಲ, ಹಾಗೆಯೇ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ಪ್ರಕ್ರಿಯೆ ಕೇವಲ ಮಕ್ಕಳ ಭಾಷಾ ಕಲಿಕೆಗೆ ಮಾತ್ರ ಸೀಮಿತವಾಗಿಲ್ಲ. ಅದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಲಿಂಗಸೂಕ್ಷ್ಮತೆ, ಜಾತ್ಯಾತೀತತೆ, ಸಮಾನತೆ, ಸಮಾನ ಅವಕಾಶ, ಪರಸ್ಪರರಲ್ಲಿ ಗೌರವ ಇತ್ಯಾದಿ ಅಂಶಗಳನ್ನು ಆಧರಿಸಿ ಪಠ್ಯ ರಚನೆಗೆ ಕೆಲವು ಪ್ರಮುಖವಾದ ಅಂಶಗಳನ್ನು ಒಳಗೊಂಡಿರುತ್ತದೆ. ಈ ಎಲ್ಲ ಅಂಶಗಳನ್ನು ಆಧರಿಸಿ ಕಲಿಕೆಯಾದರೆ ಮಾತ್ರ ಭವಿಷ್ಯದಲ್ಲಿ ಔಪಚಾರಿಕ ಶಿಕ್ಷಣವು ಮಗುವಿನ ಭಾಷಾ ಕಲಿಕೆಗೆ ಭದ್ರ ಬುನಾದಿ ಹಾಕುತ್ತದೆ.

ಪದ್ಯಗಳು ಮಕ್ಕಳಲ್ಲಿ ಭಾಷೆಯ ಎಲ್ಲಾ ಕೌಶಲಗಳನ್ನು ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತವೆ.

ಉನ್ನತ ಮಟ್ಟದ ಆಲೋಚನೆಯನ್ನು ಹೆಚ್ಚಿಸುತ್ತವೆ.

ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತವೆ.

ಸೃಜನಶೀಲತೆ, ಸೌಂದರ್ಯ ಪ್ರಜ್ಞೆ, ಪ್ರಶಂಸಾ ಮನೋಭಾವ, ಮೌಲ್ಯಗಳ ವರ್ಧನೆಗೆ ಪ್ರೇರಣೆ ನೀಡುತ್ತವೆ.

ಆಲೋಚನೆ, ವಿಶ್ಲೇಷಣೆ, ಸಂಶ್ಲೇಷಣೆ, ತಾರ್ಕಿಕತೆ, ಕಲ್ಪನೆ, ಸೃಜನಶೀಲತೆ, ನಿರ್ಧಾರ ತೆಗೆದುಕೊಳ್ಳುವ ಅಂಶಗಳನ್ನು ಬೆಳೆಸುತ್ತವೆ.

ಮಕ್ಕಳಲ್ಲಿ ಗ್ರಹಣ ಸಾಮರ್ಥ್ಯ, ಆಸಕ್ತಿ, ಏಕಾಗ್ರತೆ, ಸ್ಪಷ್ಟ ಉಚ್ಛಾರ, ಸೂಕ್ತ ಸ್ವರಭಾರ, ಧ್ವನಿಯ ಹಿತಮಿತ ಬಳಕೆಯನ್ನು ಕಲಿಸುತ್ತವೆ.

ಕಾವ್ಯದಲ್ಲಿನ ಲಯಬದ್ಧ ರಚನೆಯಿಂದಾಗಿ ಹೊಸ ಪದಗಳನ್ನು ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.

ಕಲಿಕೆಯ ಮೊದಲ ಹಂತದಲ್ಲಿ..

ಮಕ್ಕಳ ಶಾಲಾ ಪೂರ್ವ ಅಥವಾ ಆರಂಭದ ತರಗತಿಗಳಲ್ಲಿ ಕಲಿಕೆಯು ಚಿಕ್ಕ ಪ್ರಾಸ ಪದ್ಯಗಳಿಂದಲೇ ಆರಂಭವಾಗುತ್ತದೆ. ಅದರ ಮೂಲಕ ಮಗು ಅನೇಕ ಹೊಸ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥ ಮಾಡಿಕೊಳ್ಳುತ್ತದೆ. ಪ್ರಾಣಿ, ಪಕ್ಷಿ, ಮರ, ಹೂ, ತರಕಾರಿ, ಬಣ್ಣ.. ಇತ್ಯಾದಿಗಳ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿಸುವಲ್ಲಿ ಪದ್ಯಗಳ ಪಾತ್ರ ಗಮನಾರ್ಹ.

ಈ ಪದ್ಯಗಳು ಮಕ್ಕಳಿಗೆ ಖುಷಿ ಕೊಡುವುದರ ಜೊತೆಗೆ, ನೆನಪಿಟ್ಟುಕೊಂಡು ಸದಾ ಗುನುಗುವಂತೆ ಮಾಡುತ್ತವೆ. ಈ ಪದ್ಯಗಳಲ್ಲಿನ ಸಣ್ಣ, ಉದ್ದ ಮತ್ತು ಲಯಬದ್ಧ ಸಾಲುಗಳು ಹೆಚ್ಚು ಗಮನ ಸೆಳೆಯುತ್ತವೆ. ಮಕ್ಕಳಿಗೆ ಶಬ್ದಗಳ ಉಚ್ಛಾರಣೆ ಕಲಿಯಲು, ಪ್ರಾಸಬದ್ಧ ಪದಗಳೊಂದಿಗೆ ಮೋಜು ಮಾಡಲು, ಹೊಸ ವಿಷಯಗಳನ್ನು ತಮಾಷೆಯ ರೀತಿಯಲ್ಲಿ ಕಲಿಯುವಂತೆ ಮಾಡುತ್ತವೆ.

ಆ ಪದ್ಯಗಳಿಗೆ ಪೂರಕವಾಗಿ ಚಪ್ಪಾಳೆ ತಟ್ಟುವುದು, ಚಿಟಿಕೆ ಹೊಡೆಯುವುದು, ಕೈ-ಕಾಲುಗಳನ್ನು ತಿರುಗಿಸುವುದು, ಕುಣಿಸುವುದು, ಹಾರುವುದು ಮುಂತಾದ ದೈಹಿಕ ಚಲನೆಗಳು ಮಕ್ಕಳಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಸಹ ಮಾಡುತ್ತವೆ.

ಕವನಕ್ಕಿಂತ ಮೊದಲು ಕವಿ

ಬಹಳಷ್ಟು ಕವಿಗಳು ಅವರ ಮನಃಸ್ಥಿತಿ, ಜೀವನ ಘಟನೆಗಳು, ಕುಟುಂಬ, ಸಂಬಂಧಗಳು ಮತ್ತು ಪ್ರಕೃತಿಯ ಬಗ್ಗೆ ಕವನಗಳನ್ನು ಬರೆಯುತ್ತಾರೆ. ಮೊದಲಿಗೆ ಕವಿಯ ಬಗ್ಗೆ ನಾವು ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಸಂಗ್ರಹಿಸಬೇಕು. ಅವರು ಜೀವಿಸಿದ ಕಾಲಘಟ್ಟ ಮತ್ತು ಸ್ಥಳ ಯಾವುದು, ಕವಿತೆಯನ್ನು ಬರೆದ ಸಂದರ್ಭ ಯಾವುದು ಎಂದು ಅರ್ಥಮಾಡಿಕೊಳ್ಳುವುದು ಅಗತ್ಯ. ಕವಿಯ ಕುರಿತಾದ ನುಡಿಚಿತ್ರ, ಸಂದರ್ಶನ ಇತ್ಯಾದಿಗಳನ್ನು ಪ್ರದರ್ಶನ ಮಾಡಿದರೆ ಇನ್ನೂ ಉತ್ತಮ. ಯಾಕೆಂದರೆ ಕವಿಯ ಕುರಿತಾದ ಹಿನ್ನೆಲೆಯು ಕವಿತೆಯ ಅರ್ಥಮಾಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.

ಒಂದಕ್ಕಿಂತ ಹೆಚ್ಚು ಬಾರಿ ಗಟ್ಟಿಯಾಗಿ ಓದಿ

ಕವಿತೆಯನ್ನು ಕನಿಷ್ಠ ಎರಡು ಬಾರಿಯಾದರೂ ಉತ್ಸಾಹದಿಂದ ಗಟ್ಟಿಯಾಗಿ ಓದಬೇಕು. ಮೊದಲ ಓದು ಕವನದ ವಿಷಯವನ್ನು ತಿಳಿಸಲು ನೆರವಾಗಬಹುದು. ಆದರೆ ಕವನದ ಎಲ್ಲಾ ಅಂಶಗಳನ್ನು ಗಮನಿಸುವುದು ಕಷ್ಟವಾಗುತ್ತದೆ. ಎರಡನೆಯ ಬಾರಿ ಕವಿತೆಯನ್ನು ಓದುವುದರಿಂದ ಮೊದಲು ಅರ್ಥವಾಗದ ಅಂಶಗಳನ್ನು ಕಂಡುಕೊಳ್ಳಬಹುದು. ಕವಿತೆಯನ್ನು ಪುನಃ ಓದಿದಾಗ, ಪ್ರಾಸಗಳು ಮತ್ತು ಪದಗಳ ಒಳಾರ್ಥಗಳು ಮನಕ್ಕೆ ತಟ್ಟುತ್ತವೆ. ಆಗ ಪದ್ಯದಲ್ಲಿನ ವಿಶೇಷ ಪದಗಳು ಎದ್ದು ಕಾಣುತ್ತವೆ. ಪದ್ಯದಲ್ಲಿ ಆ ಅರ್ಥಕ್ಕೆ ಕವಿ ಯಾಕೆ ಆ ಪದಗಳನ್ನೇ ಆರಿಸಿದ್ದಾನೆ ಎಂಬುದು ಅರಿವಿಗೆ ಬರಬಹುದು. ಪ್ರತೀ ಕವಿತೆಯಲ್ಲಿಯೂ ಆಂತರಿಕ ಮತ್ತು ಭೌತಿಕ ಎಂದು ಎರಡು ಅಂಶಗಳಿವೆ. ಆಂತರಿಕದಲ್ಲಿ ಕವಿತೆಗೆ ಕವಿ ಆಯ್ಕೆ ಮಾಡಿಕೊಂಡ ವಸ್ತು ವಿಷಯ ಗಮನಿಸುತ್ತೇವೆ. ಭೌತಿಕದಲ್ಲಿ ಪದ್ಯದ ಲಯ, ಪ್ರಾಸ, ಅಲಂಕಾರ, ಸಂಕೇತ, ಪ್ರತಿಮೆ, ಛಂದಸ್ಸು ಸೇರಿದಂತೆ ವ್ಯಾಕರಣ ಗಮನಿಸುತ್ತೇವೆ. ಹಾಗಾಗಿ ಪದ್ಯವನ್ನು ಹೆಚ್ಚೆಚ್ಚು ಓದಿದಷ್ಟು ಅದು ನಮಗೆ ಹೆಚ್ಚೆಚ್ಚು ಹತ್ತಿರವಾಗುತ್ತದೆ.

ಎಲ್ಲಾ ಕವನಗಳನ್ನು ಒಂದೇ ರೀತಿಯಲ್ಲಿ ಓದಲು-ಹಾಡಲು ಬರುವುದಿಲ್ಲ. ಪದ್ಯಗಳಲ್ಲಿ ತ್ರಿಪದಿ, ಚಂಪು, ಕಂದ, ರಗಳೆ, ಷಟ್ಪದಿ, ವಚನ, ಕೀರ್ತನೆ ಇತ್ಯಾದಿ ಬಗೆಗಳನ್ನು ಕಾಣುತ್ತೇವೆ. ಈ ಬಗೆಗಳಲ್ಲೂ ಕವಿಗಳು ಬರೆದಿರುವ ಧ್ವನಿ ಬೇರೆ ಬೇರೆಯಾಗಿರುತ್ತದೆ. ಅದನ್ನು ಸರಿಯಾಗಿ ತಿಳಿದುಕೊಂಡು ಲೇಖಕರ ಧ್ವನಿಗೆ ನಾವು ಜೊತೆಗೂಡಬೇಕು. ಅದು ಕಷ್ಟ ಸಾಧ್ಯವಾದಲ್ಲಿ ಪದ್ಯದ ಓದು ಪ್ರದರ್ಶಿಸುವ ವೀಡಿಯೊವನ್ನು ಅಥವಾ ಆಡಿಯೊ ರೆಕಾರ್ಡ್‌ ಅನ್ನು ಅನುಸರಿಸಿ ಓದಿದಲ್ಲಿ ಆ ಪದ್ಯ ಹೃದಯವನ್ನು ಗೆಲ್ಲುತ್ತದೆ.

ಒಳಾರ್ಥದ ಸೊಗಡು ಅರಿಯಿರಿ

ಕವಿತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಶಿಕ್ಷಕರು ಹೆಚ್ಚು ವಿಶ್ಲೇಷಣೆ ಮಾಡಬೇಕಾಗುತ್ತದೆ. ಕವಿ ಬಳಸಿರುವ ಸಾಂಕೇತಿಕ ಭಾಷೆಯನ್ನು ಮಕ್ಕಳಿಗೆ ಮನದಟ್ಟು ಮಾಡಬೇಕಾಗುತ್ತದೆ. ಕವನಗಳಲ್ಲಿ ರೂಪಕ, ಅಲಂಕಾರ, ನುಡಿಗಟ್ಟು, ಪ್ರತಿಮೆ, ಪ್ರತೀಕ, ರಸ, ನಾನಾರ್ಥ ಸೇರಿದಂತೆ ಸಾಂಕೇತಿಕ ಭಾಷೆ ಬಳಕೆಯಾಗಿರುತ್ತದೆ. ಪದ್ಯದಲ್ಲಿನ ಪದಗಳ ಬಳಕೆ, ಲಯ, ಉಚ್ಛಾರದ ಮಾದರಿಗಳು ಮಕ್ಕಳ ಮನಸ್ಸಿನಲ್ಲಿ ಚಿತ್ರಗಳನ್ನು ರಚಿಸಲು ಸಾಕಷ್ಟು ನೆರವಾಗುತ್ತವೆ. ಈ ಸಾಂಕೇತಿಕ ಭಾಷೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ಕಲಿಸಿದಾಗ ಮಾತ್ರ ಅವರಿಗೆ ಕಾವ್ಯದ ಸೊಗಡು ಪರಿಚಯವಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆಗೆ ಪ್ರೇರಣೆ ನೀಡಿದಂತಾಗುತ್ತದೆ.

ಮಕ್ಕಳೇ ಕವನ ರಚಿಸಲಿ

ವಿದ್ಯಾರ್ಥಿಗಳಿಗೆ ಪತ್ರಿಕೆಗಳಲ್ಲಿ ಬರುವ ಪದ್ಯಗಳನ್ನು ಗಮನಿಸಲು ಸೂಚಿಸಬೇಕು. ಜೊತೆಗೆ ಪದ್ಯ ರಚನೆಗೆ ಅಗತ್ಯವಾದ ನೆರವು ಮತ್ತು ಪ್ರೇರಣೆ ನೀಡಬೇಕಾಗುತ್ತದೆ. ಆರಂಭದಲ್ಲಿ ಅವರಿಗೆ ಪ್ರಾಸ ಅಥವಾ ಇನ್ನಾವುದೇ ನಿಯಮದ ಒತ್ತಡ ಹಾಕದೇ, ಆಸಕ್ತಿಯಿರುವ ವಿಷಯದ ಕುರಿತು ತಮ್ಮದೇ ಆದ ಕವಿತೆಗಳನ್ನು ಬರೆದು ಅದರ ಸಂತಸವನ್ನು ಅವರು ಅನುಭವಿಸುವಂತೆ ಮಾಡಿದರೆ ಸಾಕು. ನಂತರ ಅವರು ತಮ್ಮ ಅಂತರಂಗದ ಕನಸು, ಕನವರಿಕೆ, ಭಾವನೆ ಇನ್ನಿತರ ಜೀವನಾನುಭವಗಳನ್ನು ಬರೆಯಲು ಪ್ರಾರಂಭಿಸುವುದರಲ್ಲಿ ಅನುಮಾನವಿಲ್ಲ. ಆ ಕವನ ಪ್ರಕಟಣೆಯ ಜೊತೆಗೆ ವಾಚನಕ್ಕೆ ಸೂಕ್ತ ವೇದಿಕೆ ಮತ್ತು ಆತ್ಮವಿಶ್ವಾಸ ತುಂಬಿದಲ್ಲಿ ಪದ್ಯ ಬೋಧಿಸಿದ್ದು ಸಾರ್ಥಕವಾಗುತ್ತದೆ.

**

ಪದ್ಯ ಮನನವಾಗಲು ವಿಧಾನಗಳು

* ಪದ್ಯವನ್ನು ಸ್ಪಷ್ಟ ಸ್ವರಭಾರದೊಂದಿಗೆ ಗಟ್ಟಿಯಾಗಿ ಉಚ್ಛರಿಸುವುದು.

* ರಾಗಬದ್ಧವಾಗಿ ಹಾಡುವ ಸ್ಪರ್ಧೆ ಏರ್ಪಡಿಸುವುದು.

* ಪದ್ಯದ ಅಶಯವನ್ನು ಸಂಭಾಷಣಾ ರೀತಿಯಲ್ಲಿ ಹೇಳುವುದು.

* ಪದ್ಯವನ್ನು ಕಥಾ ರೂಪಕಕ್ಕೆ ಬದಲಾಯಿಸುವುದು.

* ಪದ್ಯದ ಕುರಿತು ಚರ್ಚೆಯನ್ನು ಏರ್ಪಡಿಸುವುದು.

* ಪದ್ಯದ ಅಶಯವನ್ನು ನಾಟಕವಾಗಿ ಬದಲಾಯಿಸಿ ರಂಗಭೂಮಿಗೆ ಅಳವಡಿಸುವುದು.

* ಪದ್ಯದಲ್ಲಿ ಬರುವ ಅಂಶಗಳನ್ನು ಚಿತ್ರರೂಪಕ್ಕೆ ಇಳಿಸಿ ಬಣ್ಣ ತುಂಬುವುದು.

* ಪದ್ಯವನ್ನು ನೃತ್ಯ ರೂಪಕ್ಕೆ ಅಳವಡಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT