ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಯ ಅಭಿರುಚಿಗೆ ತಕ್ಕಂತೆ ಪಾಠ

Last Updated 8 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಪಠ್ಯದಲ್ಲಿರುವ ವಿಷಯವನ್ನು ಮಕ್ಕಳಿಗೆ ಅರ್ಥ ಮಾಡಿಸುವಾಗ ಅದು ಅವರ ಜೀವನಕ್ಕೆ ಎಷ್ಟು ಹತ್ತಿರ ಎಂಬುದನ್ನು ತಿಳಿಸಿದರೆ ಮಾತ್ರ ವಿದ್ಯಾರ್ಥಿಗಳಿಗೆ ವಿಷಯದಲ್ಲಿ ಆಸಕ್ತಿ ಮೂಡುತ್ತದೆ ಮತ್ತು ಕಲಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯೂ ಹೆಚ್ಚಾಗುತ್ತದೆ.

ಆದರೆ ಇಂದು ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಮಾತ್ರ ಪಾಠ ಮಾಡುವ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಉರು ಹೊಡೆದು ಪರೀಕ್ಷೆ ಎದುರಿಸುವ ಮಕ್ಕಳು ಕಲಿತ ಪಾಠವನ್ನು ಅಲ್ಲಿಗೇ ಮರೆತುಬಿಡುತ್ತಾರೆ. ಆದರೆ ಅದು ತಮ್ಮ ಜೀವನಕ್ಕೆ ಆದರ್ಶವಾಗಬಲ್ಲದು ಎಂಬುದನ್ನು ಅರ್ಥ ಮಾಡಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಇದಕ್ಕೊಂದು ಉದಾಹರಣೆ ನೋಡೋಣ. ಗಡಿಯಾರದ ಪೆಂಡುಲಮ್‌ ಅನ್ನು ತಿಳಿಸುವಾಗ ಜೋಕಾಲಿಯ ಉದಾಹರಣೆ ನೀಡಿದರೆ ಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ. ಜೋಕಾಲಿ ಉದ್ದವಿದ್ದಷ್ಟೂ ಹೆಚ್ಚು ದೂರಕ್ಕೆ ಜೀಕುತ್ತದೆ ಮತ್ತು ಅದು ನಿಧಾನವಾಗಿ, ದೀರ್ಘವಾಗಿರುತ್ತದೆ. ಹಾಗೆಯೇ ನಡೆಯುವಾಗ ನಾವು ಕೈಗಳನ್ನು ನೇರವಾಗಿಟ್ಟುಕೊಂಡು ಬೀಸುತ್ತೇವೆ. ವೇಗವಾಗಿ ಓಡುವಾಗ ಕೈಗಳನ್ನು ಮಡಚಿ ಎದೆ ಬಳಿ ಇಟ್ಟುಕೊಂಡು ಓಡುತ್ತೇವೆ. ಹೀಗೆ ನಮ್ಮ ಬದುಕಿನ ಅನುಭವಗಳೊಂದಿಗೆ ಪಾಠವನ್ನು ಕಲಿಸಿದರೆ ಅದು ಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ.

ಯಾವ ಮಕ್ಕಳೂ ದಡ್ಡರು ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವಿಷಯದಲ್ಲಿ ಆಸಕ್ತಿ ಇದ್ದೇ ಇರುತ್ತದೆ. ಹಾಗೆಯೇ ಓದಿನ ಅಭಿರುಚಿಯೂ ಒಬ್ಬರಿಂದ ಒಬ್ಬರಿಗೆ ಭಿನ್ನ. ಹೀಗಾಗಿ ಒಂದು ವಿಷಯದಲ್ಲಿ ಅವರ ಆಸಕ್ತಿಯ ಪಾಠಗಳನ್ನು ಮೊದಲು ಓದಿ ಮುಗಿಸಲು ಹೇಳುವುದರಿಂದ, ಹೆಚ್ಚು ಆತ್ಮವಿಶ್ವಾಸದಿಂದ ಅವರು ಕಲಿಯುತ್ತಾರೆ. ಸ್ವಲ್ಪ ಕಷ್ಟವಾಗಿದ್ದನ್ನು ಸ್ನೇಹಿತರೊಂದಿಗೆ ಕೂತು ಚರ್ಚೆ ಮೂಲಕ ಅರ್ಥ ಮಾಡಿಕೊಳ್ಳಲು ಸೂಚಿಸಬೇಕು. ಇದೂ ಸಹ ವಿದ್ಯಾರ್ಥಿಗಳಲ್ಲಿನ ಆತ್ಮವಿಶ್ವಾಸ ಮತ್ತು ಪರಸ್ಪರ ಸಂಬಂಧಗಳು ಹೆಚ್ಚಾಗಲು ಕಾರಣ.

ಅಂತಿಮವಾಗಿ ಅರ್ಥವಾಗದೇ ಇರುವ ವಿಷಯವನ್ನು ಶಿಕ್ಷಕರು ಪರಿಹರಿಸಬೇಕು. ಶಿಕ್ಷಕರೂ ಸಹ ಅಂಕ ಗಳಿಕೆಗಷ್ಟೇ ಪಾಠವನ್ನು ವಿವರಿಸದೇ, ವಿಷಯದ ಆಳ ಮತ್ತು ಅದರ ಉಪಯೋಗಗಳನ್ನೂ ವಿವರಿಸಬೇಕು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ಮೇಲೆ ನೀರು ಚಿಮುಕಿಸಿ, ಈಜು ಸ್ಪರ್ಧೆಯಲ್ಲಿ ಬಹುಮಾನ ನೀಡುವಂತಹ ಪರಿಸ್ಥಿತಿ ಇದೆ. ಇನ್ನೂ ಹಲವೆಡೆ, ಮಕ್ಕಳಿಗೆ ಚಳಿ ಆಗದಿರಲಿ ಎಂದು ಬೆಚ್ಚನೆ ನೀರು ಹಾಕಿ, ಈಜು ಸ್ಪರ್ಧೆಯ ಬಹುಮಾನ ನೀಡಿದಂತಾಗುತ್ತಿದೆ. ಆದರೆ ಮಕ್ಕಳನ್ನು ನೀರಿಗಿಳಿಸಿಯೇ ಈಜು ಕಲಿಸುವುದನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು.

ಇಂದಿನ ಶಾಲಾ ಶಿಕ್ಷಣ ಮೆದುಳಿಗೆ ಕೆಲಸ ಹೆಚ್ಚು ನೀಡುತ್ತಿರುವುದರಿಂದ ಶಿಕ್ಷಕರು ಹೇಳುವುದೊಂದು, ಮಕ್ಕಳು ಅರ್ಥ ಮಾಡಿಕೊಳ್ಳುತ್ತಿರುವುದು ಮತ್ತೊಂದು ಎಂಬಂತಾಗಿದೆ. ಆದರೆ ಕಂಡಿದ್ದನ್ನು, ಕೇಳಿದ್ದನ್ನು, ಸ್ಪರ್ಶಿಸಿದ್ದನ್ನು, ಮೂಸಿದ್ದನ್ನು, ಆಸ್ವಾದಿಸುವ ಪಂಚಂದ್ರಿಯಗಳ ಮೂಲಕವೇ ಪರಿಣಾಮಕಾರಿ ಶಿಕ್ಷಣ ನೀಡಿದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT