ಬುಧವಾರ, ಜುಲೈ 28, 2021
23 °C

ತ್ರಿಕೋನಮಿತಿ: ಸೂಕ್ತ ಚಿತ್ರಗಳಿರಲಿ

ವೆಂಕಟ ಸುಬ್ಬರಾವ್ ವಿ. Updated:

ಅಕ್ಷರ ಗಾತ್ರ : | |

ಗಣಿತ ಖಂಡಿತವಾಗಿಯೂ ಕಬ್ಬಿಣದ ಕಡಲೆಯಲ್ಲ. ಗಣಿತ ಪರೀಕ್ಷೆಯ ಬಗ್ಗೆ ಸ್ವಲ್ಪಮಟ್ಟಿನ ಆತಂಕವಿದ್ದರೆ ಅದು ಸಹಜ. ಆದರೆ ನೀವು ಸರಿಯಾಗಿ ಅಭ್ಯಾಸ ಮಾಡಿದರೆ ಸಹಜವಾಗಿಯೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬಹುದು. ಗಣಿತದಲ್ಲಿ ಇನ್ನಷ್ಟು ಪಾಠಗಳ ಬಗ್ಗೆ, ಸಮಸ್ಯೆಗಳನ್ನು ಬಿಡಿಸಿ ಉತ್ತರ ಬರೆಯುವ ಕುರಿತು ತಿಳಿಯೋಣ.

* ವೃತ್ತದ ಪ್ರಮೇಯಗಳು ಮತ್ತು ಅವುಗಳ ಆಧಾರಿತ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಆದ್ದರಿಂದ ಅವುಗಳ ಕಡೆಗೆ ಹೆಚ್ಚು ಗಮನ ಕೊಡಿ. ವೃತ್ತದ ಪ್ರಮೇಯಗಳು ಮತ್ತು ಅವುಗಳ ಆಧಾರಿತ ಸಮಸ್ಯೆಗಳಲ್ಲಿ ಹಲವಾರು ಬಾರಿ ಎರಡು ತ್ರಿಭುಜಗಳನ್ನು ರಚಿಸಿ ಅವುಗಳನ್ನು ಹೋಲಿಸುವುದನ್ನು ಗಮನಿಸಿದ್ದೀರಾ!

* ವಾಸ್ತವ ಸಂಖ್ಯೆಗಳ ಸಮಸ್ಯೆಗಳನ್ನು ಬಿಡಿಸುವಾಗ ಕೊಟ್ಟಿರುವ ಸಂಖ್ಯೆಗಳ ಗುಣಲಕ್ಷಣಗಳನ್ನು ಸರಿಯಾಗಿ ಗಮನಿಸಿ.

* ವರ್ಗಸಮೀಕರಣದ ಸಮಸ್ಯೆಗಳನ್ನು ಬಿಡಿಸುವಾಗ ಯಾವ ವಿಧಾನವನ್ನು ಉಪಯೋಗಿಸಬೇಕೆಂದು ಕೇಳಿದ್ದಾರೋ ಅದೇ ವಿಧಾನವನ್ನು ಬಳಸಿ ಸಮಸ್ಯೆಯನ್ನು ಬಿಡಿಸಿ.

* ಮೌಖಿಕ ಆಧಾರಿತ ಪ್ರಶ್ನೆಗಳನ್ನು ಉತ್ತರಿಸುವ ಮೊದಲು, ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಿ. ಗೊಂದಲ ಬೇಡ. ಅವಶ್ಯಕ ಎನಿಸಿದರೆ ಸೂಕ್ತವಾದ ಚಿತ್ರವನ್ನು ಬರೆದುಕೊಳ್ಳಿ. ಆದರೆ ಅದಕ್ಕಾಗಿ ಹೆಚ್ಚು ಸಮಯವನ್ನು ವ್ಯಯಿಸುವುದು ಬೇಡ. ಸಮಸ್ಯೆಯನ್ನು ಹಂತ ಹಂತವಾಗಿ ಸಮೀಕರಣವಾಗಿ ಪರಿವರ್ತಿಸಿದ ನಂತರ ಯಾವುದಾದರೂ, ನಿಮಗೆ ಸುಲಭ ಎನಿಸಿದ ವಿಧಾನದಿಂದ ಬಿಡಿಸಿ. ತಾಳೆ ನೋಡುವುದನ್ನು ಮರೆಯಬೇಡಿ.

* ತ್ರಿಕೋನಮಿತಿಯು ನಿಮಗೆ ಹೊಸ ವಿಷಯವಾದರೂ, ಅತ್ಯಂತ ಆಸಕ್ತಿದಾಯಕವಾದ ಹಾಗೂ ಸರಳವಾದ ವಿಷಯ ಅಲ್ಲವೇ? ತ್ರಿಕೋನಮಿತಿಯ ಅನುಪಾತಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಅದಕ್ಕಾಗಿ ಮನೆಯಲ್ಲಿ ಎಲ್ಲೆಲ್ಲಿ ಲಂಬಕೋನಗಳನ್ನು ನೋಡುತ್ತೀರೋ (ಮನೆಯ ಮೂಲೆಗಳಿರಬಹುದು, ಛಾವಣಿಯ ಮೂಲೆಗಳಿರಬಹುದು) ಅಲ್ಲಿ ಒಂದು ಲಂಬಕೋನ ತ್ರಿಭುಜವನ್ನು ಊಹೆ ಮಾಡಿಕೊಂಡು, ತ್ರಿಕೋನಮಿತಿಯ ಅನುಪಾತಗಳನ್ನು ನೋಡಲು ಪ್ರಯತ್ನಿಸಿ. ಅವಶ್ಯಕತೆ ಇದ್ದ ಕಡೆಯಲ್ಲಿ ಸೂಕ್ತ ಚಿತ್ರಗಳನ್ನು ಬರೆದು ಅಭ್ಯಾಸ ಮಾಡಿ. ಬೀಜಗಣಿತದ ಸಾಮಾನ್ಯ ಸೂತ್ರಗಳೂ ಇಲ್ಲಿ ನಿಮಗೆ ಸಹಾಯಕವಾಗಬಹುದು! ಅವುಗಳ ಕಡೆ ಗಮನ ಕೊಡಿ.

* ತ್ರಿಕೋನಮಿತಿಯ ಅನ್ವಯಗಳ ಸಮಸ್ಯೆಗಳನ್ನು ಬಿಡಿಸುವಾಗ, ಆ ಸಮಸ್ಯೆಗಳನ್ನು ಸರಿಯಾಗಿ ದೃಶ್ಯೀಕರಿಸಿಕೊಂಡು ಅವುಗಳ ಸೂಕ್ತ ಚಿತ್ರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಚಿತ್ರಗಳ ಸಹಾಯವಿಲ್ಲದೇ ಈ ರೀತಿಯ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಬೇಡಿ.

* ಸಂಖ್ಯಾಶಾಸ್ತ್ರದ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಸರಳ ಸೂತ್ರಗಳನ್ನು ನೆನಪಿಡಿ. ಕೋಷ್ಟಕಗಳನ್ನು ಸರಿಯಾಗಿ ಅಭ್ಯಸಿಸಿ, ಬರೆಯಿರಿ.

* ಸಂಭವನೀಯತೆ ಆಧಾರಿತ ಸಮಸ್ಯೆಗಳು ಅತ್ಯಂತ ಆಸಕ್ತಿದಾಯಕ. ಅವುಗಳನ್ನು ಆನಂದಿಸಿ. ಸಮಸ್ಯೆಗಳನ್ನು ಸರಳವಾಗಿ ಅರ್ಥೈಸಿ, ಬಿಡಿಸಿ. ನಿಮ್ಮ ದಿನಚರಿಯಲ್ಲಿ ಸಂಭನೀಯತೆಯ ಸಮಸ್ಯೆಗಳನ್ನು ಅಳವಡಿಸಿ ಹಾಗೂ ಬಿಡಿಸಿ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ವಾರದಲ್ಲಿ ತಿಂಡಿಗೆ ಇಡ್ಲಿ ಮಾಡುವ ಸಂಭವನೀಯತೆ ಎಷ್ಟು?

* ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳ ಸಮಸ್ಯೆಗಳನ್ನು ಬಿಡಿಸುವ ಮೊದಲು, ಕೊಟ್ಟಿರುವ ಸಮಸ್ಯೆಗಳ ಚಿತ್ರವನ್ನು ಬರೆದುಕೊಳ್ಳಿ. ಈ ಸಮಸ್ಯೆಗಳನ್ನು ಸರಳೀಕರಿಸಿ ದೃಶ್ಯೀಕರಿಸಿಕೊಳ್ಳಿ. ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

* ಗಣಿತದ ಸಾಧನೆಗಳು ಮತ್ತು ಮಾದರಿಗಳ ಬಗ್ಗೆ ಅರಿವಿರಲಿ.

(ಲೇಖಕ: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು