ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಸಿ/ ಎಸ್‌.ಟಿ ವಿದ್ಯಾರ್ಥಿವೇತನಕ್ಕೆ ನೂತನ ಪೋರ್ಟಲ್‌

Last Updated 3 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಇಲ್ಲಿಯವರೆಗೆ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಭಿನ್ನ ಕೋನಗಳಲ್ಲಿ ಮತ್ತು ಮಜಲುಗಳಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವ ಅವಕಾಶ ಮತ್ತು ನಿಯಮಗಳಿದ್ದವು.

ಪ್ರಸ್ತುತ ಕರ್ನಾಟಕ ಸರ್ಕಾರವು ನೂತನವಾಗಿ ಏಕೀಕೃತ ವ್ಯವಸ್ಥೆಯಡಿಯಲ್ಲಿ ಎಲ್ಲಾ ಮಾದರಿಯ ವಿದ್ಯಾರ್ಥಿ ವೇತನಗಳನ್ನು ನೂತನ ಎಸ್.ಎಸ್.ಪಿ. ಪೋರ್ಟಲ್‌ನಲ್ಲಿ (ssp.portal) (http:ssp.postmatric.karnataka.gov.in) ಪಡೆದುಕೊಳ್ಳುವಂತೆ ನಿಯಮ ರೂಪಿಸಿದೆ. ಈ ವಿದ್ಯಾರ್ಥಿ ವೇತನವು ಕೇಂದ್ರ ಸರ್ಕಾರದ ಶೇ 75ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದ ಶೇ 25ರಷ್ಟು ಅನುದಾನವನ್ನು ಒಳಗೊಂಡಿರುತ್ತದೆ. ಇದರಡಿಯಲ್ಲಿ ಸ್ನಾತಕ/ಸ್ನಾತಕೋತ್ತರ, ಎಂಜಿನಿಯರಿಂಗ್/ಡಿಪ್ಲೋಮಾ, ವೈದ್ಯಕೀಯ ಒಳಗೊಂಡಂತೆ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಮಾದರಿಯಲ್ಲಿಯೇ ವಿದ್ಯಾರ್ಥಿ ವೇತನ ಪಡೆಯಬೇಕಿದೆ. ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಾಂಖ್ಯಿಕ ಇಲಾಖೆಗಳು ಸೇರಿದಂತೆ ಐದು ಇಲಾಖೆಗಳು ಒಟ್ಟುಗೂಡಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಮುಂದುವರೆದು ಈಗಾಗಲೇ ಕರ್ನಾಟಕ ಸರ್ಕಾರ ಸಂಬಂಧಪಟ್ಟ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದುಕೊಂಡಿರುತ್ತದೆ. ಅರ್ಹ ಒಬ್ಬ ವಿದ್ಯಾರ್ಥಿಯು ಕೂಡ ವಿದ್ಯಾರ್ಥಿ ವೇತನದಿಂದ ವಂಚಿತರಾಗಬಾರದೆಂಬ ಸದಾಶಯದೊಂದಿಗೆ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವಿಶೇಷವಾಗಿ ಆಧಾರ್ ಲಿಂಕ್ ಸೇರ್ಪಡಿಸಿದ್ದು ಹಾಗೂ ಆಧಾರ್ ಸಹಿತ ಬ್ಯಾಂಕ್ ಖಾತೆ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ವಿದ್ಯಾರ್ಥಿವೇತನ ಯಾವ ಹಂತದಲ್ಲೂ ದುರುಪಯೋಗವಾಗದಂತೆ ಮತ್ತು ವಿದ್ಯಾರ್ಥಿಗಳಿಗೆ ನೇರವಾಗಿ ತಲುಪುವ ಸೌಲಭ್ಯವನ್ನು ರೂಪಿಸಲಾಗಿದೆ.

ಒಂದೊಮ್ಮೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ನಿಗದಿತ ಶುಲ್ಕವನ್ನು ಮುಂಗಡವಾಗಿ ಭರಿಸಿದ್ದರೆ, ಸದರಿ ಸಂಬಂಧಿತ ಶುಲ್ಕವು ಕೂಡ ವಿದ್ಯಾರ್ಥಿಗಳ ಖಾತೆಗೆ ನೇರ ಜಮವಾಗುತ್ತದೆ. ಈ ವ್ಯವಸ್ಥೆಯು ಆನ್‌ಲೈನ್ ಮೂಲಕವೇ ನಿರ್ವಹಿಸಬೇಕಿರುವುದರಿಂದ ಆರಂಭಿಕ ಹಂತದಲ್ಲಿ ಒಂದಷ್ಟು ಗೊಂದಲಗಳು ಇದ್ದೇ ಇರುತ್ತವೆ. 2019ನೇ ಡಿಸೆಂಬರ್‌ 31ಕ್ಕೆ ವಿದ್ಯಾರ್ಥಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕವಾಗಿರುತ್ತದೆ.

ನೋಂದಣಿ ವಿಧಾನ

ವಿದ್ಯಾರ್ಥಿಗಳು ಮೊದಲು http:ssp.postmatric.karnataka.gov.in ಗೆ ಹೋಗಬೇಕು. ನಂತರ ಸ್ಟೂಡೆಂಟ್ ಐಡಿ ಕ್ರಿಯೇಟ್ ಮಾಡಿಕೊಳ್ಳಬೇಕು. (ಆಧಾರ್‌ಕಾರ್ಡ್ ನಂಬರ್ ಕಡ್ಡಾಯವಾಗಿ ಲಿಂಕ್ ಮಾಡಬೇಕು) ಅಲ್ಲಿ ಲಾಗಿನ್ ಆಗಲು ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಸರಳವಾದ ಪಾಸ್‌ವರ್ಡ್ ಮಾಡಿಕೊಳ್ಳುವುದು ಸೂಕ್ತ. ಆ ಸಂದರ್ಭದಲ್ಲಿ ಸ್ಟೂಡೆಂಟ್ ಐಡಿ ಸಂಖ್ಯೆ ಜನರೇಟ್ ಆಗುತ್ತದೆ. ಆ ಸಂಖ್ಯೆಯನ್ನು ಗುರುತು ಇಟ್ಟುಕೊಳ್ಳಬೇಕು.

ಸದರಿ ವೆಬ್‌ಸೈಟ್‌ನಲ್ಲಿ e-attestation portal for students ಎಂಬ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ತಮಗೆ ಸಂಬಂಧಿಸಿದ ದಾಖಲಾತಿಗಳ ಮಾಹಿತಿಗಳನ್ನು ಅಪ್‌ಲೋಡ್ ಮಾಡಬೇಕು. ಉದಾಹರಣೆಗೆ ಶಿಕ್ಷಣ ಸಂಸ್ಥೆಗಳಿಂದ ಪಡೆದ ಸ್ಟಡಿ ಸರ್ಟಿಫಿಕೇಟ್, ಶುಲ್ಕ ರಸೀದಿ, ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕು. (SATS I.D. P.U.C. ವಿರ್ದ್ಯಾರ್ಥಿಗಳಿಗೆ ಮಾತ್ರ) ಎಲ್ಲಾ ಮಾಹಿತಿ ಅಪ್‌ಲೋಡ್ ಮಾಡಿದ ನಂತರ, ಆಧಾರ್ ಸಂಖ್ಯೆಯನ್ನು ಉಪಯೋಗಿಸಲು ಅನುಮತಿ ಪತ್ರವನ್ನು ಡೌನ್‌ಲೋಡ್ ಮಾಡಿ ಅದನ್ನು ವಿದ್ಯಾರ್ಥಿಗಳು ತಮ್ಮ ಸಹಿಯೊಂದಿಗೆ ಸಲ್ಲಿಸಬೇಕು.

ಅಪ್‌ಲೋಡ್ ಮಾಡಿದ ಮೂಲ ಪ್ರತಿಗಳೊಂದಿಗೆ, ಜನರೇಟ್ ಆಗುವ ರಸೀದಿ ನಂಬರ್ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಸೂಚಿತ ಇ–ಸ್ಟೇಟ್‌ಮೆಂಟ್‌ ಅಧಿಕಾರಿಗೆ ಸಲ್ಲಿಸಬೇಕು. ಸದರಿ ದಾಖಲಾತಿಗಳ ನೈಜತೆಯನ್ನು ಪರಿಶೀಲಿಸಿ ಅಧಿಕಾರಿಯು ಇ–ಅಪ್ರೂವಲ್‌ ನೀಡುತ್ತಾರೆ. ಈ ಪ್ರಕ್ರಿಯೆಯ ನಂತರ ಡಾಕ್ಯೂಮೆಂಟ್‌ ಕ್ರಿಯೇಟ್ ಆಗಿ ಸಂದೇಶವು ಇ–ಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ರವಾನೆಯಾಗುತ್ತದೆ. ಈ ನಂಬರ್ ಆಧಾರದ ಮೇಲೆ ತಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ಬಳಸಿ ಮುಂದಿನ ನಿರೀಕ್ಷಿತ ಮಾಹಿತಿಗಳನ್ನು ಆಪ್‌ಲೋಡ್ ಮಾಡುವುದು. ಈ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್‌ (Post Matric) ಅಕ್ನಾಲೆಜ್‌ಮೆಂಟ್‌ ಜನರೇಟ್ ಆಗುತ್ತದೆ. ಅಂತಿಮ ಸಬ್‌ಮಿಶನ್‌ ಒತ್ತುವ ಮುನ್ನ ಯಾವುದೇ ಮಾಹಿತಿ ತಪ್ಪು ಎಂದು ಕಂಡು ಬಂದಲ್ಲಿ, 080-44554455 ಈ ನಂಬರ್‌ಗೆ ಕರೆ ಮಾಡಬಹುದು. postmatrichelp@karnataka.gov.in ಇಲ್ಲಿಗೆ ಇ–ಮೇಲ್ ಕಳುಹಿಸಬಹುದು.

ಈ ಮಾಹಿತಿಯನ್ನು ಸಂಬಂಧಪಟ್ಟ ಕಾಲೇಜು ಅಥವಾ ವಿಶ್ವವಿದ್ಯಾನಿಲಯಕ್ಕೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಬೇಕು. ಅಂತಿಮವಾಗಿ ವಿದ್ಯಾರ್ಥಿವೇತನವು ವಿದ್ಯಾರ್ಥಿಯ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಈ ವಿದ್ಯಾರ್ಥಿ ವೇತನದ ಪ್ರಕ್ರಿಯೆಯ ವಿಶೇಷತೆಗಳು:

1) ಆಧಾರ್ ಲಿಂಕ್ ಕಡ್ಡಾಯ.

2) ಆಧಾರ್ ಲಿಂಕ್ ಸಹಿತ ವಿದ್ಯಾರ್ಥಿ ಬ್ಯಾಂಕ್ ಖಾತೆ ಕಡ್ಡಾಯ.

3) ತಾಯಿ/ತಂದೆಯ ಆಧಾರ್ ಲಿಂಕ್ ಕಡ್ಡಾಯ.

4) ಜಾತಿ ಮತ್ತು ಆಧಾಯ ಪ್ರಮಾಣ ಪತ್ರಕ್ಕೆ RD ನಂಬರ್ ಕಡ್ಡಾಯ.

5) ರೆಗ್ಯೂಲರ್ ಶಿಕ್ಷಣ ಮತ್ತು ಮುಕ್ತ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೂ ಏಕೀಕೃತ ವಿದ್ಯಾರ್ಥಿ ವೇತನ ನೀಡುವುದು.

(ಲೇಖಕರು: ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ದಾವಣಗೆರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT