ಭಾನುವಾರ, ನವೆಂಬರ್ 29, 2020
25 °C
ಸರ್ಕಾರಿ ಶಾಲೆಗಳ ಪ್ರಗತಿಗೂ ನೆರವಾಗುತ್ತಿರುವ ನಿಂಗಪ್ಪ ಪಾಟೀಲ

PV Web Exclusive: ಹುಟ್ಟೂರಿಗೆ ಗ್ರಂಥಾಲಯ ಕೊಡುಗೆ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಗಡಿ ಭಾಗವಾದ ರಾಯಬಾಗ ತಾಲ್ಲೂಕಿನ ಕುಗ್ರಾಮ ಹುಬ್ಬರವಾಡಿಯಲ್ಲಿ ನಿವೃತ್ತ ನೌಕರರೊಬ್ಬರು ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳ ಜ್ಞಾನಾರ್ಜನೆಗಾಗಿ ಸ್ವಂತ ಖರ್ಚಿನಲ್ಲಿ ಉಚಿತ ಗ್ರಂಥಾಲಯ ನಿರ್ಮಿಸಿ ಗಮನಸೆಳೆದಿದ್ದಾರೆ.

ಬೆಳಗಾವಿಯ ಆರ್‌ಎಂಎಸ್‌ನಲ್ಲಿ ಎಚ್‌ಎಸ್‌ಎ (ಹೆಡ್ ಸಾರ್ಟಿಂಗ್ ಅಸಿಸ್ಟೆಂಟ್) ಆಗಿ ಕಾರ್ಯನಿರ್ವಹಿಸಿ ಎರಡು ವರ್ಷಗಳ ಹಿಂದೆ ನಿವೃತ್ತರಾಗಿರುವ ನಿಂಗಪ್ಪ ಪಾಟೀಲ ಅವರು, ಹುಟ್ಟೂರಾದ ಹುಬ್ಬರವಾಡಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾ ನಿವೃತ್ತಿ ಜೀವನ ಸಾರ್ಥಕಪಡಿಸಿಕೊಳ್ಳಲು ಮುಂದಾಗಿದ್ದಾರೆ.

ತಮ್ಮ 3 ಎಕರೆ ಜಮೀನಿನ ಒಂದು ಭಾಗದಲ್ಲಿ ₹ 4 ಲಕ್ಷ ವೆಚ್ಚದಲ್ಲಿ ಕಟ್ಟಡ (30x50) ನಿರ್ಮಿಸಿ ಅಲ್ಲಿ ಈಚೆಗೆ ಮೊದಲ ಹಂತದಲ್ಲಿ ₹ 30ಸಾವಿರ ಮೌಲ್ಯದ ಪುಸ್ತಕಗಳನ್ನು ತಂದಿಟ್ಟಿದ್ದಾರೆ. ಗ್ರಾಮದ ಮಕ್ಕಳೊಂದಿಗೆ ಸುತ್ತಮುತ್ತಲಿನ ಭಾವಚಿ, ಮೇಕಳಿ, ಬೂದಿಹಾಳ, ದೇವನಕಟ್ಟಿ, ಮಾವಿನ ಹೊಂಡ, ಮಾಡಲಗಿ ಗ್ರಾಮಗಳ ಮಕ್ಕಳು ಇದರಿಂದ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದು ಅವರ ಉದ್ದೇಶವಾಗಿದೆ.


ನಿಂಗಪ್ಪ ಪಾಟೀಲ

ಗ್ರಂಥಾಲಯ ಪಕ್ಕದಲ್ಲಿ ಮಕ್ಕಳ ಅಭ್ಯಾಸಕ್ಕಾಗಿ ಕಬಡ್ಡಿ ಮೈದಾನ ಮಾಡಿಕೊಟ್ಟಿದ್ದಾರೆ. ಶಾಲಾ–ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಸಮೀಪಿಸಿದಾಗ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸುವ ಯೋಜನೆ ಅವರದಾಗಿದೆ. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ವಿವಿಧ ಶಾಲೆಗಳಿಗೆ:

ಕೆಲಸದಲ್ಲಿದ್ದ ಸಂದರ್ಭದಲ್ಲಿ ಬೆಳಗಾವಿಯ ಹಿಂಡಲಗಾ ಸರ್ಕಾರಿ ಶಾಲೆಗೆ ₹ 8 ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿ, ಕಾಂಪೌಂಡ್, ಕುಡಿಯುವ ನೀರಿನ ವ್ಯವಸ್ಥೆ, ಬಾಲಕರು ಹಾಗೂ ಬಾಲಕಿಯರಿಗೆ ತಲಾ 2 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದರು. ವಿವಿಧ ಆರು ಸರ್ಕಾರಿ ಶಾಲೆಗಳಿಗೆ ಇಡ್ಲಿ (ಒಮ್ಮೆ 108 ಇಡ್ಲಿ ಬೇಯಿಸಬಹುದಾದ) ಪಾತ್ರೆಗಳನ್ನು ಕೊಡಿಸಿದ್ದಾರೆ. ನಿವೃತ್ತಿ ನಂತರ ತಮ್ಮೂರಿನ ಶಾಲೆ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ. ಹುಬ್ಬರವಾಡಿ ಶಾಲೆಗೆ ಗೇಟು, ಪ್ರೊಜೆಕ್ಟರ್, ಕುಕ್ಕರ್, ಮಿಕ್ಸಿಗಳನ್ನು ಕೊಡಿಸಿದ್ದಾರೆ. ಈಗ, ಊರಿನಲ್ಲಿ ಗ್ರಂಥಾಲಯ ಮಾಡಿದ್ದು, ಅದನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನಾಗಿ ರೂಪಿಸುವ ಯೋಜನೆ ಹೊಂದಿದ್ದಾರೆ.

‘ಇದು ನನ್ನ ಬಹು ದಿನಗಳ ಕನಸಾಗಿತ್ತು. ಅದನ್ನು ಈಗ ನನಸಾಗಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಗ್ರಾಮೀಣ ಪ್ರತಿಭೆಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸರ್ಕಾರಿ ನೌಕರಿಗೆ ಸೇರಬೇಕು. ಅಧಿಕಾರಿಗಳಾಗಬೇಕು. ಊರಿಗೆ ಹೆಸರು ತರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಉಚಿತವಾಗಿ ಪುಸ್ತಕಗಳನ್ನು ಓದಬಹುದು. ನೀರಿನ ವ್ಯವಸ್ಥೆ ಮಾಡಿದ್ದೇನೆ. ಏಕಾಗ್ರತೆಯಿಂದ ಓದಿಕೊಳ್ಳಲು ಪ್ರಶಾಂತ ವಾತಾವರಣ ಅಲ್ಲಿದೆ. ಸುತ್ತಲಿನ ಗ್ರಾಮೀಣ ಮಕ್ಕಳು ಬಂದು ಅನುಕೂಲ ಪಡೆದರೆ ಸಾಕು’ ಎನ್ನುತ್ತಾರೆ ಅವರು.

ಉಪಯುಕ್ತವಾಗುವಂಥವು:

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದವು, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಧಾರ್ಮಿಕ ವಿಷಯಗಳ ಪುಸ್ತಕಗಳಿವೆ. ಓದಲು ಬರುವವರು ಬೇರೆ ಪುಸ್ತಕಗಳನ್ನು ಕೇಳಿದರೆ ತರಿಸಿಕೊಡಲಿದ್ದೇನೆ. ಹಿರಿಯರು ಓದಬಹುದಾದಂತಹ ಭಗವದ್ಗೀತೆ, ವೇದ ಮೊದಲಾದ ಉಪಯುಕ್ತ ಪುಸ್ತಗಳೂ ಅಲ್ಲಿವೆ. ಪ್ರತಿ ತಿಂಗಳು ಪ್ರಕಟವಾಗುವ ‘ಸ್ಪರ್ಧಾ ಚೈತ್ರ’, ‘ಸ್ಪರ್ಧಾ ಸ್ಫೂರ್ತಿ’, ‘ಚಿಗುರು’, ‘ಬುತ್ತಿ’ ಮೊದಲಾದ ಪುಸ್ತಕಗಳನ್ನು ತರಿಸುವುದಕ್ಕೂ, ದಿನಪತ್ರಿಕೆಗಳನ್ನು ಒದಗಿಸುವುದಕ್ಕೂ ಯೋಜಿಸಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇದು ಸಾರ್ವಜನಿಕ ಗ್ರಂಥಾಲಯ. ನಾನು ಉಸ್ತುವಾರಿ ಅಷ್ಟೆ. ಈ ಕಟ್ಟಡವನ್ನು ಆ ಭಾಗದ ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಂಘ–ಸಂಸ್ಥೆಗಳ ಸಭೆಗೂ ಉಚಿತವಾಗಿ ಕೊಡುತ್ತೇನೆ’ ಎನ್ನುತ್ತಾರೆ ಅವರು.

ಕೈಲಾದಷ್ಟು ನೆರವು:

‘ನಿತ್ಯ ಕೆಲವು ಮಕ್ಕಳು, ಯುವಕರು ಬಂದು ಪುಸ್ತಕ ಓದುತ್ತಿದ್ದಾರೆ. ಕೆಲವು ಚೇರ್‌ಗಳು ಹಾಗೂ ಚಾಪೆಗಳಿವೆ. ಮುಂದಿನ ದಿನಗಳಲ್ಲಿ ಅಲ್ಲಿಗೆ ಚೇರ್, ಟೇಬಲ್‌ಗಳ ವ್ಯವಸ್ಥೆ ಮಾಡಲಿದ್ದೇನೆ’ ಎಂದು ಯೋಜನೆಯನ್ನು ಹಂಚಿಕೊಂಡರು.

‘ಬಡತನದಲ್ಲಿ ಬೆಳೆದು ಬಂದೆ. ನನಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಒಬ್ಬ ಪುತ್ರಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಹಂತಕ್ಕೆ ಬೆಳೆದಿದ್ದೇವೆ. ಹೀಗಾಗಿ, ಸಮಾಜಕ್ಕೆ ಕೈಲಾದಷ್ಟು ಕೊಡುಗೆ ನೀಡುತ್ತಿದ್ದೇನೆ. ನನ್ನಿಂದ ಕೆಲವರಿಗಾದರೂ ಅನುಕೂಲವಾದರೆ ಅಷ್ಟೇ ಸಾಕು. ನನಗೆ ಬರುವ ₹ 25ಸಾವಿರ ಪಿಂಚಣಿ ಹಣದಲ್ಲಿ ಸೇವಾ ಕಾರ್ಯ ಮಾಡುತ್ತಿದ್ದೇನೆ. ಪ್ರತಿ ಮನೆಗೂ ಸಹಾಯ ಮಾಡುವಷ್ಟು ಶ್ರೀಮಂತನಲ್ಲ. ಹೀಗಾಗಿ, ಮಕ್ಕಳ ಕಲಿಕೆಗೆ ನೆರವಾಗುತ್ತಿದ್ದೇನೆ. ಅವರು ಜ್ಞಾನವಂತರಾಗಿ, ಸರ್ಕಾರಿ ನೌಕರಿ ಹಿಡಿದರೆ ಇಡೀ ಕುಟುಂಬಕ್ಕೆ ಆಸರೆಯಾಗುತ್ತಾರಲ್ಲೇ?’ ಎಂದು ಅವರು ಕೇಳಿದರು.

ಊರಲ್ಲಿ ಸದ್ಯ ಕೃಷಿ ಮಾಡುತ್ತಿರುವ ಅವರು, ‘ಸೇವೆಯಿಂದ ಸಿಗುವ ಖುಷಿಯೇ ಬೇರೆ. ಹೀಗಾಗಿ, ಗ್ರಾಮದಲ್ಲಿ ಅಭಿವೃದ್ಧಿಗೆ ಮುಂದಾಗಿದ್ದೇನೆ. ಎನ್.ಆರ್. ಪಾಟೀಲ ಎನ್ನುವವನೊಬ್ಬ ಇದ್ದ ಎಂದು ಜನ ನೆನಪಿಸಿಕೊಂಡರಷ್ಟೆ ಸಾಕು’ ಎನ್ನುತ್ತಾರೆ ಅವರು.

‘ನಿಂಗಪ್ಪ ಅವರು ಸಮಾಜಕ್ಕೆ ತುಂಬಾ ಕೊಡುಗೆ ಕೊಡುತ್ತಿದ್ದಾರೆ. ₹ 8 ಲಕ್ಷ ಖರ್ಚು ಮಾಡಿ, ಸರ್ಕಾರಿ ಶಾಲೆ ದತ್ತು ತೆಗೆದುಕೊಂಡಿದ್ದರು. ಈಗ, ನಾಲ್ಕೈದು ಲಕ್ಷ ರೂಪಾಯಿ ವೆಚ್ಚದಲ್ಲಿ, ಉಚಿತ ಗ್ರಂಥಾಲಯ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ. ದಾನಿಗಳು ಕೈಜೋಡಿದರೆ, ಅಲ್ಲಿ ಹೆಚ್ಚಿನ ಪುಸ್ತಕಗಳು ಲಭ್ಯವಾಗುವಂತೆ ಮಾಡಬಹುದಾಗಿದೆ’ ಎನ್ನುತ್ತಾರೆ ಶಿಕ್ಷಣ ಪ್ರೇಮಿ ಕಿರಣ ಮಾಳನ್ನವರ.

ಸಂಪರ್ಕಕ್ಕೆ ಮೊ: 9449008885.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು