‘ಎಸ್ಸೆಸ್ಸೆಲ್ಸಿ ಶೇ 57 ಮಾರ್ಕ್ಸ್ ಬಂದೈತ್ರೀ ಮುಂದೇನು ಮಾಡಬೇಕ್ರಿ? ನಂದ್ ಮ್ಯಾಥ್ಸ್ ಸಬ್ಜೆಕ್ಟ್ ವೀಕ್ ಐತ್ರಿ... ಸೈನ್ಸ್ ಓದ್ಬಹುದೇನ್ರೀ? ನಾನು ಪೈಲಟ್ ಆಗಬೇಕು ಏನು ಓದಬೇಕು? ವಿಜ್ಞಾನ ವಿಭಾಗ ಆಯ್ದುಕೊಂಡರೆ ಭವಿಷ್ಯದಲ್ಲಿರುವ ಅವಕಾಶಗಳೇನು?ಪಿಯುಸಿಯಲ್ಲಿ ಭಾಷಾ ವಿಷಯ ಆಯ್ಕೆ ಮಾಡಿಕೊಳ್ಳಬಹುದೇನ್ರೀ?’

– ವಿದ್ಯಾರ್ಥಿಗಳು ಹಾಗೂ ಪೋಷಕರ ಇಂತಹ ಹತ್ತಾರು ಪ್ರಶ್ನೆ, ಸಂದೇಹ, ವಿಷಯಗಳ ಆಯ್ಕೆಯ ಗೊಂದಲಗಳಿಗೆ ಧಾರವಾಡದ ಐಸಿಎಸ್ ಮಹೇಶ ಪಿಯು ಕಾಲೇಜಿನ ಪ್ರಾಚಾರ್ಯರನ್ನೊಳಗೊಂಡ ಅನುಭವಿ ಹಾಗೂ ಪರಿಣತ ಶಿಕ್ಷಕರ ತಂಡವು ಬುಧವಾರ ‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ನಡೆದ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಸಮಗ್ರವಾದ ಮಾಹಿತಿ ನೀಡಿತು.

ಎಸ್ಸೆಸ್ಸೆಲ್ಸಿ ನಂತರ ಮುಂದೇನು ಮಾಡಬೇಕು? ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ವಿಜ್ಞಾನ ವಿಷಯದಲ್ಲಿ ಓದಿದರೆ ಏನೆಲ್ಲ ಪ್ರಯೋಜನಗಳಿವೆ? ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಅಗತ್ಯವಿದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಮಹೇಶ ಪಿಯು ಕಾಲೇಜಿನ ಪ್ರಾಂಶುಪಾಲ ಉಮೇಶ ಪುರೋಹಿತ, ಉಪ ಪ್ರಾಚಾರ್ಯ ಮಹಾಲಿಂಗ ಕಮತಗಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ರವಿರಾಜ ಶಿದ್ಲಿಂಗ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮುರಳೀಧರ ಹೆಗಡೆ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಿದ್ಧನಗೌಡ ಕ್ಯಾತನಗೌಡರ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಧರ ಕುಲಕರ್ಣಿ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಆಬಿದ ಅಲಿ ಬದಾಮಿ ಉಪಯುಕ್ತ ಸಲಹೆ ನೀಡಿದರು. ಕೋರ್ಸ್ ಆಯ್ಕೆಗಿಂತ ಆಸಕ್ತಿ ಇರುವ ವಿಷಯದಲ್ಲಿ ಶ್ರದ್ಧೆಯ ಅಧ್ಯಯನ ಮುಖ್ಯ ಎನ್ನುವ ಕಿವಿ ಮಾತನ್ನೂ ಹೇಳಿದರು.

ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ, ವಸತಿ ಸೌಕರ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುತ್ತ ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತಿರುವ ಮಹೇಶ್ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನಾಡಿನ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.

ಈ ಕಾಲೇಜಿನಲ್ಲಿ ಮಕ್ಕಳಿಗೆ ಕೇವಲ ಅಂಕಗಳಿಕೆಯ ಬಗ್ಗೆ ಮಾತ್ರವೇ ಗಮನ ನೀಡದೇ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಬಗೆಗೂ ಗಮನ ಹರಿಸಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಪ್ರಾಚಾರ್ಯರು. ವಿವಿಧ ಜಿಲ್ಲೆಗಳಿಂದ ಕರೆ ಮಾಡಿದ್ದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಸಂದೇಹಗಳಿಗೆ ನೀಡಿದ ಉತ್ತರಗಳು ಇಲ್ಲಿವೆ.

*ರವಿಕುಮಾರ ಬಿರಾದಾರ, ಅಣ್ಣಿಗೇರಿ; ವಿಜ್ಞಾನ ಓದುವ ಆಸಕ್ತಿಯಿದೆ, ಮಾರ್ಗದರ್ಶನ ಮಾಡಿ.

–ವಿಜ್ಞಾನ ಕಲಿಕೆಗೆ ನಿರ್ಧರಿಸಿದ್ದು ಸಂತೋಷ. ಪಿ.ಯುನಲ್ಲಿ ವಿಜ್ಞಾನ ಓದಿದರೆ, ಬಳಿಕ ಸಾಕಷ್ಟು ವೃತ್ತಿ ಪರ ಕೋರ್ಸ್ಗಳಿಗೆ ಅವಕಾಶವಿದೆ.

*ರಾಜೇಂದ್ರ ಪಾಟೀಲ, ಘಟಪ್ರಭಾ, ಬೆಳಗಾವಿ; ಎಸ್ಸೆಸ್ಸೆಲ್ಸಿ ಬಳಿಕ ನೇರವಾಗಿ ಡಿಪ್ಲೊಮಾ ಕೋರ್ಸ್ ಆಯ್ದುಕೊಳ್ಳಬಹುದೇ?

–ಎಸ್ಸೆಸ್ಸೆಲ್ಸಿ ಬಳಿಕ ನೇರವಾಗಿ ಡಿಪ್ಲೊಮಾ ಕೋರ್ಸ್ ಆಯ್ದುಕೊಂಡು ಓದಬಹುದು. ಬಳಿಕ ಬಿ.ಇ ಕೂಡ ಮಾಡಬಹುದು.

* ವೈಷ್ಣವಿ ಪೋಷಕ, ರಾಯಬಾಗ; ಎಸ್ಸೆಸ್ಸೆಲ್ಸಿಯಲ್ಲಿ ಶೇ 95 ಅಂಕ ಬಂದಿದೆ. ಪಿ.ಯುನಲ್ಲಿ ಉತ್ತಮ ಆಯ್ಕೆ ಯಾವುದು?

–ಕಲಾ, ವಾಣಿಜ್ಯ, ವಿಜ್ಞಾನ ಯಾವುದೇ ವಿಭಾಗಕ್ಕೆ ಸೇರಿದ ಮಾತ್ರಕ್ಕೆ ಯಶಸ್ಸು ಸಿಗುವುದಿಲ್ಲ. ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಅವರು ಪಡುವ ಪರಿಶ್ರಮ, ಸಹ ವಿದ್ಯಾರ್ಥಿಗಳ ಒಡನಾಟ, ಕಲಿಕಾ ವಾತಾವರಣ ಹೀಗೆ ಎಲ್ಲವೂ ಮುಖ್ಯ. ವಿಜ್ಞಾನ ಕಠಿಣವಾಗುತ್ತದೆ ಎನ್ನುವವರು, ಕಲಾ ವಿಭಾಗಕ್ಕೆ ಸೇರಿದರೆ ಓದದೇ ಪಾಸ್ ಆಗಲು ಸಾಧ್ಯವೇ? ಸಾಧನೆಗೆ ಪರಿಶ್ರಮ ಅತ್ಯಗತ್ಯ.

*ಗೀತಾ ಪ್ರಸನ್ನಕುಮಾರ; ವಿಜ್ಞಾನ ವಿಭಾಗ ಆಯ್ದುಕೊಂಡರೆ ಭವಿಷ್ಯದಲ್ಲಿರುವ ಅವಕಾಶಗಳೇನು?

–ವಿಜ್ಞಾನವನ್ನು ಭವಿಷ್ಯದ ಎಲ್ಲ ಆಯ್ಕೆಗಳ ಹೆಬ್ಬಾಗಿಲು ಎನ್ನಬಹುದು. ಪಿ.ಯುನಲ್ಲಿ ವಿಜ್ಞಾನ ಓದಿದರೆ ಭವಿಷ್ಯದಲ್ಲಿ ವಿಪುಲ ಅವಕಾಶಗಳಿವೆ. ಬಿಎಸ್ಸಿ, ಎಂಎಸ್ಸಿ ಮಾಡಬಹುದು, ಬಿಸಿಎ, ಎಂಸಿಎ ಮಾಡಬಹುದು. ಇಲ್ಲವೇ ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ತಾಂತ್ರಿಕ ಕೋರ್ಸ್ಗಳನ್ನಾದರೂ ಆಯ್ದುಕೊಳ್ಳಬಹುದು. ಎಂಜಿನಿಯರಿಂಗ್ನಲ್ಲಿ ಕಂಪ್ಯೂಟರ್ ಸೈನ್ಸ್, ಏರೊನಾಟಿಕಲ್ ಹೀಗೆ ಹತ್ತಾರು ಅವಕಾಶಗಳಿವೆ. ಮೆಡಿಕಲ್ ವಿಭಾಗದಲ್ಲಿ ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಡೆಂಟಲ್, ಬಿಎಚ್ಎಂಎಸ್, ಬಿಎಎಂಎಸ್ ಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಎಲ್ಲಕ್ಕೂ ವಿದ್ಯಾರ್ಥಿಗಳ ಆಸಕ್ತಿ ಮುಖ್ಯ ಎಂಬುದು ನೆನಪಿರಲಿ.

*ಲೋಕೇಶ, ಹಳ್ಳಿಕೇರಿ: ‘ಪ್ರಜಾವಾಣಿ’ ಸಹಾಯದಿಂದ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದೇನೆ. ಮುಂದೆ ವಿಜ್ಞಾನದಲ್ಲಿ ಮುಂದುವರಿಯಬೇಕು ಅಂದುಕೊಂಡಿದ್ದೇನೆ; ಆಯ್ಕೆ ಬಗ್ಗೆ ಗೊಂದಲವಿದೆ. ಆರ್ಥಿಕ ಸಮಸ್ಯೆ ಬಹಳ ಇದೆ...

– ಆರ್ಥಿಕ ಸಮಸ್ಯೆ ನಮ್ಮ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅವಕಾಶಗಳಿವೆ. ನಮ್ಮ ಸಂಸ್ಥೆಯಿಂದ ನಿಮಗೆ ಎರಡು ವರ್ಷ ಓದು, ಉಚಿತ ವಸತಿ ವ್ಯವಸ್ಥೆಯೊಂದಿಗೆ ಶಿಕ್ಷಣ ನೀಡುತ್ತೇವೆ.

* ಚೇತನ, ಕೊಪ್ಪಳ: ಪಿಯುಸಿಯಲ್ಲಿ ಭಾಷಾ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದೇ? ಯಾವುದು ಉತ್ತಮ?

–ಎಲ್ಲಾ ಭಾಷೆಗಳೂ ಉತ್ತಮವೇ. ಶೈಕ್ಷಣಿಕವಾಗಿ ನಿಮಗೆ ಯಾವ ಭಾಷೆ ಓದಲು, ಬರೆಯಲು ಖುಷಿ ನೀಡುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಸಾಹಿತ್ಯದ ಅಭಿರುಚಿ ಕೂಡ ಮುಖ್ಯ.

*ಬಸವರಾಜ, ಲಕ್ಷ್ಮೇಶ್ವರ: ಎಸ್ಸೆಸ್ಸೆಲ್ಸಿ ಮುಗಿದಿದೆ. ನನಗೆ ಪೊಲೀಸ್ ಆಗುವ ಅಧಿಕಾರಿ ಆಗುವ ಕನಸಿದೆ. ಏನು ಓದಲಿ?

–ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡರೆ, ಸಿವಿಲ್ ಸರ್ವೀಸ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ. ಹೆಚ್ಚಿನ ಅಂಕಗಳನ್ನೂ ಗಳಿಸಬಹುದು. ಐಪಿಎಸ್, ಐಎಎಸ್ ಮಾಡಬಹುದು.

* ಆದಿನಾಥ್, ರಾಯಭಾಗ: ಎಸ್ಸೆಸ್ಸೆಲ್ಸಿಯಲ್ಲಿ ಮಗ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದಾನೆ. ಮುಂದೇನು ಓದಿಸುವುದು?

–ಮಗನಿಗೆ ಮೊದಲು ಆತ್ಮವಿಶ್ವಾಸ ತುಂಬಿ. ಮರು ಪರೀಕ್ಷೆಗೆ ಸಹಾಯ ಮಾಡಿ. ಅನುತ್ತೀರ್ಣಗೊಂಡ ವಿಷಯಗಳಲ್ಲಿ ಸುಧಾರಿಸಿಕೊಳ್ಳಲು ಶಿಕ್ಷಕರ ಸಹಾಯ ಪಡೆಯಿರಿ. ಪರೀಕ್ಷೆಗಿಂತ ಜೀವನ ದೊಡ್ಡದು ಎಂಬುದನ್ನು ಮಗನಿಗೆ ಮನವರಿಕೆ ಮಾಡಿ. ಮರು ಪರೀಕ್ಷೆ ಮುಗಿದ ನಂತರ ಕೌನ್ಸೆಲಿಂಗ್ ಮಾಡಿಸಿ, ಆಸಕ್ತಿ ವಿಷಯದಲ್ಲಿ ಮುಂದುವರಿಯಲು ಸಹಾಯ ಮಾಡಿ.

*ದೀಪಕ್ ರಮೇಶ, ಮುದ್ದೇಬಿಹಾಳ: ಎಸ್ಸೆಸ್ಸೆಲ್ಸಿಯಲ್ಲಿ ಶೇ 70ರಷ್ಟು ಫಲಿತಾಂಶ ಬಂದೈತ್ರೀ. ನನ್ನ ಮ್ಯಾಥ್ಸ್ ವೀಕ್ ಐತ್ರಿ. ಮುಂದೆ ಏನು ಓದಬಹುದ್ರೀ?

–ಗಣಿತ ಕಬ್ಬಿಣದ ಕಡಲೆ ಅಲ್ಲ. ಹೆಚ್ಚಿನ ಪರಿಶ್ರಮಪಟ್ಟರೆ, ಗಣಿತವು ಸುಲಿದ ಬಾಳೆ ಹಣ್ಣು. ಜೊತೆಗೆ ಎಸ್ಸೆಸ್ಸೆಲ್ಸಿಯಲ್ಲಿ ನೀವು ಗಣಿತ ಓದಿದ, ಶಿಕ್ಷಕರು ಕಲಿಸಿದ ಪದ್ಧತಿಗೂ, ಪಿಯುನಲ್ಲಿ ಕಲಿಯುವ, ಕಲಿಸುವ ಪದ್ಧತಿಗೂ ವ್ಯತ್ಯಾಸವಿರುತ್ತದೆ. ಹೀಗಾಗಿ ಪಿ.ಯುನಲ್ಲಿ ಉತ್ತಮ ಶಿಕ್ಷಕರು ಸಿಕ್ಕರೆ, ನೀವು 100ಕ್ಕೆ 100ರಷ್ಟು ಅಂಕ ಪಡೆಯಬಹುದು. ಭಯ ಬಿಟ್ಟು, ಆಸಕ್ತಿ, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ, ಯಾವುದೇ ವಿಷಯವೂ ಕಠಿಣವಲ್ಲ.

*ದೀಪಕ್ ನಿಂಬಾಳ್ಕರ್ ವಿಜಯಪುರ, ಮಹಾಂತೇಶ ರಾಜಗೊಳಿ, ಬೈಲಹೊಂಗಲ; ಐಪಿಎಸ್ ಸೇರಿದಂತೆ ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಲು ಪಿಯುಸಿಯಲ್ಲಿ ಯಾವ ಆಯ್ಕೆ ಉತ್ತಮ?

–ನಾಗರಿಕ ಸೇವಾ ಪರೀಕ್ಷೆಗೆ ವಿಷಯಾಧಾರಿತ ಜ್ಞಾನ ಬೇಕಾಗುತ್ತದೆ. ಹೀಗಾಗಿ ವಿಜ್ಞಾನ ವಿಭಾಗ ಉತ್ತಮ ಆಯ್ಕೆ. ಆದಾಗ್ಯೂ, ಕಲಾ, ವಾಣಿಜ್ಯ ವಿಭಾಗದಲ್ಲಿ ಓದಿದರೂ, ನಾಗರಿಕ ಸೇವಾ ಪರೀಕ್ಷೆ ಬರೆಯಬಹುದು. ಈ ನಿಟ್ಟಿನಲ್ಲಿ ಐಸಿಎಸ್ ಮಹೇಶ್ ಶಿಕ್ಷಣ ಸಂಸ್ಥೆಗಳ ಸಮೂಹವು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದೆ. ಸಿವಿಲ್ ಪರೀಕ್ಷೆಗಳಲ್ಲಿ 22 ವರ್ಷಗಳ ತರಬೇತಿ ಅನುಭವ ಸಂಸ್ಥೆಗಿದೆ.

*ಮೇಘನಾ, ಹಂಪಾಪಟ್ಟಣ, ಬಳ್ಳಾರಿ: ನನಗೆ ಪೈಲಟ್ ಆಗಬೇಕು ಅನಿಸುತ್ತಿದೆ, ಏನು ಓದಬೇಕು?

–ಪಿ.ಯುನಲ್ಲಿ ವಿಜ್ಞಾನ ವಿಷಯವನ್ನು ಆಯ್ದು ಮುಂದುವರಿದರೆ, ನಿಮ್ಮ ಕನಸು ಈಡೇರಿಸಿಕೊಳ್ಳಬಹುದು. ದ್ವಿತೀಯ ಪಿ.ಯು ಮುಗಿದ ಬಳಿಕ ಏರೊನಾಟಿಕಲ್ ಎಂಜಿನಿಯರಿಂಗ್ ಕೋರ್ಸ್ ಸೇರಬೇಕಾಗುತ್ತದೆ. ಅದನ್ನು ಪೂರ್ಣಗೊಳಿಸಿ, ಬಳಿಕ ನೀವು ಪೈಲಟ್ ಆಗಬಹುದು.

*ಈರಣ್ಣ ಹಡಪದ, ಲಕ್ಷ್ಮೇಶ್ವರ; ಎಸ್ಸೆಸ್ಸೆಲ್ಸಿಯಲ್ಲಿ ಶೇ73ರಷ್ಟು ಫಲಿತಾಂಶ ಬಂದಿದೆ. ಪಿ.ಯುನಲ್ಲಿ ವಿಜ್ಞಾನ ಕಠಿಣ ಆಗುತ್ತದೆ ಎನ್ನುತ್ತಿದ್ದಾನೆ. ಏನು ಓದಿಸುವುದು?

–ವಿಜ್ಞಾನದ ಕೋರ್ಸ್ ಆಯ್ದುಕೊಂಡರೆ ವಿಪುಲ ಅವಕಾಶಗಳಿರುವುದು ನಿಜ. ಆದರೆ, ವಿದ್ಯಾರ್ಥಿ ವಿಜ್ಞಾನ ವಿಭಾಗಕ್ಕೆ ಸೇರಿದ ಮಾತ್ರಕ್ಕೆ ಸಾಧನೆ ಸಾಧ್ಯವಾಗದು. ಅದಕ್ಕೆ ಆಸಕ್ತಿ, ಕಠಿಣ ಪರಿಶ್ರಮ ಬೇಕೇಬೇಕು. ಒತ್ತಾಯ ಮಾಡಿ, ವಿಜ್ಞಾನಕ್ಕೆ ಸೇರಿದರೆ, ಆತನಿಗೆ ಆಸಕ್ತಿ ಇಲ್ಲದಿದ್ದರೆ, ಸಾಧನೆ ಮಾಡಲಾರ. ಹೀಗಾಗಿ ಎಲ್ಲ ಪೋಷಕರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ವಿಷಯಗಳ ಆಯ್ಕೆಯಿಂದ ಇರುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಸುವುದು ಅಗತ್ಯ.

* ಪ್ರದೀಪ ಶೆಟ್ಟಿ, ಸಾಗರ:ಪಿಯುಸಿ ನಂತರ ಸಿಇಟಿಗೆ ತರಬೇತಿ ಇಲ್ಲದೇ ಯಶಸ್ಸು ಪಡೆಯಬಹುದಾ?

–ಸಾಮಾಜಿಕ ಜಾಲತಾಣಗಳಲ್ಲಿ ಸಿಇಟಿಗಾಗಿ ಅಭ್ಯಾಸ ಪರಿಕರಗಳು ಲಭ್ಯವಿವೆ. ಆದರೂ ಪರಿಣತ ಅಧ್ಯಾಪಕರ ಸಲಹೆ ಪಡೆದು ಪಿಯುಸಿಯಲ್ಲಿ ವಿಷಯವಾರು ಅಧ್ಯಯನ ಮಾಡಿದರೆ ತರಬೇತಿ ಇಲ್ಲದೆಯೂ ಸಿಇಟಿ ಪಾಸ್ ಮಾಡಬಹುದು.

*ವೀರನಗೌಡ ಬಳ್ಳಾರಿ, ಬಸವರಾಜ್,:ಮಗಳು/ಮಗ ಎಸ್ಸೆಸ್ಸೆಲ್ಸಿ ಪಾಸ್ ಆಗಿದ್ದಾರೆ, ಯಾವ ವಿಭಾಗ ಆಯ್ಕೆ ಮಾಡಿಕೊಂಡರೆ ಉತ್ತಮ ?

– ಮಕ್ಕಳ ಆಸಕ್ತಿ ವಿಷಯವನ್ನು ಕೇಳಿಕೊಂಡು ಕೋರ್ಸ್ ಆಯ್ಕೆಮಾಡಿಕೊಳ್ಳಲು ಹೇಳಿ. ಗೊಂದಲವಿದ್ದರೆ ಮಹೇಶ ಪಿಯು ಕಾಲೇಜಿನ ಶೈಕ್ಷಣಿಕ ಸಲಹಾ ತಂಡವನ್ನು ಭೇಟಿ ಮಾಡಿ ಗೊಂದಲ ಪರಿಹರಿಸಿಕೊಳ್ಳಿ.

* ಶಕ್ತಿನಗರ, ರಾಯಚೂರು: ಮಗ ಎಸ್ಸೆಸ್ಸೆಲ್ಸಿಯಲ್ಲಿ ಶೇ 57 ಅಂಕ ಪಡೆದಿದ್ದಾನೆ. ಯಾವ ಕೋರ್ಸ್ ಉತ್ತಮ ?

–ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಕಲಾವಿಭಾಗದಲ್ಲಿ ಮುಂದುವರಿದರೆ, ಸಿವಿಲ್ ಪರೀಕ್ಷೆಗಳನ್ನು ಬರೆಯಬಹುದು. ಕೌಶಲಾಧಾರಿತ ತರಬೇತಿಗಳೂ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ.

* ಭರತ್ ಕೊಪ್ಪಳ, ಪ್ರವೀಣ್ ಕೊಪ್ಪಳ : ಎಸ್ಸೆಸ್ಸೆಲ್ಸಿಯಲ್ಲಿ ಶೇ 75/76 ಅಂಕ ಪಡೆದಿದ್ದೇವೆ. ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು?

–ಯಾವುದೇ ಕೋರ್ಸ್ ಆಯ್ಕೆಮಾಡಿಕೊಂಡರೂ ಪರಿಶ್ರಮ ಬೇಡುತ್ತವೆ.ಹೀಗಾಗಿ ನಿಮ್ಮ ಆಸಕ್ತಿ ವಿಷಯ ಅಭ್ಯಾಸ ಮಾಡಿ. ವಿಜ್ಞಾನ ವಿಭಾಗದಲ್ಲಿ ಪಿಯು ಮಾಡಿದರೆ ಈಗ ವಿಪುಲ ಅವಕಾಶಗಳಿವೆ. ವಿಷಯಗಳ ಆಯ್ಕೆ ಬಗ್ಗೆ ಗೊಂದಲವಿದ್ದರೆ ಮಹೇಶ ಪಿಯು ಕಾಲೇಜಿನಲ್ಲಿ ಕರಿಯರ್ ಕೌನ್ಸಿಲ್ ಫೋರಂ ತಂಡದ ಸಲಹೆ ಪಡೆಯಬಹುದು.

*ಶಿವಪ್ಪ,ಗುರುಕುಂಟೆ: ಪಿಯುಸಿ ಕಲಾ ವಿಭಾಗದಲ್ಲಿ ಅವಕಾಶಗಳು ಹೇಗಿವೆ?

–ಕಲಾ ವಿಭಾಗದಲ್ಲಿ ಉತ್ತಮ ಅವಕಾಶಗಳಿವೆ. ತರಗತಿ ತಪ್ಪಿಸದೇ ವಿಷಯವಾರು ಚೆನ್ನಾಗಿ ಅಂಕಗಳನ್ನು ಪಡೆದು, ನಂತರ ಪದವಿ ಮುಗಿಸಿ ನಾಗರಿಕ ಸೇವಾ ಪರೀಕ್ಷೆ ಬರೆಯಬಹುದು.

* ಅಶ್ವತ್ಥ್, ಮುದ್ದೇಬಿಹಾಳ: ಕೃಷಿಯತ್ತ ಆಸಕ್ತಿ ಇದೆ. ಪಿಯುಸಿ ಮುಗಿದಿದೆ. ಯಾವ ಕೋರ್ಸ್ ತೆಗೆದುಕೊಂಡರೆ ಅನುಕೂಲವಾಗುತ್ತದೆ?

–ಬಿಎಸ್ಸಿ ಅಗ್ರಿಕಲ್ಚರ್ ಅತ್ಯುತ್ತಮ ಆಯ್ಕೆ. ನಂತರ ಎಂಎಸ್ಸಿ ಅಗ್ರಿಕಲ್ಚರ್ ಓದಬಹುದು.

* ಪ್ರಮೋದ್, ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಮುಗಿಸಿರುವ ಸಹೋದರನಿಗೆ ಮುಂದೆ ನೌಕರಿ ಸಿಗುವ ವಿಷಯಗಳನ್ನು ತೆಗೆದುಕೊಳ್ಳಬೇಕೆ? ಅಥವಾ ಉನ್ನತ ಶಿಕ್ಷಣ ಪಡೆಯುವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆ ಎಂಬ ಗೊಂದಲವಿದೆ. ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ವಿಜ್ಞಾನ ವಿಷಯ ಆಯ್ಕೆ ಬಗ್ಗೆ ಕೀಳರಿಮೆ ಇದೆ...

–ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಶಿಕ್ಷಣದ ನಂತರ ಅವಕಾಶಗಳು, ನೌಕರಿಗಳಲ್ಲಿ ವ್ಯತ್ಯಾಸಗಳಿರುತ್ತವೆ. ನೌಕರಿಗೆ ಸಂಬಂಧಿಸಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದಾದರೆ, ಪಿಯುಸಿ ಶಿಕ್ಷಣ ಮುಗಿದ ನಂತರ ಯೋಚಿಸಿ. ವಿಜ್ಞಾನ ಕಲಿಕೆಗೆ ಭಾಷೆ ಅಡ್ಡಿಯಾಗದು. ಅದಕ್ಕೆ ತಕ್ಕ ಅಭ್ಯಾಸ ಬೇಕು. ಅದಕ್ಕಾಗಿ ನಮ್ಮ ಸಂಸ್ಥೆಯಲ್ಲಿ ಆರಂಭದಲ್ಲಿ ಇಂಗ್ಲಿಷ್ ವ್ಯಾಕರಣ, ಸ್ಪೋಕನ್ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ. ಹೊಸ ಶಿಕ್ಷಣ ನೀತಿಯಡಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಲಾಗುತ್ತಿದೆ. ವಿಜ್ಞಾನ ಕಲಿಕೆಗೆ ಆತಂಕಬೇಡ.

ವಿದ್ಯಾರ್ಥಿಗಳಿಗೆ ಒಂದಿಷ್ಟು ಟಿಪ್ಸ್...

* ಯಾವ ಕೋರ್ಸ್ ಆದರೂ ಯಶಸ್ಸು, ಆಸಕ್ತಿ, ಛಲ, ಪರಿಶ್ರಮ, ಸಮಯದ ಸದುಪಯೋಗದ ಮೇಲೆ ನಿರ್ಧಾರವಾಗುತ್ತದೆ.

* ಭವಿಷ್ಯದಲ್ಲಿ ನೀವು ಏನಾಗ ಬಯಸುವಿರಿ ಎಂಬುದರ ಯೋಜನೆಯೊಂದಿಗೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಿ. ಆರಂಭದಲ್ಲಿಯೇ ಸರಿಯಾದ ಪಥದಲ್ಲಿ ಸಾಗಿದರೆ, ಸಾಧನೆ ಸುಲಭ.

* ಮಕ್ಕಳ ಮನಸ್ಸಿಗೆ ಒತ್ತಡ ಹೇರಬೇಡಿ. ಮಕ್ಕಳಿಗೆ ಯಾವ ವಿಷಯ ಇಷ್ಟ ಎನ್ನುವುದನ್ನು ಪೋಷಕರು ಅವರಿಂದ ಕೇಳಿ ತಿಳಿದುಕೊಳ್ಳಲಿ. ಆಸಕ್ತಿಯಿರುವ ವಿಷಯ ಓದಿದರೆ ಅತ್ಯುತ್ತಮ ಸಾಧನೆ ಸಾಧ್ಯ.

* ಮಗುವಿನ ಅಂಕದ ಮೇಲೆ ಕೋರ್ಸ್ ನಿರ್ಧಾರ ಮಾಡಬೇಡಿ. ಇತರೆ ಮಕ್ಕಳಿಗೆ ಹೋಲಿಕೆ ಮಾಡಬೇಡಿ. ಮಕ್ಕಳ ಆಸಕ್ತಿಗೆ ಪೂರಕವಾಗಿರಿ.

*ಯಾವುದೇ ವಿಭಾಗಕ್ಕೆ ಸೇರಿದ ಮಾತ್ರಕ್ಕೆ ಯಶಸ್ಸು ಸಿಗುವುದಿಲ್ಲ. ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಅವರು ಪಡುವ ಪರಿಶ್ರಮ, ಸಹ ವಿದ್ಯಾರ್ಥಿಗಳ ಒಡನಾಟ, ಕಲಿಕಾ ವಾತಾವರಣ ಹೀಗೆ ಎಲ್ಲವೂ ಮುಖ್ಯವಾಗುತ್ತವೆ.

* ಯಾವ ವಿಷಯ ಆಯ್ಕೆ ಮಾಡಿಕೊಂಡರೂ ಓದದೇ ಪಾಸ್ ಆಗಲು ಸಾಧ್ಯವೇ? ಸಾಧನೆಗೆ ಪರಿಶ್ರಮ ಅತ್ಯಗತ್ಯ.

* ಯಾರೋ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನೀವೂ ಮಾಡಿಕೊಂಡರೆ, ಆವರು ರೋಲ್ಮಾಡೆಲ್ (ಮಾದರಿ) ಆಗುತ್ತಾರೆ ಅಷ್ಟೇ. ಅವರಿಗೆ ಸಿಕ್ಕ ಯಶಸ್ಸು ನಿಮಗೆ ಸಿಕ್ಕೇ ಸಿಗುತ್ತೆ ಎಂದೇನಿಲ್ಲ. ಸ್ವ–ಆಸಕ್ತಿಯಿಂದ ನೀವು ವಿಷಯ ಆಯ್ದುಕೊಂಡು ಓದಿದರೆ, ಸಾಧನೆ ಸಾಧ್ಯ.

ಮಹೇಶ ಪಿಯು ಕಾಲೇಜಿನ ವಿಶೇಷ

2014ರ ಜೂನ್ 17ರಂದು ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಐ.ಸವದತ್ತಿ ಅವರು ಧಾರವಾಡದಲ್ಲಿ ಉದ್ಘಾಟಿಸಿದ ಮಹೇಶ ಪಿಯು ಕಾಲೇಜು 126 ಮಕ್ಕಳಿಂದ ಆರಂಭವಾಗಿ, ಪ್ರಸ್ತುತ 700 ವಿದ್ಯಾರ್ಥಿಗಳಿದ್ದಾರೆ. ವಿಜ್ಞಾನ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಕ್ಕಳಿಗೆ ಉಚಿತ ಕರಿಯರ್ ಕೌನ್ಸೆಲಿಂಗ್ ಇಲ್ಲಿ ನೀಡಲಾಗುತ್ತದೆ.

* ಕಾಲೇಜಿನಲ್ಲಿ ಬೋಧಕ ಸಿಬ್ಬಂದಿ, ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಬೆಳವಣಿಗೆಯನ್ನು ಗಮನಿಸುತ್ತ, ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಕಾಲೇಜಿನ ಪಾಠದ ಜತೆಗೆ, ಸಂಜೆ ಹಾಸ್ಟೆಲ್ನಲ್ಲಿ ಮತ್ತೊಮ್ಮೆ ಪಾಠಗಳನ್ನು ಪುನರ್ಮನನ ಮಾಡಿ ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸಲಾಗುತ್ತದೆ.

*ದಿನವೂ ಬೆಳಿಗ್ಗೆ 8.45ಕ್ಕೆ ಪ್ರಾರ್ಥನಾ ಸಭೆ ನಡೆಯುತ್ತದೆ. ಅಂದಿನ ದಿನ ವಿಶೇಷದ ಬಗ್ಗೆ ಸಣ್ಣ ಉಪನ್ಯಾಸದ ಮೂಲಕ, ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.

* ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆಗಳ ಕುರಿತು ಆಪ್ತ ಸಮಾಲೋಚನೆ ನಡೆಸಿ, ಪರಿಹಾರ ಸೂಚಿಸಲಾಗುತ್ತದೆ.

* ಕಾಲೇಜಿನಲ್ಲಿ ‘ಜೀರೊ ರ್ಯಾಗಿಂಗ್’ ಇದೆ. ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ.

ಲಭ್ಯವಿರುವ ಕೋರ್ಸ್ಗಳು

* ಪಿಸಿಎಂಬಿ (ಭೌತವಿಜ್ಞಾನ, ರಾಸಾಯನ ವಿಜ್ಞಾನ, ಗಣಿತ, ಜೀವವಿಜ್ಞಾನ)

* ಪಿಸಿಎಂಸಿ (ಭೌತವಿಜ್ಞಾನ, ರಾಸಾಯನ ವಿಜ್ಞಾನ, ಗಣಿತ, ಕಂಪ್ಯೂಟರ್ ವಿಜ್ಞಾನ)

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತ್ಯೇಕ ತಂಡ: ಕೆಸಿಇಟಿ, ನೀಟ್, ನಾಟಾ, ಜೆಇಇ ಮೈನ್ಸ್, ಬಿಎಸ್ಸಿ ಅಗ್ರಿ,ಕೆವೈಪಿವೈ ಪರೀಕ್ಷೆಗೆ ತರಬೇತಿ ಲಭ್ಯ.

ವಿಳಾಸ: ಐಸಿಎಸ್ ಮಹೇಶ ಪಿಯು ಕಾಲೇಜ್,ಹಳ್ಯಾಳ ರಸ್ತೆ, ಶ್ರೀನಗರ. ಸಂಪರ್ಕಕ್ಕೆ ದೂರವಾಣಿ: 0836–2773002

ಲಾಕ್ಡೌನ್ ಅವಧಿಯಲ್ಲಿ ಆನ್ಲೈನ್ ಪಾಠ

ಮಾರ್ಚ್ 27ರಿಂದ ಆನ್ಲೈನ್ ಪಾಠ ಆರಂಭಿಸಲಾಗಿದೆ. ಪಿಯು ಮೊದಲ ವರ್ಷದವರಿಗೆ ರಜಾ ಕಾಲದ ತರಗತಿ ನಡೆಸಲಾಗಿದೆ. ಮೊದಲು ಜೂಮ್ ಆ್ಯಪ್ ಬಳಸಿ ಆನ್ಲೈನ್ ತರಗತಿ ಆರಂಭಿಸಲಾಯಿತು. ನೆಟ್ವರ್ಕ್ ಲಭ್ಯತೆ ಮತ್ತು ಸ್ಕ್ರೀನ್ ಟೈಮ್ (ಮೊಬೈಲ್ ಬಳಕೆ ಅವಧಿ) ಇವನ್ನೆಲ್ಲ ಗಮನದಲ್ಲಿ ಇರಿಸಿಕೊಂಡು ದಿನಕ್ಕೆ ಎರಡು ತಾಸು ಮಾತ್ರ ತರಗತಿ ಮಾಡಲಾಗುತ್ತಿದೆ. ಅದಕ್ಕೆ ಮಕ್ಕಳ ಪ್ರತಿಕ್ರಿಯೆ ಪಡೆದು ತರಗತಿಯಲ್ಲಿ ಸುಧಾರಣೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಶನಿವಾರ ಪರೀಕ್ಷೆ ನಡೆಸಲಾಗುತ್ತದೆ.

ಸದ್ಯ ಯುಟ್ಯೂಬ್ ಚಾನೆಲ್ (ಇ–ಜ್ಞಾನ ದರ್ಪಣ) ಆರಂಭಿಸಿ ಅದರಲ್ಲೇ ಎಲ್ಲ ಪಾಠಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಅವರಿಗೆ ಸಮಯ ಆದಾಗ ಪಾಠಗಳನ್ನು ನೋಡಬಹುದು. ಅದೂ ಅಲ್ಲದೆ, ಮೆಮೊರಿ ಕಾರ್ಡ್ಗಳಲ್ಲಿ ಪಾಠಗಳನ್ನು ಹಾಕಿ ಮಕ್ಕಳಿಗೆ ತಲುಪಿಸುವ ವ್ಯವಸ್ಥೆಯೂ ನಡೆಯುತ್ತಿದೆ. ಅದರಿಂದ ಅಂತರ್ಜಾಲ ಸಂಪರ್ಕ ಇಲ್ಲದೆಯೂ ಮಕ್ಕಳು ಪಾಠ ಕಲಿಯಬಹುದು ಎನ್ನುತ್ತಾರೆ ಪ್ರಾಂಶುಪಾಲ ಉಮೇಶ ಪುರೋಹಿತ

ಹಾಸ್ಟೆಲ್ ಎಂದರೆ ಶಿಕ್ಷೆಯಲ್ಲ...

ಬಹುತೇಕರಿಗೆ ಹಾಸ್ಟೆಲ್ ಎಂದರೆ ಕಟ್ಟು ನಿಟ್ಟಿನ ವಾತಾವರಣ, ಅದೊಂದು ಜೈಲು–ಶಿಕ್ಷೆ ಎಂಬ ಭಾವನೆ. ಆದರೆ ನಮ್ಮಲ್ಲಿ ಹಾಗಲ್ಲ. ಅದೊಂದು ಮನೆಯ ವಾತಾವರಣ. ಮನೆಯ ನೆನಪು ಕಾಡದ ಹಾಗೆ ನಾವು ಮಕ್ಕಳನ್ನು ನೋಡಿಕೊಳ್ಳುತ್ತೇವೆ’ ಎನ್ನುತ್ತಾರೆ ಧಾರವಾಡದ ಐಸಿಎಸ್ ಮಹೇಶ ಪಿಯು ಕಾಲೇಜಿನ ಪ್ರಾಂಶುಪಾಲ ಉಮೇಶ ಪುರೋಹಿತ.

ನಮ್ಮಲ್ಲಿ ಮಕ್ಕಳ ಮಾನಸಿಕ, ಭೌತಿಕ ಬೆಳವಣಿಗೆ, ಮಕ್ಕಳ ಸಮಸ್ಯೆಗಳ ಕುರಿತು ಆಪ್ತ ಸಮಾಲೋಚನೆ ನಡೆಸುತ್ತಾರೆ. ಆರೋಗ್ಯಕ್ಕೆ ಆದ್ಯತೆ ನೀಡುತ್ತಾರೆ. ಶುಚಿ– ರುಚಿಯಾದ ಊಟ ನೀಡುತ್ತಾರೆ. ಉಪನ್ಯಾಸಕರು ವಾರಕ್ಕೊಮ್ಮೆ ವಸತಿ ನಿಲಯಗಳಿಗೆ ತಪ್ಪದೇ ಭೇಟಿ ನೀಡುತ್ತಾರೆ. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಬಳಕೆಗೆ ಅವಕಾಶವಿಲ್ಲ. ವಾರಕ್ಕೊಮ್ಮೆ ಪಾಲಕರ ಜೊತೆ ಮಾತನಾಡಲು ಅವಕಾಶ ಮಾಡಿಕೊಡಲಾಗುತ್ತದೆ.

‘ಸಂಸ್ಕಾರ–ಸಂಪ್ರದಾಯದ ಅರಿವು ಮಕ್ಕಳನ್ನು ಉತ್ತಮ ನಾಗರಿಕನ್ನಾಗಿ ಮಾಡುತ್ತದೆ. ಮನೆಗಳಲ್ಲಿ ಮಾಡುವಂತೆ ವಸತಿ ನಿಲಯಗಳಲ್ಲೂ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ನಿತ್ಯ ಬೆಳಿಗ್ಗೆ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಲಾಗುತ್ತದೆ’ ಎನ್ನುತ್ತಾರೆ ಪ್ರಾಂಶುಪಾಲರು.

ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಅನಿಸಿಕೆ

‘ಉಪನ್ಯಾಸಕರು ಅತ್ಯುತ್ತಮವಾಗಿ ಪಾಠ ಮಾಡುತ್ತಿದ್ದ ಕಾರಣ ಉತ್ತಮ ಅಂಕ ಪಡೆಯುವುದು ಸಾಧ್ಯವಾಯಿತು. ನನಗೆ ಕಿವಿ ಕೇಳಿಸುವುದಿಲ್ಲ. ಆ ಕಾರಣದಿಂದಲೂ ಎಲ್ಲ ಶಿಕ್ಷಕರು ನನ್ನ ಬಗ್ಗೆ ವಿಶೇಷ ಆಸ್ಥೆ ವಹಿಸುತ್ತಿದ್ದರು. ಅಲ್ಲಿ ಸಿಕ್ಕ ಶಿಕ್ಷಣದ ಪರಿಣಾಮವಾಗಿ ಕೆ–ಸೆಟ್ನಲ್ಲಿ ಉತ್ತಮ ಅಂಕ ಪಡೆದೆ. ಸದ್ಯ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಏಳನೇ ಸೆಮಿಸ್ಟರ್ ಓದುತ್ತಿದ್ದೇನೆ. ಮಹೇಶ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದಕ್ಕ ನನಗೆ ಹೆಮ್ಮೆಯಿದೆ.’

–ಶಿವಯೋಗಿ ಬಿ.ಎನ್., ಬೆಂಗಳೂರು (2017ರ ಬ್ಯಾಚ್ ಶೇ 98 ಅಂಕ ಪಡೆದ ವಿದ್ಯಾರ್ಥಿ)

ಮಹೇಶ ಪಿ.ಯು ಕಾಲೇಜಿಗೊಮ್ಮೆ ಪ್ರವೇಶ ಪಡೆದರೆ, ಅಲ್ಲಿ ನಮ್ಮನ್ನು ವಿದ್ಯಾರ್ಥಿ ಎನ್ನುವುದಕ್ಕಿಂತ ಕುಟುಂಬದ ಸದಸ್ಯರಂತೆ ಪರಿಗಣಿಸುತ್ತಾರೆ. ಶಿಕ್ಷಣದ ಜೊತೆಗೆ ನಮ್ಮ ಆಸಕ್ತಿ ಕ್ಷೇತ್ರವನ್ನು ತಿಳಿದುಕೊಂಡು ಅದಕ್ಕೂ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತಾರೆ. ನಾವು ಉಪನ್ಯಾಸಕರ ಹತ್ತಿರ ಮಾತನಾಡಲು ಹಿಂದೇಟು ಹಾಕಿದರೂ ವಾರ್ಡನ್ಗಳೇ ಉಪನ್ಯಾಸಕರ ಹತ್ತಿರ ಮಾತನಾಡಿ, ಅಭ್ಯಾಸದ ಬಗೆಗಿನ ನಮ್ಮ ಸಮಸ್ಯೆ ಪರಿಹರಿಸಲು ನೆರವಾಗುತ್ತಿದ್ದರು. ನೀಟ್ ಕೋಚಿಂಗ್ ಪಡೆಯುತ್ತಿದ್ದೇನೆ. ಐಎಎಸ್ ಅಧಿಕಾರಿ ಆಗುವುದೇ ನನ್ನ ಉದ್ದೇಶ.

–ಸೃಜನಾ ಕುಲಕರ್ಣಿ, ಬೈಲಹೊಂಗಲ (2019ರ ಬ್ಯಾಚ್, ದ್ವಿತೀಯ ಪಿಯು ರಾಜ್ಯಕ್ಕೆ 7ನೇ ಸ್ಥಾನ ),

ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ. ನಮ್ಮಲ್ಲಿರುವ ಕೌಶಲಗಳನ್ನು ಅರಿತು ಅದನ್ನು ಪೋಷಿಸುತ್ತಿದ್ದರು. ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಅದರಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಮುಂದೆ ಬಿಎಸ್ಸಿ ಅಗ್ರಿ ಮಾಡುವ ಆಶಯ ಇದೆ.

–ಮೇಘಾ ಸೊಂಡೂರು, (2020ರ ಬ್ಯಾಚ್,ದ್ವಿತೀಯ ಪಿಯು ರಾಜ್ಯಕ್ಕೆ 12 ನೇ ಸ್ಥಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.