ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಮೌಲ್ಯಮಾಪನ: ಶೇ 10ರಷ್ಟೇ ಹಾಜರಾತಿ

ಡಿಡಿಪಿಯುಗಳಿಂದ ಒತ್ತಡ–ಸರ್ಕಾರದ ದ್ವಂದ್ವಕ್ಕೆ ಆಕ್ಷೇಪ
Last Updated 27 ಮೇ 2020, 19:11 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬುಧವಾರ ಆರಂಭವಾಗಿದ್ದು, ರಾಜ್ಯದ ಒಟ್ಟು 43 ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಹಾಜರಾದವರ ಸರಾಸರಿ ಪ್ರಮಾಣ ಶೇ 10ರಷ್ಟು ಮಾತ್ರ.

ನಗರದಲ್ಲಿನ ಮೌಲ್ಯಮಾಪನ ಕೇಂದ್ರಗಳಲ್ಲಿ ಅರ್ಥಶಾಸ್ತ್ರ ಪತ್ರಿಕೆಗಳ ಮೌಲ್ಯಮಾಪನಕ್ಕೆ 49ರಲ್ಲಿ 16 ಮಂದಿ, ರಾಜ್ಯಶಾಸ್ತ್ರಕ್ಕೆ 54ರಲ್ಲಿ 11 ಮಂದಿ ಹಾಜರಾಗಿದ್ದರು. ಇದ್ದುದರಲ್ಲಿ ಇದುವೇ ಅಧಿಕ. ಸಮಾಜಶಾಸ್ತ್ರಕ್ಕೆ 53ರಲ್ಲಿ 5 ಇತಿಹಾಸಕ್ಕೆ 93ರಲ್ಲಿ 8 ಮಂದಿ ಮಾತ್ರ ಬಂದಿದ್ದರು. ಕನ್ನಡ 8 ಮಂದಿ ಹಾಜರಾಗಿದ್ದರು. ಧಾರವಾಡ ಕೇಂದ್ರದಲ್ಲಿ ಅಕೌಂಟೆನ್ಸಿಗೆ 7, ವ್ಯವಹಾರ ಅಧ್ಯಯನಕ್ಕೆ 10 ಮಂದಿಯಷ್ಟೇ ಹಾಜರಾಗಿದ್ದರು.

ಕಲಬುರ್ಗಿಯಲ್ಲಿ ಕನ್ನಡ ಪತ್ರಿಕೆಗಳ ಮೌಲ್ಯಮಾಪನಕ್ಕೆ 45ರಲ್ಲಿ 13 ಮಂದಿಯಷ್ಟೇ ಬಂದಿದ್ದರು. ಮೈಸೂರಿನಲ್ಲಿ ರಾಜ್ಯಶಾಸ್ತ್ರಕ್ಕೆ 40ರಲ್ಲಿ 9 ಮಂದಿ, ಕನ್ನಡಕ್ಕೆ 88ರಲ್ಲಿ 36 ಮಂದಿ ಹಾಗೂ ಸಮಾಜಶಾಸ್ತ್ರಕ್ಕೆ 22 ಮಂದಿ ಹಾಜರಾಗಿದ್ದರು.

ಬುಧವಾರ ಉಪಮುಖ್ಯ ಮೌಲ್ಯಮಾಪಕರಿಗೆ ಹಾಜರಾಗಲು ಸೂಚಿಸಿದ್ದರೆ, ಸಹಾಯಕ ಮೌಲ್ಯಮಾಪಕರಿಗೆ ಶುಕ್ರವಾರದಿಂದ ಹಾಜರಾಗಲು ತಿಳಿಸಲಾಗಿದೆ.

‘ಲಾಕ್‌ಡೌನ್‌ ಇನ್ನೂ ಮುಗಿದಿಲ್ಲ, ಹೋಟೆಲ್‌ಗಳು, ಲಾಡ್ಜ್‌ಗಳು ತೆರೆದಿಲ್ಲ. ಮೌಲ್ಯಮಾಪನ ಕಡ್ಡಾಯವಲ್ಲ ಎಂದು ಹೇಳುತ್ತಲೇ ಡಿಡಿಪಿಯುಗಳಿಂದ ಒತ್ತಡ ಹಾಕಿಸಲಾಗುತ್ತಿದೆ. ಇದೇ 31ಕ್ಕೆ ಲಾಕ್‌ಡೌನ್‌ ಮುಗಿಯುತ್ತದೋ, ಇಲ್ಲವೋ ಎಂಬುದು ಗೊತ್ತಾಗುತ್ತದೆ, ಅಲ್ಲಿಯವರೆಗೆ ಅವಸರ ಮಾಡಿದ್ದು ಏಕೆ’ ಎಂದು ಹಲವಾರು ಕಾಲೇಜುಗಳ ಉಪನ್ಯಾಸಕರು ಪ್ರಶ್ನಿಸಿದ್ದಾರೆ.

29ಕ್ಕೆ ನಿರ್ಧಾರ: ‘ಸರ್ಕಾರದ ತಪ್ಪು ನಿರ್ಧಾರಗಳನ್ನು ಸಚಿವರಿಗೆ ಮತ್ತು ನಿರ್ದೇಶಕರಿಗೆ ತಿಳಿಸಿದ್ದೇವೆ. ಎರಡು ವರ್ಷದ ಹಿಂದೆ ಇದ್ದಂತೆ ಅಂಕಗಳನ್ನು ಒಟ್ಟುಗೂಡಿಸುವ ವ್ಯವಸ್ಥೆ ಇರಲಿ, ಎಲ್ಲಾ ಜಿಲ್ಲೆಗಳಿಗೂ ಮೌಲ್ಯಮಾಪನವನ್ನು ವಿಸ್ತರಿಸಿ, ಆಗ ಮೌಲ್ಯಮಾಪಕರ ಕೊರತೆ ಆಗದೆ ನಿಗದಿತ ಸಮಯದೊಳಗೆ ಮೌಲ್ಯಮಾಪನ ಕೊನೆಗೊಳಿಸುವುದು ಸಾಧ್ಯ ಎಂದು ತಿಳಿಸಿದ್ದೇವೆ. ಇದೇ 29ರಂದು ಒಂದು ತೀರ್ಮಾನಕ್ಕೆ ಬರುವುದಾಗಿ ತಿಳಿಸಿದ್ದಾರೆ’ ಎಂದು ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ನಿಂಗೇಗೌಡರ ಜತೆಗೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸಹ ಇದ್ದರು.

ಮೇಲಿಂದ ಮೇಲೆ ಒತ್ತಡ

‘ಹೊರ ಜಿಲ್ಲೆಯವರು ಮೌಲ್ಯಮಾಪನ ಕಾರ್ಯಕ್ಕೆ ಬರುವುದು ಕಡ್ಡಾಯವಲ್ಲ ಎಂದು ನಿರ್ದೇಶಕರು ಸ್ಷಪ್ಟ ಸೂಚನೆ ನೀಡಿದ್ದಾರೆ. ಆದರೆ ಇದೀಗ ಡಿಡಿಪಿಯುಗಳ ಮೂಲಕ ಪ್ರಾಂಶುಪಾಲರಿಗೆ ಕರೆ ಮಾಡಿಸಿ, ಮೌಲ್ಯಮಾಪನಕ್ಕೆ ಹಾಜರಾಗಲೇಬೇಕು ಎಂಬ ಮೇಲಿಂದ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ. ಸ್ಪಷ್ಟ ನಿರ್ಧಾರಕ್ಕೆ ಬರುವುದಕ್ಕೆ ಏನು ತೊಂದರೆ’ ಎಂದು ಪ್ರಾಂಶುಪಾಲರೊಬ್ಬರು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT