ಭಾನುವಾರ, ಅಕ್ಟೋಬರ್ 25, 2020
22 °C

PUC ವಿದ್ಯಾರ್ಹತೆಗೆ ರೈಲ್ವೆಯಲ್ಲಿ ಯಾವ ಕೆಲಸ ಸಿಗಲಿದೆ? ಮಾಹಿತಿ ಇಲ್ಲಿದೆ...

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

ನಾನು ಬಿ.ಎಸ್‌ಸಿ. ಪದವಿ ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪಿಯುಸಿ ಅಥವಾ ಪದವಿ ಅರ್ಹತೆ ಮೇಲೆ ರೈಲ್ವೆ ಇಲಾಖೆಯಲ್ಲಿ ಸಿಗುವ ಹುದ್ದೆಗಳ ಮಾಹಿತಿ, ಪುಸ್ತಕ ಮತ್ತು ಪಠ್ಯಕ್ರಮವನ್ನು ತಿಳಿಸಿ.

ಜಗದೀಶ್ ಬಿ.ಎನ್., ಮಂಡ್ಯ

ಜಗದೀಶ್, ದ್ವೀತಿಯ ಪಿಯುಸಿಯ ಆಧಾರದ ಮೇಲೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಸಿ ಉದ್ಯೋಗಾವಕಾಶಗಳಿಗೆ ಪ್ರಯತ್ನಿಸಬಹುದು. ಸಾಮಾನ್ಯವಾಗಿ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಟಿಕೆಟ್ ಕಲೆಕ್ಟರ್, ಜ್ಯೂನಿಯರ್ ಟೈಮ್ ಕೀಪರ್, ಟ್ರೇನ್ಸ್ ಕ್ಲರ್ಕ, ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್ ಇತ್ಯಾದಿ ಹುದ್ದೆಗಳಿಗೆ ಪ್ರಯತ್ನಿಸಬಹುದು. ನಿಮ್ಮ ಪದವಿ ಆದ ನಂತರ ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್, ಸೀನಿಯರ್ ಕ್ಲರ್ಕ್, ಗೂಡ್ಸ್ ಗಾರ್ಡ್, ಟ್ರಾಫಿಕ್ ಅಸಿಸ್ಟೆಂಟ್, ಸೀನಿಯರ್ ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್, ಸೀನಿಯರ್ ಟೈಮ್ ಕೀಪರ್ ಇತ್ಯಾದಿ ಹುದ್ದೆಗಳಿಗೆ ಪ್ರಯತ್ನಿಸಬಹುದು. ಈ ಬಗ್ಗೆ ವಿವರವಾಗಿ ತಿಳಿಯಲು ಬೆಂಗಳೂರು ವಿಭಾಗದ ವೆಬ್‌ಸೈಟ್ ಅನ್ನು (www.rrbbnc.gov.in) ಪರಿಶೀಲಿಸಿ, 2019 ರ ಸಾಲಿನ ಉದ್ಯೋಗ ಅಧಿಸೂಚನೆಯನ್ನು (CEN No.01/2019) ಗಮನಿಸಿ.

ಈಗ ರೈಲ್ವೆ ಇಲಾಖೆಯ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಾಗಿದ್ದು ಎರಡು ಹಂತದ ಸಿ.ಬಿ.ಟಿ.ಯನ್ನು ಎದುರಿಸಬೇಕಾಗುತ್ತದೆ. ಮೊದಲನೆಯ ಹಂತದ ಸಿ.ಬಿ.ಟಿ.ಯಲ್ಲಿ ಸಾಮಾನ್ಯ ಜ್ಞಾನ, ಗಣಿತ, ಸಾಮಾನ್ಯ ತಾರ್ಕಿಕ ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಮೊದಲ ಸಿಬಿಟಿಯಲ್ಲಿ ತೇರ್ಗಡೆ ಹೊಂದಿದವರನ್ನು ಎರಡನೇ ಸಿಬಿಟಿಗೆ ಆಯ್ಕೆ ಮಾಡಲಾಗುತ್ತದೆ ಮತ್ತು ಅದರಲ್ಲೂ ಕೂಡ ಸಾಮಾನ್ಯ ಜ್ಞಾನ, ಗಣಿತ, ಸಾಮಾನ್ಯ ತಾರ್ಕಿಕ ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಮೇಲೆ ತಿಳಿಸಿರುವ CEN No.01/2019 ನಲ್ಲಿ ಆಯಾ ವಿಷಯಗಳಲ್ಲಿ ಕೇಳುವ ಪಠ್ಯಕ್ರಮಗಳನ್ನು ನೀಡಲಾಗಿದೆ. ಅದರಂತೆ ನೀವು ತಯಾರಿ ನಡೆಸಬಹುದು ಅಥವಾ ರೈಲ್ವೆ ಪರೀಕ್ಷೆಗಳ ತಯಾರಿಗೆಂದೇ ಬರುವ ಪುಸ್ತಕಗಳನ್ನು ಖರೀದಿಸಿ ತಯಾರಿ ನಡೆಸಿಕೊಳ್ಳಬಹುದು. ಶುಭಾಶಯ.

***

ನಾನು ತುಮಕೂರಿನಲ್ಲಿ ಬಿ.ಎಸ್‌ಸಿ. ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ನಾನು ಕೆ.ಎಸ್‌.ಆರ್‌.ಟಿ.ಸಿ.ಯಲ್ಲಿ ಕಂಡಕ್ಟರ್‌ ಆಗಬೇಕು. ಇದಕ್ಕೆ ವಿದ್ಯಾರ್ಹತೆ ಏನು? ಯಾವ ಪುಸ್ತಕ ಓದಬೇಕು? ಎಷ್ಟು ಸಂಬಳ? ಇವೇ ಮೊದಲಾದ ಮಾಹಿತಿ ನೀಡಿ.

ನಸರುಲ್ಲ, ತುಮಕೂರು

ನಸರುಲ್ಲ, ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವೀತಿಯ ಪಿಯುಸಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ನಿರ್ವಾಹಕ ಬ್ಯಾಡ್ಜ್ ಹೊಂದಿರಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮುಖಾಂತರ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಕನ್ನಡ/ ಆಂಗ್ಲ ಭಾಷೆ, ಗಣಿತ, ಸಾಮಾನ್ಯ ಜ್ಞಾನ ಮತ್ತು ತಾರ್ಕಿಕ ಚಿಂತನೆಯ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಬಗ್ಗೆ ಖುದ್ದಾಗಿ ತಯಾರಿ ಮಾಡಿಕೊಳ್ಳಬಹುದು ಅಥವಾ ಈ ಪರೀಕ್ಷೆಗಳ ತಯಾರಿಗೆಂದೆ ಬರುವ ಪುಸ್ತಕಗಳನ್ನು ಖರೀದಿಸಿ ತಯಾರಿ ನಡೆಸಿಕೊಳ್ಳಬಹುದು. ನಿರ್ವಾಹಕ ಹುದ್ದೆಗೆ 12,400 ರೂಪಾಯಿ ಮೂಲ ವೇತನ ಆಗಿದ್ದು ಇತರ ಭತ್ಯೆಗಳು ಸೇರಿ ಒಟ್ಟು ವೇತನ ಸಿಗುತ್ತದೆ. ನೇಮಕಾತಿಯ ಅಧಿಸೂಚನೆಯನ್ನು ಕೆ.ಎಸ್.ಆರ್.ಸಿ.ಟಿ.ಸಿ.ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಪರಿಶೀಲಿಸಿ ಅರ್ಜಿ ಸಲ್ಲಿಸಿ. ಶುಭಾಶಯ.

***

ನಮಸ್ತೆ. ನಾನು ಬಿ.ಇ. (ಕಂಪ್ಯೂಟರ್‌ ಸೈನ್ಸ್‌) ಮುಗಿಸಿದ್ದೇನೆ, ಸದ್ಯ ಮೈಸೂರು ನಗರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ, ಆದರೆ ನನಗೆ ಇದ್ಯಾವುದರಲ್ಲೂ ಆಸಕ್ತಿ ಇಲ್ಲ, ಆದ್ದರಿಂದ ನಾನು ಕೃಷಿಕನಾಗಬೇಕೆಂಬ (ಮೂರು ಎಕರೆ ಜಮೀನಿದೆ) ಬಯಕೆ  ಇದೆ. ಅದರಲ್ಲಿ ಮಿಶ್ರ ಬೆಳೆ ಬೆಳೆಯಬೇಕು ಎಂಬ ಆಸೆ  ಇದೆ. ಆದರೆ ಯಾವ ರೀತಿ ಶುರು ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ, ಆದ್ದರಿಂದ ನನಗೆ ದಯಮಾಡಿ ಸೂಕ್ತ ಸಲಹೆ ನೀಡಿ ಹಾಗೂ ಈಗಾಗಲೇ ಈ ರೀತಿ ಪ್ರಯತ್ನಿಸಿರುವವರ ಮಾಹಿತಿ ತಿಳಿಸಿ.

ಕೆಂಪರಾಜು, ಮೈಸೂರು

ಕೆಂಪರಾಜು, ಈ ವಿಷಯದಲ್ಲಿ ನಾನು ತಜ್ಞನಲ್ಲದ ಕಾರಣ ನಿಮಗೆ ನಿಖರವಾದ ಮಾಹಿತಿ ನೀಡುವುದು ಕಷ್ಟ. ಆದರೆ ಈ ವಿಷಯದ ಬಗ್ಗೆ ಸಹಾಯ ಹೇಗೆ ಪಡೆಯಲು ನೀವು ಪ್ರಯತ್ನಿಸಬಹುದು ಎಂದು ಹೇಳಲು ಇಚ್ಛಿಸುತ್ತೇನೆ. ಈ ವಿಷಯದಲ್ಲಿ ಮುಂದುವರಿಯಲು ಬೇಕಾಗಿರುವುದು ಆ ಬಗ್ಗೆ ಓದು, ಸಂಶೋಧನೆ ಮತ್ತು ಅನುಭವ ಗಳಿಸಿಕೊಳ್ಳುವುದು. ನಿಮ್ಮ ಜಮೀನಿನ ಮಣ್ಣಿನ ಗುಣ, ನೀರಿನ ಲಭ್ಯತೆ ಮತ್ತು ಮಾರುಕಟ್ಟೆಯ ಕುರಿತು ತಿಳಿದು ಮುಂದುವರೆಯಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿವರ್ಷವೂ ನಿಯಮಿತವಾಗಿ ಆದಾಯ ಕೊಡಬಲ್ಲಂತಹ ಅಥವಾ ದೀರ್ಘಕಾಲಿಕ ಆದಾಯ ಕೊಡಬಲ್ಲಂತಹ ಕೃಷಿಯನ್ನು (ತೆಂಗು, ಅಡಿಕೆ, ಮರಗಳು ಇತ್ಯಾದಿ) ಮತ್ತು ಆಯಾ ಸಮಯಕ್ಕೆ (ಸೀಸನಲ್) ಆದಾಯ ಕೊಡಬಲ್ಲಂತಹ (ಧಾನ್ಯಗಳು, ತರಕಾರಿ, ಹಣ್ಣು, ಕಾಳು ಇತ್ಯಾದಿ) ಬೆಳೆಗಳನ್ನು ಹೊಂದಿಸಿಕೊಂಡು ಕೃಷಿ ಮಾಡುತ್ತಾರೆ.

ಅದರ ಜೊತೆಗೆ ಕುರಿ, ಕೋಳಿ, ಮೇಕೆ ಸಾಕಣೆ, ಮೊಟ್ಟೆ ಇತ್ಯಾದಿಗಳಿಂದಲೂ ನಿಯಮಿತ ಆದಾಯವನ್ನು ಪಡೆಯುವಂತೆ ಪ್ರಯತ್ನ ಮಾಡಬೇಕಾಗುತ್ತದೆ. ಅತೀ ಕಡಿಮೆ ಹೂಡಿಕೆ ಮತ್ತು ರಾಸಾಯನಿಕ ಬಳಸಿ ಉತ್ತಮ ಇಳುವರಿ ಪಡೆಯುವ ಬಗ್ಗೆ ಮಾಹಿತಿ ಕಲೆಹಾಕಬೇಕು. ಇವೆಲ್ಲದರ ಬಗ್ಗೆ ನೀವು ಸರಿಯಾದ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಕೃಷಿ ಕೇಂದ್ರ, ಅಂತರ್ಜಾಲದಲ್ಲಿ ಆ ಬಗ್ಗೆ ಓದು, ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಬರುವ ಮಾಹಿತಿಗಳನ್ನು ತಿಳಿದು ಅಳವಡಿಸಿಕೊಂಡು ನೋಡಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಯವ ಕೃಷಿ ಮಾಡುವ ಪ್ರಗತಿಪರ ಕೃಷಿಕರ ಗುಂಪು/ ಪೇಜ್‌ಗಳಿವೆ. ಆ ಗುಂಪುಗಳಿಗೆ ಸೇರಿ ಅವರ ಸಲಹೆ ಸೂಚನೆಗಳನ್ನು ಪಡೆಯಬಹುದು. ಈಗಾಗಲೇ ಮಾಡುತ್ತಿರುವವರ ಸಂಪರ್ಕಗಳನ್ನು ಪಡೆಯಬಹುದು. ಅಲ್ಲಲ್ಲಿ ನಡೆಯುವ ಕೃಷಿ ಮೇಳ, ಸಾವಯವ ಕೃಷಿಕರ ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಭಾಗವಹಿಸಿ ಮಾಹಿತಿ ಮತ್ತು ಸಂಪರ್ಕ ಸಾಧಿಸಬಹುದು. ಶುಭವಾಗಲಿ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು