ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ಹೆಬ್ಬಾಗಿಲು ಮೂಲ ವಿಜ್ಞಾನ

ಹೊರದೇಶಗಳಲ್ಲಿ ವಿಫುಲ ಅವಕಾಶ: ಆರಂಭಿಕ ವೇತನವೇ ₹ 40 ಸಾವಿರದಿಂದ ₹3 ಲಕ್ಷ
Last Updated 5 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮೂಲ ವಿಜ್ಞಾನದ ಕೋರ್ಸ್‌ಗಳು ಉದ್ಯೋಗ ಜಗತ್ತಿನ ಹೆಬ್ಬಾಗಿಲು. ತಿಂಗಳಿಗೆ ಕನಿಷ್ಠ ₹ 40 ಸಾವಿರದಿಂದ ₹ 3 ಲಕ್ಷದವರೆಗೆ ಆರಂಭಿಕ ಸಂಬಳ ಗಿಟ್ಟಿಸಬಹುದು.

ಪಿಯುದಲ್ಲಿ ವಿಜ್ಞಾನ ಅಭ್ಯಾಸ ಮಾಡಿದವರು ಎಂಜಿನಿಯರಿಂಗ್‌ ಅಥವಾ ಮೆಡಿಕಲ್‌ಗೆ ಸೀಟು ಸಿಕ್ಕಿಲ್ಲ ಎಂದು ಪರಿತಪಿಸಬೇಕಾಗಿಲ್ಲ. ವಾಣಿಜ್ಯ ಕೋರ್ಸ್‌ ಮಾಡಿ ಕೈತುಂಬಾ ಸಂಬಳ ಪಡೆಯುವ ಅವಕಾಶ ಕೈ ತಪ್ಪಿತ್ತಲ್ಲ ಎಂಬ ಹತಾಶೆಯೂ ಬೇಕಿಲ್ಲ. ಐಟಿ– ಬಿಟಿ ಕ್ಷೇತ್ರಕ್ಕೂ ಕಡಿಮೆ ಇಲ್ಲದಷ್ಟು ಉದ್ಯೋಗ ಅವಕಾಶಗಳು ಮತ್ತು ಕೈತುಂಬ ಸಂಬಳ ಸಿಗುತ್ತದೆ.

‘ಮೂಲ ವಿಜ್ಞಾನದ (ಬೇಸಿಕ್‌ ಸೈನ್ಸ್‌) ಕೋರ್ಸ್‌ಗಳನ್ನು ಮಾಡಿ ಹೊರ ಬರುವ ಪದವೀಧರರಿಗೆ ಭಾರತವಲ್ಲದೇ ವಿಶ್ವದಾದ್ಯಂತ ಹೇರಳವಾದ ಅವಕಾಶಗಳಿವೆ. ಉದ್ಯೋಗಾವಕಾಶಕ್ಕೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಂಡು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಪಿಯು ಬಳಿಕ ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ವೈ.ಸಿ.ಕಮಲ.

ಎಲ್ಲೆಲ್ಲಿ ಅವಕಾಶಗಳು: ಬೋಧನೆ, ಸಂಶೋಧನೆ ಮತ್ತು ಕೈಗಾರಿಕೆಗಳಲ್ಲಿ ಮೂಲ ವಿಜ್ಞಾನದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಿವೆ. ಬಿಎಸ್ಸಿ ಬಿಇಡಿ ಮಾಡಿಕೊಂಡು ಫಿನಿಷಿಂಗ್‌ ಸ್ಕೂಲ್‌ ಕೋರ್ಸ್‌ ಮಾಡಿಕೊಂಡರೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಬೋಧಕ ಹುದ್ದೆಗಳಿಗೆ ಸೇರಿಕೊಳ್ಳಬಹುದು. ಶೇ 100 ರಷ್ಟು ಪ್ಲೇಸ್‌ಮೆಂಟ್‌ ಆಗುತ್ತದೆ ಎನ್ನುತ್ತಾರೆ ಈ ಕೋರ್ಸ್‌ಗಳನ್ನು ನಡೆಸುವವರು. ಇಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರಂಭಿಕ ವೇತನವೇ ₹ 40 ಸಾವಿರ.

ಬಿಎಸ್ಸಿ ಬಳಿಕ ಸ್ನಾತಕೋತ್ತರದ ಜೊತೆಗೆ ಬಿಇಡಿ ಪದವಿ ಹೊಂದಿರುವವರಿಗೆ ಹೊರ ದೇಶಗಳಲ್ಲಿ ಉತ್ತಮ ಅವಕಾಶವಿದೆ. ಮೂರರಿಂದ ನಾಲ್ಕು ವರ್ಷ ಬೋಧನೆ ಮಾಡಿದ ಅನುಭವ ಹೊಂದಿದ್ದರೆ, ಯುಎಇ ಅಂತಹ ಕೊಲ್ಲಿ ರಾಷ್ಟ್ರಗಳಲ್ಲಿ ಬೋಧಕ ಹುದ್ದೆಗಳಿಗೆ ಸೇರಿಕೊಳ್ಳಬಹುದು. ಯುಎಇಯಲ್ಲಿ ಶಾಲಾ–ಕಾಲೇಜುಗಳಲ್ಲಿ ಬೋಧಕರಿಗೆ ಆರಂಭಿಕ ವೇತನವೇ ₹ 3 ಲಕ್ಷ. ಆ ರಾಷ್ಟ್ರದಲ್ಲಿ ಉತ್ತಮ ಗುಣಮಟ್ಟದ ಬೋಧಕರಿಗೆ ವಿಪುಲ ಅವಕಾಶ ಇದೆ.

ಉದ್ಯಮಕ್ಕೂ ರಹದಾರಿ: ಭೌತ, ರಸಾಯನ, ಜೀವ ವಿಜ್ಞಾನ ಸೇರಿದಂತೆ ಎಲ್ಲ ಬಗೆಯ ವಿಜ್ಞಾನ ಪದವೀಧರರಿಗೆ ವಿವಿಧ ಬಗೆಯ ಉದ್ಯಮಗಳಲ್ಲೂ ಉದ್ಯೋಗ ಸಿಗುತ್ತದೆ. ದೇಶದಲ್ಲಿ ಉದಾರೀಕರಣದ ಬಳಿಕ ಪೆಟ್ರೋಕೆಮಿಕಲ್‌, ಔಷಧ, ಜೀವವಿಜ್ಞಾನಕ್ಕೆ ಸಂಬಂಧಿಸಿ ಸಂಶೋಧನಾ ಉದ್ಯಮಗಳು ದೇಶದ ವಿವಿಧೆಡೆ ಸ್ಥಾಪನೆಗೊಂಡಿವೆ. ಇಂತಹ ಉದ್ಯಮಗಳಿಗೆ ಮೂಲ ವಿಜ್ಞಾನ ಕಲಿತವರೇಬೇಕು ಎನ್ನುತ್ತಾರೆ ಕಮಲ.

ಔಷಧ ಕ್ಷೇತ್ರ ಬದಲಿಸುವ ಜೀವವಿಜ್ಞಾನ
ಇನ್ನು ಕೆಲವೇ ವರ್ಷಗಳಲ್ಲಿ ಜೀವವಿಜ್ಞಾನ ಔಷಧ ತಯಾರಿಕೆ ಕ್ಷೇತ್ರದ ಚಿತ್ರಣವನ್ನೇ ಬದಲಿಸಲಿದೆ. ಔಷಧ ತಯಾರಿಕೆ ಕ್ಷೇತ್ರದಲ್ಲಿ ಜೀವವಿಜ್ಞಾನದ ಪಾತ್ರ ಮುನ್ನೆಲೆಗೆ ಬಂದಿದೆ. ರಸಾಯನವಿಜ್ಞಾನ ಮತ್ತು ಜೀವವಿಜ್ಞಾನದ ಕಾಂಬಿನೇಷನ್‌ ಅತ್ಯುತ್ತಮ. ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಗಮನ

ಹರಿಸಬೇಕು ಎನ್ನುತ್ತಾರೆ ಅಮೆರಿಕಾ ಇಲಿನಾಯ್ಸ್‌ ವಿಶ್ವವಿದ್ಯಾಲಯದ ಕೆಮಿಸ್ಟ್ರಿ, ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ಎಸ್‌ ಹೊಸ್ಮನೆ.

ಸಂಶೋಧನೆ ಮತ್ತು ಉದ್ಯೋಗ
ಎಂಎಸ್ಸಿ ಬಳಿಕ ಸಂಶೋಧನೆಗೆ ದೇಶದ ಪ್ರತಿಷ್ಠಿತ ವಿಜ್ಞಾನದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಇದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವ ವಿಜ್ಞಾನ ವಿಭಾಗದಲ್ಲಿ ಜೂನಿಯರ್‌ ರೀಸರ್ಚ್‌ ಫೆಲೊಗೆ ತಿಂಗಳಿಗೆ ಸಿಗುವ ಸಂಭಾವನೆ ₹31,000 ಮತ್ತು ಶೇ 30 ರಷ್ಟು ಎಚ್‌ಆರ್‌ಎ. ಯೋಜನಾ ಸಹಾಯಕರಿಗೆ ₹15 ಸಾವಿರದಿಂದ ₹20 ಸಾವಿರ ಇರುತ್ತದೆ. ಇನ್ನು ಕೆಲವು ಉನ್ನತ ಹುದ್ದೆಗಳ ಆಯ್ಕೆಯು ಪ್ರತಿಭೆ ಮತ್ತು ಅನುಭವವನ್ನೇ ಆಧರಿಸಿರುತ್ತದೆ. ಈ ಹುದ್ದೆಗಳಿಗೆ ₹1.50 ಲಕ್ಷಕ್ಕೂ ಹೆಚ್ಚು ವೇತನ ಸಿಗುತ್ತದೆ ಎನ್ನುತ್ತದೆ ಇಂಡಿಯಾ ಬಯೋಸೈನ್ಸ್‌ ಪೋರ್ಟಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT