ಭಾನುವಾರ, ಜೂನ್ 13, 2021
23 °C

ವೃತ್ತಿಪರ ಕೋರ್ಸ್‌: ಆಯ್ಕೆಗಳು ಸಮೃದ್ಧ

ಉಮರ್ ಯು.ಹೆಚ್. Updated:

ಅಕ್ಷರ ಗಾತ್ರ : | |

Prajavani

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ರೀತಿಯ ಆಕರ್ಷಣೆ ಮತ್ತು ಅವಾಸ್ತವ ಭ್ರಮೆಗಳಿಗೆ ಒಳಗಾಗದೆ ಪಕ್ಕಾ ಕೆರಿಯರ್ ಪ್ಲಾನಿಂಗ್ ಮಾಡಿಕೊಂಡು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಆಯ್ಕೆಗಾಗಿ ಕೆಲವು ಕೋರ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಮುಂದೇನು ಎಂಬುದು ವಿದ್ಯಾರ್ಥಿಗಳು ಮತ್ತು ಪಾಲಕರ ಗೊಂದಲ. ನಮ್ಮ ಚರ್ಚೆಗಳು ವೃತ್ತಿ ಮತ್ತು ದುಡ್ಡು ಸಂಪಾದನೆಗೆ ಮಾತ್ರ ಸೀಮಿತಗೊಳ್ಳದೆ, ಸಾಧನೆ ಮತ್ತು ಕೊಡುಗೆಗಳನ್ನು ನೀಡುವ ಗುರಿಯೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುವ ದಿಕ್ಕಿನಲ್ಲಿರಬೇಕು. ಯಾವುದೇ ರೀತಿಯ ಆಕರ್ಷಣೆ ಮತ್ತು ಅವಾಸ್ತವ ಭ್ರಮೆಗಳಿಗೆ ಒಳಗಾಗದೆ ಪಕ್ಕಾ ಕೆರಿಯರ್ ಪ್ಲಾನಿಂಗ್ ಮಾಡಿಕೊಂಡು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾದಲ್ಲಿ ಗೊಂದಲ ನಿವಾರಣೆಯಾಗಬಹುದು. ವಿದ್ಯಾರ್ಥಿಗಳ ಆಯ್ಕೆಗಾಗಿ ಎಸ್ಸೆಸ್ಸೆಲ್ಸಿ/ 10ನೇ ತರಗತಿ ಬಳಿಕದ ಕೆಲವು ಕೋರ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಎಎಸ್‌ಎಸ್‌ಸಿ (ಸೀನಿಯರ್‌ ಸ್ಕೂಲ್‌ ಸರ್ಟಿಫಿಕೇಟ್‌): ಇದು ಪಿಯುಸಿಗೆ ತತ್ಸಮಾನವಾದ ಎರಡು ವರ್ಷದ ಕೋರ್ಸ್. ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜಿಕೇಶನ್) ಪಠ್ಯಕ್ರಮವನ್ನು ಅಳವಡಿಸಿರುವ ಕಾಲೇಜುಗಳಲ್ಲಿ ಈ ಕೋರ್ಸ್‌ ಅನ್ನು ಕಲಿಯಬಹುದು. ಸಾಮಾನ್ಯ ಎಸ್‌ಎಸ್‌ಸಿ ಕೋರ್ಸ್ ಅಲ್ಲದೆ ವೊಕೇಶನಲ್ (ವೃತ್ತಿಪರ) ಹಾಗೂ ಕೆರಿಯರ್ ಆಧಾರಿತ ವೃತ್ತಿಪರ ಕೋರ್ಸ್‌ಗಳೂ ಸಿಬಿಎಸ್‌ಇ ಪಠ್ಯಕ್ರಮದ ಆಯ್ದ ಕಾಲೇಜುಗಳಲ್ಲಿವೆ.

ಐಎಸ್‌ಸಿ (ಇಂಡಿಯನ್‌ ಸ್ಕೂಲ್ ಸರ್ಟಿಫಿಕೇಟ್) ಐಎಸ್‌ಸಿ ಕೂಡಾ ಪಿಯುಸಿಗೆ ತತ್ಸಮಾನವಾದ ಎರಡು ವರ್ಷದ ಕೋರ್ಸ್. ಸಿಐಎಸ್‌ಸಿಇ (ಕೌನ್ಸಿಲ್ ಫೋರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ಸ್)ನ ಪಠ್ಯಕ್ರಮವನ್ನು ಅಳವಡಿಸಿರುವ ಕಾಲೇಜುಗಳಲ್ಲಿ ಈ ಕೋರ್ಸ್ನ್ನು ಕಲಿಯಬಹುದು. ಸಾಮಾನ್ಯ ಐಎಸ್‌ಸಿ ಕೋರ್ಸ್ ಅಲ್ಲದೆ ಒಕೇಶನಲ್ (ವೃತ್ತಿಪರ) ಕೋರ್ಸ್‌ಗಳೂ ಐಸಿಎಸ್ ಪಠ್ಯಕ್ರಮದ ಆಯ್ದ ಕಾಲೇಜುಗಳಲ್ಲಿವೆ.

ಸೀನಿಯರ್ ಸೆಕೆಂಡರಿ (ಎನ್‌ಐಒಎಸ್) (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ರಾಷ್ಟ್ರೀಯ ಮುಕ್ತ ಶೈಕ್ಷಣಿಕ ಸಂಸ್ಥೆಯ ಮೂಲಕವೂ ದ್ವಿತೀಯ ವರ್ಷದ ಪಿಯುಸಿಗೆ ತತ್ಸಮಾನ ಸೀನಿಯರ್ ಸೆಕೆಂಡರಿ ಕೋರ್ಸ್‌ ಅನ್ನು ನೇರವಾಗಿ ಕಲಿಯಬಹುದು. ಸಾಮಾನ್ಯ ಸೀನಿಯರ್ ಸೆಕೆಂಡರಿ ಕೋರ್ಸ್‌ಗಳಲ್ಲದೆ ಎನ್‌ಐಒಎಸ್‌ನಲ್ಲಿ ಅನೇಕ ವೃತ್ತಿಪರ ಕೋರ್ಸ್‌ಗಳಿವೆ. ಅವುಗಳಲ್ಲದೆ ಆರು ತಿಂಗಳು, ಒಂದು ವರ್ಷ ಹಾಗೂ ಎರಡು ವರ್ಷಗಳ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಹಾಗೂ ಕೆಲವು ಆನ್‌ಲೈನ್ ಕೋರ್ಸ್‌ಗಳೂ ಇಲ್ಲಿವೆ.

ಟೂಲ್‌ ಅಂಡ್‌ ಡೈ ಮೇಕಿಂಗ್‌: ಉತ್ಪಾದನಾ ಕೈಗಾರಿಕೆಗಳಲ್ಲಿನ ಯಂತ್ರ ಶಾಸ್ತ್ರಜ್ಞರ ಒಂದು ವಿಭಾಗವನ್ನು ಟೂಲ್ ಆಂಡ್ ಡೈ ಮೇಕರ‍್ಸ್ ಎನ್ನುತ್ತಾರೆ. ಯಂತ್ರೋಪಕರಣಗಳ ತಯಾರಿಕೆ ಮತ್ತು ನಿರ್ವಹಣೆಗೆ ಅನುಕೂಲವಾದ ಜಿಗ್ಸ್, ಡೈಸ್, ಮೋಲ್ಡ್ಸ್‌, ಮೆಶಿನ್ ಟೂಲ್ಸ್, ಕಟ್ಟಿಂಗ್ ಟೂಲ್ಸ್, ಗೇಜಸ್ ಹಾಗೂ ಮತ್ತಿತರ ಬಿಡಿ ಭಾಗಗಳನ್ನು ಸಿದ್ಧಪಡಿಸುವ ತಾಂತ್ರಿಕ ಕೌಶಲವನ್ನು ಟೂಲ್ ಆಂಡ್ ಡೈ ಮೇಕಿಂಗ್ ಕೋರ್ಸ್‌ಗಳ ಮೂಲಕ ಕಲಿಯಬಹುದಾಗಿದೆ. ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಟೂಲ್ ರೂಂ ಆಂಡ್ ಟ್ರೈನಿಂಗ್ ಸೆಂಟರ್, ಕೆಲವು ಸರ್ಕಾರಿ ಮತ್ತು ಖಾಸಗಿ ಐಟಿಐಗಳಲ್ಲೂ ಎರಡು ವರ್ಷದ ಟೂಲ್ ಆಂಡ್ ಡೈ ಮೇಕಿಂಗ್ ಸರ್ಟಿಫಿಕೇಟ್ ಕೋರ್ಸ್ ಲಭ್ಯವಿದೆ.

ಪ್ಲಾಸ್ಟಿಕ್‌ ಟೆಕ್ನಾಲಜಿ: ಬೆಳೆಯುತ್ತಿರುವ ಕೈಗಾರಿಕೆಗಳ ಪೈಕಿ ಪ್ಲಾಸ್ಟಿಕ್ ಕೈಗಾರಿಕೆ ಕೂಡಾ ಒಂದು ಪ್ರಮುಖ ಉದ್ದಿಮೆ. ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಗೆ ಬೇಕಾದ ನುರಿತ ಸಿಬ್ಬಂದಿಗಳಿಗೆ ತರಬೇತಿ ಮತ್ತು ತಾಂತ್ರಿಕ ಕೌಶಲಗಳನ್ನು ಕಲಿಸುವ ವಿವಿಧ ಕೋರ್ಸ್‌ಗಳು ಹುಟ್ಟಿಕೊಂಡಿವೆ. ಮೈಸೂರಿನಲ್ಲಿ (ಹೆಬ್ಬಾಳ ಕೈಗಾರಿಕಾ ಪ್ರದೇಶ) ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಹಲವು ಕೋರ್ಸ್‌ಗಳು ಲಭ್ಯ.

ಲೆದರ್‌/ಫೂಟ್‌ವೇರ್‌ ಟೆಕ್ನಾಲಜಿ: ಒಂದು ಕಾಲಕ್ಕೆ ಕರಕುಶಲ ಉದ್ದಿಮೆಯಾಗಿದ್ದ ಚರ್ಮೋತ್ಪನ್ನ ಮತ್ತು ಪಾದರಕ್ಷೆಯಂತಹ ಗುಡಿ ಕೈಗಾರಿಕೆಗಳು ಇಂದು ತಾಂತ್ರಿಕ ಕ್ಷೇತ್ರದ ಉದ್ದಿಮೆಯಾಗಿ ಬೆಳೆದಿದ್ದು, ಈ ಸಂಸ್ಥೆಗಳಿಗೆ ನುರಿತ ತಾಂತ್ರಿಕ ಮತ್ತು ಕೌಶಲಯುಕ್ತ ಸಿಬ್ಬಂದಿಗಳನ್ನು ಪೂರೈಸುವ ಶಿಕ್ಷಣ ಸಂಸ್ಥೆಗಳೂ ಸ್ಥಾಪನೆಗೊಂಡಿವೆ. ಈ ಸಂಸ್ಥೆಗಳು ವಿವಿಧ ಕೋರ್ಸ್‌ಗಳನ್ನು ರೂಪಿಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿವೆ. ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಾದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಇನ್ ಲೆದರ್ ಆಂಡ್ ಫ್ಯಾಷನ್ ಟೆಕ್ನಾಲಜಿ ಕೋರ್ಸ್ ಕಲಿಸಲಾಗುತ್ತದೆ.

ಇಂಟೀರಿಯರ್‌ ಡಿಸೈನಿಂಗ್‌: ಒಳಾಂಗಣ ವಿನ್ಯಾಸ ಅಥವಾ ಇಂಟೀರಿಯರ್ ಡಿಸೈನಿಂಗ್ ಇಂದು ಬೆಳೆಯುತ್ತಿರುವ ಒಂದು ಉದ್ದಿಮೆಯಾಗಿದೆ. ಮನೆ, ಕಚೇರಿ, ವಾಣಿಜ್ಯ ಸಂಕೀರ್ಣ ಮಾತ್ರವಲ್ಲದೆ ತಾರಾ ಹೋಟೆಲ್‌ಗಳು, ಶಿಕ್ಷಣ ಸಂಸ್ಥೆಗಳು, ಮನೋರಂಜನಾ ಸ್ಥಳಗಳು, ಸಭಾಂಗಣಗಳು ಮತ್ತು ಕೆಲವು ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳ ಒಳಾಂಗಣ ವಿನ್ಯಾಸವನ್ನೂ ಇಂಟೀರಿಯರ್ ಡಿಸೈನರ್ಸ್‌ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಂಟೀರಿಯರ್ ಡಿಸೈನಿಂಗ್ ಕಲಿಕಾ ವಿಷಯವಾಗಿ ಪರಿಚಿತವಾಗಿದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ತರಗತಿ ತೇರ್ಗಡೆಯ ಬಳಿಕ ಇಂಟೀರಿಯರ್ ಡಿಸೈನ್ ಡಿಪ್ಲೊಮಾ ಮಾಡಬಹುದಾಗಿದೆ.

ಹೋಟೆಲ್‌ ಮ್ಯಾನೇಜ್‌ಮೆಂಟ್‌: ಒಂದು ಸಾಮಾನ್ಯ ವೃತ್ತಿಯಾಗಿ ಗುರುತಿಸಲ್ಪಡುತ್ತಿದ್ದ ಹೋಟೆಲ್ ಈಗ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತಿದೆ. ಗ್ರಾಹಕ ಸ್ನೇಹಿ ಸೇವೆಯಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದರಿಂದ ಹೋಟೆಲ್ ಉದ್ಯಮಕ್ಕೆ ಈಗ ಹೋಟೆಲ್ ನಿರ್ವಹಣಾ ಕೌಶಲ, ವಿದ್ಯಾರ್ಹತೆ ಮತ್ತು ಪರಿಣತಿಯನ್ನು ಪಡೆದ ಸಿಬ್ಬಂದಿಗಳ ಅವಶ್ಯಕತೆಯಿದೆ. ಈ ಬೇಡಿಕೆಗಳನ್ನು ಪೂರೈಸಲು ಹೋಟೆಲ್ ಮ್ಯಾನೇಜ್‌ಮೆಂಟ್, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಮತ್ತು ಕೇಟರಿಂಗ್ ವಿಭಾಗದ ಅನೇಕ ಡಿಪ್ಲೊಮಾ ಕೋರ್ಸ್‌ಗಳು ರೂಪುಗೊಂಡಿವೆ. ಅವುಗಳ ಕಲಿಕೆಗೆ ಅನೇಕ ವಿದ್ಯಾ ಸಂಸ್ಥೆಗಳು ಅವಕಾಶ ಕಲ್ಪಿಸುತ್ತಿವೆ.

ಫೈರ್‌ ಟೆಕ್ನಾಲಜಿ (ಅಗ್ನಿ ತಂತ್ರಜ್ಞಾನ) ವಿದ್ಯುತ್ ಮತ್ತು ಉರಿಯುವ ಇಂಧನ ವನ್ನು ಅತೀ ಹೆಚ್ಚು ಬಳಸುವ ಬೃಹತ್ ಕೈಗಾರಿಕೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೆಂಕಿ ಅಕಸ್ಮಿಕಗಳು ಸಂಭವಿಸುವುದು ಸಾಮಾನ್ಯ. ಆದ್ದರಿಂದಲೇ ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಅಳವ
ಡಿಸುವ ಮೂಲಕ ಬೆಂಕಿ ಅವಘಡಗಳನ್ನು ತಡೆಗ ಟ್ಟುವ ಹಾಗೂ ಅವಘಡ ಸಂಭವಿಸಿದಲ್ಲಿ ನಷ್ಟ ಕಡಿಮೆಯಾ ಗುವಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನುರಿತ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಈ ಬೇಡಿಕೆಗಳನ್ನು ಪೂರೈಸಲೆಂದೇ ಫೈರ್ ಆಂಡ್ ಸೇಫ್ಟಿ ಕಾಲೇಜುಗಳು ಸ್ಥಾಪನೆಗೊಂಡಿವೆ. ವಿವಿಧ ಕೋರ್ಸ್‌ಗಳ ಮೂಲಕ ಅಗ್ನಿ ತಂತ್ರಜ್ಞಾನ ಮತ್ತು ಸುರಕ್ಷತೆಯ ಕೌಶಲ ಮತ್ತು ತರಬೇತಿಯನ್ನು ವಿದ್ಯಾಸಂಸ್ಥೆಗಳು ನೀಡುತ್ತವೆ. ಫೈರ್ ಎಂಜಿನಿಯರಿಂಗ್, ಫೈರ್ ಆಂಡ್ ಸೇಫ್ಟಿ ವಿಭಾಗ ದಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು, ಡಿಪ್ಲೊಮಾ ಕೋರ್ಸ್‌ಗಳು ಲಭ್ಯ.

‘ಇಗ್ನೊ’ದಲ್ಲಿ ಬಿ.ಪಿ.ಪಿ. ಹಾಗೂ ಸರ್ಟಿಫಿಕೇಟ್ ಕೋರ್ಸ್‌
ಪ್ರತಿದಿನ ಕಾಲೇಜಿಗೆ ಹೋಗುವ ಜಂಜಾಟ ವಿಲ್ಲದೆ ಮನೆಯಲ್ಲೇ ಅಭ್ಯಾಸ ಮಾಡಿ, ಪರೀಕ್ಷೆ ಬರೆದು ಪಾಸಾಗುವ ಶಿಕ್ಷಣವನ್ನು ‘ದೂರ ಶಿಕ್ಷಣ’ ಎನ್ನುತ್ತಾರೆ. ದೇಶ, ವಿದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಅನೇಕ ಮುಕ್ತ ವಿಶ್ವವಿದ್ಯಾಲಯಗಳಿವೆ. ಅವುಗಳ ಪೈಕಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (ಇಗ್ನೊ) ‘ಜನರ ವಿಶ್ವವಿದ್ಯಾನಿಲಯ’ ಎಂಬ ಖ್ಯಾತಿ ಪಡೆದಿದೆ. ಕೇವಲ ಆರು ತಿಂಗಳಲ್ಲಿ ಬಿ.ಪಿ.ಪಿ. (ಬ್ಯಾಚುಲರ್ ಪ್ರಿಪರೇಟರಿ ಪ್ರೊಗ್ರಾಂ) ದೂರ ಶಿಕ್ಷಣದ ಮೂಲಕ ಕಲಿತು, ಪದವಿ ಪ್ರವೇಶ ಪಡೆಯುವ ಅವಕಾಶ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿದೆ. ಆದರೆ ಇದು ಇಗ್ನೊದಲ್ಲಿ ಲಭ್ಯವಿರುವ ಪಿಯುಸಿ ವಿದ್ಯಾರ್ಹತೆಯ ಪದವಿ ಹಾಗೂ ಮತ್ತಿತರ ಕೋರ್ಸ್‌ಗಳಿಗೆ ಅಂಗೀಕರಿಸ ಲ್ಪಡುತ್ತವೆಯೇ ಹೊರತು, ಇದು ಪಿಯುಸಿ ತತ್ಸಮಾನ ವಿದ್ಯಾ ರ್ಹತೆಯಲ್ಲ. ಇಗ್ನೊದಲ್ಲಿ ದೂರ ಶಿಕ್ಷಣದ ಹಲವು ಸರ್ಟಿಫಿಕೇಟ್ ಕೋರ್ಸ್‌ಗಳು, ಡಿಪ್ಲೊಮಾ ಕೋರ್ಸ್‌ಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು