ಭಾನುವಾರ, ಜನವರಿ 26, 2020
28 °C
ಸಕ್ಕರಗಾ ಶಾಲೆಯಲ್ಲಿ ಸರ್ಕಾರಿ ಸೌಲಭ್ಯಗಳ ಸದ್ಬಳಕೆ l ಆವರಣದಲ್ಲಿ 200ಕ್ಕೂ ಹೆಚ್ಚು ವೃಕ್ಷ ಪ್ರಭೇದಗಳು

ಸಂಪೂರ್ಣ ಹಾಜರಾತಿಯೇ ಈ ಶಾಲೆ ವಿಶೇಷ

ಸಂಜಯ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಆಳಂದ: ತಾಲ್ಲೂಕಿನ ಪುಟ್ಟ ಗ್ರಾಮಗಳಲ್ಲಿ ಸಕ್ಕರಗಾ ಒಂದು. ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಸದಾ ಚಟುವಟಿಕೆ ಕೇಂದ್ರವಾಗಿದೆ. ಗಿಡಮರಗಳನ್ನು ಒಳಗೊಂಡ ಸುಂದರ ಪರಿಸರದಿಂದ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಇಲ್ಲಿ 110 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಂಪೂರ್ಣ ಹಾಜರಾತಿಯು ಈ ಶಾಲೆಯ ಸಾಧನೆಗಳಲ್ಲೊಂದು. ಇದಕ್ಕೆ ಕಾರಣ ಇಲ್ಲಿಯ ಶಿಕ್ಷಕರ ಸಮರ್ಪಣಾ ಭಾವದ ಕಾರ್ಯ ನಿರ್ವಹಣೆ ಹಾಗೂ ಗ್ರಾಮಸ್ಥರ ಸಹಕಾರ.

ಎರಡು ಎಕರೆಯಷ್ಟು ವಿಶಾಲವಾದ ಶಾಲೆಯು ಗುಡ್ಡದ ಮೇಲಿದೆ. ಬೇವಿನ ಮರ, ಹೊಂಗೆ, ಆಲ, ಅಶೋಕ ಮತ್ತಿತರ ನೂರಕ್ಕೂ ಹೆಚ್ಚು ಮರಗಳಿವೆ. ಆವರಣ ಗೋಡೆ ನಿರ್ಮಿಸಲಾಗಿದೆ. 8 ತರಗತಿಗಳುಳ್ಳ ಕಟ್ಟಡ ಹಾಗೂ ಅದರ ಗೋಡೆಗಳ ಮೇಲಿನ ಬಣ್ಣಬಣ್ಣದ ಚಿತ್ತಾರ ನೋಡುಗರ ಕಣ್ಮನ ಸೆಳೆಯುತ್ತದೆ.

ವಿದ್ಯಾರ್ಥಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿ ಚನ್ನಮಲ್ಲಯ್ಯ ಕಠಾರಿಮಠ ನೇತೃತ್ವದಲ್ಲಿ ಭಾರತ ಸೇವಾದಳದ ತರಬೇತಿ ನೀಡಲಾಗುತ್ತಿದೆ. ಸೇವಾದಳದ ವಿಶೇಷ ಸಮವಸ್ತ್ರ, ಬೆಳಿಗ್ಗೆ ಪ್ರಾರ್ಥನೆ, ಪಥ ಸಂಚಲನ, ಪಂಚಾಂಗ ಪಠಣ ಮತ್ತಿತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹ ಎದ್ದು ಕಾಣುತ್ತದೆ. ನಲಿ–ಕಲಿ ತರಗತಿಗಳಿಗೆ  ಆದ್ಯತೆ ನೀಡಲಾಗಿದೆ. ಅಗತ್ಯ ಕಲಿಕಾ ಪರಿಕರಗಳು, ಚಟುವಟಿಕೆ ಪ್ರಧಾನವಾದ ಬೋಧನೆಯಿಂದ ನಲಿ–ಕಲಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಸಿಕ್ಕಿದೆ. 

ವಿದ್ಯಾರ್ಥಿನಿ ಪೂಜಾ ಎಂ.ಸಿನ್ನೂರೆ ಓಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಸತತ ಎರಡು ಬಾರಿ ಆಯ್ಕೆ ಆಗಿದ್ದಾಳೆ. ಕೊಕ್ಕೊ ಸ್ಪರ್ಧೆಯಲ್ಲಿ ಈ ಶಾಲೆಯು ಜಿಲ್ಲಾ ಮಟ್ಟಕ್ಕೆ ಸತತ ಮೂರು ಬಾರಿ ಆಯ್ಕೆಯಾಗಿದ್ದು ವಿಶೇಷ. ಪ್ರಸಕ್ತ ವರ್ಷ 7ನೇ ತರಗತಿಯ ಶಿವಾನಂದ, ಜಾವೆಲಿನ್ ಮತ್ತು ಶಾಟ್‌ಪಟ್‌ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಐದು ವರ್ಷದಲ್ಲಿ ಎರಡು ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲೆ ಪ್ರಶಸ್ತಿ ಪಡೆದಿದೆ ಎಂದು ಮುಖ್ಯ ಶಿಕ್ಷಕ ಬಸವರಾಜ ಮೈಂದರ್ಗಿ ತಿಳಿಸಿದರು.

ಶಿಕ್ಷಕರು ಶಾಲಾವಧಿ ಮುಗಿದ ನಂತರವೂ ಸಂಜೆ 5.30ರವರೆಗೆ ವಿಶೇಷ ತರಗತಿ ನಡೆಸುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸುಧಾರಣೆಗೆ ಇದು ಸಹಾಯಕವಾಗಿದೆ. ಸೇತುಬಂಧ, ಪರಿಹಾರ ಬೋಧನೆ ಜೊತೆಗೆ ರಾಷ್ಟ್ರೀಯ ಹಬ್ಬ, ಜಯಂತಿ ಮತ್ತು ಪರಿಸರ, ವಿಜ್ಞಾನ ದಿನಾಚರಣೆ ನೆಪದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ರಸಪ್ರಶ್ನೆ ಹಮ್ಮಿಕೊಳ್ಳುವುದರಿಂದ ಗುಣಮಟ್ಟದ ಕಲಿಕೆ ಸಾಧ್ಯವಾಗಿದೆ ಎಂಬುದು ಪಾಲಕ ರಾಜಶೇಖರ ಪಾಟೀಲ ಅಭಿಮತ.

ಸರ್ಕಾರದ ಶೈಕ್ಷಣಿಕ ಸೌಲಭ್ಯಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಬಿಸಿಯೂಟ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಸೌಲಭ್ಯಗಳಿವೆ. ಕ್ರಿಯಾಶೀಲ ಮತ್ತು ಸಂಪನ್ಮೂಲ ಶಿಕ್ಷಕರಾದ ಈರಣ್ಣಾ ಕಲಬುರ್ಗಿ, ಮಲ್ಲಿನಾಥ ದಿಂಡೂರೆ, ಕಲ್ಯಾಣಿ ಬಿಕಮಾಳೆ, ಕಾಶಿನಾಥ ಶೆಟಗಾರ ಅವರ ಸಮರ್ಪಣಾ ಭಾವ ಮತ್ತು ವಿಶೇಷ ಕಾಳಜಿಯು ಈ ಶಾಲೆಯನ್ನು ಸುತ್ತಲಿನ ಅಂಬೇವಾಡ, ಸರಸಂಬಾ, ಕಾಮನಹಳ್ಳಿ, ಕಿಣಿ ಅಬ್ಬಾಸ ಶಾಲೆಗಳ ಸಾಮೂಹಿಕ ಚಟುವಟಿಕೆಗಳಿಗೆ ಕೇಂದ್ರ ಸ್ಥಾನದಲ್ಲಿರಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು