ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಅಧ್ಯಯನ ಉದ್ಯೋಗಕ್ಕೆ ಎಷ್ಟು ಪೂರಕ?

Last Updated 1 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ಗಾಂಧಿ ಅಧ್ಯಯನದ ಕುರಿತು ಪ್ರಸ್ತಾಪಿಸುವುದು ಅತ್ಯಂತ ಪ್ರಸ್ತುತ. ಆದರೆ 21ನೇ ಶತಮಾನದ ಎರಡು ದಶಕಗಳು ಕೊನೆಗೊಳ್ಳುತ್ತಿರುವಾಗ ಎಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ನಮ್ಮ ರಾಷ್ಟ್ರಪಿತನ ಕುರಿತು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಎಂಬ ಮಾಹಿತಿಯನ್ನು ಕೆದಕುತ್ತ ಹೋದರೆ, ಸ್ವಲ್ಪ ನಿರಾಶಾದಾಯಕ ಉತ್ತರ ಲಭ್ಯವಾಗುತ್ತದೆ.

ಅದೇನೆ ಇರಲಿ, ಕರ್ನಾಟಕದಲ್ಲಿ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಬೆಂಗಳೂರು ವಿವಿ, ಕರ್ನಾಟಕ ವಿವಿ ಧಾರವಾಡ, ಮಾನಸ ಗಂಗೋತ್ರಿ ಮೈಸೂರು ಮೊದಲಾದ ಕಡೆಯಲ್ಲದೇ, ಸ್ವಾಯತ್ತ ವಿವಿಗಳಲ್ಲಿ ಕೂಡ ಗಾಂಧಿ ಅಧ್ಯಯನ ಕೇಂದ್ರಗಳಿವೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಲ್ಲಿ ಗಾಂಧಿ ಹಾಗೂ ಶಾಂತಿ ಕುರಿತ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ಗಳಿವೆ. ಪಂಜಾಬ್‌ ವಿವಿಯಲ್ಲಿ ಎಂ.ಎ. ಅಲ್ಲದೆ ಎಂ.ಫಿಲ್‌. ಕೂಡ ಮಾಡಬಹುದು. ಬೆಂಗಳೂರು ವಿವಿಯಲ್ಲಿ ಸರ್ಟಿಫಿಕೇಟ್‌ ಮತ್ತು ಡಿಪ್ಲೋಮಾ ಕೋರ್ಸ್‌ ಇದೆ. ಕೆಲವು ಕಡೆ ಗಾಂಧಿ ವಿಚಾರಧಾರೆ ಕುರಿತು ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ ಇದ್ದರೆ, ಇನ್ನು ಕೆಲವು ಕಡೆ ಸ್ನಾತಕೋತ್ತರ ಪದವಿ ಕೋರ್ಸ್‌ ಹಾಗೂ ಪಿಎಚ್‌.ಡಿ. ಅಧ್ಯಯನಕ್ಕೂ ಅವಕಾಶವಿದೆ. ಇನ್ನು ಹೊರ ರಾಜ್ಯಗಳನ್ನು ತೆಗೆದುಕೊಂಡರೆ, ಅಹಮದಾಬಾದ್‌ನ ಗುಜರಾತ್‌ ವಿದ್ಯಾಪೀಠ, ವಾರಾಣಸಿಯ ಕಾಶಿ ವಿದ್ಯಾಪೀಠ, ಪಂಜಾಬ್‌ ವಿವಿ, ಕೇರಳ ವಿವಿಯಲ್ಲಿರುವ ಅಧ್ಯಯನ ಕೇಂದ್ರಗಳು ಖ್ಯಾತಿ ಪಡೆದಿದ್ದು, ಕೇಂಬ್ರಿಡ್ಜ್‌ ಹಾಗೂ ಆಕ್ಸ್‌ಫರ್ಡ್‌ನಂತಹ ವಿದೇಶಿ ವಿವಿಗಳಲ್ಲೂ ಈ ಕುರಿತ ಅಧ್ಯಯನ ಕೇಂದ್ರಗಳಿವೆ.

ಆದರೆ ವಿದ್ಯಾರ್ಥಿಗಳು ಈ ಅಧ್ಯಯನದ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದು ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಉದ್ಯೋಗಾವಕಾಶಗಳು ಕಡಿಮೆ ಇರುವುದರಿಂದ ಗಾಂಧಿ ಮತ್ತು ಅವರ ವಿಚಾರಧಾರೆ ಕುರಿತ ಅಧ್ಯಯನವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಮುಂದೆ ಈ ವಿಷಯದಲ್ಲಿ ಸಂಶೋಧನೆ ಮಾಡಲು ಇಷ್ಟವಿದ್ದವರು ಅಥವಾ ಉಪನ್ಯಾಸಕರಾಗುವ ಉದ್ದೇಶವಿಟ್ಟುಕೊಂಡವರು ಮಾತ್ರ ಅಧ್ಯಯನಕ್ಕೆ ಮುಂದಾಗುತ್ತಿದ್ದಾರೆ.

ಮಹಾರಾಷ್ಟ್ರದ ವಾರ್ಧಾದಲ್ಲಿರುವ ಮಹಾತ್ಮಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಸಮಾಜ ಸೇವೆಯ ಜೊತೆ ಸೇರಿಸಿದ್ದು, ವಿದ್ಯಾರ್ಥಿಗಳನ್ನು ಸೆಳೆಯಲು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ ಎನ್ನಬಹುದು.

ವಿಚಾರಧಾರೆಯತ್ತ ಆಸಕ್ತಿ

ಪದವಿ ಅಥವಾ ಡಿಪ್ಲೋಮಾಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಿರಾಸಕ್ತಿ ಬದಿಗಿಟ್ಟರೆ, ಗಾಂಧಿ ವಿಚಾರಧಾರೆಗಳತ್ತ ಈಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಖ ಮಾಡಿದ್ದಾರೆ ಎನ್ನಬಹುದು. ವಿದ್ಯಾರ್ಥಿಗಳು ಅಥವಾ ಸಂಶೋಧಕರನ್ನು ಹೊರತುಪಡಿಸಿ ಇತರೆ ವಲಯದಲ್ಲಿ ಪ್ರಸಕ್ತ ಜಾಗತಿಕ ಸಮಸ್ಯೆಗಳಿಗೆ ಗಾಂಧಿಯವರ ತತ್ವ, ಸಿದ್ಧಾಂತಗಳ ಮೂಲಕ ಪರಿಹಾರ ಹುಡುಕುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಅದು ಜಾಗತಿಕ ಬಿಕ್ಕಟ್ಟಿಗೆ ಪರಿಹಾರವಿರಲಿ, ತಾಪಮಾನ ಏರಿಕೆ ಅಥವಾ ನೀರಿನ ಸಮಸ್ಯೆಯಿರಲಿ.. ಗಾಂಧಿ ಪ್ರಸ್ತುತ ಎನಿಸಿದ್ದಾರೆ. ಸಮಾಜ ಅಧ್ಯಯನ ಶಾಸ್ತ್ರ, ರಾಜಕೀಯ ಅಥವಾ ಅರ್ಥಶಾಸ್ತ್ರವಿರಲಿ ಗಾಂಧಿ ವಿಚಾರಧಾರೆಯೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದೇ ರೀತಿ ದೆಹಲಿಯ ಜವಾಹರಲಾಲ್‌ ನೆಹರು ವಿವಿಯಲ್ಲಿ ಸಮಾಜ ವಿಜ್ಞಾನ ಅಧ್ಯಯನದಲ್ಲಿ ಗಾಂಧಿ ತತ್ವಗಳ ಅಧ್ಯಯನ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಕೂಡ ಯುವಕ/ ಯುವತಿಯರು ಗಾಂಧಿ ಕುರಿತ ಅಧ್ಯಯನದಲ್ಲಿ ಆಸಕ್ತಿ ವಹಿಸುತ್ತಿದ್ದಾರೆ.

ಗಾಂಧಿ ಕುರಿತ ಅಧ್ಯಯನ ನೇರವಾಗಿ ಉದ್ಯೋಗಾವಕಾಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೃಷ್ಟಿಸದಿದ್ದರೂ ಪರೋಕ್ಷವಾಗಿ ಅಂದರೆ ಇತರ ಕೆಲವು ವಿಷಯಗಳ ಅಧ್ಯಯನದಲ್ಲಿ ಅದು ನಿಮ್ಮ ನೆರವಿಗೆ ಖಂಡಿತ ಬರಬಲ್ಲದು.

ಅಧ್ಯಯನದ ವಿಷಯ

ಗಾಂಧಿ ಕುರಿತು ಅಧ್ಯಯನ ಮಾಡ ಬಯಸುವವರಿಗೆ ಬೇಕಾದಷ್ಟು ವಿಷಯಗಳಿವೆ.

ಗಾಂಧಿಯವರ ಬದುಕು, ಅವರು ಮಾಡಿದಂತಹ ಸಾಧನೆ, ಅವರು ಮಂಡಿಸಿದ ತತ್ವ ಸಿದ್ಧಾಂತಗಳು, ಅವರ ಕಾರ್ಯವೈಖರಿ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಾಂಧಿ ಚಿಂತನೆಗಳ ಅಳವಡಿಕೆ.

ಗಾಂಧಿಯವರ ದೃಷ್ಟಿಯಲ್ಲಿ ಸಾಮಾಜಿಕ ಸಂಸ್ಥೆಗಳು ಮತ್ತು ಅವುಗಳ ಕಾರ್ಯವೈಖರಿ.

ಗಾಂಧಿಯವರ ವಿಚಾರಧಾರೆಯ ಹಿನ್ನೆಲೆಯಲ್ಲಿ ಅತ್ಯಂತ ಕೆಳವರ್ಗದವರು, ಗ್ರಾಮೀಣ, ಬುಡಕಟ್ಟು ಜನರ ಅಭಿವೃದ್ಧಿಗೆ ತೆಗೆದುಕೊಂಡಂತಹ ಕ್ರಮಗಳು.

ಅಹಿಂಸೆ ಹಾಗೂ ಶಾಂತಿಯಿಂದ ಸಾಮಾಜಿಕ ಬದಲಾವಣೆ.

ಗಾಂಧಿ ಅಧ್ಯಯನ ಕೇಂದ್ರಗಳು ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಹಾಗೂ ವಿದ್ಯಾರ್ಥಿವೇತನ ಕೊಡಮಾಡುತ್ತಿವೆ. ಕೇವಲ ಅಧ್ಯಯನ ಮಾಡಿ ಪದವಿ ಅಥವಾ ಡಿಪ್ಲೋಮಾ ಸರ್ಟಿಫಿಕೇಟ್‌ ಪಡೆಯುವುದು ಮಾತ್ರವಲ್ಲ, ಸಾಕ್ಷ್ಯಚಿತ್ರಗಳನ್ನು ಮಾಡಬಹುದು, ದಾಖಲೆಗಳನ್ನು ಸಂಗ್ರಹಿಸುವ ಕೆಲಸವನ್ನೂ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT