ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ನೆನಪಾದ ನಯೀ ತಾಲೀಂ

Last Updated 9 ಆಗಸ್ಟ್ 2020, 3:13 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಎ, ಬಿ, ಸಿ ಎಂಬ ಒಂದು ಸಮುದಾಯ ಇತ್ತಂತೆ. ಎ, ಬಿ, ಸಿ, ಡಿ ಮೂಲಕ ಶುರುವಾಗುವ ಆಧುನಿಕ ಶಿಕ್ಷಣವನ್ನು ವಿರೋಧಿಸಿ, ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆ ಸಮುದಾಯ ಒಪ್ಪದ ಕಾರಣ ಆ ಹೆಸರು ಬಂದಿತ್ತು. ಈಗ ಏನಾಗಿದೆಯೋ ಗೊತ್ತಿಲ್ಲ. ನಾಗರಿಕ ಸಮಾಜ ಅವರನ್ನು ಬಗ್ಗಿಸಿರಬಹುದು.

ಪಾರಂಪರಿಕವಾಗಿ ಬಂದ ವೃತ್ತಿಗಳನ್ನು ಅವಲಂಬಿಸಿ, ಇರುವಲ್ಲೇ ದುಡಿದು ಬದುಕುತ್ತಿದ್ದ ಜಗತ್ತಿನ ಬಹುತೇಕ ಸಮುದಾಯಗಳಿಗೆ ಬ್ರಿಟಿಷರು ಪಾಶ್ಚಿಮಾತ್ಯ ಶಿಕ್ಷಣವನ್ನು ಪರಿಚಯಿಸಿದರು. ಪುಸ್ತಕಗಳಿಂದ ಜ್ಞಾನ ನೀಡುವ ಮತ್ತು ಪರೀಕ್ಷೆ ಮುಖೇನ ಜ್ಞಾನವನ್ನು ಅಳೆಯುವ ವ್ಯವಸ್ಥೆಯನ್ನು ಜಾರಿಗೊಳಿಸಿದರು.

ಅಮೆರಿಕದ ಮುಗ್ಧ ಸಮುದಾಯವೊಂದು ಆಧುನಿಕ ಶಿಕ್ಷಣವನ್ನು ವಿರೋಧಿಸಿದಂತೆ ಭಾರತದಲ್ಲೂ ಹಲವು ಜಾತಿ, ಸಮುದಾಯಗಳು ತಮ್ಮ ಮಕ್ಕಳನ್ನು ಹಲವು ದಶಕಗಳ ಕಾಲ ಶಾಲೆಗೆ ಕಳುಹಿಸಿರಲಿಲ್ಲ! ಬ್ರಿಟಿಷರು ಜಾರಿಗೆ ತಂದ ಶಿಕ್ಷಣವು ಅಪ್ರಯೋಜಕವೆಂದು ಹೇಳುವುದು ಅತಿರೇಕವಾಗುತ್ತದೆ. ಬ್ರಿಟಿಷರ ಅಧುನಿಕ ಶಿಕ್ಷಣದಿಂದ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ದೊಡ್ಡ ಉಪಕಾರವೇ ಆಗಿದೆ. ಹಾಗೆಯೇ ಅದರಿಂದ ಇಡೀ ದೇಶದ ಶ್ರಮಸಂಸ್ಕೃತಿ, ಸರಳ ಬದುಕಿನ ಕ್ರಮ, ಪರಿಸರದೊಂದಿಗಿನ ನಂಟು ಇತ್ಯಾದಿ ಬುಡಮೇಲು ಆದದ್ದನ್ನು ಮರೆಮಾಚಲಾಗದು. ಜೊತೆಗೆ, ಅಕ್ಷರ ಪಡೆದವರು ಹಳ್ಳಿಗಳಲ್ಲಿ ಉಳಿಯಲಾಗದಂತಾಯಿತು. ಸರ್ಕಾರಿ ಕೆಲಸ ಅಥವಾ ಸ್ವಗ್ರಾಮದ ಹೊರಗೆ, ವಿಶೇಷವಾಗಿ ನಗರಗಳಲ್ಲಿ ಯಾವುದಾದರೊಂದು ಉದ್ಯೋಗ ಗಿಟ್ಟಿಸಿಕೊಳ್ಳುವುದು ಶಿಕ್ಷಣದ ಮುಖ್ಯ ಗುರಿಯಾಯಿತು. ಓದಿದವರೆಲ್ಲ ಇದೇ ಗುರಿಯನ್ನು ಬೆನ್ನಟ್ಟಿದರು.

ಅನುಭವದಿಂದ ಒಡಗೂಡಿದ ಶಿಕ್ಷಣಕ್ಕಿಂತ ಪುಸ್ತಕ ಮತ್ತು ಪರೀಕ್ಷೆಯನ್ನು ಒಳಗೊಂಡ ಶಿಕ್ಷಣ ಜಗತ್ತನ್ನು ಆವರಿಸಿಕೊಂಡಿತು. ‘ಟೊಳ್ಳು–ಗಟ್ಟಿ’ಯನ್ನು ಅಂಕಪಟ್ಟಿಯಿಂದಲೇ ನಿರ್ಧರಿಸುವ ಮಟ್ಟಕ್ಕೆ ಬಂದು ನಿಲ್ಲಲಾಯಿತು. ಪರಿಸರದಲ್ಲಿ ಪಡೆಯುವ ಅನುಭವ ಮತ್ತು ಪುಸ್ತಕದ ಮೂಲಕ ಗಳಿಸುವ ಜ್ಞಾನ ಒಂದೇ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಹಲವು ದಶಕಗಳೇ ಬೇಕಾದವು.

ಪಾಶ್ಚಿಮಾತ್ಯ ಶಿಕ್ಷಣದ ಅಪಾಯಗಳನ್ನು ಮೊದಲು ಪ್ರಶ್ನಿಸಿದವರಲ್ಲಿ ಮಹಾತ್ಮ ಗಾಂಧಿ ಪ್ರಮುಖರು. ಬ್ರಿಟಿಷ್ ಶಿಕ್ಷಣವು ವಿನಾಶಕಾರಿ, ಅದು ಭಾರತೀಯರನ್ನು ಗುಲಾಮರನ್ನಾಗಿಸುತ್ತದೆ ಎಂದು ಅವರು ಎಚ್ಚರಿಸಿದರು. ಯುವಕರನ್ನು ಭೂಮಿಯಿಂದ ಹೊರಗೆಳೆದು, ಸರ್ಕಾರಿ ಉದ್ಯೋಗ ಅಥವಾ ನ್ಯಾಯಾಲಯದಲ್ಲಿ ಲಾಯರ್ ಆಗುವ ಕನಸುಗಳನ್ನಷ್ಟೇ ಬಿತ್ತುವುದನ್ನು ಪ್ರಶ್ನಿಸಿದ್ದರು. ಏಕೆಂದರೆ, ಆ ಶಿಕ್ಷಣವು ಪರಿಪೂರ್ಣವಾಗಿರಲಿಲ್ಲ. ಅದೊಂದು ಶುದ್ಧ ಸಾಹಿತ್ಯ ತರಬೇತಿಯಾಗಿತ್ತು. ಪುಸ್ತಕದ ಹುಳುಗಳಂತಾದ ವಿದ್ಯಾವಂತರು ದೈಹಿಕ ಶ್ರಮದಿಂದ ದೂರವಾಗತೊಡಗಿದ್ದರು. ಅವರಿಗೆ ಗ್ರಾಮಗಳು ಅಪಥ್ಯವಾದವು. ಅಕ್ಷರಗಳು ಅಹಂಕಾರವನ್ನೂ ಬೆಳೆಸಿದ್ದವು. ವಿದ್ಯಾವಂತರು ಮತ್ತು ಸಾಮಾನ್ಯರ ನಡುವೆ ಅಂತರ ಕಾಣತೊಡಗಿತ್ತು.

ಗಾಂಧೀಜಿ ಸರ್ವಾಂಗೀಣ ವಿಕಾಸಕ್ಕಾಗಿ ಸರ್ವೋದಯ ಕಲ್ಪನೆಯನ್ನು ಮುಂದಿಟ್ಟರು. ಅವರು ಮೂರು ತತ್ವಗಳನ್ನು ಜಾನ್ ರಸ್ಕಿನ್ ಅವರಿಂದ ಕಲಿತಿದ್ದರು. ಅವುಗಳೆಂದರೆ:

1. ವ್ಯಕ್ತಿಯ ಹಿತವೆಂಬುದು ಪ್ರತ್ಯೇಕವಾಗಿರುವುದಿಲ್ಲ. ಅದು ಸಮುದಾಯದ ಹಿತದಲ್ಲೇ ಅಡಗಿರುತ್ತದೆ.

2. ಎಲ್ಲಾ ದುಡಿಮೆಗಳು ಸಮಾನವಾದವು.

3. ವೈದ್ಯರು ಮತ್ತು ವಕೀಲರು ಹೇಗೋ ಹಾಗೆ ರೈತರು ಮತ್ತು ಕೂಲಿಕಾರರು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಾರೆ. ಪ್ರತೀ ಶ್ರಮಕ್ಕೂ ತನ್ನದೇ ಆದ ಗೌರವವಿದೆ.

‘ನಯೀ ತಾಲೀಂ’
‘ಬ್ರಿಟಿಷ್ ಅಧೀನದಲ್ಲಿನ ಶಿಕ್ಷಣವು ಭಾರತೀಯರನ್ನು ಗುಲಾಮರನ್ನಾಗಿಸುತ್ತದೆ, ಮಕ್ಕಳಿಗೆ ಅದೊಂದು ಜೈಲು. ಅದರಿಂದ ಹೊರಬರಲು ನಮ್ಮದೇ ಶಿಕ್ಷಣ ಪದ್ಧತಿಯನ್ನು ಮರುಸೃಷ್ಟಿ ಮಾಡಿಕೊಳ್ಳಬೇಕು’ ಎಂದು ಗಾಂಧೀಜಿ ಹೇಳುತ್ತಿದ್ದರು. ‘ನಯೀ ತಾಲೀಂ’(ಹೊಸ ತರಬೇತಿ) ಎಂಬ ಹೆಸರಿನ ಹೊಸ ಶಿಕ್ಷಣವನ್ನು ರೂಪಿಸಲು ಅವರು ಶ್ರಮಿಸಿದ್ದರು. ಅದೇ ಗ್ರಾಮಕೇಂದ್ರಿತ ಶಿಕ್ಷಣ ಮತ್ತು ಕಸುಬು ಕೇಂದ್ರಿತ ಶಿಕ್ಷಣ. ಅದನ್ನು ಜೀವನ ಶಿಕ್ಷಣವೆಂದೂ ಬುನಾದಿ ಶಿಕ್ಷಣವೆಂದೂ ಕರೆಯುವುದಿದೆ.

ಶಿಕ್ಷಣ ಮಾಧ್ಯಮ ಮತ್ತು ಅಧ್ಯಯನ ವಿಷಯಗಳ ಕುರಿತಂತೆ ರವೀಂದ್ರನಾಥ ಟ್ಯಾಗೋರರೊಂದಿಗೆ ಗಾಂಧೀಜಿ ಹಲವು ಬಾರಿ ಚರ್ಚಿಸಿದ್ದರು. ಟ್ಯಾಗೋರರು ಶಿಕ್ಷಣದ ಕುರಿತು ಆಳವಾಗಿ ಚಿಂತಿಸಿದ್ದರು ಮತ್ತು ಶಾಂತಿನಿಕೇತನದ ಮುಖೇನ ಹಲವು ಪ್ರಯೋಗಗಳನ್ನೂ ನಡೆಸುತ್ತಿದ್ದರು. ಟ್ಯಾಗೋರರು ವ್ಯಕ್ತಿ, ಸಮುದಾಯ ಮತ್ತು ಪರಿಸರಕೇಂದ್ರಿತ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರು ಸರಳ ಜೀವನವನ್ನು ಇಷ್ಟಪಡುವವರಾಗಿದ್ದರು ಮತ್ತು ಸರಳ ಜೀವನವೇ ಸೃಜನಶೀಲವಾದದ್ದು ಎನ್ನುತ್ತಿದ್ದರು. ಟ್ಯಾಗೋರರು ಗಾಂಧೀಜಿಯನ್ನು ಪ್ರಭಾವಿಸಿದ್ದರು.

ಭಾರತದ ಪ್ರಗತಿಯು ಅದರಲ್ಲಿನ ಹಳ್ಳಿಗಳ ಪ್ರಗತಿಯನ್ನು ಅವಲಂಬಿಸಿದೆ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಆದ್ದರಿಂದಲೇ ಅವರು, ಭಾರತದುದ್ದಕ್ಕೂ ಹರಡಿಕೊಂಡಿದ್ದ ಅನೇಕ ಹಳ್ಳಿಗಳಿಗೆ ಹೋಗಿ ಅಲ್ಲಿನ ಜೀವನ ಪದ್ಧತಿ ಮತ್ತು ಸಮಸ್ಯೆಗಳನ್ನು ತಿಳಿದುಕೊಂಡರು. ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗೂ ಸೇರಿದಂತೆ ಹಲವು ಸುಧಾರಣೆಗಳ ಮೂಲಕ ಗ್ರಾಮಗಳ ಪುನರ್‌ನಿರ್ಮಾಣಕ್ಕೆ ಮುಂದಾದರು. ಅವರು ತೋರಿದ ಶಿಕ್ಷಣವೂ ಹಳ್ಳಿ ಕೇಂದ್ರಿತವಾಗಿತ್ತು. ನಗರ ಮತ್ತು ಪಟ್ಟಣಗಳಿಗಿಂತ ಹಳ್ಳಿಗಳೇ ಕಲಿಕೆಗೆ ಸೂಕ್ತ ಎನ್ನುತ್ತಿದ್ದರು. ಭೌತಿಕ ಕಸರತ್ತು ಶಿಕ್ಷಣದ ಮುಖ್ಯ ಭಾಗವಾಗಬೇಕು ಎಂದು ಪ್ರತಿಪಾದಿಸಿದರು. ಯಾಂತ್ರಿಕ ಕಲಿಕೆಯನ್ನು ಅವರು ತಿರಸ್ಕರಿಸಿದರು. ಹೃದಯ ಮತ್ತು ಆರೋಗ್ಯ ಸಮತೋಲನಕ್ಕೆ ಶಿಕ್ಷಣ ಸಹಕಾರಿಯಾಗಬೇಕೆಂದು ಬಯಸಿದರು. ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಜವಾಬ್ದಾರಿ ಕೊಡುವುದರಿಂದ ಜೀವನದಲ್ಲಿ ಧೈರ್ಯವಾಗಿ ಮುನ್ನುಗ್ಗಲು ಕಲಿಯುತ್ತಾರೆ ಎಂಬುದನ್ನು ಒತ್ತಿ ಹೇಳಿದರು. 14ನೇ ವರ್ಷದ ತನಕ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲೇ ಕಲಿಸಬೇಕೆಂದು ಒತ್ತಾಯಿಸಿದರು. ಹಾಗೆಯೇ ಗಾಂಧೀಜಿ ಪ್ರತಿಪಾದಿಸಿದ ಶಿಕ್ಷಣದಲ್ಲಿ ಪುಸ್ತಕಗಳ ಹೊರೆ ಕಡಿಮೆ ಇತ್ತು.

1937ರಲ್ಲಿ ವಾರ್ಧಾದಲ್ಲಿ ನಡೆದ ಅಖಿಲ ಭಾರತ ಶೈಕ್ಷಣಿಕ ಸಮಾವೇಶಕ್ಕೆ ದೇಶದ ಹಲವು ಮಂದಿ ಶಿಕ್ಷಣ ತಜ್ಞರನ್ನು ಗಾಂಧೀಜಿ ಆಹ್ವಾನಿಸಿದ್ದರು. ಅದೇ ವರ್ಷದಲ್ಲಿ ಸಿದ್ಧಗೊಂಡ ಮೂಲಶಿಕ್ಷಣ ಅಥವಾ ವಾರ್ಧಾ ಯೋಜನೆ, ಭವಿಷ್ಯದ ಭಾರತಕ್ಕೆ ಒಂದು ಮುನ್ನೋಟವಾಗಿ ಕಾಣಿಸತೊಡಗಿತು. ಜಾತಿ, ಧರ್ಮ ಮತ್ತು ಲಿಂಗ ಭೇದವಿಲ್ಲದೆ ಸಾರ್ವಜನಿಕ ಕಡ್ಡಾಯ ಶಿಕ್ಷಣಕ್ಕೆ ಇದು ಬುನಾದಿಯಾಯಿತು. ಆದರೆ, ಸ್ಪರ್ಧಾ ಜಗತ್ತಿನಲ್ಲಿ ಗಾಂಧೀಜಿ ಶಿಕ್ಷಣ ಉದುರಿಹೋಯಿತು. ನೂರು ತಲೆಮಾರಿನವರು ಬಳಸುತ್ತಿದ್ದ ಸಂಪನ್ಮೂಲಗಳನ್ನು ಒಂದು ತಲೆಮಾರು ಖಾಲಿ ಮಾಡಿಬಿಡುವ ಜಾಗತಿಕ ಸ್ಪರ್ಧೆಯಲ್ಲಿ ಗಾಂಧೀಜಿ ಮುಖ್ಯವೆನಿಸುವುದಿಲ್ಲ. ಅವರು ಹೇಳುವ ಗ್ರಾಮಕೇಂದ್ರಿತ ಶಿಕ್ಷಣ, ಜೀವನ ಶಿಕ್ಷಣ, ಸರಳ ಬದುಕು, ಹೃದಯದ ಶಿಕ್ಷಣ, ಶ್ರಮ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯ ಶಿಕ್ಷಣದ ಕುರಿತು ಈ ಕಾಲದ ವಿದ್ಯಾರ್ಥಿಗಳಿಗೆ ಪರಿಚಯವೂ ಇದ್ದಂತಿಲ್ಲ.

ರಂಗಕರ್ಮಿ ಪ್ರಸನ್ನ ಅವರು ತಮ್ಮ ‘ಶೂದ್ರರಾಗೋಣ ಬನ್ನಿ’ ಕೃತಿಯಲ್ಲಿ, ಈ ಕಾಲದ ಶಿಕ್ಷಣ ಪಡೆದವರೊಂದಿಗಿನ ಸಂಘರ್ಷದ ಕುರಿತು ‘ನಾನು ತಲೆ ಕೆಳಗಾಗಿದ್ದೇನೋ ಅಥವಾ ಜಗತ್ತು ತಲೆ ಕೆಳಗಾಗಿದೆಯೋ ಎಂಬ ಅನುಮಾನವದು. ತಾತ್ವಿಕವಾಗಿ ನೋಡಿದಾಗ, ಜಗತ್ತು ತಲೆ ಕೆಳಗಾಗಿದೆ ಎಂದು ಅನಿಸಿದರೂ ಭಾವನಾತ್ಮಕವಾಗಿ ಅನುಭವಿಸುವಾಗ, ನಾನೇ ತಲೆ ಕೆಳಗಾಗಿರಬಹುದು ಎಂಬ ಅನುಮಾನ ಮೂಡುತ್ತದೆ, ಆತಂಕ ಮೂಡುತ್ತದೆ’ ಎನ್ನುತ್ತಾರೆ.

ಈಗಿನ ಶಿಕ್ಷಣ ವ್ಯವಸ್ಥೆಯಿಂದ ದೊಡ್ಡ ಅಪಾಯ ಎದುರಾಗಿರುವುದು ಗ್ರಾಮಗಳಿಗೆ. ಹಳ್ಳಿಗಳಿಗೆ ಹೋದರೆ ಯುವಕರು ಹೆಚ್ಚು ಕಾಣುವುದೇ ಇಲ್ಲ. ಏಕೆಂದರೆ ಅವರಿಗೆ ಆಧುನಿಕ ಶಿಕ್ಷಣ ಕೊಟ್ಟು, ಗ್ರಾಮಗಳ ಬಗ್ಗೆ ಕೀಳರಿಮೆ ತುಂಬಿ, ಅಲ್ಲಿ ಉದ್ಯೋಗವೇ ಇಲ್ಲವೆಂದು ಹೇಳಿ ನಗರಗಳ ಕಡೆ ನೂಕಿದ್ದೇವೆ. ಕೊರೊನಾ ಕಾಲದಲ್ಲಿ ಅದೆಷ್ಟು ಮಂದಿ ನಗರಗಳಿಂದ ತಮ್ಮ ಹಳ್ಳಿಗಳಿಗೆ ವಾಪಸಾದರು ಎಂಬುದನ್ನು ನೋಡಿಯಾಗಿದೆ. ಗಾಂಧೀಜಿ ತೋರಿದ ಹಳ್ಳಿಕೇಂದ್ರಿತ ಶಿಕ್ಷಣ ಮತ್ತು ಗ್ರಾಮೋದ್ಯೋಗಗಳನ್ನು ಕಡೆಗಣಿಸಿದ ಪರಿಣಾಮವಾಗಿ ಈಗ ಹಳ್ಳಿಗಳು ಸೊರಗುತ್ತಿವೆ. ಹಳ್ಳಿಗಳಿಂದ ನಗರಗಳ ಕಡೆ ನಡೆದವರು ತಿಂಗಳಿಗೆ ₹ 15-20 ಸಾವಿರ ದುಡಿದರೂ ನಗರಗಳಲ್ಲಿ ಮನೆ ಮಾಡಿ ಸಂಸಾರ ನಡೆಸುವುದು ಕಷ್ಟವಾಗುತ್ತಿದೆ. ಹಾಗಾಗಿಯೇ ಹೆಂಡತಿ– ಮಕ್ಕಳನ್ನು ಹಳ್ಳಿಗಳಲ್ಲೇ ಬಿಟ್ಟು ಒಂಟಿಯಾಗಿ ನಗರಗಳಲ್ಲಿ ದುಡಿಯುವ ಯುವಕರನ್ನು ಒಮ್ಮೆ ನೆನಪಿಸಿಕೊಂಡರೆ ಗಾಂಧಿ ಶಿಕ್ಷಣ ಅರ್ಥವಾಗಬಹುದೇನೊ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಸರ್ಕಾರಿ ಮಹಿಳಾ ಕಾಲೇಜು, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT