ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೆಲೆ ಧ್ವನಿ ಕಲಾವಿದರಾಗಬೇಕೆ? ಸ್ವರದ ಏರಿಳಿತದ ಜ್ಞಾನ ಅಗತ್ಯ

Last Updated 21 ಫೆಬ್ರುವರಿ 2020, 5:46 IST
ಅಕ್ಷರ ಗಾತ್ರ

ಪ‍್ರತಿದಿನ ಟಿವಿ ನೋಡುವಾಗ, ಮೆಟ್ರೊ ರೈಲು ಅಥವಾ ಬಸ್ಸಿನಲ್ಲಿ‍ಪಯಣ ಮಾಡುವಾಗ, ಎಫ್‌ಎಂ ರೆಡಿಯೊಗಳಲ್ಲಿ, ಟಿವಿ ಜಾಹೀರಾತುಗಳಲ್ಲಿ ಇಂಪಾದ ಸ್ವರ ನಮ್ಮನ್ನು ಸೆಳೆಯುತ್ತದೆ. ಮುಖ ಕಾಣದಿದ್ದರೂ ಕೇವಲ ಧ್ವನಿಯ ಮೂಲಕವೇ ನಾವು ಅವರ ಮೇಲೆ ಅಭಿಮಾನ ಬೆಳೆಸಿಕೊಂಡಿರುತ್ತೇವೆ. ಅಂತಹ ಧ್ವನಿ ನೀಡುವವರಿಗೆ ‘ವಾಯ್ಸ್ ಓವರ್ ಆರ್ಟಿಸ್ಟ್’ ಅಥವಾ ಹಿನ್ನೆಲೆ ಧ್ವನಿ ಕಲಾವಿದರು ಎನ್ನುತ್ತಾರೆ.

ಉದ್ಯೋಗ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಬಹುಬೇಡಿಕೆ ಇರುವ ಕ್ಷೇತ್ರದಲ್ಲಿ ಹಿನ್ನೆಲೆ ಧ್ವನಿ ಕಲಾವಿದರ ಕ್ಷೇತ್ರವೂ ಒಂದು. ಮಧುರ ಧ್ವನಿಯೇ ಅವರ ವೃತ್ತಿಗೆ ಬಂಡವಾಳ.

ನೀವೂ ಆಗಬಹುದು ಹಿನ್ನೆಲೆ ಧ್ವನಿ ಕಲಾವಿದರು

ನೀವು ತುಂಬಾ ಸ್ಫುಟವಾಗಿ, ಸ್ವಷ್ಟವಾಗಿ ಒಂದು ಭಾಷೆಯನ್ನು ಮಾತನಾಡಬಲ್ಲಿರೇ? ನಿಮ್ಮ ಧ್ವನಿಯು ಮಧುರವಾಗಿದೆಯೇ? ಸ್ವರದಲ್ಲೇ ಜನರನ್ನು ಹಿಡಿದಿಡುವ ಕಲೆ ನಿಮ್ಮಲ್ಲಿದೆಯೇ? ಹಾಗಾದರೆ ನೀವು ಹಿನ್ನೆಲೆ ಧ್ವನಿ ಕಲಾವಿದರಾಗಬಹುದು.

ಅನಿಮೇಟೆಡ್ ಸಿನಿಮಾಗಳು, ಟಿವಿ ಶೋಗಳು, ಡಾಕ್ಯುಮೆಂಟರಿಗಳು, ಸಿನಿಮಾ, ಧಾರಾವಾಹಿ, ರೆೇಡಿಯೊ, ಆಡಿಯೊ ಬುಕ್, ಯುಟ್ಯೂಬ್‌ ಮುಂತಾದ ಹಲವು ಕ್ಷೇತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು. ಆದರೆ ಕೇವಲ ಧ್ವನಿಯಷ್ಟೇ ಚೆನ್ನಾಗಿದ್ದರೆ ಸಾಲುವುದಿಲ್ಲ. ಸ್ವರಗಳ ಏರಿಳಿತವೂ ತುಂಬಾ ಮುಖ್ಯ. ಅದಕ್ಕಾಗಿ ಪ್ರತಿನಿತ್ಯ ಕೆಲ ಗಂಟೆಗಳ ಕಾಲ ಅಭ್ಯಾಸ ಮಾಡಿದರೆ ನೀವು ಖಂಡಿತ ಹಿನ್ನೆಲೆ ಧ್ವನಿ ಕಲಾವಿದರಾಗಬಹುದು.

ಸಿನಿಮಾಗಳಲ್ಲೂ ಅವಕಾಶ

ಸಿನಿಮಾಗಳಲ್ಲಿ ನಾವು ಮೆಚ್ಚುವ ಅದೆಷ್ಟೋ ನಟ–ನಟಿಯರಿಗೆ ಧ್ವನಿ ನೀಡುವ ಕಲಾವಿದರು ಇನ್ನಾರೋ ಆಗಿರುತ್ತಾರೆ. ಕೇವಲ ನಟನೆ ಹಾಗೂ ತುಟಿಯ ಚಲನೆಗಳ ಮೂಲಕ ಅವರೇ ಮಾತನಾಡುವಂತೆ ಅನ್ನಿಸಿದರೂ ಧ್ವನಿ ಮಾತ್ರ ಬೇರೆಯವರದ್ದಾಗಿರುತ್ತದೆ. ನಿಮಗೆ ಧ್ವನಿಯಲ್ಲೇ ನಟನೆ ಮಾಡಲು ತಿಳಿದಿದ್ದರೆ, ವಿಭಿನ್ನ ಧ್ವನಿ ನಿಮ್ಮದಾದರೆ ಖಂಡಿತ ನೀವು ಈ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು.

ಹಿನ್ನೆಲೆ ಧ್ವನಿ ಕಲಾವಿದರಿಗೆ ಧ್ವನಿಯ ಗುಣಮಟ್ಟ ಹಾಗೂ ಸಮಯಪ್ರಜ್ಞೆ ತುಂಬಾ ಮುಖ್ಯ. ಪ್ರತಿ ಸನ್ನಿವೇಶಕ್ಕೆ ತಕ್ಕಂತೆ ಸ್ವರದಲ್ಲಿ ಏರಿಳಿತ ಮಾಡುವುದು, ಸ್ವರದಲ್ಲಿ ಬದಲಾವಣೆ ಮಾಡುವುದು ಅವಶ್ಯ.

ಪಾಡ್ ಕಾಸ್ಟ್, ಟ್ರೈನಿಂಗ್ ಅಂಡ್ ಬ್ಯುಸಿನೆಸ್ ಪ್ರೆಸೆಂಟೇಶನ್, ವಾಯ್ಸ್ ಮೇಲ್, ಫೋನ್ ಸಿಸ್ಟಂ ಹಾಗೂ ಗೇಮ್ ಟ್ರೇಲರ್‌ಗಳಲ್ಲೂ ಹಿನ್ನೆಲೆ ಧ್ವನಿ ಕಲಾವಿದರಿಗೆ ಬೇಡಿಕೆ ಇದೆ.

ಹಿನ್ನೆಲೆ ಧ್ವನಿ ಎಂದರೆ ಕೇವಲ ಒಂದೇ ಸ್ವರ ಇರಬೇಕೆಂದೇನೂ ಇಲ್ಲ, ಬೇರೆ ಬೇರೆ ರೂಪದಲ್ಲಿ ಹಿನ್ನೆಲೆ ಧ್ವನಿ ನೀಡಬಹುದು.

ಮಕ್ಕಳ ಸ್ವರ

ಹದಿಹರೆಯದ ಹುಡುಗ ಅಥವಾ ಹುಡುಗಿಯ ಸ್ವರ

ವಯಸ್ಕ ಹುಡುಗ/ ಹುಡುಗಿ

ವೃದ್ಧರು

ಕಾರ್ಟೂನ್ ಪಾತ್ರಗಳಿಗೆ

ಆಡಿಷನ್ ಮೂಲಕ ಆಯ್ಕೆ

ಸಿನಿಮಾ, ಧಾರಾವಾಹಿಗಳಲ್ಲಿ ನಟನೆಗೆ ಆಡಿಷನ್ ನಡೆಯುವಂತೆ ಹಿನ್ನೆಲೆ ಧ್ವನಿ ಕಲಾವಿದರಿಗೂ ಆಡಿಷನ್‌ಗಳು ನಡೆಯುತ್ತವೆ, ತಮ್ಮ ಪ್ರಾಜೆಕ್ಟ್‌ಗೆ ಹೊಂದುವಂತಹ ಧ್ವನಿಗೆ ಆಡಿಷನ್ ನಡೆಸುವ ಮೂಲಕ ಹಿನ್ನೆಲೆ ಧ್ವನಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ

ಈ ವೃತ್ತಿಗೆ ಗಂಟೆಗೆ ಇಂತಿಷ್ಟು ವೇತನ ಎಂಬುದನ್ನು ಮೊದಲೇ ನಿಗದಿ ಮಾಡಿರುತ್ತಾರೆ. ಗಂಟೆಗೆ 2000 ದಿಂದ 15,000ದ ವರೆಗೆ ದುಡಿಯಬಹುದು.

ಕೋರ್ಸ್‌ಗಳು

ಹಿನ್ನೆಲೆ ಧ್ವನಿ ಕಲಾವಿದರಾಗಲು ಯಾವುದೇ ಕಾಲೇಜುಗಳಲ್ಲಿ ಪದವಿ ಕೋರ್ಸ್‌ಗಳಿಲ್ಲ. ಆದರೆ ಇದನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿಕೊಳ್ಳಲು ಬಯಸುವವರಿಗೆ ಕೆಲವೊಂದು ಕೋರ್ಸ್‌ಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ನೀವು ಈ ಕೋರ್ಸ್‌ ಮಾಡಿಕೊಂಡು ಈ ವೃತ್ತಿಯಲ್ಲಿ ಮುಂದುವರಿಯಬಹುದು.

ಇಂಡಿಯನ್‌ ವಾಯ್ಸ್ ಓವರ‍್ಸ್ ಮುಂಬೈ

ಫಿಲ್ಮಿಟ್ ಅಕಾಡೆಮಿ ಮುಂಬೈ

ವಾಯ್ಸ್ ಬಜಾರ್ ಮುಂಬೈ

ಹೀಗೆ ಹಲವಾರು ಸಂಸ್ಥೆಗಳಲ್ಲಿ ಕೋರ್ಸ್ ಇರುತ್ತದೆ. ಇಷ್ಟೇ ಅಲ್ಲದೇ ಕೆಲವು ಅನುಭವಿ ಹಿನ್ನೆಲೆ ಧ್ವನಿ ಕಲಾವಿದರು ತಮ್ಮದೇ ಸ್ವಂತ ತರಗತಿಗಳನ್ನು ನಡೆಸುತ್ತಿದ್ದಾರೆ. ಗೂಗಲ್‌ನಲ್ಲಿ ಇವರ ಬಗ್ಗೆ ಹುಡುಕಿದರೆ ಸ್ಥಳದೊಂದಿಗೆ ಅವರ ಪರಿಚಯದ ಮಾಹಿತಿಯೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT