ಶನಿವಾರ, ಮಾರ್ಚ್ 6, 2021
19 °C

ಕಲಿಯಬೇಕಿದೆ ಕಲಿಕೆಯನ್ನು ಕಲಿಸಲು...

ಡಾ. ಶಿವಾನಂದ ಬಿ. ಹಿರೇಮಠ Updated:

ಅಕ್ಷರ ಗಾತ್ರ : | |

Deccan Herald

ಕಬಡ್ಡಿ ಆಟದಲ್ಲಿ ಚಾಂಪಿಯನ್ ಆಗಿದ್ದ ’ಅಮರ’ ಐದನೇ ತರಗತಿಯಲ್ಲಿ ಓದುತ್ತಿದ್ದ. 4ನೇ ತರಗತಿಯಲ್ಲಿ ಎರಡು ಬಾರಿ ಅನುತ್ತೀರ್ಣನಾದ ನಂತರ ಶಿಕ್ಷಕರೇ ಅವನನ್ನು, ಮುಂದಿನ ತರಗತಿಗೆ ಎತ್ತಿ ಹಾಕಿದ್ದರು. ಶಿಕ್ಷಕರು ಅವನ್ನು ದಡ್ಡ, ಸೋಂಬೇರಿ ಎಂದು ಬೈಯುತ್ತಿದ್ದರು. ಓದಲೂ ಎಷ್ಟೇ ಪ್ರೋತ್ಸಾಹಿಸಿದರೂ, ಅಮರನ ತಲೆಗೆ ಅಕ್ಷರಗಳು ಹತ್ತುತ್ತಿಲ್ಲವಾದ್ದರಿಂದ, ಅವನ ತಂದೆ-ತಾಯಿ ಅವನನ್ನು ದನ ಕಾಯಲು ಕಳಿಸುವ ಯೋಚನೆಯಲ್ಲಿದ್ದರು.

ಅಮರ ಹಲವಾರು ಬಾರಿ ಶಿಕ್ಷಕರು ಹಾಗೂ ಪಾಲಕರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ. ತನಗೆ ಅಕ್ಷರಗಳು ಅರ್ಥವಾಗುವುದಿಲ್ಲ. ಬರೆಯಲು ಗೊಂದಲವಾಗುತ್ತದೆ. ಅದಕ್ಕೆ ಪರಿಹಾರ ಸೂಚಿಸಿ ಎಂದು ಎಷ್ಟು ಬಾರಿ ಅಂಗಲಾಚಿದರೂ, ಯಾರೊಬ್ಬರೂ ಆತನ ಗೋಳಿಗೆ ಸ್ಪಂದಿಸಲಿಲ್ಲ. ಬದಲಿಗೆ ಮೈಗಳ್ಳ, ದಡ್ಡ ಎಂಬ ಮಾತುಗಳನ್ನೇ ಕೇಳಬೇಕಾಯಿತು. ಅತ್ತ ಓದಿದ್ದೂ ಅರ್ಥವಾಗದೇ, ಪದೇ ಪದೇ ಫೇಲ್ ಆಗಿ, ಎಲ್ಲರಿಂದ ಅವಮಾನಿತನಾಗುವುದರ ಬದಲು ಶಾಲೆ ಬಿಟ್ಟು ಬೇರೆನ್ನಾದರೂ ಮಾಡುವುದೇ ಲೇಸೆಂದು, ಶಿಕ್ಷಣಕ್ಕೆ ಎಳ್ಳು-ನೀರು ಬಿಟ್ಟನು. ನಮ್ಮ ದೇಶದಲ್ಲಿ ಅನೇಕ ಅಮರರು, ಈ ಕಾರಣದಿಂದಲೇ ಶಾಲೆಯನ್ನು ಮಧ್ಯದಲ್ಲೇ ತೊರೆಯುತ್ತಿದ್ದಾರೆ.

ಶೈಕ್ಷಣಿಕ ಸಾಧನೆಯು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಗುವಿನ ಭವಿಷ್ಯದ ಮುಖಪುಟವೆಂದು ಪರಿಗಣಿಸಲ್ಪಡುತ್ತದೆ. ‘ಶೈಕ್ಷಣಿಕ ಹಿನ್ನಡೆತ’(Scholastic backwardness)ದ ಕಾರಣಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಅನುಸರಿಸದಿದ್ದರೆ, ಅದು ಮಗುವಿನ ಜೀವನದುದ್ದಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ.

ಮಗುವು ಬೆಳೆಯುತ್ತಿರುವಾಗ ಅನೇಕ ಜೀವನಕೌಶಲಗಳನ್ನು ಕಲಿಯುತ್ತ ಬೆಳೆಯುತ್ತದೆ. ಸ್ವಾಭಾವಿಕ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಜೊತೆಜೊತೆಗೆ, ಶಾಲೆ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೌಶಲಗಳನ್ನು ಕಲಿಯುತ್ತದೆ. ಆದರೆ ಶೈಕ್ಷಣಿಕ ಕೌಶಲಗಳಾದ ಓದು, ಬರಹ, ಶಬ್ದಗಳು, ಉಚ್ಚಾರ, ವ್ಯಾಕರಣ ಹಾಗೂ ಗಣಿತವನ್ನು ಮಗುವಿನ ವಯಸ್ಸು ಹಾಗೂ ಬುದ್ಧಿಮಟ್ಟಕ್ಕೆ ತಕ್ಕಂತೆ ಕಲಿಯದಿದ್ದರೆ ಅದನ್ನು ‘ಶೈಕ್ಷಣಿಕ ಹಿನ್ನಡೆತ’ವೆನ್ನುತ್ತೇವೆ.

ತಮ್ಮ ಮಕ್ಕಳು ಶಾಲೆಯಲ್ಲಿ ಎಲ್ಲ ಮಕ್ಕಳಿಗಿಂತ, ಇಲ್ಲವೇ ಎಲ್ಲ ಮಕ್ಕಳಂತೆ ಮುಂಚೂಣಿಯಲ್ಲಿರಲಿ ಎಂಬುದು ಎಲ್ಲ ಪಾಲಕರ ಸಹಜವಾದ ನಿರೀಕ್ಷೆ. ಈ ನಿಟ್ಟಿನಲ್ಲಿ ಮಕ್ಕಳು ವಿಫಲರಾಗತೊಡಗಿದಾಗ, ಪಾಲಕರು ಸ್ವಾಭಾವಿಕವಾಗಿಯೇ ಚಿಂತೆಗೊಳಗಾಗುತ್ತಾರೆ. ಇದರಿಂದ ಮಕ್ಕಳನ್ನು ಹೆಚ್ಚಿನ ಸಮಯ ಅಧ್ಯಯನ ಮಾಡಲು ಒತ್ತಾಯಿಸಬಹುದು ಇಲ್ಲವೇ ಮನೆಪಾಠಕ್ಕೆ ಅವರನ್ನು ಕಳಿಸಬಹುದು. ಇನ್ನೂ ಕೆಲವು ಸಂದರ್ಭದಲ್ಲಿ, ಶಾಲೆಯನ್ನೇ ಬದಲಿಸಬಹುದು. ಇವೆಲ್ಲ ಪ್ರಯತ್ನಗಳನ್ನು ಮಾಡಿದ ಮೇಲೂ ಮಕ್ಕಳ ಶೈಕ್ಷಣಿಕ ಸಾಧನೆಯಲ್ಲಿ ಸುಧಾರಣೆ ಕಂಡುಬರದಿದ್ದರೆ, ಪಾಲಕರು ಮಕ್ಕಳನ್ನು ದೂಷಿಸಲಾರಂಭಿಸುತ್ತಾರೆ.

ಹಿನ್ನಡೆತಕ್ಕೆ ಮಗುವಿನ ಆಲಸ್ಯ, ಅಸಡ್ಡೆ ಹಾಗೂ ಬೇಜವಾಬ್ದಾರಿಯೇ ಕಾರಣವೆಂದು ದೂಷಿಸಿ, ಕೆಲವೊಮ್ಮೆ ಶಿಕ್ಷೆಗೂ ಒಳಪಡಿಸಲಾಗುತ್ತದೆ. ಶಿಕ್ಷಿಸುವುದರಿಂದ ಚೆನ್ನಾಗಿ ಓದಬಹುದೆಂಬ ಮಿಥ್ಯ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಆದರೆ ಶಿಕ್ಷೆಯಿಂದ ಇನ್ನಷ್ಟು ದುಶ್ಪರಿಣಾಮಗಳಾಗುವವೇ ಹೊರತು, ಯಾವುದೇ ಪ್ರಯೋಜನವಿಲ್ಲ.

ಶೈಕ್ಷಣಿಕ ಹಿನ್ನಡೆತಕ್ಕ ಅನೇಕ ಕಾರಣಗಳಿವೆ.

ನಿರ್ದಿಷ್ಟವಾದ ಕಲಿಕೆಯ ಸಮಸ್ಯೆಗಳು (Specific Learning Disability):  

ಬೆಳವಣಿಗೆಯ ಸಮಯದಲ್ಲಿ ಕೆಲ ಮಕ್ಕಳಲ್ಲಿ ಓದಿನಲ್ಲಿ (Dyslexia), ಬರವಣಿಗೆಯಲ್ಲಿ (Dysgraphia) ಹಾಗೂ ಲೆಕ್ಕದಲ್ಲಿ (Dyscalculia) ನ್ಯೂನತೆ ಕಂಡು ಬರುತ್ತದೆ. ಅವರಿಗೆ ಸಾಂಪ್ರದಾಯಿಕ ಶಿಕ್ಷಣ, ಪ್ರೋತ್ಸಾಹ ಹಾಗೂ ಸಾಕಷ್ಟು ಅವಕಾಶಗಳನ್ನು ಒದಗಿಸಿದರೂ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಸಮಾಜದಲ್ಲಿ  ಡಿಸ್‌ಲೆಕ್ಸಿಯದ ಬಗ್ಗೆ ಅರಿವು ಕಡಿಮೆ ಇರುವದರಿಂದ, ಈ ಸಮಸ್ಯೆಯು ಬೆಳಕಿಗೆ ಬಾರದೇ ಉಳಿಯುತ್ತದೆ.

ಸಾಂಪ್ರದಾಯಿಕ ಶಿಕ್ಷಣವ್ಯವಸ್ಥೆಯು ಇಂತಹ ಮಕ್ಕಳಿಗೆ ವಿಶೇಷ ತರಬೇತಿಯನ್ನೇನೂ ಒದಗಿಸುವುದಿಲ್ಲ. ಈ ಸಮಸ್ಯೆಗಳಿಂದ ಮಕ್ಕಳು ಗೊಂದಲ, ಹಿಂಸೆಗಳನ್ನು ಅನುಭವಿಸಿ, ತಮ್ಮ ಹಾಗೂ ಪಾಲಕರ ಆಕಾಂಕ್ಷೆಗಳನ್ನು ಪೂರೈಸಲಾಗದೇ ಖಿನ್ನತೆಗೊಳಗಾಗಬಹುದು, ಇಲ್ಲವೇ ಶಾಲೆಯನ್ನು ಮಧ್ಯದಲ್ಲೇ ತೊರೆಯಬಹುದು. ಹಿಂದಿ ಚಿತ್ರನಟ  ಆಮಿರ್‌ಖಾನ್‌ರ ‘ತಾರೆ ಝಮೀನ್ ಪರ್‌’ ಎಂಬ ಚಿತ್ರವು ಈ ವಿಷಯದ ಬಗ್ಗೆ ಬೆಳಕು ಚೆಲ್ಲಿ, ಸಾಕಷ್ಟು ಪಾಲಕರನ್ನು ತಮ್ಮ ಮಕ್ಕಳ ಕಲಿಕೆಯಲ್ಲಿನ ನ್ಯೂನತೆಯ ಬಗ್ಗೆ ಕಾಳಜಿ ವಹಿಸುವಂತೆ ಮಾಡಿದೆ.

ಚಿತ್ತಚಂಚಲತೆ (Attention Deficit Hyperactivity Disorder):

ಚಿತ್ತಚಂಚಲತೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಮೆದುಳಿನ ಸಮಸ್ಯೆ. ಈ ಮಕ್ಕಳು ಒಂದೆಡೆ ಕೂಡುವುದಿಲ್ಲ. ಎಲ್ಲೆಂದರಲ್ಲಿ ಓಡಾಡುತ್ತಿರುತ್ತಾರೆ. ಗಮನ ಕೇಂದ್ರೀಕರಿಸಲಾಗುವುದಿಲ್ಲ. ಹೀಗಾಗಿ ಓದುವಾಗ, ಬರೆಯುವಾಗ ತಪ್ಪುಗಳನ್ನು ಮಾಡುತ್ತಾರೆ. ಓದಿನಲ್ಲಿ ಲಕ್ಷ್ಯವಿಡಲಾಗದ ಕಾರಣ, ನೆನಪಿಟ್ಟುಕೊಳ್ಳಲಾಗುವುದಿಲ್ಲ. ಹೀಗಾಗಿ ಶಿಕ್ಷಣದಲ್ಲಿ ಹಿಂದುಳಿಯುತ್ತಾರೆ. ಈ ಸಮಸ್ಯೆ ಸಾಮಾನ್ಯವಾಗಿದ್ದರೂ ಪಾಲಕರು ಅದನ್ನು ನಿರ್ಲಕ್ಷಿಸಿ, ಮಕ್ಕಳನ್ನೆ ದೂಷಿಸುವುದು, ಶಿಕ್ಷಿಸಿವುದು ಮಾಡುತ್ತಾರೆ.

ನಿಧಾನವಾಗಿ ಕಲಿಯುವ ವಿದ್ಯಾರ್ಥಿಗಳು (Slow Learners):

ಬುದ್ಧಿಮಟ್ಟ (Intelligence Quotient - IQ) 70-89 ಇರುವ ವಿದ್ಯಾರ್ಥಿಗಳು ವಿಷಯಗಳನ್ನು ನಿಧಾನವಾಗಿ ಗ್ರಹಿಸುತ್ತಾರೆ. ಇವರು ಬುದ್ಧಿಮಾಂದ್ಯರಲ್ಲ. ಆದರೆ, ಇವರ ಕಲಿಕೆಯ ವಿಷಯಗಳನ್ನು ಗ್ರಹಿಸುವ, ನೆನಪಿಟ್ಟುಕೊಳ್ಳುವ ಹಾಗೂ ಗ್ರಹಿಸಿದ ವಿಷಯವನ್ನು ವಿಶ್ಲೇಷಿಸುವ ಕೌಶಲಗಳು ಕಡಿಮೆ ಇರುವುದರಿಂದ, ನಿಧಾನವಾಗಿ ಕಲಿಯುತ್ತಾರೆ. ಹೀಗಾಗಿ ಸಾಂಪ್ರದಾಯಿಕ ಶಿಕ್ಷಣದಲ್ಲಿ ಈ ಮಕ್ಕಳೂ ತೊಂದರೆ ಅನುಭವಿಸವುದು ಸಾಮಾನ್ಯ.

ದೃಷ್ಟಿದೋಷ, ಶ್ರವಣದೋಷ, ಆಟಿಸಂ ಹಾಗೂ ನರಮಂಡಲದ ಇನ್ನಿತರ ತೊಂದರೆಗಳಿಂದಲೂ ಮಕ್ಕಳು ಹಿನ್ನಡೆ ಅನುಭವಿಸುತ್ತಾರೆ.  

ಆತಂಕ, ಖಿನ್ನತೆ, ಗೀಳುರೋಗ, ಅನಾರೋಗ್ಯಕರ ಪಾಲನೆ-ಪೋಷಣೆ, ಪಾಲಕರ ಮಧ್ಯೆ ವೈವಾಹಿಕ ಸಮಸ್ಯೆಗಳು ಹಾಗೂ ಇನ್ನಿತರ ಸಮಸ್ಯೆಗಳೂ ಮಕ್ಕಳ ಶೈಕ್ಷಣಿಕ ಹಿನ್ನಡೆತಕ್ಕೆ ಕಾರಣವಾಗಿವೆ.

ಪರಿಹಾರವೇನು?

ಸಾಮಾನ್ಯವಾಗಿ ಮಕ್ಕಳ ಕಲಿಕೆಯ ನ್ಯೂನತೆಯ ಸೂಕ್ಷ್ಮತೆಗಳನ್ನು ಶಿಕ್ಷಕರು ಗಮನಿಸುತ್ತಾರೆ. ಓದಿನಲ್ಲಿ ಸಮಸ್ಯೆಯಿದ್ದಾಗ ಶಿಕ್ಷಕರು ಹಾಗೂ ಪಾಲಕರು ಅದರ ಬಗ್ಗೆ ಚರ್ಚಿಸಿ, ತಜ್ಞ ಮನೋವೈದ್ಯರನ್ನು ಆದಷ್ಟು ಬೇಗನೇ ಕಾಣುವುದು ಒಳಿತು. ಬುದ್ಧಿಮಟ್ಟ ಪರೀಕ್ಷೆ(IQ Assessment), ನಿರ್ದಿಷ್ಟ ಕಲಿಕಾ ನ್ಯೂನತೆಯ ಮಾಪನ (Learning Disability Assessment) ಹಾಗೂ ಇನ್ನಿತರ ಪರೀಕ್ಷೆಗಳನ್ನು ನಡೆಸಿ, ತಜ್ಞರು ಕೆಲವು ಪರಿಹಾರ ಸೂಚಿಸುತ್ತಾರೆ.

ಪರಿಹಾರ ಬೋಧನೆ (Remedial Training): ನಿರ್ದಿಷ್ಟ ಕಲಿಕೆಯ ತೊಂದರೆ ಇರುವ ಮಕ್ಕಳಿಗೆ, ಅವರ ನ್ಯೂನತೆಗಳನ್ನು ಆಧರಿಸಿ, ವಿಶೇಷ ಶಿಕ್ಷಕರು (Special Educator) ವಿಷಯಗಳನ್ನು ಬೋಧಿಸುತ್ತಾರೆ. ವಿಷಯಗಳನ್ನು ಸರಳವಾಗಿಸಿ, ಅವರ ಕೌಶಲಕ್ಕನುಸಾರವಾಗಿ ಕಲಿಸಲಾಗುತ್ತದೆ. ಅಲ್ಲದೇ, ಅಂತಹ ಮಕ್ಕಳಿಗೆ ಅನೇಕ ಶಿಕ್ಷಣ ಬೋರ್ಡ್‌ಗಳು ಪರೀಕ್ಷೆಯಲ್ಲಿ ಕೆಲವು ವಿಷಯಗಳ ರಿಯಾಯತಿಯನ್ನೂ ನೀಡುತ್ತವೆ. ಇತ್ತೀಚಿಗೆ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಬೋರ್ಡ್ (CBSE), ತನ್ನಡಿಯಲ್ಲಿ ಬರುವ ಎಲ್ಲ ಶಾಲೆಗಳೂ ವಿಶೇಷ ಶಿಕ್ಷಕರನ್ನು ನೆಮಿಸಿಕೊಳ್ಳುವುದು ಕಡ್ಡಾಯ ಮಾಡಿದೆ.

ಮುಂದುವರಿದ ರಾಷ್ಟ್ರಗಳಲ್ಲಿ ಶಿಕ್ಷಣ ವ್ಯವಸ್ಥೆಯು ಅತ್ಯಂತ ವೈಜ್ಞಾನಿಕವೂ ಹಾಗೂ ಸಕ್ರೀಯವಾಗಿರುವುದರಿಂದ, ಶೈಕ್ಷಣಿಕ ಹಿನ್ನಡೆತವನ್ನು ಆದಷ್ಟು ಬೇಗನೆ ಗುರುತಿಸಿ ಪರಿಹಾರ ಸೂಚನೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಜನಸಂಖ್ಯೆ, ನುರಿತ ತರಬೇತಿಯ ಕೊರತೆ, ಕಲಿಸುವುದರ ಹೊರತಾಗಿ ಶಿಕ್ಷಕರಿಗೆ ನೀಡುವ ಇನ್ನಿತರ ಜವಾಬ್ದಾರಿಗಳು, ಪಾಲಕರಲ್ಲಿ ಶೈಕ್ಷಣಿಕ ಹಿನ್ನಡೆತದ ಬಗೆಗಿನ ನಿರ್ಲಕ್ಷ್ಯ ಹಾಗೂ ಸರ್ಕಾರ ಮತ್ತು ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ ಈ ‘ಅದೃಶ್ಯ ಅಂಗವೈಕಲ್ಯ’ವು ನಮ್ಮ ಮುಂದಿನ ಪ್ರಜೆಗಳಿಗೆ ತೊಂದರೆ ನೀಡುತ್ತಲೇ ಇದೆ.

ಭಾರತೀಯ ಸಮಾಜದಲ್ಲಿ ಕಳೆದ ಒಂದೂವರೆ ದಶಕದಲ್ಲಿ ಈ ‘ಅದೃಶ್ಯ ಅಂಗವೈಕಲ್ಯ’ದ ಬಗ್ಗೆ ಆಸಕ್ತಿ ಮತ್ತು ಅರಿವು ತುಂಬಾ ಹೆಚ್ಚಿದೆ. ನಮ್ಮ ದೇಶದಲ್ಲಿ ಶಾಲೆಯನ್ನು ಮಧ್ಯದಲ್ಲೇ ತೊರೆಯುವವರ ಸಂಖ್ಯೆ ಹೆಚ್ಚು. ಮಕ್ಕಳು ಶಾಲೆಯನ್ನು ತೊರೆಯದಂತೆ ಹಾಗೂ ಮರಳಿ ಬರುವಂತೆ ಅವರನ್ನು ಶಾಲೆಯೆಡೆಗೆ ಆಕರ್ಷಿಸಲು ಸರ್ಕಾರಗಳು, ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿವೆ. ಆದರೆ ಸರ್ಕಾರಗಳು, ಸಂಘ–ಸಂಸ್ಥೆಗಳು ಶಾಲೆಯನ್ನು ಮಧ್ಯದಲ್ಲೇ ತೊರೆಯುವುದಕ್ಕೆ ಮೂಲ ಕಾರಣವಾದ ‘ಶೈಕ್ಷಣಿತ ಹಿನ್ನಡೆತ’ವನ್ನು ವಿಶ್ಲೇಷಿಸಿ, ವೈಜ್ಞಾನಿಕವಾದ ಪರಿಹಾರ ಮಾರ್ಗಗಳನ್ನು ಅನುಷ್ಠಾನಕ್ಕೆ ತರದಿದ್ದರೆ ಎಂತಹ ಆಕರ್ಷಕ ಯೋಜನೆಗಳೇ ಆಗರಲಿ, ಸಫಲವಾಗುವುದಿಲ್ಲ.

ಮಗುವು ಎಲ್ಲ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರಬೇಕೆಂಬುದು ಪಾಲಕರ ಸಹಜ ಆಕಾಂಕ್ಷೆ. ಆದರೆ ಮಗುವಿಗೂ ಎಲ್ಲರಂತೆಯೇ ಮಿತಿಗಳಿರುತ್ತವೆ ಜೊತೆಗೆ ವಿಶೇಷ ಸಾಮರ್ಥ್ಯಗಳೂ ಇರುತ್ತವೆ. ಕೇವಲ ಶೈಕ್ಷಣಿಕ ಸಾಧನೆಯೊಂದನ್ನೇ ನಾವು ಅಗ್ರಗಣ್ಯವೆಂದು ಪರಿಗಣಿಸಿದ್ದರೆ, ಜೀವನದ ಇತರ ಮುಖ್ಯ ಆಯಾಮಗಳಾದ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ, ನೃತ್ಯ, ರಾಜಕೀಯ, ಸಾಮಾಜಿಕ ಕ್ಷೇತ್ರ – ಮುಂತಾದವುಗಳಲ್ಲಿ ಸಾಧಕರೇ ಇರುತ್ತಿರಲಿಲ್ಲ. ಮಕ್ಕಳಿಂದ ನಮ್ಮ ಗುರಿ, ಪ್ರತಿಷ್ಠೆ ಹಾಗೂ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳವುದರ ಬದಲು, ಅವರ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆಯೋಣ.

**

* ಶಿಕ್ಷಕರಿಗೆ ಅವರ ತರಬೇತಿಯ ಸಮಯದಲ್ಲಿ ಹಾಗೂ  ಶಿಕ್ಷಕ ವೃತ್ತಿಯಲ್ಲಿರುವಾಗ ನಿಯಮಿತವಾಗಿ ನಿರ್ದಿಷ್ಟ ಕಲಿಕೆಯ ನ್ಯೂನತೆಗಳನ್ನು ಶಾಲಾ ಮಟ್ಟದಲ್ಲಿ ಹೇಗೆ ಗುರುತಿಸಬೇಕು ಎಂಬುದರ ಬಗ್ಗೆ ವಿಶೇಷ ತರಬೇತಿ ನೀಡುವುದು ಅತ್ಯವಶ್ಯ.

ಸಂಪನ್ಮೂಲಗಳ ಕೊರತೆಯಿರುವದರಿಂದ ನಮ್ಮ ದೇಶದಲ್ಲಿ ಪ್ರತಿಯೊಂದು ಶಾಲೆಗೆ ಒಬ್ಬ ವಿದ್ಯಾರ್ಥಿ ಮನಃಶಾಸ್ತ್ರಜ್ಞರನ್ನು ನೇಮಿಸುವುದು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರ ಶಿಕ್ಷಣೇತರ ಜವಾಬ್ದಾರಿಗಳನ್ನು ಕಡಿಮೆ ಮಾಡಿ, ಶಾಲಾ ಮಟ್ಟದಲ್ಲಿ ಮಕ್ಕಳ ಮನಃಶಾಸ್ತ್ರಜ್ಞರಾಗಲು ಸಹಾಯ ಮಾಡಬೇಕು.

* ಸರ್ಕಾರ, ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳು ಈ ಅದೃಶ್ಯ ಅಂಗವೈಕಲ್ಯದ ಕಾರಣಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು