ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಸುಸ್ಥಿರ ಅಭಿವೃದ್ಧಿಗೆ ‘ಕೈ’ಹಿಡಿಯುವ ವಿಶ್ವಾಸ: ಮನ್ಸೂರ್‌

ಬೆಂಗಳೂರು ’ಕೇಂದ್ರ’ದ ಕಾಂಗ್ರೆಸ್‌ ಅಭ್ಯರ್ಥಿ
Published 24 ಏಪ್ರಿಲ್ 2024, 22:23 IST
Last Updated 24 ಏಪ್ರಿಲ್ 2024, 22:23 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಬಾರಿ ನನಗೊಂದು ಅವಕಾಶ ಕೊಡಿ’ ಎಂದು ಮತದಾರರ ಕದ ತಟ್ಟುತ್ತಿದ್ದಾರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌. ಧಾರ್ಮಿಕ, ಭಾಷಾ ಅಲ್ಪಸಂಖ್ಯಾತರು ನಿರ್ಣಾಯಕ ಸಂಖ್ಯೆಯಲ್ಲಿರುವ ಈ ಕ್ಷೇತ್ರವನ್ನು ಸತತ ಮೂರು ಬಾರಿ ಪ್ರತಿನಿಧಿಸಿರುವ ಬಿಜೆಪಿಯ ಪಿ.ಸಿ. ಮೋಹನ್‌ ವಿರುದ್ಧದ ಆಡಳಿತ ವಿರೋಧಿ ಅಲೆ, ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ‘ಫಲ’ ಮತಗಳಾಗಿ ಪರಿವರ್ತನೆಯಾಗಿ ತನ್ನನ್ನು ಗೆಲುವಿನ ದಡ ಸೇರಿಸಬಹುದು ಎಂಬ ದೃಢ ವಿಶ್ವಾಸದಲ್ಲಿದ್ದಾರೆ ಅವರು.

ಬಹಿರಂಗ ಪ್ರಚಾರದ ಕೊನೆಯ ದಿನ ಬಿರುಸಿನ ಓಡಾಟದ ಮಧ್ಯೆ ‘ಪ್ರಜಾವಾಣಿ’ ಜೊತೆ ಅವರು ಮಾತನಾಡಿದರು. 

ಪ್ರ

ಕ್ಷೇತ್ರದಲ್ಲಿ ನಿಮ್ಮ ಪ್ರಚಾರ ಹೇಗಿದೆ?

ಕ್ಷೇತ್ರದಾದ್ಯಂತ ಸುತ್ತಾಡಿದ್ದೇನೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚುನಾವಣಾ ಪ್ರಚಾರ ಸಮಾವೇಶ, ರ‍್ಯಾಲಿಗಳಲ್ಲಿ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ನಮ್ಮ ಸರ್ಕಾರದ ಐದು ‘ಗ್ಯಾರಂಟಿ’ ಯೋಜನೆಗಳು ಮನೆ ಮನೆ ತಲುಪಿವೆ. ಈ ಯೋಜನೆಗಳು ನನ್ನ ಪಾಲಿಗೆ ಮತಗಳಾಗಿ ಪರಿವರ್ತನೆಯಾಗಲಿದೆ. ತಳಮಟ್ಟದಲ್ಲಿ ನನ್ನ ಪರವಾದ ಒಲವಿದೆ. ಕಾಂಗ್ರೆಸ್ ಪರವಾಗಿ ಜನರು ಮತ ಚಲಾಯಿಸುತ್ತಾರೆಂಬ ವಿಶ್ವಾಸವಿದೆ.

ಪ್ರ

ಕ್ಷೇತ್ರದ ಶಾಸಕರು, ಮಾಜಿ ಶಾಸಕರು ನಿಮಗೆ ಸಾಥ್‌ ಕೊಟ್ಟಿಲ್ಲವಂತೆ. ನಿಜನಾ?

ಯಾರು ಹೇಳಿದ್ದು? ಹಾಗೆಂದು, ಸುದ್ದಿ ಹಬ್ಬಿಸಿದ್ದಾರೆ ಅಷ್ಟೆ. ಎಲ್ಲರೂ ಜೊತೆಗಿದ್ದಾರೆ. ಶಾಸಕರು, ಮಾಜಿ ಶಾಸಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹೀಗೆ ಎಲ್ಲರೂ ಒಗ್ಗಟ್ಟಿನಿಂದ ಬೆನ್ನಿಗೆ ನಿಂತಿದ್ದಾರೆ. 

ಪ್ರ

ಬಿಜೆಪಿ ಭದ್ರಕೋಟೆಯೆಂದೇ ಗುರುತಿಸಿಕೊಂಡಿರುವ ಕ್ಷೇತ್ರದಲ್ಲಿ ‘ಗ್ಯಾರಂಟಿ’ಗಳ ಹೊರತಾಗಿ ನಿಮ್ಮ ಗೆಲುವಿಗೆ ಸಹಕಾರಿಯಾಗುವ ಅಂಶಗಳು ಯಾವುವು?

ಬಿಜೆಪಿ ಭದ್ರಕೋಟೆ ಎನ್ನುವುದು ಸೃಷ್ಟಿ. 2009ರಲ್ಲಿ ಎಚ್‌.ಟಿ. ಸಾಂಗ್ಲಿಯಾನಾ, ಜಮೀರ್‌ ಅಹ್ಮದ್‌ ಖಾನ್ ಮತ್ತು ಪಿ.ಸಿ. ಮೋಹನ್‌ ಅವರ ಮಧ್ಯೆ ಮತ ವಿಭಜನೆಯಾಗಿತ್ತು. ಹೀಗಾಗಿ, ಮೋಹನ್‌ ಗೆದ್ದಿದ್ದರು. 2014ರಲ್ಲಿ ಮೋದಿ ಅಲೆ ಇತ್ತು. 2019ರಲ್ಲಿ ಪುಲ್ವಾಮಾ ದಾಳಿ ಪ್ರಕರಣ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಬಿಜೆಪಿ ಅಭ್ಯರ್ಥಿಯ (ಪಿ.ಸಿ. ಮೋಹನ್‌) ಗೆಲುವಿನ ಅಂತರ ಕಡಿಮೆಯಾಗಿತ್ತು. ಈ ಬಾರಿ ಮೋದಿ ಅಲೆ ಇಲ್ಲ. ಅಲ್ಲದೆ, ಕಾಂಗ್ರೆಸ್ ಪರ ವಾತಾವರಣವಿದೆ. ಸಂಸದರಾಗಿರುವ ಮೋಹನ್‌ ಅವರು ಕ್ಷೇತ್ರಕ್ಕೇ ಬಂದಿಲ್ಲ ಎಂಬ ಆರೋಪವಿದೆ. ಗೆದ್ದರೆ ನೀವೂ ಅದೇ ರೀತಿ ಮಾಡುತ್ತೀರಾ ಎಂದೂ ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ.

ಪ್ರ

ನಿಮ್ಮನ್ನು ಜನ ಯಾಕೆ ಗೆಲ್ಲಿಸಬೇಕು?

ಮೂರು ಬಾರಿ ಸಂಸದರಾದ ಪಿ.ಸಿ. ಮೋಹನ್‌ ಅವರು ಅಭಿವೃದ್ದಿಗಾಗಿ ಏನು ಕೆಲಸ ಮಾಡಿದ್ದಾರೆ? ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆದಾಗ, ಬರ ಪರಿಹಾರ ವಿಳಂಬವಾದಾಗ ಅವರು ಸಂಸತ್ತಿನ ಒಳಗೆ ಇದ್ದರಲ್ಲ, ರಾಜ್ಯದ ಪರ ಧ್ವನಿ ಎತ್ತಿದ್ದಾರಾ? ಬೆಂಗಳೂರು, ಕರ್ನಾಟಕದ ಅಭಿವೃದ್ದಿಗೆ ನನ್ನಲ್ಲಿ ನನ್ನದೇ ಆದ ಚಿಂತನೆಗಳಿವೆ. ಸುಸ್ಥಿರ ಮೂಲಸೌಲಭ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುವ ಮೂಲಕ ಕಣ್ಣಿಗೆ ಕಾಣುವಂಥ ಕೆಲಸ ಮಾಡುತ್ತೇನೆ.

ಪ್ರ

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೆ ನಿಮಗೆ ಕಾಂಗ್ರೆಸ್‌ ಟಿಕೆಟ್ ನೀಡಿದೆಯೇ?

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ನಿಜ. ಅದೊಂದೇ ಕಾರಣ ಅಲ್ಲ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ಸಾಮಾಜಿಕವಾಗಿಯೂ ನಾನು ಗುರುತಿಸಿಕೊಂಡಿದ್ದೇನೆ. ಜೊತೆಗೆ, ನನ್ನ ಸಾಮರ್ಥ್ಯವನ್ನು ಗಮನಿಸಿ ಪಕ್ಷ ಟಿಕೆಟ್‌ ನೀಡಿದೆ. ಅಲ್ಲದೆ, ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕೊಡುವ ಪಕ್ಷ ಕಾಂಗ್ರೆಸ್‌ ಮಾತ್ರ. ಬಿಜೆಪಿಯವರು ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿಗೆ ಅವಕಾಶ ನೀಡಿದೆಯೇ?

ಪ್ರ

ಈ ಬಾರಿ ‘ಕುಟುಂಬ’ ಸದಸ್ಯರಿಗೆ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಿದೆ. ನೀವೂ ಕೇಂದ್ರದ ಮಾಜಿ ಸಚಿವರ ಪುತ್ರ. ಈ ಬಗ್ಗೆ ಏನು ಹೇಳುತ್ತೀರಿ?

ನಾನು ಕೇಂದ್ರದ ಮಾಜಿ ಸಚಿವ (ಕೆ. ರೆಹಮಾನ್‌ ಖಾನ್‌) ಪುತ್ರ. ಆದರೆ 20 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿದ್ದೇನೆ. ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದೇನೆ. ತೆಲಂಗಾಣ ಚುನಾವಣೆಯಲ್ಲಿ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದೇನೆ. ಅರ್ಹತೆಯ ಮೇಲೆ ಪಕ್ಷ ನನಗೆ ಟಿಕೆಟ್‌ ನೀಡಿದೆಯೇ ಹೊರತು ಕೇಂದ್ರದ ಮಾಜಿ ಸಚಿವರ ಪುತ್ರ ಎಂದು ಕೊಟ್ಟಿಲ್ಲ. ಹಾಗೆ ನೋಡಿದರೆ ಬಿಜೆಪಿ ಕುಟುಂಬ ಪಕ್ಷ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT