ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

ಜೆ.ಸಿ. ಮಾಧುಸ್ವಾಮಿ ಸಂಪೂರ್ಣ ಸಹಕಾರ ನನಗೆ ಸಿಕ್ಕಿದೆ
Published : 14 ಏಪ್ರಿಲ್ 2024, 0:30 IST
Last Updated : 14 ಏಪ್ರಿಲ್ 2024, 0:30 IST
ಫಾಲೋ ಮಾಡಿ
Comments
ಪ್ರ

ಬೆಂಗಳೂರು ಬಿಟ್ಟು ತುಮಕೂರು ಆಯ್ಕೆ ಮಾಡಿಕೊಂಡಿದ್ದೇಕೆ?

ನನ್ನ ಆಯ್ಕೆಯಲ್ಲ. ಪಕ್ಷದ ವರಿಷ್ಠರು ಅವಕಾಶ ನೀಡಿ ಇಲ್ಲಿಗೆ ಕಳುಹಿಸಿದ್ದಾರೆ. ರಾಷ್ಟ್ರೀಯ ಪಕ್ಷ ಬಿಜೆಪಿಗೆ ತನ್ನದೇ ಆದ ಚಿಂತನೆ ಇರುತ್ತದೆ. ಬೆಂಗಳೂರು ನಗರಕ್ಕೆ ನಾನು ಕೊಟ್ಟ ಕೊಡುಗೆ ಗುರುತಿಸಿದ್ದಾರೆ. ನನ್ನ ಅನುಭವ ಪರಿಗಣಿಸಿದ್ದಾರೆ.

ಪ್ರ

ಮೋದಿ ನೋಡಿ ವೋಟು ಕೊಡಿ ಎನ್ನುತ್ತಿದ್ದೀರಿ? ನಿಮ್ಮದೇ ಆದ ವ್ಯಕ್ತಿತ್ವ ಇಲ್ಲವೆ?

ನನಗಾಗಿ ಚುನಾವಣೆ ನಡೆಯುತ್ತಿಲ್ಲ. ಇದು ದೇಶದ ಚುನಾವಣೆ. ಮೋದಿ ದೇಶದ ಆಸ್ತಿ. ಮನೆಯ ಯಜಮಾನನ್ನು ಮುಂದಿಟ್ಟುಕೊಂಡು ವೋಟು ಕೇಳುವುದರಲ್ಲಿ ತಪ್ಪೇನಿದೆ? ಅವರ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತಿರುವುದು.

ಪ್ರ

ನೀವು ಕ್ಷೇತ್ರಕ್ಕೆ ಹೊರಗಿನವರು ಎಂದು ಕಾಂಗ್ರೆಸ್‌ ಪ್ರಚಾರ ನಡೆಸಿದೆಯಲ್ಲ?

ಹೊರಗಿನವರು– ಒಳಗಿನವರು ಎಂಬ ಭಿನ್ನತೆ ಇಲ್ಲ. ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣ ಬಿಟ್ಟು ಬಾದಾಮಿಗೆ ಏಕೆ ಹೋದರು? ಒಕ್ಕೂಟ ವ್ಯವಸ್ಥೆಯಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದೆ.

ಪ್ರ

ಜೆ.ಸಿ.ಮಾಧುಸ್ವಾಮಿ ಸಹಕಾರ ಸಿಗುತ್ತಿದೆಯೇ?

ಮಾಧುಸ್ವಾಮಿ, ನಾನು ಆತ್ಮೀಯ ಸ್ನೇಹಿತರು. ಕೆಲವು ಸಂದರ್ಭ, ಸನ್ನಿವೇಶದಲ್ಲಿ ಅವರ ಮನಸ್ಸಿಗೆ ನೋವಾಗಿರಬಹುದು. ಈಗ ಅದೆಲ್ಲ ಸರಿ ಹೋಗಿದೆ. ಅವರಿಂದ ನನಗೆ ಯಾವುದೇ ತೊಂದರೆ ಆಗುವುದಿಲ್ಲ. ಅವರ ಬೆಂಬಲಿಗರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರ

ಜೆಡಿಎಸ್ ಜತೆಗಿನ ಹೊಂದಾಣಿಕೆಗೆ ಅಸಮಾಧಾನ?

ಜೆಡಿಎಸ್– ಬಿಜೆಪಿ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲೂ ಅಪಸ್ವರ ಕೇಳಿ ಬಂದಿಲ್ಲ. ಈ ಬಾರಿ ಪ್ರೀತಿ, ವಿಶ್ವಾಸದ ಮೇಲೆ ಹೊಂದಾಣಿಕೆ ನಡೆದಿದೆ. ದೇಶ ರಕ್ಷಿಸಲು ಎಚ್.ಡಿ.ದೇವೇಗೌಡ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯ ಎಂಬ ಮಾತುಗಳನ್ನು ಗೌಡರು ಆಡಿದ್ದಾರೆ. ಎಲ್ಲಕ್ಕಿಂತ ದೇಶ ದೊಡ್ಡದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪ್ರ

ಕಳೆದ ಬಾರಿ ಹೊಂದಾಣಿಕೆ ನೆರವಿಗೆ ಬರಲಿಲ್ಲ?

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಬೂಟಾಟಿಕೆಗೆ ಹೊಂದಾಣಿಕೆ ಮಾಡಿಕೊಂಡಿದ್ದವು. ಹೃದಯದಿಂದ ಹೊಂದಾಣಿಕೆ ಆಗಿರಲಿಲ್ಲ. ಆದರೆ ಈ ಬಾರಿ ಅಂತಹ ಸಮಸ್ಯೆ ಇಲ್ಲ.

ಪ್ರ

ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲಿಲ್ಲ ಎಂಬ ಸಿಟ್ಟು ಜನರಲ್ಲಿದೆ?

ರಾಜ್ಯ ಪ್ರತಿನಿಧಿಸುವವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಕೇಂದ್ರ ಸರ್ಕಾರ ಸ್ಪಂದಿಸುತ್ತದೆ. ತಾರತಮ್ಯ ತೋರಿಲ್ಲ. ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು. ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು.

ಪ್ರ

ಒಳ ಒಪ್ಪಂದದ ಮಾತು ಕೇಳಿ ಬರುತ್ತಿದೆಯಲ್ಲ?

ಒಳ ಒಪ್ಪಂದವೂ ಇಲ್ಲ ಹೊರ ಒಪ್ಪಂದವೂ ಇಲ್ಲ! ದೇಶ ರಕ್ಷಣೆಯಷ್ಟೇ ಮುಖ್ಯ. ಪಕ್ಷದ ಯಾವ ಮುಖಂಡರೂ ಅಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾರೋ ಒಬ್ಬರು ಹೇಳಿದರೆ ಏನೂ ಆಗುವುದಿಲ್ಲ. ಅಂತಹ ಪ್ರಯತ್ನ ಮಾಡಿದವರು ಪರಿಣಾಮ ಎದುರಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT