ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಬದುಕು ಕಟ್ಟಿಕೊಡುವ ‘ಮೋದಿ ಗ್ಯಾರಂಟಿ’ಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

Published 2 ಮೇ 2024, 23:18 IST
Last Updated 2 ಮೇ 2024, 23:18 IST
ಅಕ್ಷರ ಗಾತ್ರ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಮಾಜಿ ಮುಖ್ಯಮಂತ್ರಿಗಳಲ್ಲಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಬಿಡುವಿಲ್ಲದ ಪ್ರಚಾರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು...

* ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣದತ್ತ ಮುಖ ಮಾಡಲು ಕಾರಣವೇನು?

–ಹಾಲಿ ಸಂಸದ ಶಿವಕುಮಾರ ಉದಾಸಿ ಅವರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ ನಂತರ, ಗೆಲ್ಲುವ ಅಭ್ಯರ್ಥಿಯ ಬಗ್ಗೆ ಪಕ್ಷ ಹಲವಾರು ಮೂಲಗಳಿಂದ ಮಾಹಿತಿ ಕಲೆ ಹಾಕಿತು. ಪಕ್ಷದ ವರಿಷ್ಠರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ನಾನು ಸ್ಪರ್ಧಿಸಬೇಕಾಯಿತು. ನಮ್ಮ ತಂದೆ ಕೂಡ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣಕ್ಕೆ ಹೋಗಿದ್ದರು. ಎಲ್ಲಿದ್ದರೂ ಜನಸೇವೆಯೇ ಮುಖ್ಯ ಗುರಿ. 

* ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?

– ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾದ ಮಾದರಿಯಲ್ಲೇ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳೂ ಅಭಿವೃದ್ಧಿಯಾಗಬೇಕು ಎಂಬುದು ಜನರ ಬಯಕೆ. ಗ್ರಾಮಗಳಲ್ಲಿ ನಿರೀಕ್ಷೆ ಮೀರಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಾರ್ಯಕರ್ತರು ಕೂಡ ಉತ್ಸಾಹದಿಂದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಮತದಾರರ ಅಭೂತಪೂರ್ವ ಬೆಂಬಲದಿಂದ ಗೆಲುವು ದಾಖಲಿಸುವೆ ಎಂಬ ವಿಶ್ವಾಸವಿದೆ. 

*ಕಾಂಗ್ರೆಸ್ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಉತ್ತಮ ಎಂದು ಹೇಗೆ ಹೇಳುತ್ತೀರಿ?

– ಮೋದಿಯವರ ಗ್ಯಾರಂಟಿ ಶಾಶ್ವತವಾದದ್ದು. ದೇಶದ ಜಿಡಿಪಿ ಶೇ 6.6 ಇದ್ದು, ಜನರ ಆದಾಯ ಹೆಚ್ಚಾಗುತ್ತಿದೆ. 25 ಕೋಟಿ ಜನರ ಬಡತನ ನಿರ್ಮೂಲನೆ ಆಗಿದ್ದು, ಅದೇ ಜಿಡಿಪಿ ಹೆಚ್ಚಳವಾಗಲು ಕಾರಣ. ಹಳ್ಳಿಗಳಲ್ಲಿ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ಹೆಣ್ಣುಮಕ್ಕಳಿಗೆ ಉಜ್ವಲ ಗ್ಯಾಸ್‌, ಜಲಜೀವನ್‌ ಯೋಜನೆಯಡಿ ಮನೆ–ಮನೆಗೆ ನೀರು, ಬಡವರಿಗೆ 5 ಕೆ.ಜಿ. ಅಕ್ಕಿ, ಯುವಕರಿಗೆ ‘ಮುದ್ರಾ’ ಯೋಜನೆಯಡಿ ನೆರವು... ಇವು ಶಾಶ್ವತ ಗ್ಯಾರಂಟಿಗಳು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಡಿ ಕೊಡುವ ಅಲ್ಪ ಹಣದಿಂದ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದಿಲ್ಲ, ರಾಜ್ಯದ ಖಜಾನೆ ಕೂಡ ಖಾಲಿಯಾಗುತ್ತದೆ. ಕಾಂಗ್ರೆಸ್‌ನವರದ್ದು ರಾಜಕೀಯ ಹಿನ್ನೆಲೆ ಮತ್ತು ಚುನಾವಣಾ ಪ್ರೇರಿತ ಗ್ಯಾರಂಟಿ. ದೇಶ ಕಟ್ಟುವ ಮತ್ತು ಬದುಕು ಕಟ್ಟಿಕೊಡುವ ಮೋದಿ ಗ್ಯಾರಂಟಿಗೆ ಕಾಂಗ್ರೆಸ್‌ ಗ್ಯಾರಂಟಿಯನ್ನು ಹೋಲಿಸುವುದು ಅಸಾಧ್ಯ.

*ತಾವು ಸಿ.ಎಂ ಆಗಿದ್ದಾಗ ರಾಜ್ಯಕ್ಕೆ ಮತ್ತು ಜಿಲ್ಲೆಗೆ ನೀಡಿರುವ ಕೊಡುಗೆಗಳಿಗಿಂತ ಹೆಚ್ಚಾಗಿ ಮೋದಿ ಸರ್ಕಾರದ ಸಾಧನೆ ಮೇಲೆ ಮತ ಕೇಳಲು ಕಾರಣವೇನು?

– ತುಂಗಾ ಮೇಲ್ದಂಡೆ ಯೋಜನೆಯಡಿ 1 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ, ಬ್ಯಾಡಗಿ, ಹಾನಗಲ್‌, ಹಿರೇಕೆರೂರು, ರಾಣೆಬೆನ್ನೂರು ತಾಲ್ಲೂಕುಗಳಲ್ಲಿ ಏತ ನೀರಾವರಿ ಯೋಜನೆಗಳು, ಹಾವೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಎಂಜಿನಿಯರಿಂಗ್‌ ಕಾಲೇಜು, ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಮೆಗಾ ಡೇರಿ ಸ್ಥಾಪನೆ ಮುಂತಾದ ಸೌಲಭ್ಯಗಳನ್ನು ಹಾವೇರಿ ಜಿಲ್ಲೆಗೆ ಕಲ್ಪಿಸಿರುವುದು ಜನರಿಗೆ ಗೊತ್ತಿದೆ. ಮೋದಿ ಅವರಂಥ ಸಮರ್ಥ ನಾಯಕನ ಕೈಯಲ್ಲಿ ದೇಶವಿದ್ದರೆ ಇನ್ನೂ ಅಭಿವೃದ್ಧಿ ಆಗುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ. ಹೀಗಾಗಿ ಮೋದಿ ಅವರ ಸಾಧನೆಯನ್ನೂ ಹೇಳುತ್ತಿದ್ದೇನೆ. 

*2023ರ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಾರಥ್ಯದಲ್ಲಿ ಚುನಾವಣೆ ಎದುರಿಸಿದ ಬಿಜೆಪಿಗೆ ಹಿನ್ನಡೆಯಾಗಲು ಕಾರಣವೇನು?

– ಹಿನ್ನಡೆಗೆ ಹಲವು ಕಾರಣಗಳಿವೆ. ನಮ್ಮ ಸರ್ಕಾರದ ಸಾಧನೆಯನ್ನು ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ತಲುಪಿಸಲು ಸಾಧ್ಯವಾಗಲಿಲ್ಲ. ಕೆಲವು ಕ್ಷೇತ್ರಗಳಿಗೆ ಕಡೇ ಕ್ಷಣದಲ್ಲಿ ಅಭ್ಯರ್ಥಿ ಘೋಷಿಸಿದೆವು. ಕೆಲ ವಿಚಾರಗಳಲ್ಲಿ ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಿದ್ದರೆ, 500ರಿಂದ 2500 ಮತಗಳ ಅಂತರದಲ್ಲಿ ಕಳೆದುಕೊಂಡ 30 ಸ್ಥಾನಗಳನ್ನು ಗೆಲ್ಲುತ್ತಿದ್ದೆವು. ಈಗ ನಾವು ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಿದ್ದೇವೆ.

*ಹಾವೇರಿ ಮತ್ತು ಗದಗ ಜಿಲ್ಲೆಯ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ನಿಮ್ಮ ಬಗ್ಗೆ ಮೃದು ಧೋರಣೆ ತೋರಿಸುತ್ತಿದ್ದಾರೆ ಎಂಬ ಮಾತಿದೆಯಲ್ಲ?

– ಕಾಂಗ್ರೆಸ್‌ನವರು ಆ ರೀತಿ ಮೃದು ಧೋರಣೆಯನ್ನೇನೂ ತೋರಿಸುತ್ತಿಲ್ಲ. ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. 

*ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆಯೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆಯಲ್ಲಾ?

– ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಯಾವುದೇ ಆದೇಶ ಕೊಟ್ಟಿಲ್ಲ. ರಾಜ್ಯಕ್ಕೆ ಬರ ಪರಿಹಾರ ಕೊಡಲು ಏಕೆ ವಿಳಂಬವಾಗಿದೆ ಎಂಬುದನ್ನು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಪರಿಹಾರ ಕೊಡುವುದಿಲ್ಲ ಅಂತ ಎಲ್ಲೂ ಹೇಳಿಲ್ಲ. ನೀತಿಸಂಹಿತೆ ಇದ್ದರೂ ಬರ ಪರಿಹಾರ ಬಿಡುಗಡೆ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದ ಮೇಲೆ ಪರಿಹಾರ ಕೊಡಲಾಗಿದೆ. ರಾಜ್ಯದಲ್ಲಿ ಪ್ರವಾಹ ಬಂದಾಗ ರಾಜ್ಯದ ಬೊಕ್ಕಸದಿಂದ ಒಂದು ತಿಂಗಳಲ್ಲೇ ₹2,730 ಕೋಟಿಯನ್ನು 17 ಲಕ್ಷ ರೈತರಿಗೆ ಪರಿಹಾರವಾಗಿ ಕೊಟ್ಟಿದ್ದೆವು. ಕಾಂಗ್ರೆಸ್‌ ಸರ್ಕಾರಕ್ಕೆ ಮನಸ್ಸಿದ್ದರೆ, 6 ತಿಂಗಳ ಹಿಂದೆಯೇ ಬರ ಪರಿಹಾರ ಕೊಡಬಹುದಿತ್ತು.

*ನೀವು ಸಂಸದರಾದರೆ ಕ್ಷೇತ್ರದ ಜನ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?

– ಸಂಸದನಾದ ತಕ್ಷಣವೇ, ಈ ಭಾಗದಲ್ಲಿ ರೈತರಿಗೆ ಬೇಕಾದ ನೀರಾವರಿ ಸೌಲಭ್ಯ ಕಲ್ಪಿಸುವೆ. ಯುವಜನರಿಗೆ ಉದ್ಯೋಗ ನೀಡುವ ಕೈಗಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುವೆ. ಹಾವೇರಿ–ಗದಗ ಜಿಲ್ಲೆಗಳ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡುವೆ.

ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ 
ನೀವು ಅಧಿಕಾರದಲ್ಲಿದ್ದಾಗ ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ್ದೀರಿ. ಈ ವಿಷಯ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದೆಯಲ್ಲ?
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮುಸ್ಲಿಂ ಸಮುದಾಯದಲ್ಲಿರುವ ಪಿಂಜಾರ ನದಾಫ ಸೇರಿದಂತೆ 24 ಜಾತಿಗಳು ಈಗಾಗಲೇ ‘2ಎ’ ನಲ್ಲಿವೆ. ಬಡ ಮುಸ್ಲಿಮರ ಮೀಸಲಾತಿಯನ್ನು ನಾವು ತೆಗೆದಿಲ್ಲ. ಜಾತಿ ಆಧಾರಿತ ಮೀಸಲಾತಿ ಈಗಾಗಲೇ ಕರ್ನಾಟಕದಲ್ಲಿದೆ. ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದರಿಂದ ದೇಶದಲ್ಲಿ ದೊಡ್ಡ ಅನಾಹುತವಾಗುತ್ತದೆ ಅಂತ ಅಂಬೇಡ್ಕರ್‌ ಅವರೇ ಹೇಳಿದ್ದರು. ಆಂಧ್ರದಲ್ಲಿ ಎರಡು ಮೂರು ಬಾರಿ ಮಾಡಿದ್ದ ಪ್ರಯೋಗಗಳನ್ನು ನ್ಯಾಯಾಲಯ ರದ್ದುಪಡಿಸಿದೆ.
‘ಚುನಾವಣಾ ಬಾಂಡ್’ ವಿಷಯ ಕಾಂಗ್ರೆಸ್ಸಿಗೆ ಬ್ರಹ್ಮಾಸ್ತ್ರವಾಗಿದೆಯಲ್ಲ?
ಇ.ಡಿ ಐ.ಟಿ ಪ್ರಕರಣಗಳಿರುವ ಕಂಪನಿಗಳಿಂದ ಶೇ 66ರಷ್ಟು ಪಾಲನ್ನು ವಿರೋಧ ಪಕ್ಷಗಳೇ ಪಡೆದಿವೆ. ಇದಕ್ಕೆ ಅವರೇ ಉತ್ತರ ಕೊಡಬೇಕು. ಚುನಾವಣಾ ಬಾಂಡ್‌ನಲ್ಲಿ ಎಲ್ಲ ಪಕ್ಷಗಳು ಪಾಲುದಾರರು. ಬಾಂಡ್‌ ಇರುವುದರಿಂದ ಯಾರು ಯಾರಿಗೆ ಎಷ್ಟು ಕೊಟ್ಟರು ಎಂಬುದು ಗೊತ್ತಾಗಿದೆ. ಬಾಂಡ್‌ ಇಲ್ಲದಿದ್ದರೆ ಗೊತ್ತೇ ಆಗುತ್ತಿರಲಿಲ್ಲ. ಕಾಂಗ್ರೆಸ್‌ಗೆ ನಂ.2 ದಂಧೆ ಮತ್ತು ಹಣದ ಮೇಲೆ ಆಸೆ. ‘ನೋಟ್‌ ಬ್ಯಾನ್‌’ ಮಾಡಿದಾಗಲೂ ಕಾಂಗ್ರೆಸ್‌ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಹೆಣಗಾಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT