ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಶ್ರೀರಕ್ಷೆ, ಜೆಡಿಎಸ್‌ನವರಿಂದಲೂ ಬೆಂಬಲ: ಎಂ. ಲಕ್ಷ್ಮಣ ಸಂದರ್ಶನ

Published 18 ಏಪ್ರಿಲ್ 2024, 4:57 IST
Last Updated 18 ಏಪ್ರಿಲ್ 2024, 4:57 IST
ಅಕ್ಷರ ಗಾತ್ರ

‘ಸಾಮಾನ್ಯ ಕಾರ್ಯಕರ್ತ–ರಾಜವಂಶಸ್ಥ ನಡುವಿನ ಹೋರಾಟ’ದಿಂದಾಗಿ ದೇಶದ ಗಮನಸೆಳೆದಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಣದಲ್ಲಿನ ವಾತಾವರಣ, ತಮ್ಮ ದೂರದೃಷ್ಟಿ ಮೊದಲಾದ ವಿಷಯಗಳನ್ನು ‘ಪ್ರಜಾವಾಣಿ’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದೀರಿ, ಪ್ರತಿಕ್ರಿಯೆ ಹೇಗಿದೆ?

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ನಮ್ಮ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳಿಂದ ಆಗಿರುವ ಅನುಕೂಲದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ದೇಶದ ಮಟ್ಟದಲ್ಲಿ ಜಾರಿಗೊಳಿಸಲಿರುವ ಗ್ಯಾರಂಟಿಗಳ ಬಗ್ಗೆಯೂ ತಿಳಿಸಿ ಮತ ಕೇಳುತ್ತಿದ್ದೇನೆ. ಬಿಜೆಪಿಯ ಸಂಸದರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಸಿಟ್ಟು ಜನರಿಂದ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದ್ದು ಅದು ನನಗೆ ನೆರವಾಗಲಿದೆ. 

ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆಯೇ?

ಗ್ಯಾರಂಟಿ ಯೋಜನೆಗಳು ಶೇ 100ರಷ್ಟು ನಮ್ಮ ಕೈಹಿಡಿಯಲಿವೆ. ಇವುಗಳಿಂದ ಬಿಜೆಪಿಯವರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅನುಕೂಲ ಆಗಿದ್ದು, ಆರ್ಥಿಕ ಶಕ್ತಿ ಸಿಕ್ಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 60ಸಾವಿರ ಕುಟುಂಬಗಳು ಒಂದಿಲ್ಲೊಂದು ಯೋಜನೆಯ ಫಲಾನುಭವಿಗಳಾಗಿವೆ. ಫಲಾನುಭವಿಗಳೆಲ್ಲರಿಗೂ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ಇರುವುದು ನನಗೆ ಶ್ರೀರಕ್ಷೆಯಾಗಲಿದೆ.

ಯಾವ ಅಲೆ ಕಂಡುಬರುತ್ತಿದೆ?

ತಳಮಟ್ಟದಲ್ಲೆಲ್ಲೂ ನರೇಂದ್ರ ಮೋದಿ ಅಲೆ ಇಲ್ಲ. ಇರುವುದೆಲ್ಲವೂ ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಮತ್ತು ಕಾಂಗ್ರೆಸ್ ಅಲೆ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪ್ರಭಾವವೂ ಇಲ್ಲಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐವರು ಶಾಸಕರು ನಮ್ಮವರು. ವಿಧಾನಪರಿಷತ್‌ ಸದಸ್ಯರು, ನಿಗಮ–ಮಂಡಳಿಗಳ ಅಧ್ಯಕ್ಷರು, ಮಾಜಿ ಶಾಸಕರು, ಮುಖಂಡರು ಮತ್ತು ದೊಡ್ಡ ಕಾರ್ಯಕರ್ತರ ಪಡೆಯೇ ಇದೆ. ಇದೆಲ್ಲವೂ ನನ್ನ ಶಕ್ತಿ. ಸಿದ್ದರಾಮಯ್ಯ ಅವರಿಗೆ ಈ ಬಾರಿ ಗೆಲುವಿನ ಉಡುಗೊರೆ ನೀಡಲು ಎಲ್ಲರೂ ದುಡಿಯುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್‌ ಪರವಾದ ವಾತಾವರಣ ಕ್ಷೇತ್ರದಲ್ಲಿದೆ.

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ದೂರದೃಷ್ಟಿ ಏನು?

35 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದೇನೆ. ಹತ್ತು ಹಲವು ಜನಪರ ಹೋರಾಟಗಳನ್ನು ನಡೆಸಿದ್ದೇನೆ. ಇಲ್ಲಿನ ಸಮಸ್ಯೆಗಳ ಅರಿವಿದೆ. ಕ್ಷೇತ್ರದ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ಹೊರತಂದಿದ್ದೇನೆ. ಎರಡು ಜಿಲ್ಲೆಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಐಟಿ–ಬಿಟಿ ಮೊದಲಾದ ಕಂಪನಿಗಳನ್ನು ತಂದು ಉದ್ಯೋಗ ಸೃಷ್ಟಿಸಲು ಅವಕಾಶವಿದೆ. ತಂಬಾಕು, ಕಾಫಿ–ಮೆಣಸು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವೆ. ಮೈಸೂರು ವಿಮಾನನಿಲ್ದಾಣ ರನ್‌ವೇ ವಿಸ್ತರಣೆ, ರೈಲು ಸೇವೆ ಸುಧಾರಣೆಗೆ ಶ್ರಮಿಸುವೆ. ಮೈಸೂರು ನಗರವನ್ನು ಕೇಂದ್ರದ ಪ್ರಮುಖ ಯೋಜನೆಗೆ ಸೇರ್ಪಡೆ ಮಾಡಿಸುವುದಕ್ಕಾಗಿ ಮತ್ತು ಹೆಚ್ಚಿನ ಅನುದಾನ ತರುವುದಕ್ಕಾಗಿ ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. 

ಒಕ್ಕಲಿಗ ಅಸ್ತ್ರ ಬಳಸುತ್ತಿದ್ದೀರಿ, ಅದರ ಅಗತ್ಯವಿದೆಯೇ?

ಶುದ್ಧ ಇಮೇಜ್ ಹೊಂದಿರುವ ವ್ಯಕ್ತಿ ನಾನು. ಎಲ್ಲರಿಂದಲೂ ಮತ ಕೇಳುವುದರಲ್ಲಿ ತಪ್ಪೇನಿಲ್ಲ. ಪಕ್ಷಾತೀತವಾಗಿ ಬೆಂಬಲ ದೊರೆಯುತ್ತಿದೆ. 47 ವರ್ಷಗಳ ನಂತರ ಒಕ್ಕಲಿಗ ಸಮಾಜಕ್ಕೆ ಟಿಕೆಟ್ ಸಿಕ್ಕಿದೆ. ಆದ್ದರಿಂದ ನನ್ನನ್ನು ಗೆಲ್ಲಿಸಬೇಕೆಂದು ಸಮಾಜ ನಿರ್ಧರಿಸಿದೆ. ಬಿಜೆಪಿ–ಜೆಡಿಎಸ್‌ ಒಂದಾಗಿರುವುದರಿಂದ ನನಗೆ ಸಮಸ್ಯೆ ಆಗುವುದಿಲ್ಲ. ಜೆಡಿಎಸ್‌ನವರೂ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ. ಎಲ್ಲ ಸಮಾಜದವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ನನಗೆ ಹಿಂದಿನಿಂದಲೂ ಇದೆ. ಕೆಲವರು, ನಾನು ಒಕ್ಕಲಿಗನೇ ಅಲ್ಲ ಎಂದು ಅಪಪ್ರಚಾರ ಮಾಡಿದ್ದರು. ಆ ಕಾರಣದಿಂದ ನಾನು ದಾಖಲೆ ಪ್ರದರ್ಶಿಸಬೇಕಾಯಿತಷ್ಟೆ. ರಾಜವಂಶಸ್ಥನ ಎದುರಿನ ಸ್ಪರ್ಧೆಯಲ್ಲಿ ಸಾಮಾನ್ಯ ಕಾರ್ಯಕರ್ತ ಮತ್ತು ಬಡ ರೈತನ ಮಗನಾದ ನನ್ನನ್ನು ಜನ ಕೈಬಿಡುವುದಿಲ್ಲ ಎಂಬ ವಿಶ್ವಾಸ ನನ್ನದು.

ಎಂ. ಲಕ್ಷ್ಮಣ
ಎಂ. ಲಕ್ಷ್ಮಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT