ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರ ಮಹಾತ್ಮೆ–ತುಮಕೂರು

Published 1 ಏಪ್ರಿಲ್ 2024, 23:52 IST
Last Updated 1 ಏಪ್ರಿಲ್ 2024, 23:52 IST
ಅಕ್ಷರ ಗಾತ್ರ

ತುಮಕೂರು ಯಾರಿಗೆಲ್ಲ ಊರು ಎಂಬ ಪ್ರಶ್ನೆ ಈ ಬಾರಿ ಚುನಾವಣೆಯಲ್ಲಿ ಮತ್ತೆ ಎದುರಾಗಿದೆ. ದಶಕಗಳ ಹಾಸನ ಪ್ರತಿನಿಧಿಸಿದ್ದ ಎಚ್.ಡಿ. ದೇವೇಗೌಡರು 2019ರಲ್ಲಿ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಇಲ್ಲಿ ಸ್ಪರ್ಧಿಸಿದ್ದರಿಂದಾಗಿ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಮೈತ್ರಿಯ ಬಿರುಕು, ಗೌಡರ ಕುಟುಂಬ ರಾಜಕಾರಣಕ್ಕೆ ವಿರೋಧ, ಲಿಂಗಾಯತರ ಒಗ್ಗಟ್ಟು ಗೌಡರ ಸೋಲಿಗೆ ಕಾರಣವಾಗಿತ್ತು. ಈ ಬಾರಿ ಬಿಜೆಪಿ–ಜೆಡಿಎಸ್‌ ಮೈತ್ರಿಯಾಗಿದ್ದ ಮತ್ತೊಮ್ಮ ನುರಿತ ರಾಜಕಾರಣಿ ಬಿನ್ನಿಪೇಟೆ ಸೋಮಣ್ಣ, ‘ಸಿದ್ದಗಂಗೆ’ಯ ಆಶ್ರಯ ನೆಚ್ಚಿದ್ದಾರೆ. ಬೆಂಗಳೂರು, ಮೈಸೂರು, ಚಾಮರಾಜನಗರ ಹೀಗೆ ಮೂರು ಜಿಲ್ಲೆಗಳಲ್ಲಿ ಸೋಲನಭವಿಸಿ, ಗೆಲುವಿನ ಕೊನೆ ಆಸರೆ ಸಿಗಬಹುದೆಂಬ ಹಂಬಲ ಅವರದ್ದು. ಲಿಂಗಾಯತರು, ಜೆಡಿಎಸ್ ಕಾರಣಕ್ಕೆ ಒಕ್ಕಲಿಗರು ಕೈ ಹಿಡಿದರೆ, ಯಡಿಯೂರಪ್ಪ ಬಲ ಸಿಕ್ಕರೆ ಸೋಮಣ್ಣ ತುಮಕೂರಿಗೇ ಅಣ್ಣ. ಹಾಲಿ ಸಂಸದ ಜಿ.ಎಸ್. ಬಸವರಾಜ್‌, ಸೋಮಣ್ಣಗಾಗಿ ‘ತ್ಯಾಗ’ ಮಾಡಿದ್ದಾರೆ. ತ್ಯಾಗದ ಫಲ ಸಿಗದಂತೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಬಲವಾಗಿಯೇ ಗುದ್ದುತ್ತಿದ್ದಾರೆ.  ಬಿಜೆಪಿಗೆ ಹೋಗಿ, ವಾಪಸ್ ಕಾಂಗ್ರೆಸ್‌ಗೆ ಕಾಲಿಟ್ಟ ಮಾಜಿ ಸಂಸದ ಮುದ್ದಹನುಮೇಗೌಡರು, ಈಗ ’ಕೈ‘ ಅರಳಿಸುವ ನಿರೀಕ್ಷೆಯಲ್ಲಿದ್ದಾರೆ. ಹೊರಜಿಲ್ಲೆಯವರ ಬಗೆಗಿರುವ ಆಕ್ಷೇಪ, ‘ಗ್ಯಾರಂಟಿ’ ಬಲ, ಒಕ್ಕಲಿಗರ ಮತಗಳು ‘ಗೌಡಿಕೆ’ಗೆ ಗರಿ ನೀಡಲಿದೆ ಎಂಬುದು ಗೌಡರ ಕನಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT