ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | 2019ರಲ್ಲಿ ಮೂವರು: ಇಂದು ಒಬ್ಬರೇ ಮಹಿಳೆ

Published 11 ಏಪ್ರಿಲ್ 2024, 7:07 IST
Last Updated 11 ಏಪ್ರಿಲ್ 2024, 7:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ಆದರೆ ಈ ಬಾರಿಯ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿ ಇರುವುದು ಒಬ್ಬರೇ ಮಹಿಳೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೂವರು ಮಹಿಳೆಯರು ಸ್ಪರ್ಧೆಯಲ್ಲಿ ಇದ್ದರು. ಆದರೆ ಈ ಬಾರಿ ಸ್ಪರ್ಧೆಯ ಸಂಖ್ಯೆ ಒಂದಕ್ಕೆ ಇಳಿದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನಿಂದ ಎಸ್.ವರಲಕ್ಷ್ಮಿ, ಪಕ್ಷೇತರರಾಗಿ ಕೆ.ಎಸ್.ನಳಿನಾ ಮತ್ತು ಆಲಂಗೂರು ಕನಕಲಕ್ಷ್ಮಿ ಸ್ಪರ್ಧಿಸಿದ್ದರು. ಸಿಪಿಎಂನಿಂದ ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿದ ಮೊದಲ ಮಹಿಳೆ ವರಲಕ್ಷ್ಮಿ ಅವರಾಗಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಯಾಗಿ ಕಲಾವತಿ ಎನ್. ಕಣಕ್ಕೆ ಇಳಿದಿದ್ದಾರೆ. ಅವರೊಬ್ಬರೇ ಸ್ಪರ್ಧೆಯಲ್ಲಿರುವ ಮಹಿಳೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸ್ವತಂತ್ರ ಅಸ್ತಿತ್ವ ಪಡೆದ ಬಳಿಕ ಈವರೆಗೆ 12 ಚುನಾವಣೆಗಳು ನಡೆದಿವೆ. ಈ ಪೈಕಿ ಒಬ್ಬೇ ಒಬ್ಬ ಮಹಿಳೆ ಸಂಸತ್ತಿಗೆ ಆಯ್ಕೆಯಾಗಿಲ್ಲ.  

1998ರಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಿತ್ರನಟಿ ಜಯಂತಿ  2,04,359 ಮತಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ. ಇವರನ್ನು ಹೊರತುಪಡಿಸಿದರೆ, ಉಳಿದವರ ಸ್ಪರ್ಧೆ ಅಷ್ಟಕಷ್ಟೇ ಎಂಬಂತಿದೆ.   

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ 1977ರಲ್ಲಿ ಸ್ವತಂತ್ರವಾಗಿ ರಚನೆ ಆಯಿತು. ಇದಕ್ಕಿಂತ ಪೂರ್ವದಲ್ಲಿ 1952, 1957, 1962, 1967ರ ಚುನಾವಣೆಗಳಲ್ಲಿ ಕೋಲಾರ ಲೋಕಸಭೆ ಕ್ಷೇತ್ರ, 1971ರ ಚುನಾವಣೆಯಲ್ಲಿ ಮಧುಗಿರಿ ಲೋಕಸಭೆ ಕ್ಷೇತ್ರದ ಭಾಗವಾಗಿತ್ತು. ಮಧುಗಿರಿ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯೊಂದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸುಧಾ ವಿ. ರೆಡ್ಡಿ ಅವರ ಗೆಲುವು ಈ ಭಾಗದ ರಾಜಕೀಯ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

1967ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಲಿ ಮರಿಯಪ್ಪ ಆಯ್ಕೆಯಾದರು. ಕೆಲವೇ ತಿಂಗಳಲ್ಲಿ ನಿಧನರಾದರು. ಮಧುಗಿರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಆಗ ಸುಧಾ ಅವರು ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಅವರ ವಿರುದ್ಧ ಸ್ಪರ್ಧಿಸಿದ್ದ ನಾಲ್ಕು ಜನರೂ ಠೇವಣಿ ಕಳೆದುಕೊಂಡಿದ್ದರು.

ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಸ್ತಿತ್ವ ಪಡೆದ ನಂತರ ಮಹಿಳೆಯರು ಸ್ಪರ್ಧೆ ನಡೆಸಿ ಪೈಪೋಟಿ ನೀಡಿದ ಚುನಾವಣೆಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT