ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ | ಚಂದ್ರಶೇಖರ ಹೆಸರಲ್ಲಿದೆ ದಾಖಲೆ

ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಆರು ಸಲ ಗೆದಿದ್ದ ಕಾಂಗ್ರೆಸ್ ಕಟ್ಟಾಳು
Published 20 ಏಪ್ರಿಲ್ 2024, 4:58 IST
Last Updated 20 ಏಪ್ರಿಲ್ 2024, 4:58 IST
ಅಕ್ಷರ ಗಾತ್ರ

ರಾಮನಗರ: ಹಿಂದಿನ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ 14 ಸಾರ್ವತ್ರಿಕ ಹಾಗೂ 2 ಉಪ ಚುನಾವಣೆಗಳು ನಡೆದಿವೆ. ಒಟ್ಟು 16 ಚುನಾವಣೆಗಳಲ್ಲಿ ಅತ್ಯಧಿಕ ಗೆಲುವು ಸಾಧಿಸಿರುವ ಹೆಗ್ಗಳಿಕೆ ಕಾಂಗ್ರೆಸ್‌ನ ಚಂದ್ರಶೇಖರ ಮೂರ್ತಿ ಅವರದ್ದು. ಕ್ಷೇತ್ರ ಕನಕಪುರವಾಗಿದ್ದಾಗ ಅವರು ಈ ದಾಖಲೆ ಬರೆದಿದ್ದಾರೆ.

ಚಂದ್ರಶೇಖರ ಅವರ ತಂದೆ ವೆಂಕಟಪ್ಪ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯವರಾಗಿದ್ದು, ಈ ಭಾಗದಲ್ಲಿ ಹೆಸರುವಾಸಿಯಾದ ‘ಉದಯ ರಂಗ’ ಟ್ರಾನ್ಸ್‌ಪೋರ್ಟ್‌ ಮಾಲೀಕರು. ಬೆಂಗಳೂರಿನಲ್ಲಿ ಬಿಎಸ್ಸಿ ಜೊತೆಗೆ ಎಲ್‌ಎಲ್‌ಬಿ ಸಹ ಓದಿದ್ದ ಚಂದ್ರಶೇಖರ ಅವರು, ಕಾಂಗ್ರೆಸ್‌ ಪಕ್ಷದ ಕಟ್ಟಾಳುವಾಗಿದ್ದರು.

1967ರಲ್ಲಿ ರಚನೆಯಾದ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯ ಎಂ.ವಿ. ರಾಜಶೇಖರನ್‌ ಕಾಂಗ್ರೆಸ್‌ನಿಂದ ಗೆದ್ದರು. 1971ರಲ್ಲಿ ನಡೆದ ಎರಡನೇ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಇಬ್ಬಾಗವಾಗಿತ್ತು. ಆಗ ರಚನೆಯಾಗಿದ್ದ ಸಂಸ್ಥಾ ಕಾಂಗ್ರೆಸ್‌ನಿಂದ (ಎನ್‌ಸಿಒ: ನ್ಯಾಷನಲ್ ಒರಿಜಿನಲ್ ಕಾಂಗ್ರೆಸ್‌) ರಾಜಶೇಖರನ್ ಕಣಕ್ಕಿಳಿದಿದ್ದರು. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಾಫರ್ ಷರೀಫ್‌ ಮೊದಲ ಸಲ ಗೆದ್ದು ಸಂಸದರಾದರು.

1977ರಲ್ಲಿ ನಡೆದ ಮೂರನೇ ಚುನಾವಣೆ ಸಂದರ್ಭದಲ್ಲಿ ಷರೀಫ್ ಅವರು, ಕನಕಪುರ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿದರು. ಆಗ ಕನಕಪುರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಚಂದ್ರಶೇಖರ ಅವರು ಚೊಚ್ಚಿಲ ಚುನಾವಣೆಯಲ್ಲೇ ಜಯಭೇರಿ ಬಾರಿಸಿದರು. ಹೀಗೆ ಮೂವರ ಮೊದಲ ಚುನಾವಣಾ ಗೆಲುವಿಗೆ ಕ್ಷೇತ್ರ ಸಾಕ್ಷಿಯಾಗಿತ್ತು.

ಮೊದಲ ಚುನಾವಣೆಯಲ್ಲಿ 1,92,111 ಮತಗಳನ್ನು ಪಡೆದು ಗೆದ್ದಿದ್ದ ಚಂದ್ರಶೇಖರ ಅವರು, ಮುಂದೆ 5 ಚುನಾವಣೆಗಳಲ್ಲಿ (1980, 1984, 1989, 1991, 1999) ಗೆಲುವಿನ ಓಟ ಮುಂದುವರಿಸಿದರು. 1993–1996ರವರೆಗೆ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರ ಸಂಪುಟದಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಚಂದ್ರಶೇಖರ ಅವರು ಕಾರ್ಯನಿರ್ವಹಿಸಿದ್ದರು.

1967ರಿಂದ 2008ರವರೆಗೆ ಅಸ್ತಿತ್ವದಲ್ಲಿದ್ದ ಕನಕಪುರ ಕ್ಷೇತ್ರವು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಿಂದಿನ ಸಾತನೂರು, ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್‌ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ದೇಶದಲ್ಲೇ ಅತಿ ದೊಡ್ಡ ಕ್ಷೇತ್ರ ಎಂದು ಹೆಸರಾಗಿತ್ತು.

2009ರ ಚುನಾವಣೆಗೆ ಕನಕಪುರ ಕ್ಷೇತ್ರವು ಬೆಂಗಳೂರು ಗ್ರಾಮಾಂತರವಾಗಿ ಬದಲಾಯಿತು. ಆಗ ಈಗಿನ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದ ಜೊತೆಗೆ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಸೇರಿ ಒಟ್ಟು 8 ಕ್ಷೇತ್ರಗಳು ಗ್ರಾಮಾಂತರದ ವ್ಯಾಪ್ತಿಗೆ ಒಳಪಟ್ಟವು.

ಸೋಲಿನ ರುಚಿ ತೋರಿಸಿದ್ದ ಎಚ್‌ಡಿಕೆ
ಸತತ ಐದು ಚುನಾವಣೆಯಲ್ಲಿ ಜಯಿಸಿ ಸೋಲಿಲ್ಲದ ಸರದಾರನಾಗಿದ್ದ ಚಂದ್ರಶೇಖರ ಮೂರ್ತಿ ಅವರಿಗೆ ಸೋಲಿನ ರುಚಿ ತೋರಿಸಿದ್ದು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ. 1996ರ ಲೋಕಸಭಾ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿ ಅವರು ಮೊದಲ ಚುನಾವಣೆಯಲ್ಲೇ ಅನುಭವಿ ಚಂದ್ರಶೇಖರ ಅವರನ್ನು ಸೋಲಿಸುವುದರೊಂದಿಗೆ ‘ಕೈ’ ಕೋಟೆಯನ್ನು ಬೇಧಿಸಿದ್ದರು. 440444 ಮತಗಳನ್ನು ಪಡೆದಿದ್ದ ಕುಮಾರಸ್ವಾಮಿ ಅವರು 107404 (ಶೇ10.27) ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಚಂದ್ರಶೇಖರ ಅವರು 333040 ಮತಗಳನ್ನು ಪಡೆದಿದ್ದರು. ಸೋಲಿನಿಂದ ಕುಗ್ಗದೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದ ಚಂದ್ರಶೇಖರ ಅವರು 532910 ಮತಗಳನ್ನು ಪಡೆದು ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಎಂ. ಶ್ರೀನಿವಾಸ್ ಎರಡನೇ ಸ್ಥಾನ ಪಡೆದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಕೇವಲ 19661 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದು ಠೇವಣಿ ಕಳೆದುಕೊಂಡಿದ್ದರು. 6ನೇ ಗೆಲುವು ಸಾಧಿಸಿದ್ದ ಚಂದ್ರಶೇಖರ ಅವರ ಖುಷಿ ಹೆಚ್ಚು ಕಾಲ ಇರಲಿಲ್ಲ. ಅನಾರೋಗ್ಯದಿಂದಾಗಿ 2001ರಲ್ಲಿ ಅವರು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT