ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸಚಿವರ ಕದನಕ್ಕಿದೆ ದಶಕದ ಇತಿಹಾಸ

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಡಾ.ಎಂ.ಸಿ.ಸುಧಾಕರ್–ಕೆ.ಎಚ್.ಮುನಿಯಪ್ಪ ಮತ್ತೊಂದು ಸುತ್ತಿನ ಜಟಾಪಟಿ
Published 28 ಮಾರ್ಚ್ 2024, 5:45 IST
Last Updated 28 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ಡಾ.ಎಂ.ಸಿ.ಸುಧಾಕರ್ ಮತ್ತೊಂದು ಸುತ್ತಿನ ಜಟಾಪಟಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಇಬ್ಬರು ನಾಯಕರು ಪರಸ್ಪರ ಅಕ್ಕಪಕ್ಕ ಕುಳಿತು ಮಾತನಾಡುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದು ಈ ಇಬ್ಬರು ನಾಯಕರ ಬೆಂಬಲಿಗರಲ್ಲಿ ಅಚ್ಚರಿಗೆ ಕಾರಣವಾಗಿತ್ತು. 

‘ನಾವಿಬ್ಬರು ಎದುರು ಬದುರಾಗದಿದ್ದ ಕಾಲ ಕಳೆದುಹೋಗಿದೆ. ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕಿದೆ’ ಎಂದು ಚಿಂತಾಮಣಿಯಲ್ಲಿ ಎಂ.ಸಿ.ಸುಧಾಕರ್ ಹೇಳಿದ್ದರು.  ದಶಕದ ವೈರತ್ವ ಮರೆತು ನಾಯಕರು ಒಂದಾಗಿದ್ದಾರೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಇಬ್ಬರು ನಾಯಕರ ಬೆಂಬಲಿಗರಲ್ಲಿ ಮಾತುಗಳು ಕೇಳಿ ಬಂದಿದ್ದವು. 

ಆದರೆ ಲೋಕಸಭೆ ಚುನಾವಣೆಯು ಕಾವೇರುತ್ತಿರುವ ಈ ಸಮಯದಲ್ಲಿಯೇ ಪ್ರಬಲ ಸಮುದಾಯಗಳ ಈ ಇಬ್ಬರು ನಾಯಕರು ಮತ್ತೆ ಪರಸ್ಪರ ಅಖಾಡಕ್ಕೆ ಇಳಿದಿದ್ದಾರೆ. ಎಲ್ಲವೂ ಸರಿಹೋಯಿತು ಎಂದುಕೊಂಡಿದ್ದ ಬೆಂಬಲಿಗರಲ್ಲಿ ‘ಕದನಕ್ಕೆ ವಿರಾಮ ಬಿದ್ದಿಲ್ಲ’ ಎನ್ನುವುದು ಈಗ ಖಚಿತವಾಗಿದೆ. 

ದಶಕದ ವೈರತ್ವ: ಮುನಿಯಪ್ಪ ಮತ್ತು ಡಾ.ಎಂ.ಸಿ.ಸುಧಾಕರ್ ನಡುವೆ ವೈರತ್ವಕ್ಕೆ ದಶಕ ಮೀರಿದ ಇತಿಹಾಸವಿದೆ. ಅಷ್ಟಕ್ಕೂ ಈ ವೈರತ್ವ ಮೂಡಿದ್ದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಟಿಕೆಟ್ ಹಂಚಿಕೆ ವಿಚಾರಕ್ಕೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. 

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಮುನಿಯಪ್ಪ ಕೋಲಾರ ಜಿಲ್ಲೆಯಲ್ಲಿ ರಾಜಕಾರಣ ಮಾಡಿದರೂ ಅವರ ಬೇರುಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿವೆ. ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಮುನಿಯಪ್ಪ ಅವರಿಗೆ ಸಮುದಾಯದ ಕಾರಣಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಬೆಂಬಲಿಗರು ಇದ್ದಾರೆ. 

2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್‌ನಿಂದ ಶಾಸಕರಾದರು. ಈ ಸಮಯದಲ್ಲಿ ಇಬ್ಬರು ನಾಯಕರ ನಡುವೆ ಅನ್ಯೂನತೆ ಇತ್ತು. ನಂತರದ ದಿನಗಳಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿರುವ ತಮ್ಮ ಬೆಂಬಲಿಗರಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮುನಿಯಪ್ಪ ಟಿಕೆಟ್ ಕೊಡಿಸಲು ಮುಂದಾದರು. ಈ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಆರಂಭವಾದ ಇಬ್ಬರು ನಾಯಕರ ನಡುವಿನ ಮುನಿಸಿ ಹೆಚ್ಚುತ್ತಲೇ ಹೋಯಿತು. ತೇಪೆ ಹಚ್ಚಲಾರದಷ್ಟು ಸಂಬಂಧ ಹರಿಯಿತು. 

2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ‘ಬಿ’ ಫಾರಂ ಸ್ವೀಕರಿಸದ ಎಂ.ಸಿ.ಸುಧಾಕರ್ ಪಕ್ಷೇತರರಾಗಿ ಕಣಕ್ಕೆ ಇಳಿದರು. ಸೋತರು. ಮುನಿಯಪ್ಪ ಮೇಲಿನ ಜಿದ್ದಿನ ಕಾರಣದಿಂದಲೇ ಸುಧಾಕರ್ ಕಾಂಗ್ರೆಸ್ ತೊರೆದರು. 7 ಬಾರಿ ಸಂಸದರಾಗಿದ್ದ ಮುನಿಯಪ್ಪ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಸುಧಾಕರ್ ನೇತೃತ್ವದ ಗುಂಪು ಮುನಿಯಪ್ಪ ಸೋಲಿಗೆ ಕಾರಣವಾಗಿತ್ತು. 

2023ರ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್  ‘ಕೈ’ ಹಿಡಿದರು. ಮುನಿಯಪ್ಪ ದೇವನಹಳ್ಳಿಯಿಂದ ಗೆಲುವು ಕಂಡರು. ವೈರಿಗಳಾಗಿದ್ದ ಇಬ್ಬರು ನಾಯಕರು ಸಚಿವ ಸಂಪುಟದಲ್ಲಿ ಸದಸ್ಯರಾದರು. ದಶಕಕ್ಕೂ ಮೀರಿದ ಕದನಕ್ಕೆ ಸಚಿವರಾದ ನಂತರ ವಿರಾಮ ಬಿದ್ದಿತ್ತು. 

ಈಗ ಕೋಲಾರ ಟಿಕೆಟ್ ವಿಚಾರದಲ್ಲಿ ನಡೆಯುತ್ತಿರುವ ಜಟಾಪಟಿ ಇಬ್ಬರು ನಾಯಕರ ನಡುವಿನದ್ದು ತಾತ್ಕಾಲಿಕ ಕನದ ವಿರಾಮ ಎನ್ನುವುದನ್ನು ಜಗಜ್ಜಾಹೀರುಗೊಳಿಸಿದೆ. 

ನೆರೆ ತಾಲ್ಲೂಕಿನಲ್ಲಿದ್ದರೂ ಬಾರದ ಮುನಿಯಪ್ಪ!
ನೆರೆಯ ದೇವನಹಳ್ಳಿ ತಾಲ್ಲೂಕನ್ನು ಪ್ರತಿನಿಧಿಸುತ್ತಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಖಾಸಗಿ ಕಾರ್ಯಕ್ರಮಗಳಿಗೆ ಜಿಲ್ಲೆಗೆ  ಭೇಟಿ ನೀಡಿದ್ದಾರೆ. ಆದರೆ ಒಮ್ಮೆಯೂ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ.  ಮುನಿಯಪ್ಪ–ಡಾ.ಎಂ.ಸಿ.ಸುಧಾಕರ್ ಅವರ ನಡುವಿನ ವಿರಸದ ಕಾರಣದಿಂದಲೇ ಜಿಲ್ಲೆಯಲ್ಲಿ ಮುನಿಯಪ್ಪ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲವೇ ಎನ್ನುವ ಅನುಮಾನ ರಾಜಕೀಯ ವಲಯದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT