ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಮೊದಲ ಹ್ಯಾಟ್ರಿಕ್ ವೀರ ಎಚ್.ಸಿದ್ದನಂಜಪ್ಪ

Published 8 ಏಪ್ರಿಲ್ 2024, 7:15 IST
Last Updated 8 ಏಪ್ರಿಲ್ 2024, 7:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನೆರೆ ಜಿಲ್ಲೆಯೊಂದಿಗೆ ಹೊಂದಿಕೊಂಡು ಚುನಾವಣೆ ನಡೆಸುವುದು ಚಿಕ್ಕಮಗಳೂರು ಜಿಲ್ಲೆಗೆ ಹೊಸದಲ್ಲ. ಮೊದಲ ಮೂರು ಅವಧಿಯಲ್ಲೂ ಹಾಸನದ ಎಚ್.ಸಿದ್ದನಂಜಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿರುವುದು ಇತಿಹಾಸ.

ದೇಶಕ್ಕ ಸ್ವಾತಂತ್ರ್ಯ ಬಂದ ಬಳಿಕ ನಡೆದ ಮೊದಲ ಚುನಾವಣೆ 1952ರಲ್ಲಿ ನಡೆದಿದ್ದು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ ಕ್ಷೇತ್ರವಾಗಿತ್ತು. ಮೊದಲ ಚುನಾವಣೆಯಲ್ಲಿ ಮತದಾನ ಮಾಡಲು ಜನ ಅಷ್ಟೇನು ಆಸಕ್ತಿ ತೋರಿಸಿಲ್ಲ. ಪರಿಣಾಮವಾಗಿ ಶೇ 50ರಷ್ಟು ಮತದಾನ ಕೂಡ ಆಗಿರಲಿಲ್ಲ.

3,54,206 ಮತದಾರರು ನೋಂದಣಿಯಾಗಿದ್ದರು. 1,16,551 ಮತಗಳನ್ನು ಕಾಂಗ್ರೆಸ್‌ನ ಎಚ್.ಸಿದ್ದನಂಜಪ್ಪ ಪಡೆದರೆ, ಎಸ್‍ಓಪಿ ಪಕ್ಷದ  ಎಸ್.ಶಿವಪ್ಪ 55,289 ಮತ ಪಡೆದುಕೊಂಡಿದ್ದರು. ಒಟ್ಟು ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರು.

ಎರಡನೇ ಲೋಕಸಭೆ ಚುನಾವಣೆ 1957ರಲ್ಲಿ ನಡೆದಿದ್ದು, ಎಚ್.ಸಿದ್ದನಂಜಪ್ಪ ಹೊರತಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸುವುದಿಲ್ಲ. ಅಷ್ಟರಲ್ಲಿ ಅವರು ಜನಾನುರಾಗಿ ಎನಿಸಿಕೊಂಡಿದ್ದರಿಂದ ಅವರ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸುವುದಿಲ್ಲ. ಈ ಕ್ಷೇತ್ರದಲ್ಲಿ ಮೊದಲ ಮತ್ತು ಈವರೆಗಿನ ಕೊನೆಯ ಅವಿರೋಧವಾಗಿ ಆಯ್ಕೆ ನಡೆದ ಚುನಾವಣೆ ಇದಾಗಿದೆ. ಚಿಕ್ಕಮಗಳೂರು–ಹಾಸನ ಲೋಕಸಭೆ ಇತಿಹಾಸದಲ್ಲಿ ಇದು ದಾಖಲೆಯಾಗಿ ಉಳಿದಿದೆ.

ನಂತರ 1962ರಲ್ಲಿ ನಡೆದ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆ. ಕಾಂಗ್ರೆಸ್‌ನ ಎಚ್‌.ಸಿದ್ದನಂಜಪ್ಪ ಅವರು 1,04,898 ಮತಗಳನ್ನು ಪಡೆದು ಚುನಾಯಿತರಾದರೆ, ಪಿಎಸ್‌ಪಿಯ(ಪ್ರಜಾ ಸೋಷಿಯಲಿಸ್ಟ್ ಪಾರ್ಟಿ) ಬಿ.ಆರ್‌.ಕರಿಗೌಡ ಅವರು 99,083 ಮತ ಪಡೆಯುತ್ತಾರೆ. ಸ್ವತಂತ್ರ ಅಭ್ಯರ್ಥಿ ಎಚ್‌.ಬಿ.ಗುಂಡಪ್ಪಗೌಡ ಕೂಡ ಸ್ಪರ್ಧೆಯಲ್ಲಿದ್ದರು.

ಎಚ್.ಸಿದ್ದನಂಜಪ್ಪ ಹಾಸನ ನಗರದ ನಿವಾಸಿಯಾಗಿದ್ದು, ವಕೀಲ ವೃತ್ತಿ ನಡೆಸುತ್ತಿದ್ದರು. ಮೊದಲ ಹದಿನೈದು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಾದ ನಂತರ ಡಿ.ಸಿ.ಶ್ರೀಕಂಠಪ್ಪ ಅವರು 1998ರಿಂದ 2004ರ ಅವಧಿಯಲ್ಲಿ ಮೂರು ಬಾರಿ ಸಂಸದರಾಗಿದ್ದು ಡಿ.ಸಿ.ಶ್ರೀಕಂಠಪ್ಪ. ಹತ್ತೊಂಬತ್ತು ಲೋಕಸಭಾ ಚುನಾವಣೆಗಳಲ್ಲಿ ಈ ಇಬ್ಬರು ಹ್ಯಾಟ್ರಿಕ್ ಸಾಧಿಸಿದ್ದು ಬಿಟ್ಟರೆ ಬೇರೆ ಯಾರಿಗೂ ಮೂರನೇ ಬಾರಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ.

ಎಚ್‌. ಸಿದ್ದನಂಜಪ್ಪ
ಅವಧಿ ವರ್ಷ; ಗೆದ್ದ ಅಭ್ಯರ್ಥಿ; ಸಮೀಪ ಸ್ಪರ್ಧಿಯಾಗಿದ್ದ ಅಭ್ಯರ್ಥಿ 1952; ಎಚ್.ಸಿದ್ದನಂಜಪ್ಪ(ಕಾಂಗ್ರೆಸ್‌); ಎಸ್‌.ಶಿವಪ್ಪ(ಎಸ್‌ಒಪಿ) 1957; ಎಚ್‌.ಸಿದ್ದನಂಜಪ್ಪ(ಕಾಂಗ್ರೆಸ್); ಅವಿರೋಧ ಆಯ್ಕೆ 1962; ಎಚ್‌.ಸಿದ್ದನಂಜಪ್ಪ(ಕಾಂಗ್ರೆಸ್); ಬಿ.ಆರ್.ಕರೀಗೌಡ(ಪಿಎಸ್‌ಪಿ)
ಸ್ಥಳೀಯರಿಗೆ 11 ಬಾರಿ ಅವಕಾಶ
ಈವರೆಗೆ ನಡೆದಿರುವ ಹತ್ತೊಂಬತ್ತು ಲೋಕಸಭೆ ಚುನಾವಣೆಯಲ್ಲಿ 11 ಬಾರಿ ಜಿಲ್ಲೆಯವರೇ ಪ್ರತಿನಿಧಿಸಿದ್ದರೆ 8 ಬಾರಿ ಕ್ಷೇತ್ರ ಹೊರ ಜಿಲ್ಲೆಯವರ ಪಾಲಾಗಿದೆ. ಮೊದಲ ಮೂರು ಅವಧಿ ಹಾಸನದ ಎಚ್.ಸಿದ್ದನಂಜಪ್ಪ ನಂತರ 1967ರಿಂದ 2009ರವರೆಗೆ (1978–80ರವರೆಗೆ ಇಂಧಿರಾ ಗಾಂಧಿ ಹೊರತುಪಡಿಸಿ) ಎಂ.ಹುಚ್ಚೇಗೌಡ ಡಿ.ಬಿ.ಚಂದ್ರೇಗೌಡ ಡಿ.ಎಂ.ಪುಟ್ಟೇಗೌಡ ಡಿ.ಕೆ.ತಾರಾದೇವಿ ಬಿ.ಎಲ್.ಶಂಕರ್ ಡಿ.ಸಿ.ಶ್ರೀಕಂಠಪ್ಪ ಸೇರಿ ಎಲ್ಲರೂ ಚಿಕ್ಕಮಗಳೂರು ಜಿಲ್ಲೆಯವರೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2009ರ ನಂತರ ಡಿ.ವಿ.ಸದಾನಂದಗೌಡ ಜಯಪ್ರಕಾಶ್‌ ಹೆಗ್ಡೆ ಶೋಭಾ ಕರಂದ್ಲಾಜೆ ಹೊರ ಜಿಲ್ಲೆಯವರು. ಈ ಬಾರಿಯ 20ನೇ ಚುನಾವಣೆಯಲ್ಲೂ ಪ್ರಮುಖ ರಾಜಕೀಯ ಪಕ್ಷಗಳು ಹೊರ ಜಿಲ್ಲೆಯವರಿಗೆ ಅವಕಾಶ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT