ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಚುನಾವಣಾ ಹಿನ್ನೋಟ: ಎರಡು ಬಾರಿ ಸಂಸದರಾಗಿದ್ದ ಡಿ.ಎಂ.ಪುಟ್ಟೇಗೌಡ

1980 ಮತ್ತು 1989ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು
Published 17 ಏಪ್ರಿಲ್ 2024, 5:53 IST
Last Updated 17 ಏಪ್ರಿಲ್ 2024, 5:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಂಸತ್ತಿನಲ್ಲಿ ಜಿಲ್ಲೆಯನ್ನು ಎರಡು ಬಾರಿ ಪ್ರತಿನಿಧಿಸಿದ್ದ ಡಿ.ಎಂ.ಪುಟ್ಟೇಗೌಡ ಅವರು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಉಳಿಸಿದ್ದಾರೆ.

1978ರಲ್ಲಿ ಇಂದಿರಾ ಗಾಂಧಿ ಸ್ಪರ್ಧೆಯಿಂದ ದೇಶ–ವಿದೇಶದ ಗಮನ ಸೆಳೆದಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು 1980ರ ಚುನಾವಣೆಯಲ್ಲಿ ಅವರು ಬಿಟ್ಟುಕೊಡುತ್ತಾರೆ. ಇಂದಿರಾ ಗಾಂಧಿ ಸ್ಪರ್ಧೆಗೆ ಅವಕಾಶ ನೀಡಿದ್ದ ಡಿ.ಬಿ.ಚಂದ್ರೇಗೌಡ ಅವರು ಅಷ್ಟರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿರುತ್ತಾರೆ. ಆದ್ದರಿಂದ ಲೋಕಸಭೆಗೆ ಸ್ಪರ್ಧಿಸಲು ಡಿ.ಎಂ.ಪುಟ್ಟೇಗೌಡ ಅವರಿಗೆ ಕಾಂಗ್ರೆಸ್ ಅವಕಾಶ ನೀಡುತ್ತದೆ. ಕಾಂಗ್ರೆಸ್ ಅಲೆ ಜೋರಾಗಿತ್ತು. ರಾಜ್ಯದಲ್ಲಿ ಜನತಾ ಪಕ್ಷದ ಸರ್ಕಾರ ಉರುಳಿ ಬಿದ್ದಿತ್ತು.

ಇಂದಿರಾ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಇತ್ತು. ಶಾಸಕರಾಗಿದ್ದ ಸಿಎಂಎಸ್‌ ಶಾಸ್ತ್ರಿ ಅವರನ್ನೂ ಸಂಸ್ಥಾ ಕಾಂಗ್ರೆಸ್ ಕಣಕ್ಕೆ ಇಳಿಸಿತ್ತು. ಜನತಾ ಪಕ್ಷದಿಂದ ಕಡೂರಿನ ಕೆ.ಎಂ.ತಮ್ಮಯ್ಯ ಅವರನ್ನು ಕಣಕ್ಕೆ ಇಳಿಸಲಾಗಿತ್ತು. 

ಜಿಲ್ಲೆಯಲ್ಲಿ 6,30,138 ಮತದಾರರು ನೋಂದಣಿಯಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಐ) ಪಕ್ಷದ ಡಿ.ಎಂ. ಪುಟ್ಟೇಗೌಡ 2,39,522 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಯು) ಪಕ್ಷದ ಸಿಎಂಎಸ್ ಶಾಸ್ತ್ರಿ 56,259 ಮತಗಳನ್ನು ಪಡೆದು ಮೂರನೆ ಸ್ಥಾನ ತಳ್ಳಲ್ಪಟ್ಟಿದ್ದರೆ, ಜನತಾ ಪಕ್ಷದ ಕೆ.ಎಂ ತಮ್ಮಯ್ಯ 75,385 ಮತಗಳನ್ನು ಪಡೆದುಕೊಂಡಿದ್ದರು.

ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯ ಡಿ.ಎಂ. ಪುಟ್ಟೇಗೌಡ, ಮೂಲತಃ ದೇವಾಲದಕೆರೆ ಗ್ರಾಮದವರು. ಸ್ವತಃ ಎಂಜಿನಿಯರ್ ಆಗಿದ್ದ ಅವರು ಶಿಸ್ತಿನ ರಾಜಕಾರಣಿ ಎನಿಸಿಕೊಂಡಿದ್ದರು. ಡಿ.ಎಂ.ಪುಟ್ಟೇಗೌಡ ಅವಧಿ ಪೂರ್ಣಗೊಂಡ ನಂತರ 1984ರ ಚುನಾವಣೆಯಲ್ಲಿ ಡಿ.ಕೆ.ತಾರಾದೇವಿಗೆ ಕಾಂಗ್ರೆಸ್‌ನಿಂದ ಅವಕಾಶ ಸಿಗುತ್ತದೆ. ಒಂದು ಅವಧಿ ಕಾಯುವ 1989ರಲ್ಲಿ ಮತ್ತೆ ಸ್ಪರ್ಧೆಗೆ ಇಳಿಯುತ್ತಾರೆ. 1989ರ ಚುನಾವಣೆ ವೇಳೆಗೆ ಕಾಂಗ್ರೆಸ್ ಚುಕ್ಕಾಣಿ ರಾಜೀವ್ ಗಾಂಧಿ ಅವರ ಕೈನಲ್ಲಿ ಇರುತ್ತದೆ. ಡಿ.ಎಂ.ಪುಟ್ಟೇಗೌಡ ಅವರಿಗೆ ಮತ್ತೊಮ್ಮೆ ಅವಕಾಶ ದೊರಕುತ್ತದೆ. 

ಸಿಪಿಐನ ಬಿ.ಕೆ.ಸುಂದರೇಶ್ ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು. ಜನತಾ ದಳದಿಂದ ಇ.ವಾ–ವಾಜ್ ಸ್ಪರ್ಧೆ ಮಾಡಿದ್ದರೆ, ಜನತಾ ಪಕ್ಷದಿಂದ ರತ್ನಮ್ಮ ಮಲ್ಲೇಗೌಡ ಕಣಕ್ಕೆ ಇಳಿದಿದ್ದರು. ಡಿ.ಎಂ.ಪುಟ್ಟೇಗೌಡ ಅತ್ಯಧಿಕ 3,03,135 ಮತಗಳನ್ನು ಪಡೆದು ಎರಡನೇ ಬಾರಿಗೆ ಸಂಸದರಾಗಿದ್ದರು.

ಬಿ.ಕೆ.ಸುಂದರೇಶ್
ಬಿ.ಕೆ.ಸುಂದರೇಶ್

ಎರಡು ಬಾರಿ ಸ್ಪರ್ಧೆಯೊಡ್ಡಿದ್ದ ಬಿ.ಕೆ.ಸುಂದರೇಶ್

ಕಾರ್ಮಿಕ ಹೋರಾಟಗಾರ ಬಿ.ಕೆ.ಸುಂದರೇಶ್ ಅವರು ಸಿಪಿಐ ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸಿದ್ದರು. ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದರು. ಲೋಕಸಭೆ ಚುನಾವಣೆಗಳ ಇತಿಹಾಸದಲ್ಲಿ ಅವರ ಹೆಸರೂ ಉಳಿದುಕೊಂಡಿದೆ. ಕಾರ್ಮಿಕ ಹೋರಾಟವ‌ನ್ನು ಗಟ್ಟಿಗೊಳಿಸಿದ್ದ ಸುಂದರೇಶ್ ಬಗ್ಗೆ ಜನರ ಒಲವಿತ್ತು. 1984ರ ಚುನಾವಣೆಯಲ್ಲಿ ಮತ್ತು 1989ರ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಬರುವಷ್ಟು ಮತಗಳನ್ನು ಅವರು ಪಡೆದುಕೊಳ್ಳುತ್ತಾರೆ. 1984ರ ಚುನಾವಣೆಯಲ್ಲಿ 128872 ಮತಗಳನ್ನು ಪಡೆದರೆ 1989ರ ಚುನಾವಣೆಯಲ್ಲಿ 141838 ಮತಗಳನ್ನು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT