ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಿ ಅಲೆಯಲ್ಲೂ ಗೆಲುವು ದಾಖಲಿಸಿದ ಪಾಟೀಲ

ಬಾಡಿಗೆ ಮನೆಯಲ್ಲಿಯೇ ವಾಸ, ಕಾಲ್ನಡಿಗೆಯಲ್ಲಿ ತಿರುಗಾಡುತ್ತಿದ್ದ ಸಂಸದ
Published 9 ಏಪ್ರಿಲ್ 2024, 6:16 IST
Last Updated 9 ಏಪ್ರಿಲ್ 2024, 6:16 IST
ಅಕ್ಷರ ಗಾತ್ರ

ಬಾಗಲಕೋಟೆ: ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ ನಡೆದ 1977ರ ಚುನಾವಣೆ ವೇಳೆಗೆ ಕಾಂಗ್ರೆಸ್ ಹಾಗೂ ಇಂದಿರಾಗಾಂಧಿಯ ವಿರುದ್ಧ ಅಸಮಾಧಾನದ ಅಲೆ ಎದ್ದಿತ್ತು. ಕಾಂಗ್ರೆಸ್‌ ದೇಶದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಆದರೆ, ಎಸ್‌.ಬಿ. ಪಾಟೀಲರ ಸರಳತೆ, ಪ್ರಾಮಾಣಿಕತೆಯಿಂದಾಗಿ ಕಾಂಗ್ರೆಸ್‌ನಿಂದ ನಾಲ್ಕನೇ ಬಾರಿಯೂ ಜಯ ಸಾಧಿಸಿದರು.

1976ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಬೇಕಿತ್ತು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ತುರ್ತು ಪರಸ್ಥಿತಿ ಹೇರಿದ್ದರಿಂದ 1977ರಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್‌ನೊಂದಿಗೆ ಇದ್ದವರು ಹಾಗೂ ಬೇರೆ ಪಕ್ಷಗಳಲ್ಲಿದ್ದವರೆಲ್ಲರೂ ತುರ್ತು ಪರಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಭಾರತೀಯ ಜನಸಂಘ, ಸಮಾಜವಾದಿ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಂಘಟನೆ), ಲೋಕದಳ ಸೇರಿಕೊಂಡು ಭಾರತೀಯ ಲೋಕದಳ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದರು. ಪರಿಣಾಮ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಅಧಿಕಾರ ಸಿಗಲಿಲ್ಲ.

ಮೂರು ಬಾರಿ ಗೆದ್ದಿದ್ದ ಎಸ್‌.ಬಿ. ಪಾಟೀಲ ಅವರಿಗೇ ನಾಲ್ಕನೇ ಬಾರಿಯೂ ಕಣಕ್ಕಿಳಿಯಲು ಕಾಂಗ್ರೆಸ್‌ ಟಿಕೆಟ್ ನೀಡಿತು. ಭಾರತೀಯ ಲೋಕ ದಳದಿಂದ ಜಮಖಂಡಿಯ ಕೃಷ್ಣಪ್ಪ ಕೇಶವರಾವ್ ತುಂಗಳ ಸ್ಪರ್ಧಿಸಿದ್ದರು. ವಕೀಲರಾಗಿದ್ದ ಅವರು ಪಾಟೀಲರಿಗೆ ಎದುರಾಳಿಯಾದರು.

ರಾಷ್ಟ್ರದಾದ್ಯಂತ ಎದ್ದಿದ್ದ ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ವಿರುದ್ಧ ಮೊದಲ ಬಾರಿಗೆ ಎದುರಾಳಿಗಳೆಲ್ಲ ಒಂದಾಗಿದ್ದರಿಂದ ಕಾಂಗ್ರೆಸ್ ಅನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಜೋರಾಗಿಯೇ ನಡೆದಿತ್ತು. ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡಿ ನಾಲ್ಕನೇ ಬಾರಿಗೆ ದಾಖಲೆಯ ಗೆಲುವನ್ನು ಸಾಧಿಸಿದರು ಎಸ್‌.ಬಿ. ಪಾಟೀಲ.

ಒಟ್ಟು 3,66,290 (ಶೇ 58.49) ಮತದಾನ ಆಗಿತ್ತು. ಎಸ್.ಬಿ.ಪಾಟೀಲ 2,12,393 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕೆ.ಕೆ. ತುಂಗಳ ಅವರು 1,40,295 ಮತಗಳನ್ನು ಪಡೆದರು. 72,098 ಅಂತರದಿಂದ ಪಾಟೀಲ ಗೆಲುವು ಸಾಧಿಸಿದರು.

ಬಾಡಿಗೆ ಮನೆ ಕಾಲ್ನಡಿಗೆಯಲ್ಲೇ ಸಂಚಾರ ಬಾಗಲಕೋಟೆ: ನಾಲ್ಕು ಬಾರಿ ಸಂಸದರಾಗಿದ್ದ ಎಸ್‌.ಬಿ. ಪಾಟೀಲ ಬಾಗಲಕೋಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಕಾಲ್ನಡಿಗೆಯಲ್ಲಿ ಮಾರುಕಟ್ಟೆಯಲ್ಲಿ ತಿರುಗಾಡುತ್ತಿದ್ದರು. ಪಾಟೀಲರಿಗೆ ಬಾಗಲಕೋಟೆಯಲ್ಲಿ ಸ್ವಂತ ಮನೆ ಇರಲಿಲ್ಲ. ಹಾಗಾಗಿ ಬಾಡಿಗೆ ಮನೆಯಲ್ಲಿದ್ದುಕೊಂಡು ಸಂಸದರ ಕೆಲಸ ಮಾಡುತ್ತಿದ್ದರು. ನಂತರದಲ್ಲಿಯೂ ಮಕ್ಕಳು ಮೊಮ್ಮಕ್ಕಳ ಶಿಕ್ಷಣಕಾಗಿ ಬಾಡಿಗೆ ಮನೆಯಲ್ಲಿಯೇ ಇದ್ದರು. ‘ಅವರ ಬಳಿ ಯಾವುದೇ ವಾಹನವಿರಲಿಲ್ಲ. ಕಾಲ್ನಡಿಗೆಯಲ್ಲಿಯೇ ಮಾರುಕಟ್ಟೆ ಮುಂತಾದ ಕಡೆಗಳಲ್ಲಿ ಸಂಚರಿಸುತ್ತಿದ್ದರು. ಬಹಳ ಒತ್ತಾಯ ಮಾಡಿದರೆ ಪರಿಚಯದವರ ವಾಹನದಲ್ಲಿ ಮಾರುಕಟ್ಟೆಯಿಂದ ಮನೆಗೆ ಹೋಗುತ್ತಿದ್ದರು’ ಎಂದು ಸಾಹಿತಿ ಸತ್ಯಾನಂದ ಪಾತ್ರೋಟ ಸ್ಮರಿಸಿಕೊಂಡರು. ‘ಬಾಗಲಕೋಟೆ ಸಿಮೆಂಟ್‌ ಫ್ಯಾಕ್ಟರಿಯ ಕಾರ್ಮಿಕ ಮುಖಂಡರಾಗಿದ್ದರು. ಕಾರ್ಮಿಕರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರು. ಬಡವರ ಕೂಲಿ ಕಾರ್ಮಿಕರ ಧ್ವನಿಯಾಗಿದ್ದರು’ ಎಂದು ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT