ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಮತಕ್ಕಾಗಿ ಕೋಟ್ಯಂತರ ಅನುದಾನ

Published 29 ಮಾರ್ಚ್ 2024, 21:25 IST
Last Updated 29 ಮಾರ್ಚ್ 2024, 21:25 IST
ಅಕ್ಷರ ಗಾತ್ರ

ನವದೆಹಲಿ: ಅಭಿವೃದ್ಧಿ ಕನಸುಗಳನ್ನು ಬಿತ್ತಿ ಗೆಲ್ಲುವುದು ಬಿಜೆಪಿಯ ಯಶಸ್ವಿ ಚುನಾವಣಾ ತಂತ್ರ. ದೆಹಲಿ ಗದ್ದುಗೆಗೆ ಮತ್ತೆ ಲಗ್ಗೆ ಹಾಕಲು ಪಕ್ಷ ಈ ಸಲವೂ ಅಭಿವೃದ್ಧಿ ಮಂತ್ರ ಜಪಿಸಿದೆ.

ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಣೆಗೆ ಮುನ್ನ ಕರ್ನಾಟಕದಲ್ಲಿ ಹಲವು ಸಾವಿರ ಕೋಟಿ ರೂಪಾಯಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಜನರ ಮನ ಗೆಲ್ಲುವ ಪ್ರಯತ್ನ ಮಾಡಿದೆ. ಯುಪಿಎ ಸರ್ಕಾರ ಘೋಷಿಸಿದ ಯೋಜನೆಗಳನ್ನು ಬಿಜೆಪಿ ಸರ್ಕಾರ ತನ್ನದೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪೈಪೋಟಿಗೆ ಇಳಿದಿದೆ. ಲೋಕಸಭಾ ಚುನಾವಣೆಯ ಪ್ರಚಾರ ಕಣದಲ್ಲಿ ‘ಅಭಿವೃದ್ಧಿ ರಾಜಕಾರಣ’ ಸದ್ದು ಮಾಡಲಿದೆ. 

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು ಪ್ರಧಾನಿ ಅವರು ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದರು. ಗಡ್ಕರಿ ಅವರು ಸುಮಾರು ₹15 ಸಾವಿರ ಕೋಟಿಗಳ ಯೋಜನೆಗಳನ್ನು ಪ್ರಕಟಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡಿತು. ಆ ಬಳಿಕ ಸುಮಾರು 10 ತಿಂಗಳು ಉಭಯ ನಾಯಕರು ರಾಜ್ಯದ ಮೂಲಸೌಕರ್ಯ ಯೋಜನೆಗಳ ವಿಷಯದಲ್ಲಿ ಮೌನಕ್ಕೆ ಶರಣಾದರು. ಮತ್ತೆ ಅಭಿವೃದ್ಧಿ ಪರ್ವ ಆರಂಭವಾಗಿದ್ದು ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಿನಲ್ಲೇ. ರೈಲು, ಹೆದ್ದಾರಿ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ ಕೊಟ್ಟರು.  

ಬೆಂಗಳೂರು–ಮೈಸೂರು ಹೆದ್ದಾರಿ ಯೋಜನೆಯು ಕಳೆದ ವರ್ಷವಿಡೀ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ಜಟಾಪಟಿಗೆ ಕಾರಣವಾಯಿತು. ‘ಬೆಂಗಳೂರು–ಮೈಸೂರು ಹೆದ್ದಾರಿ ಯೋಜನೆ ನಮ್ಮದು’ ಎಂಬುದು ಎರಡೂ ಪಕ್ಷಗಳ ನಾಯಕರ ಮಾತು. ಯೋಜನೆಗೆ ಚಾಲನೆ ನೀಡಿದ್ದು ಯುಪಿಎ ಸರ್ಕಾರ ಎಂಬುದು ಕಾಂಗ್ರೆಸ್‌ ನಾಯಕರ ವಾದವಾದರೆ, ಯೋಜನೆಗೆ ಶುರುವಾಗಿದ್ದೇ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಎಂಬುದು ಬಿಜೆಪಿ ನಾಯಕರ ಸ್ಪಷ್ಟ ನುಡಿ. ಏಳೆಂಟು ಲೋಕಸಭಾ ಕ್ಷೇತ್ರಗಳ ಮತದಾರರ ಮೇಲೆ ಪರಿಣಾಮ ಬೀರುವ ಈ ಯೋಜನೆಯ ರಾಜಕೀಯ ಲಾಭ ಪಡೆಯಲು ಎರಡೂ ಪಕ್ಷಗಳ ನಾಯಕರು ಹಾತೊರೆಯುತ್ತಿದ್ದಾರೆ. 

ದಕ್ಷಿಣ ಕನ್ನಡದ ಸಂಸದ ನಳಿನ್‌ ಕುಮಾರ್ ಕಟೀಲು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗಿದ್ದು ಮಂಗಳೂರಿನ ಪಂಪ್‌ವೆಲ್‌ ಮೇಲ್ಸೇತುವೆ ವಿಷಯದಲ್ಲಿ. ಮೇಲ್ಸೇತುವೆಯ ಆಮೆಗತಿ ಕಾಮಗಾರಿ ವಿಷಯ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೀವ್ರವಾಗಿ ಟೀಕಿಸಲಾಗಿತ್ತು. ಪಕ್ಷ ತೀವ್ರ ಮುಜುಗರಕ್ಕೂ ಒಳಗಾಗಿತ್ತು. ನಳಿನ್ ಅವರಿಗೆ ಪಕ್ಷ ಈ ಸಲ ಟಿಕೆಟ್‌ ನಿರಾಕರಿಸಿದೆ. 

ರಾಜ್ಯದಲ್ಲಿ ಕಳೆದೊಂದು ದಶಕದಲ್ಲಿ ₹64 ಸಾವಿರ ಕೋಟಿಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂಬುದು ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಿದೆ. ಅನುದಾನದ ಕೊರತೆ, ಭೂಸ್ವಾಧೀನ ಸಮಸ್ಯೆ, ಸಮನ್ವಯ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಈ ಯೋಜನೆಗಳು ತೆವಳುತ್ತಾ ಸಾಗಿವೆ. ಕೆಲವು ಕಾಮಗಾರಿಗಳ ಗಡುವು ಮುಗಿದು ಮೂರು–ನಾಲ್ಕು ವರ್ಷಗಳೇ ಕಳೆದಿವೆ. ಗುಂಡಿ ಬಿದ್ದ ಹೆದ್ದಾರಿಗಳಲ್ಲಿ ಸಾಗಿ ನೊಂದ ಮತದಾರರ ಕೋಪಕ್ಕೆ ತುತ್ತಾಗಿ ಕೆಲವು ನಾಯಕರು ಸೋತು ಸುಣ್ಣವಾಗಿದ್ದಾರೆ. ಮೂಲಸೌಕರ್ಯ ಯೋಜನೆಗಳ ಅನುಷ್ಠಾನವನ್ನೇ ಹಲವು ನಾಯಕರು ಗೆಲುವಿಗೆ ‘ಬಂಡವಾಳ’ವನ್ನಾಗಿ ಮಾಡಿಕೊಂಡಿದ್ದಾರೆ. 

ಪ್ರತಿ ವರ್ಷ ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯಾದ ಬೆನ್ನಲ್ಲೇ ರೈಲ್ವೆ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ‘ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಪ್ರತಿವರ್ಷ ₹850 ಕೋಟಿ ಅನುದಾನ ನೀಡಲಾಗುತ್ತಿತ್ತು. ಎನ್‌ಡಿಎ ಸರ್ಕಾರ ಬಂದ ಮೇಲೆ ಅನುದಾನ ಪ್ರಮಾಣ ₹7 ಸಾವಿರ ಕೋಟಿಗೆ ಏರಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ. ರಾಜ್ಯದಲ್ಲಿನ ಹೊಸ ರೈಲ್ವೆ ಯೋಜನೆಗಳ ವಿವರವನ್ನೂ ಕೊಡುತ್ತಾರೆ. ಹುಬ್ಬಳ್ಳಿ–ಅಂಕೋಲಾ, ಬಾಗಲಕೋಟೆ–ಕುಡಚಿ, ತುಮಕೂರು– ದಾವಣಗೆರೆ, ಕಡೂರು–ಸಕಲೇಶಪುರ ಮಾರ್ಗ ಸೇರಿದಂತೆ 10 ರೈಲ್ವೆ ಯೋಜನೆಗಳನ್ನು ಉಲ್ಲೇಖಿಸುತ್ತಾರೆ.
ತಮಾಷೆಯೆಂದರೆ, ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ಕಾಲದಿಂದಲೂ ಈ ಯೋಜನೆಗಳು ಹೊಸ ಯೋಜನೆಗಳ ಪಟ್ಟಿಯಲ್ಲಿವೆ.

ದಟ್ಟಣೆಯ ತಾಪದಲ್ಲಿ...

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ ಸಮಸ್ಯೆ ನಿವಾರಿಸಲು ನೈಸ್‌ ರಸ್ತೆಯ ಮಾದರಿಯಲ್ಲೇ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಯೋಜನೆಯು ಪ್ರತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗುತ್ತಿದೆ.  

ಈ ಯೋಜನೆಯನ್ನು ಬಿಡಿಎ 12 ವರ್ಷಗಳ ಹಿಂದೆಯೇ ರೂಪಿಸಿತ್ತು.  ಆರಂಭದಲ್ಲಿ ಇದರ ಅಂದಾಜು ವೆಚ್ಚ ₹500 ಕೋಟಿ ಇತ್ತು. 2013ರಲ್ಲಿ ಇದು ₹5,000 ಕೋಟಿಗೆ ಹೆಚ್ಚಿತ್ತು. ಇದೀಗ, ಈ ಯೋಜನೆಯ ಮೊತ್ತ ₹20 ಸಾವಿರ ಕೋಟಿ ದಾಟಿದೆ. ಈ ಯೋಜನೆಗೆ ₹6 ಸಾವಿರ ಕೋಟಿ ವಿಶೇಷ ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಹತ್ತಾರು ಸಲ ಮನವಿ ಸಲ್ಲಿಸಿದೆ. ಅನುದಾನ ನೀಡಲು ಕೇಂದ್ರ ಸರ್ಕಾರ ಈವರೆಗೆ ಒಪ್ಪಿಲ್ಲ. ಈ ಯೋಜನೆ ಇನ್ನೂ ಶುರುವಾಗಿಲ್ಲ.

ಉಪನಗರ ರೈಲು ಯೋಜನೆಯ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ₹17 ಸಾವಿರ ಕೋಟಿ ಮೊತ್ತದ  ಉಪನಗರ ರೈಲು ಯೋಜನೆಗೆ ಕೇಂದ್ರ ₹2,479 ಕೋಟಿ ಭರಿಸಲಿದೆ. ಆದರೆ, ಕೇಂದ್ರ ರೈಲ್ವೆ ಸಚಿವಾಲಯವು ಬಜೆಟ್‌ ಅನುದಾನದ ರೂಪದಲ್ಲಿ ನೀಡುವುದು ₹500 ಕೋಟಿ ಮಾತ್ರ. ಉಳಿದ ಮೊತ್ತವನ್ನು ರೈಲ್ವೆ ಜಾಗದ ನಗದೀಕರಣದಿಂದ ಹೊಂದಿಸಬೇಕಿದೆ. ಈ ಯೋಜನೆ ಆಮೆಗತಿಯಲ್ಲಿ ಸಾಗಿದೆ. ಸಂಚಾರ ದಟ್ಟಣೆಯ ಬಲೆಯೊಳಗೆ ಸಿಲುಕಿ ಜನರು ಯಾತನೆ ಪಡುತ್ತಲೇ ಇದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪ್ರತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲೂ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT