ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಲೋಕ ಟಿಕೆಟ್‌: ಜಿಗಿತ ವೀರರಿಗೆ ಶುಕ್ರದೆಸೆ

ಆಡಳಿತಾರೂಢ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಲ್ಲಿ ಪಕ್ಷಾಂತರಿಗಳ ಪ್ರಮಾಣ ಶೇ 30
Published 11 ಮೇ 2024, 0:21 IST
Last Updated 11 ಮೇ 2024, 0:21 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ಚುನಾವಣೆ ಸಮಯದಲ್ಲಿ ಜಿಗಿತವೀರರು ಬೀಸುವ ಗಾಳಿಯತ್ತ ವಾಲುವುದು ಸಹಜ. ಎದುರಾಳಿ ಪಕ್ಷದ ಪ್ರಮುಖ ನಾಯಕರನ್ನು ತಮ್ಮತ್ತ ಸೆಳೆಯಲು ರಾಜಕೀಯ ಪಕ್ಷಗಳು ತಂತ್ರಗಾರಿಕೆ ನಡೆಸುತ್ತವೆ. ಬೇಲಿ ಮೇಲೆ ಕುಳಿತವರಿಗೆ ಬಲೆ ಬೀಸಿ ಸೆಳೆದುಕೊಳ್ಳಲು ಪಕ್ಷಗಳಲ್ಲಿ ಪೈಪೋಟಿ ನಡೆದಿವೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಮೇಲೆ ಕಣ್ಣಿಟ್ಟು ಜಿಗಿತ ವೀರರು ದೊಡ್ಡ ‍ಪ್ರಮಾಣದಲ್ಲಿ ಆಡಳಿತ ಪಕ್ಷದ ಕಡೆಗೆ ಗುಳೆ ಹೋಗಿದ್ದಾರೆ. ಏಳು ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡರೂ ಪಕ್ಷಾಂತರ ಪರ್ವ ಇನ್ನೂ ನಿಂತಿಲ್ಲ. 

ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು 438 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ 135 ಮಂದಿ ಪಕ್ಷಾಂತರಿಗಳು. ಅವರ ಪ್ರಮಾಣ ಶೇ 30ರಷ್ಟು. ಅಂದರೆ, ಪ್ರತಿ ಮೂರು ಅಭ್ಯರ್ಥಿಗಳಲ್ಲಿ ಒಬ್ಬರು ನೆಗೆತ ಶೂರರು. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವಿರೋಧ ಪಕ್ಷಗಳ ಹಲವು ನಾಯಕರನ್ನು ಬರ ಮಾಡಿಕೊಂಡು ಕೇಸರಿ ಪಾಳಯವು ಟಿಕೆಟ್‌ ಕೊಟ್ಟಿದೆ. ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯಿಂದ ಪಾರಾಗಿ ‘ಸ್ವಚ್ಛ’ವಾಗಲು ಬಿಜೆಪಿ ಸೇರಿದವರ ಸಂಖ್ಯೆಯೂ ದೊಡ್ಡದಿದೆ. ಜತೆಗೆ, ಕಮಲ ಪಾಳಯವು ಹಲವು ‘ಗೆಲ್ಲುವ ಕುದುರೆ’ಗಳಿಗೆ ‘ಆಪರೇಷನ್‌’ ಮಾಡಿ ಅವರನ್ನು ಅಖಾಡಕ್ಕೆ ಇಳಿಸಿದೆ. 

ಬಿಜೆಪಿಗೆ ಹೋಲಿಸಿದರೆ ಈ ಸಲ ಕಾಂಗ್ರೆಸ್‌ಗೆ ಬಂದವರು ಕಡಿಮೆ. ಕಮಲ ಪಾಳಯವು ಟಿಕೆಟ್‌ ನಿರಾಕರಿಸಿದ ಬಳಿಕ ಅನ್ಯ ಮಾರ್ಗ ಕಾಣದೆ ‘ಕೈ’ ‍ಪಾಳಯಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದವರು ಇದ್ದಾರೆ. ಕಾಂಗ್ರೆಸ್‌ ಪಕ್ಷವು 327 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಿದೆ. ಅವರಲ್ಲಿ 62 ಮಂದಿ ಜಿಗಿತ ವೀರರು. 

ಬಿಜೆಪಿಯ 135 ‘ಪಕ್ಷಾಂತರಿ’ ಅಭ್ಯರ್ಥಿಗಳ ಪೈಕಿ 43 ಮಂದಿ ಈ ಹಿಂದೆ ‘ಕೈ’ಪಾಳಯದಲ್ಲಿ ಇದ್ದವರು. ಬಿಜೆಪಿಯಿಂದ ವಲಸೆ ಬಂದ 22 ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಈ ಸಲ ಟಿಕೆಟ್‌ ಕೊಟ್ಟಿದೆ. 

ಕಮಲ ಪಾಳಯದ ‘ಆಪರೇಷನ್‌’ ಘಟಕ: ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಬಿಜೆಪಿಯು ಈ ವರ್ಷದ ಜನವರಿಯಲ್ಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿತ್ತು. ವಿವಿಧ ಪಕ್ಷಗಳ ನಾಯಕರನ್ನು ಮನವೊಲಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಹೊಣೆಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವಡೆ ಅವರಿಗೆ ಪಕ್ಷ ವಹಿಸಿತ್ತು. ಅವರು ಕಳೆದ ಮೂರು ತಿಂಗಳಲ್ಲಿ ಚಾಚೂ ತಪ್ಪದೇ ಈ ಕೆಲಸ ನಿರ್ವಹಿಸಿದರು. ಅವರು ಪಕ್ಷಕ್ಕೆ ಸೇರಿಸಿಕೊಂಡ ನಾಯಕರ ಸಂಖ್ಯೆ ನೂರಕ್ಕೂ ಅಧಿಕ. 

ಮೊದಲು ‘ಕೈ’ಗೆ ಈಗ ‘ಕಮಲ’ಕ್ಕೆ

1984ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ದಾಖಲೆಯ 404 ಸೀಟುಗಳನ್ನು ಗೆದ್ದುಕೊಂಡಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳು ಕೇವಲ ಎರಡು. 1984ರವರೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ನಾಯಕರು ದುಂಬಾಲು ಬೀಳುತ್ತಿದ್ದರು. ಚುನಾವಣೆಯಲ್ಲಿ ಪಕ್ಷದ ‘ಸ್ಟ್ರೈಕ್‌ ರೇಟ್‌’ ಸಹ ಚೆನ್ನಾಗಿತ್ತು. 1989ರ ನಂತರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಬಹುಮತಕ್ಕೆ ಬೇಕಿರುವ ಸ್ಥಾನಗಳನ್ನು ಗಳಿಸಿಯೇ ಇಲ್ಲ. ಸಹಜವಾಗಿ ಪಕ್ಷದ ‘ಸ್ಟ್ರೈಕ್ ರೇಟ್‌’ ಸಹ ಕಡಿಮೆಯಾಯಿತು.

ಸಹಜವಾಗಿ ಕಾಂಗ್ರೆಸ್‌ ಕಡೆಗೆ ವಲಸೆ ಹೋಗಲು ಮನಸ್ಸು ಮಾಡುವವರ ಸಂಖ್ಯೆಯೂ ಕಡಿಮೆಯಾಯಿತು. ಇನ್ನೊಂದೆಡೆ, ‘ಕಮಂಡಲ ಚಳವಳಿ’ಯ ಪರಿಣಾಮವಾಗಿ ಬಿಜೆಪಿ ಏರು ಹಾದಿಯಲ್ಲಿ ಸಾಗಿತು. ಬಿಜೆಪಿಗೆ ಜಿಗಿಯುವವರ ಸಂಖ್ಯೆಯೂ ಹೆಚ್ಚಾಯಿತು. ಕಳೆದೊಂದು ದಶಕದಲ್ಲಿ ಕಾಂಗ್ರೆಸ್‌ನ ನೂರಾರು ನಾಯಕರು ಕಮಲ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಪ್ರಾದೇಶಿಕ ಪಕ್ಷಗಳ ಹಲವು ನಾಯಕರು ‘ಕಮಲ’ದ ಕೊಳದಲ್ಲಿ ‘ಸ್ವಚ್ಛ’ಗೊಂಡಿದ್ದಾರೆ. ಜತೆಗೆ, ಅಧಿಕಾರದ ಸುಖವನ್ನೂ ಅನುಭವಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT