ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಎರಡನೇ ಹಂತ: ಹೈ ವೋಲ್ಟೇಜ್‌ ಕ್ಷೇತ್ರಗಳು, ಕಣದಲ್ಲಿ ತವಕ

Published 6 ಮೇ 2024, 23:50 IST
Last Updated 6 ಮೇ 2024, 23:50 IST
ಅಕ್ಷರ ಗಾತ್ರ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯಲಿದ್ದು, ಹಲವು ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ನೆತ್ತಿ ಸುಡುವ, ಧಗೆಯೇರಿಸಿದ ಬಿಸಿಲ ನಡುವೆಯೇ ಮತಭಿಕ್ಷುಗಳು, ತಮ್ಮ ಶಕ್ತಿಯನ್ನೆಲ್ಲ ಧಾರೆಯೆರೆದು ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ಭಾರಿ ಗಮನ ಸೆಳೆವ ಕ್ಷೇತ್ರಗಳು, ಯಾವೆಲ್ಲ ನಾಯಕರಿಗೆ ಈ ಹಂತದ ಚುನಾವಣೆ ನಿರ್ಣಾಯಕ ಎಂಬ ಚಿತ್ರಣ ಇಲ್ಲಿದೆ

ಶಿವಮೊಗ್ಗ

ಒಂದೂವರೆ ದಶಕದಿಂದ ನಡೆಯುತ್ತಿರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕುಟುಂಬದ ಮಧ್ಯದ ಪೈಪೋಟಿ ಈ ಬಾರಿಯೂ ಮುಂದುವರಿದಿದೆ. ಎಸ್‌. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್, ಬಿ.ಎಸ್‌. ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಮುಖಾಮುಖಿಯಾಗಿದ್ದಾರೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಅವರ ಇನ್ನೊಬ್ಬ ಪುತ್ರ ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದಾರೆ. ತಮ್ಮ ತವರು ಕ್ಷೇತ್ರದ ಗೆಲುವು ಅವರಿಗೆ ಪ್ರತಿಷ್ಠೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧು ಬಂಗಾರಪ್ಪ ಅವರಿಗೆ ಅಕ್ಕ ಗೀತಾ ಅವರ ಗೆಲುವು ಪ್ರತಿಷ್ಠೆಯಾಗಿದೆ, ನಟ ಶಿವರಾಜಕುಮಾರ್ ಪತ್ನಿಯ ಬೆನ್ನಿಗೆ ನಿಂತಿದ್ದಾರೆ. ಇಬ್ಬರ ಮಧ್ಯೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಹಾವೇರಿ

ಎರಡು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  2019ರಲ್ಲಿ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಅಧಿಕಾರ ಪಡೆದಿದ್ದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದ ಬಿಜೆಪಿ ವರಿಷ್ಠರು, ಬೊಮ್ಮಾಯಿಗೆ ಪಟ್ಟಕಟ್ಟಿದ್ದರು. ಈಗ ಅವರನ್ನು ಲೋಕಸಭಾ ಚುನಾವಣೆಗೆ ಇಳಿಸುವ ಮೂಲಕ ಬಿಜೆಪಿ ವರಿಷ್ಠರು ಹೊಸ ದಾಳ ಉರುಳಿಸಿದ್ದಾರೆ. ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್‌ನ ಆನಂದ ಗಡ್ಡದೇವರ ಮಠ ಅವರಿಗೆ ಎದುರಾಳಿ. ಅವರಿಗೆ ಕ್ಷೇತ್ರವನ್ನು ಗೆದ್ದುಕೊಳ್ಳುವ ಜತೆಗೆ, ಕೇಂದ್ರದ ನಾಯಕರು ಇಟ್ಟ ನಂಬಿಕೆಯನ್ನೂ ಉಳಿಸಿಕೊಳ್ಳುವ ಅನಿವಾರ್ಯ ಇದೆ.

ಕಲಬುರಗಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಣದಲ್ಲಿದ್ದಾರೆ. ತಾವೇ ಬೆಳೆಸಿದ ಶಿಷ್ಯ ಉಮೇಶ್‌ ಜಾಧವ್‌ 2019ರ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿ, ತಮ್ಮನ್ನೇ ಸೋಲಿಸಿದ ಸೇಡು ತೀರಿಸಿಕೊಳ್ಳಲು ಖರ್ಗೆ ಈ ಬಾರಿ ಅಳಿಯನನ್ನು ಕಣಕ್ಕೆ ಇಳಿಸಿದ್ದಾರೆ. ದೇಶದ ಎಲ್ಲೆಡೆ ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಶ್ರಮಿಸುತ್ತಿರುವ, ಬಿಜೆಪಿಯನ್ನು ಕಟು ಮಾತುಗಳಲ್ಲಿ ಟೀಕಿಸುತ್ತಿರುವ ಖರ್ಗೆ ಅವರಿಗೆ ತಮ್ಮ ಸ್ವಕ್ಷೇತ್ರದಲ್ಲಿ ಅಳಿಯನನ್ನು ಗೆಲ್ಲಿಸಿಕೊಂಡು ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಹಾಗಾಗಿಯೇ ಈ ಬಾರಿ ಅವರು ಜನರನ್ನು ಭಾವನಾತ್ಮಕ ಮಾತುಗಳಿಂದ ಸೆಳೆಯುತ್ತಿದ್ದಾರೆ. ಹಾಲಿ ಸಂಸದ ಉಮೇಶ್‌ ಜಾಧವ್‌ ಅವರಿಗೆ ಈ ಬಾರಿಯೂಬಿಜೆಪಿ ಟಿಕೆಟ್‌ ನೀಡಿದೆ. ರಾಷ್ಟ್ರಮಟ್ಟದಲ್ಲಿ ಸದಾ ಪಕ್ಷವನ್ನು ಟೀಕಿಸುವ ಖರ್ಗೆ ಅವರ ಅಳಿಯನನ್ನು ಸೋಲಿಸುವ ಮೂಲಕ ತಿರುಗೇಟು ನೀಡುವುದು ಬಿಜೆಪಿ ನಾಯಕರ ಲೆಕ್ಕಾಚಾರ.

ಧಾರವಾಡ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಐದನೇ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ. ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದರಿಂದ ಕ್ಷೇತ್ರ ಗಮನ ಸೆಳೆದಿತ್ತು. ಒತ್ತಡಕ್ಕೆ ಮಣಿದು ಅವರು ಹಿಂದೆ ಸರಿದರೂ, ಜೋಶಿ ವಿರುದ್ಧ ಧ್ವನಿ ಮೊಳಗಿಸುತ್ತಲೇ ಇದ್ದಾರೆ. ಇದುವರೆಗೂ ಬಿಜೆಪಿ ಜತೆಗೆ ಇದ್ದ ಲಿಂಗಾಯತ ವೋಟ್‌ ಬ್ಯಾಂಕ್ ಈ ಬಾರಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲವೂ ಇದೆ. ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ ಏನೇ ತಂತ್ರಗಾರಿಕೆ ಮಾಡಿದರೂ ಜೋಶಿ ಅವರ ಗೆಲುವನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಲಿಂಗಾಯತರಿಗೆ ಟಿಕೆಟ್‌ ನೀಡಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಮುದಾಯದ ಯುವಕ ವಿನೋದ್‌ ಅಸೂಟಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಇದು ಜೋಶಿಗೂ, ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯಾಗಿದೆ. ಜತೆಗೆ, ದಿಂಗಾಲೇಶ್ವರ ವಿರೋಧ ಇಬ್ಬರಿಗಿಂತ ಹೆಚ್ಚು ಸದ್ದು ಮಾಡುತ್ತಿದೆ.

ಬೆಳಗಾವಿ

ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡದ ಕಾರಣ ಮುನಿಸಿಕೊಂಡು ‘ಕೈ’ ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರನ್ನು ಮರಳಿ ಕರೆ ತಂದ ಬಿಜೆಪಿ ಬೆಳಗಾವಿಯಿಂದ ಕಣಕ್ಕೆ ಇಳಿಸಿದೆ. ಅಲ್ಲಿ ಅವರ ಬೀಗತಿ ಮಂಗಲಾ ಅಂಗಡಿ ಹಾಲಿ ಸಂಸದೆ. ಬೀಗರಾದ ಸುರೇಶ ಅಂಗಡಿ ಇದೇ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರೂ ಆಗಿದ್ದರು. ಅವರ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಪತ್ನಿ ಮಂಗಲಾ ಗೆಲುವು ಸಾಧಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಲವು ಸಚಿವರ ಮಕ್ಕಳಿಗೆ ಟಿಕಟ್‌ ನೀಡಿರುವ ಕಾಂಗ್ರೆಸ್‌ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಅವರನ್ನು ಬೆಳಗಾವಿಯಲ್ಲಿ ಕಣಕ್ಕೆ ಇಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇವರಿಬ್ಬರಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಜತೆಯಾಗಿದ್ದಾರೆ. ಜಾರಕಿಹೊಳಿ, ಕತ್ತಿ, ಕೋರೆ, ಹುಕ್ಕೇರಿ, ಜೊಲ್ಲೆ ಕುಟುಂಬಗಳ ರಾಜಕಾರಣದ ಜತೆಗೆ ಹೆಬ್ಬಾಳಕರ ಕುಟುಂಬವೂ ಮುನ್ನೆಲೆಗೆ ಬಂದಿದೆ. ಯಾರ ಕೈ ಮೇಲಾಗಲಿದೆ ಎಂಬ ಕಾರಣಕ್ಕೆ, ಕ್ಷೇತ್ರ ಕುತೂಹಲ ಕೆರಳಿಸಿದೆ.

ಚಿಕ್ಕೋಡಿ

ಬಿಜೆಪಿಯ ಭದ್ರ ಕೋಟೆಯಂತಿರುವ ಚಿಕ್ಕೋಡಿ ಕ್ಷೇತ್ರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮಗಳು ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆಯಿಂದಾಗಿ ತೀವ್ರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ನ ಪ್ರಬಲ ನೆಲೆಯಾಗಿದ್ದ ಕ್ಷೇತ್ರವನ್ನು ಮತ್ತೆ ‘ಕೈ’ ವಶ ಮಾಡಿಕೊಳ್ಳಲು ಸತೀಶ ಜಾರಕಿಹೊಳಿ ಹಟಕ್ಕೆ ಬಿದ್ದಿದ್ದಾರೆ. ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಎರಡನೇ ಬಾರಿ ಕಣದಲ್ಲಿದ್ದು, ಕ್ಷೇತ್ರ ಉಳಿಸಿಕೊಳ್ಳಲು ತರಹೇವಾರಿ ಕಸರತ್ತು ನಡೆಸುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿರುವುದೂ ಈ ಕ್ಷೇತ್ರದ ವಿಶೇಷ. ಬಿಜೆಪಿಯಲ್ಲಿರುವ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಈ ಕ್ಷೇತ್ರದಲ್ಲಿ ಬಿಜೆಪಿ ಪರ ನಿಂತಿಲ್ಲ. ಇಡೀ ಕುಟುಂಬವೇ ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಾಲಿ ಸಂಸದರ ಕುಟುಂಬದ ಮಧ್ಯದ ಹಣಾಹಣಿಯಿಂದ ಈ ಕ್ಷೇತ್ರ ಗಮನ ಸೆಳೆದಿದೆ.

ಬೀದರ್

ಬೀದರ್‌ ಕ್ಷೇತ್ರ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಕುಟುಂಬದ ಮಧ್ಯೆ ನೇರ ಹಣಾಹಣಿಯ ಅಖಾಡವಾಗಿದೆ. ದೀರ್ಘಕಾಲ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದು, ಈಗ ಬಿಜೆಪಿಯ ಹಿಡಿತಕ್ಕೆ ಜಾರಿರುವ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನವನ್ನು ‘ಕೈ’ ಪಡೆ ಮಾಡುತ್ತಿದೆ. ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಕೇಂದ್ರ ಸಚಿವರೂ ಆಗಿರುವ ಖೂಬಾ ಕ್ಷೇತ್ರದಲ್ಲಿ ಮೂರನೇ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ರಾಜ್ಯದ ಅತ್ಯಂತ ಕಿರಿಯ ಅಭ್ಯರ್ಥಿಯಾಗಿರುವ ಸಾಗರ್‌ ಖಂಡ್ರೆ ಇತಿಹಾಸ ನಿರ್ಮಿಸುವ ತವಕದಲ್ಲಿದ್ದಾರೆ. ಇಲ್ಲಿನ ಗೆಲುವು ಖಂಡ್ರೆ– ಖೂಬಾ ಇಬ್ಬರಿಗೂ ರಾಜಕೀಯ ಅಸ್ತಿತ್ವದ ಪ್ರಶ್ನೆಯನ್ನು ತಂದೊಡ್ಡಿದೆ.

ಬಾಗಲಕೋಟೆ

ಸತತ ಐದು ಬಾರಿ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ್‌ ಮತ್ತು ಹೊಸ ಮುಖ ಸಂಯುಕ್ತಾ ಪಾಟೀಲ ಈ ಬಾರಿ ಬೀದರ್‌ ಕ್ಷೇತ್ರದಲ್ಲಿ ಮುಖಾಮುಖಿಯಾಗಿದ್ದಾರೆ. ಆರನೇ ಬಾರಿಗೆ ಗೆಲುವು ಸಾಧಿಸಿ ದೆಹಲಿಯತ್ತ ಹೆಜ್ಜೆ ಹಾಕಲು ಗದ್ದಿಗೌಡರ್‌ ಪ್ರಯತ್ನಿಸುತ್ತಿದ್ದರೆ, ಅವರನ್ನು ಕಟ್ಟಿಹಾಕಿ ವಿಜಯಪತಾಕೆಯನ್ನು ಕಿತ್ತುಕೊಳ್ಳುವ ಹಂಬಲದಲ್ಲಿದ್ದಾರೆ ಸಕ್ಕರೆ ಸಚಿವ ಶಿವಾನಂದ ಪಾಟೀಲರ ಮಗಳು ಸಂಯುಕ್ತಾ.  ಚುನಾವಣೆಯಲ್ಲಿ ಗೆಲ್ಲುವುದು ಗದ್ದಿಗೌಡರ್‌ ಮತ್ತು ಶಿವಾನಂದ ಪಾಟೀಲ ಇಬ್ಬರಿಗೂ ಪ್ರತಿಷ್ಠೆ. ಆರನೇ ಬಾರಿ ಗೆದ್ದು, ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಕೇಂದ್ರ ಸಂಪುಟ ಸೇರುವ ನಿರೀಕ್ಷೆ ಬಿಜೆಪಿ ಅಭ್ಯರ್ಥಿಯದ್ದು. ಮಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಧಕ್ಕೆ ಆಗದಂತೆ ರಕ್ಷಣೆ ಪಡೆಯುವುದು ಕಾಂಗ್ರೆಸ್‌ ಅಭ್ಯರ್ಥಿಯ ಅಪ್ಪನ ಮುಂದಿರುವ ಸವಾಲು.

ವಿಜಯಪುರ

ಸತತ ಮೂರು ಅವಧಿಗೆ ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸಿರುವ ರಮೇಶ ಜಿಗಜಿಣಗಿ ಅವರ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸುವ ಪ್ರಸ್ತಾವ ಬಿಜೆಪಿ ಮುಂದಿತ್ತು. ವಯಸ್ಸಿನ ಕಾರಣದಿಂದ ಅವರಿಗೆ ಟಿಕೆಟ್‌ ನಿರಾಕರಿಸುವ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿತ್ತು. ಕೊನೆ ಗಳಿಗೆಯಲ್ಲಿ ಅವರನ್ನೇ ನಾಲ್ಕನೇ ಬಾರಿ ಕಣಕ್ಕಿಳಿಸುವ ತೀರ್ಮಾನ ಮಾಡಲಾಯಿತು. ಎರಡು ಅವಧಿಗೆ ಶಾಸಕರಾಗಿದ್ದ ರಾಜು ಆಲಗೂರ ಕಾಂಗ್ರೆಸ್‌ ಹುರಿಯಾಳು.  ಪಕ್ಷದ ಅಭ್ಯರ್ಥಿಗೆ ಗೆಲುವು ತಂದುಕೊಡಲೇಬೇಕಾದ ಹೊಣೆ ಸಚಿವ ಎಂ.ಬಿ. ಪಾಟೀಲ ಅವರ ಹೆಗಲೇರಿದೆ. ಬಿಜೆಪಿ ನಾಯಕರಿಗೂ ವಿಜಯಪುರ ಕ್ಷೇತ್ರ ಪ್ರತಿಷ್ಠೆಯ ಕಣ. ಬೀಗರಾದ ಜಿಗಜಿಣಗಿ ಅವರನ್ನು ಗೆಲ್ಲಿಸಿಕೊಳ್ಳಲು ಮಾಜಿ ಸಚಿವ ಗೋವಿಂದ ಕಾರಜೋಳ ಬೆವರು ಹರಿಸಿದ್ದಾರೆ. 

ದಾವಣಗೆರೆ

ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಮತ್ತು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಪತ್ನಿ ಡಾ. ಪ್ರಭಾ ಅವರ ಸ್ಪರ್ಧೆಯಿಂದ ದಾವಣಗೆರೆ ಕ್ಷೇತ್ರ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿ.ಬಿ. ವಿನಯಕುಮಾರ್‌ ಪಕ್ಷೇತರರಾಗಿ ಕಣದಲ್ಲಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಗಾಯತ್ರಿ ಅವರಿಗೆ ಟಿಕೆಟ್ ಕೊಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವರನ್ನು ಪಕ್ಷದ ವರಿಷ್ಠರು ಮನವೊಲಿಸಿದ್ದಾರೆ. ದಾವಣಗೆರೆ ದೀರ್ಘ ಕಾಲದಿಂದಲೂ ಶಾಮನೂರು ಮತ್ತು ಸಿದ್ದೇಶ್ವರ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿನ ಕಣ. ಈ ಬಾರಿ ಎರಡೂ ಕುಟುಂಬಗಳ ಮಹಿಳೆಯರು ಚುನಾವಣೆಯಲ್ಲಿ ಮುಖಾಮುಖಿ ಆಗಿದ್ದಾರೆ. ಇದರಿಂದಾಗಿ ಹಣಾಹಣಿಯ ತೀವ್ರತೆ ತುಸು ಜೋರಾಗಿಯೇ ಇದೆ. ವೀರಶೈವ–ಲಿಂಗಾಯತರ ನಾಯಕನೆಂದು ಗುರುತಿಸಿಕೊಳ್ಳುತ್ತಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ವರ್ಚಸ್ಸು ಉಳಿಸಿಕೊಳ್ಳಲು ಸೊಸೆಯ ಗೆಲುವು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT