ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಸುಗುಸು: ‘ಹೃದಯ’ಕ್ಕೆ ಅಡಿಗಡಿಗೂ ‘ಕಾಣದ ಕೈ’

Published 31 ಮಾರ್ಚ್ 2024, 23:54 IST
Last Updated 31 ಮಾರ್ಚ್ 2024, 23:54 IST
ಅಕ್ಷರ ಗಾತ್ರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಅಳಿಯ ಹಣಾಹಣಿಗೆ ಬಿದ್ದಿರುವ ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ತಂತ್ರಗಾರಿಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆಯಂತೆ. 

ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ಬಿಜೆಪಿ ಅಭ್ಯರ್ಥಿ ಮಂಜುನಾಥ್‌ ಅವರು ಎದುರಾಳಿಗಳ ರಾಜಕೀಯ ಪಟ್ಟುಗಳನ್ನು ಕಂಡು ಬೆರಗಾಗುತ್ತಿದ್ದಾರಂತೆ.  ತಮ್ಮದೇ ಹೆಸರಿನ ಮತ್ತೊಬ್ಬರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು ನಿಮ್ಮ ಮತಗಳನ್ನು ಕಸಿಯಲು ಮಾಡುತ್ತಿರುವ ತಂತ್ರ ಎಂದು ಜತೆಗಿರುವವರು ಪದೇಪದೆ ಹೇಳುತ್ತಿರುವುದನ್ನು ಕೇಳಿ ಮಂಜುನಾಥ್ ರೋಸಿ ಹೋಗಿದ್ದಾರಂತೆ. ಕಾಂಗ್ರೆಸ್‌ನ ತಂತ್ರಗಾರಿಕೆ ಕಂಡ ಅವರು, ‘ಮಂತ್ರ, ಯಂತ್ರ, ತಂತ್ರ, ಕುತಂತ್ರ’ದ ಕುರಿತು ಮಾತುಗಳನ್ನು ಆಡಿದ್ದಂತೆ...

ಇಂತಹ ಸಮಯದಲ್ಲೇ ಅವರು ಪ್ರಚಾರಕ್ಕೆ ಹೋದ ಮೊದಲ ದಿನಗಳಲ್ಲಿ ಕೆಲವರು ಮನೆಗೆ ಕರೆದು ಸತ್ಕಾರ ಮಾಡುತ್ತಿದ್ದರಂತೆ. ತಮ್ಮ ಬೆಂಬಲಕ್ಕೆ ಇಷ್ಟೊಂದು ಜನ ನಿಂತಿದ್ದಾರಲ್ಲ ಎಂದು ಡಾಕ್ಟರು ನಗು ಅರಳಿಸುತ್ತಿದ್ದಂತೆಯೇ, ‘ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬದ ಸದಸ್ಯರನ್ನು ಸ್ವಲ್ಪ ನೋಡಿ ಹೋಗಿ, ಮಾತ್ರೆ, ಔಷಧ ಬರೆದುಕೊಡಿ’ ಎನ್ನಲು ಜನರು ಆರಂಭಿಸಿದ್ದಾರಂತೆ. ಆರಂಭದಲ್ಲಿ ಇದನ್ನು ಸಮಾಜ ಸೇವೆಯ ಒಂದು ಭಾಗವೆಂದೇ ಭಾವಿಸಿದ್ದ ಡಾಕ್ಟರಿಗೆ ಬರುಬರುತ್ತಾ ಒಂದೊಂದು ಊರಿನಲ್ಲಿ ನಿತ್ಯವೂ ಹೀಗೆ ಅನಾರೋಗ್ಯದ ನೆಪ ಹೇಳಿ ತಪಾಸಣೆ ಮಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದುದನ್ನು ಕಂಡು ಅನುಮಾನವೂ ಬಂದಿದೆಯಂತೆ. ಹೀಗೆ ಮಾಡಿದರೆ ಕ್ಷೇತ್ರದ ಎಲ್ಲ ಜನರ ಬಳಿ ಹೋಗಿ ಮತ ಕೇಳಲು ಸಮಯ ಎಲ್ಲಿ ಸಿಗುತ್ತದೆ. ನನ್ನ ಹೆಸರಿನ ಅಭ್ಯರ್ಥಿ ಕಣಕ್ಕೆ ಇಳಿಸಿದಂತೆ, ನನ್ನ ಪ್ರಚಾರದ ವೇಗಕ್ಕೆ ತಡೆ ಹಾಕಲು ಯಾವುದೋ ‘ಕಾಣದ ಕೈ’  ಕೆಲಸ ಮಾಡುತ್ತಿರಬಹುದೇ ಎಂದು ‘ದೊಡ್ಡ ಗೌಡರ’ ಬಳಿ ಅವಲತ್ತುಕೊಂಡಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT