ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಸುಗುಸು | ಪೌರುಷ ತೋರಿಸುವುದು ಹೇಗೆ?

Published 20 ಮಾರ್ಚ್ 2024, 23:45 IST
Last Updated 20 ಮಾರ್ಚ್ 2024, 23:45 IST
ಅಕ್ಷರ ಗಾತ್ರ

‘ಮಂಡ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ’ ಎಂಬ ಸುದ್ದಿ ಹರಡುತ್ತಿದ್ದಂತೆ, ಮದ್ದೂರು ಶಾಸಕ ಕದಲೂರು ಉದಯ್‌ ‘ಮಂಡ್ಯ ಜೆಡಿಎಸ್‌ನಲ್ಲಿ ಗಂಡಸರಿಲ್ವೇ’ ಎಂದು ಪ್ರಶ್ನಿಸಿದ್ದಾರೆ. ಅದರಿಂದ ಕೆಂಡಾಮಂಡಲರಾಗಿರುವ ಸ್ಥಳೀಯ ಜೆಡಿಎಸ್‌ ನಾಯಕರು ‘ಗಂಡಸುತನ ರುಜುವಾತು ಮಾಡೋದು ಹೇಗೆ’ ಎಂದು ಚರ್ಚಿಸುತ್ತಿದ್ದಾರಂತೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕೆಲ ಜೆಡಿಎಸ್ ನಾಯಕರು ಇಲ್ಲಿಯವರೆಗೂ ಮನೆಯಿಂದ ಹೊರಗೇ ಬಂದಿರಲಿಲ್ಲ. ಈಗ ಉದಯ್ ಮಾತಿನಿಂದ ಕೋಪೋದ್ರಿಕ್ತರಾಗಿರುವ ಅವರು ಮನೆಯಿಂದ ಹೊರಗೆ ಬಂದು ‘ಸ್ಥಳೀಯ ನಾಯಕರಿಗೆ ಟಿಕೆಟ್‌ ಕೊಡಿ’ ಎಂದು ಕೇಳಲು ನಿರ್ಧರಿಸಿದ್ದರಂತೆ. ಆ ಮೂಲಕವಾದರೂ ತಮ್ಮ ಗಂಡುಸುತನ ತೋರಿಸುವ ಪ್ರಯತ್ನ ಪಟ್ಟಿದ್ದರಂತೆ.

ಆದರೆ, ಅದಕ್ಕೆಲ್ಲಾ ಸೊಪ್ಪು ಹಾಕದ ಕುಮಾರಸ್ವಾಮಿ ‘ನನ್ನ ಹಳೇ ಗೆಳೆಯ ಚೆಲುವಣ್ಣ ಹಾಗೂ ಅವರ ಹುರಿಯಾಳು ಸ್ಟಾರ್‌ ಚಂದ್ರು ವಿರುದ್ಧ ಗೆಲ್ಲೋದು ನಿಮಗೆಲ್ಲಾ ಕಷ್ಟವಾಗಬಹುದು, ಜೊತೆಗೆ, ನಿಮ್ಮಲ್ಲೇ ಒಗ್ಗಟ್ಟಿಲ್ಲದೆ ಕಿತ್ತಾಡುತ್ತೀರಿ. ‌ನಾನೇ ಬರ್ತೇನೆ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರಂತೆ.

ಈಗ ಮತ್ತೆ ಗಂಡಸುತನದ ಪ್ರಶ್ನೆ ಎದುರಾಗಿದ್ದು, ಈ ನಾಯಕರು ‌ಹೊಸ ಉಪಾಯ ಕಂಡುಕೊಂಡಿದ್ದಾರಂತೆ. ‘ಕುಮಾರಣ್ಣನನ್ನು 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ, ನರೇಂದ್ರ ಮೋದಿ ಸಂಪುಟದಲ್ಲಿ ಕೃಷಿ ಸಚಿವರನ್ನಾಗಿ ಮಾಡಬೇಕು’ ಎಂದು ಶಪಥ ಮಾಡಿದ್ದಾರಂತೆ. ಆ ಮೂಲಕ ತಮ್ಮ ಗಂಡುಸುತನವನ್ನು ತೋರಿಸಲು ನಿರ್ಧರಿಸಿದ್ದಾರಂತೆ.

ಜೊತೆಗೆ, ‘ಬೆಟ್ಟಿಂಗ್‌ ಆಡಿಸುವವರು, ರಿಯಲ್‌ ಎಸ್ಟೇಟ್‌ ದಂಧೆಕೋರರೆಲ್ಲರೂ ಗಂಡಸರಾ’ ಎಂದು ಕಾಂಗ್ರೆಸ್‌ ಮುಖಂಡರನ್ನು ಪ್ರಶ್ನಿಸಲೂ ನಿರ್ಧರಿಸಿದ್ದಾರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT