ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಸುಗುಸು | ಟಿಕೆಟ್‌ ಕನಸು...ಶೆಟ್ಟರ್ ಬೆವರು!

Published 21 ಮಾರ್ಚ್ 2024, 22:55 IST
Last Updated 21 ಮಾರ್ಚ್ 2024, 22:55 IST
ಅಕ್ಷರ ಗಾತ್ರ

ಮೂಲ ಬಿಜೆಪಿಯಾದರೂ ಈ ನಡುವೆ ಕಾಂಗ್ರೆಸ್‌ ಗೃಹಪ್ರವೇಶಿಸಿ ಮರಳಿ ಬಂದ ಕಾರಣಕ್ಕೋ ಏನೋ ಒಂದರ್ಥದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸ್ಥಳೀಯ ಬಿಜೆಪಿಗೆ ಈಗಲೂ ರಾಜಕೀಯ ಅಸ್ಪೃಶ್ಯರಾಗಿದ್ದಾರೆ. ಹುಬ್ಬಳ್ಳಿಯ ಮಧುರಾ ಕಾಲೊನಿಯಲ್ಲಿ ಇರುವ ಮನೆ ಬಿಜೆಪಿ ಕಾರ್ಯಕರ್ತರ ಮಧುರ ತಾಣವಾಗಿ ಉಳಿದಿಲ್ಲ.

ಧಾರವಾಡ ತಪ್ಪಿತು, ಹಾವೇರಿಗೂ ಸಿಗಲಿಲ್ಲ...ಇನ್ನೂ ಬೆಳಗಾವಿ ಕಡೆಗಾದರೂ ಹೋಗೋಣ... ಅಲ್ಲಿ ನಮ್ಮದೇ ನೆಂಟಸ್ತಿಕೆ ಇದೆ... ಎಂದು ಶೆಟ್ಟರ್‌ ಮನಸ್ಸು ಮಾಡಿದರೆ, ಅಲ್ಲಿನ ಸ್ಥಳೀಯ ನಾಯಕರ ವಿರೋಧ. ಪಂಚಮಸಾಲಿಗಳಿಂದ ಸಿಗದ ಬೆಂಬಲದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶೆಟ್ಟರ್ ದಿಗಿಲು ಹೆಚ್ಚುತ್ತಿದೆ. ‘ಬಿಜೆಪಿ ಹೈಕಮಾಂಡ್‌ ಕೃಪಾಕಟಾಕ್ಷ ಬೀರಿ ಟಿಕೆಟ್ ಘೋಷಿಸದೇ, ಶೆಟ್ಟರ್‌ ದಿಗಿಲುಗೊಂಡು ಬಿರುಬಿಸಿಲಲ್ಲಿ ಅವರ ಹಣೆ ಮೇಲೆ ಬೆವರು ಹೆಚ್ಚಿಸಿದೆ’ ಎಂಬ ಗುಸುಗುಸು ಮಧುರಾ ಕಾಲೊನಿ ದಾಟಿ ಮೂರು ಕ್ಷೇತ್ರ ಸುತ್ತುತ್ತಿದೆ.

ಈ ಮೊದಲು ಧಾರವಾಡ ಕ್ಷೇತ್ರಕ್ಕೆ ಶೆಟ್ಟರ್‌ ಟಿಕೆಟ್‌ ಪಕ್ಕಾ ಎನ್ನುವಂತಾಗಿತ್ತು, ತದನಂತರ ಹಾವೇರಿಗೆ ಅಂದರು. ಇವರೆಡೂ ಕ್ಷೇತ್ರಗಳಿಗೆ ಜೋಶಿ, ಬೊಮ್ಮಾಯಿ ಫಿಕ್ಸ್ ಆದ ನಂತರ ಬೆಳಗಾವಿಗೆ ಶೆಟ್ಟರ್‌ಗೆ ಟಿಕೆಟ್‌ ಎಂಬ ಮಾತು ಹರಿದಾಡಿತು.

ಆದರೆ ಅಲ್ಲಿಂದ ಶೆಟ್ಟರ್‌ಗೆ ಸ್ವಾಗತ ಸಿಗಲೇ ಇಲ್ಲ. ‘ಶೆಟ್ಟರ್‌ ಗೋ ಬ್ಯಾಕ್‌’ ಅಂತ ಬೆಳಗಾವಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೀತು. ಜತೆಗೆ ಅಲ್ಲಿನ ಬಿಜೆಪಿ ಮುಖಂಡರೆಲ್ಲ ಈಚೆಗೆ ಸಭೆ ಸೇರಿ ಹೊರಗಿನಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವಷ್ಟು ನಮ್ಮಲ್ಲಿ ಮುಖಂಡರ ಬರ ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೂ ಆಯಿತು.

‘ಜೋಶಿ,ಬೊಮ್ಮಾಯಿ ಸೇರಿ ಯಾವ ಬಿಜೆಪಿ ಮುಖಂಡರೂ ನನಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದೇನೂ ಅನ್ನಿಸಲ್ಲ...ನನಗೆ ಟಿಕೆಟ್ ತಪ್ಪಿಸಲು ಕುತಂತ್ರ, ಷಡ್ಯಂತ್ರ ನಡೆದಿದೆ ಎಂದು ನಾನು ಒಪ್ಪಲ್ಲ’ ಎನ್ನುತ್ತ ಒಳಗೊಳಗೇ ಟಿಕೆಟ್‌ ಎಲ್ಲಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಶೆಟ್ಟರ್‌. ಅವರಿಗೆ ಎಲ್ಲಿ ಒಂದೆಡೆ ಗಟ್ಟಿಯಾಗಿ ನಿಲ್ಲುವುದು ಎಂಬ ಚಿಂತೆ ಶುರುವಾಗೈತಿ ಅಂತ ಬಯಲುಸೀಮೆ ಬಿರು ಬಿಸಿಲಿನ್ಯಾಗ ಹುಚ್ಚಾಪಟ್ಟೆ ಮಂದಿ ಬೆವರು ಒರೆಸ್ಕೋಂತ ಮಾತಾಡೋಹಂಗಾಗೈತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT